ಮಳವಳ್ಳಿ ಸುಂದರಮ್ಮ

ವಿಕಿಪೀಡಿಯ ಇಂದ
Jump to navigation Jump to search

ತಮ್ಮ ಜೀವನವನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡ ಸುಂದ್ರಮ್ಮ, ಆಗಿನ ಕಾಲದಲ್ಲಿಯೇ ಹಲವು ಪ್ರಯೋಗಗಳನ್ನು ಮಾಡಿದ್ದ ದಿಟ್ಟೆ. ೧೯೦೫ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಜನನ. ತಂದೆ ಮಳವಳ್ಳಿ ಸುಬ್ಬಣ್ಣ ಸಂಗೀತ ವಿದ್ವಾಂಸರು, ಹೆಸರಾಂತ ಪಿಟೀಲು ವಾದಕರು. ತಾಯಿ ಲಕ್ಷ್ಮೀದೇವಿ ಕೂಡ ಸಂಗೀತ ಕಲಾವಿದೆ. ಅಮ್ಮ ಮಾಡಿಸಿದ ಸಂಗೀತಾಭ್ಯಾಸ ಮಗಳಿಗೆ ದಾರಿದೀಪವಾಯಿತು.

ಪುರುಷರೇ ಮಹಿಳೆಯರ ಪಾತ್ರಗಳನ್ನು ಮಾಡುತ್ತಿದ್ದ ಆ ಕಾಲದಲ್ಲಿ ಹೆಣ್ಣೊಬ್ಬಳು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು, ಅದರಲ್ಲೂ ೧೮ ಮೊಳದ ಸೀರೆಯುಟ್ಟು ಅಭಿನಯಿಸುವುದು ಸುಲಭದ ಮಾತಾಗಿರಲಿಲ್ಲ. ಆದರೂ ನಾಟಕ ರಂಗವನ್ನು ಪ್ರವೇಶಿಸಿದ ಸುಂದರಮ್ಮ ಹಂತಹಂತವಾಗಿ ಮೇಲೇರಿದರು. ಉತ್ತರ ಕರ್ನಾಟಕದಲ್ಲಿ ಮಹಿಳಾ ನಾಟಕ ಕಂಪನಿಯನ್ನೇ ಪ್ರಾರಂಭಿಸಿದ ಕೀರ್ತಿ ಕೂಡ ಇವರಿಗೆ ಸಲ್ಲಬೇಕು. ಪುರುಷ ಪಾತ್ರಗಳಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡ ಕಲಾವಿದೆ ಸುಂದ್ರಮ್ಮ. ಮೈಸೂರು ಒಡೆಯರು ಅಂದು ನಾಟಕ ರಂಗದಲ್ಲಿ ಇವರು ಮಾಡಿದ ದಿಟ್ಟ ಪ್ರಯತ್ನಗಳನ್ನು ಗುರುತಿಸಿ 'ನಾಟ್ಯ ಶಾರದೆ' ಬಿರುದು ನೀಡಿದ್ದಾರೆ. ರಾಜ್ಯ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ೧೯೩೬ರಲ್ಲಿ 'ಚಿರಂಜೀವಿ' ಚಲನಚಿತ್ರದಲ್ಲಿಯೂ ನಟಿಸಿದ್ದರು.

ಬಾಲ್ಯದಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿದ್ದ ಸುಂದ್ರಮ್ಮ ೧೬ ವರ್ಷದವರಾಗಿದ್ದಾಗ ಶ್ರೀ ಕೃಷ್ಣ ವಿಲಾಸ ನಾಟಕ ಸಭಾ ಸದಸ್ಯರಾಗಿ ನಟನಾ ಜೀವನ ಪ್ರಾರಂಭಿಸಿದರು. ದ್ರೌಪದಿ, ಸುಭದ್ರಾ, ಕಯಾಲು, ತಾರಾಮತಿ, ಸದಾರಮೆ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದರು. ಆರು ದಶಕಕ್ಕೂ ಅಧಿಕ ಕಾಲ ನಟನಾ ವೃತ್ತಿಯಲ್ಲಿದ್ದರು. ನಟನೆಯೊಂದಿಗೆ ಅವರ ರಂಗಗೀತೆಗಳ ಗಾಯನ ಕೂಡ ಗಮನ ಸೆಳೆಯುತ್ತಿತ್ತು. ಅನೇಕ ವರ್ಷ ಗುಬ್ಬಿ ಕಂಪನಿಯಲ್ಲಿದ್ದ ಅವರು, ಸಂಸ್ಥೆಯ ಆಧಾರಸ್ತಂಭದಂತಿದ್ದರು. ವೀರಣ್ಣನವರು ಕಂಪನಿಯ ಲಾಭಾಂಶದಲ್ಲಿ ಪ್ರತಿಶತ 5ರಷ್ಟು ಪಾಲನ್ನು ಸುಂದರಮ್ಮನವರಿಗೆ ನೀಡುತ್ತಿದ್ದರೆ ಎಂದರೆ ಅವರಿಗೆ ಎಂಥ ಮನ್ನಣೆ ಇತ್ತು ಊಹಿಸಿಕೊಳ್ಳಬಹುದು. ಹೀಗೆ ರಂಗಭೂಮಿ ಇತಿಹಾಸದಲ್ಲಿ ಅಜರಾಮರ ಹೆಸರು ಮಳವಳ್ಳಿ ಸುಂದರಮ್ಮ ನವರದು.."ನಮನ"


ಆಕರ:---http://archives.kannadaprabha.com/pdf/2852013/19.pdf