ವಿಷಯಕ್ಕೆ ಹೋಗು

ಮನಕಾಮನಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನಕಾಮನಾದೇವಿಯ ಗುಡಿ ಇರುವುದು ಹಿಮಾಲಯ ಪರ್ವತಶ್ರೇಣಿಯ ಎತ್ತರವಾದ ಬೆಟ್ಟದ ಮೇಲೆ. ಕ್ರಿಸ್ತಶಕ ೧೬೧೪-೩೦ರಲ್ಲಿ ಆಳಿದ ನೇಪಾಳೀ ದೊರೆಯ ಪತ್ನಿ ದೈವೀಶಕ್ತಿ ಹೊಂದಿದ್ದಳಂತೆ. ಸೇವಕ ಲಖನದಾಸ ಅವಳ ಅನುವರ್ತಿಯಾಗಿದ್ದ. ಒಮ್ಮೆ ರಾಜನಿಗೆ ಕನಸಿನಲ್ಲಿ ಅವನ ಹೆಂಡತಿ ದೇವಿಯಾಗಿ ಮತ್ತು ಅನುವರ್ತಿ ಲಖನದಾಸ ಸಿಂಹವಾಗಿ ಕಾಣಿಸಿದ್ದರಂತೆ. ಅದನ್ನು ಅವನು ತನ್ನ ಹೆಂಡತಿಗೆ ತಿಳಿಸಿದ ಕೂಡಲೇ ಸತ್ತುಹೋದನಂತೆ. ಅವನ ಚಿತೆಗೆ ಹಾರಿ ರಾಣಿ ಸತಿಯಾದಳಂತೆ. ಆದರೆ ಲಖನದಾಸನ ಬೇಡಿಕೆಯಂತೆ ಮತ್ತೆ ಬರುವುದಾಗಿ ಆಶ್ವಾಸನೆಯಿತ್ತಳಂತೆ. ಆರು ತಿಂಗಳ ಅನಂತರ ಬಂಡೆಯೊಂದರಿಂದ ಹಾಲೂ ರಕ್ತವೂ ಒಸರುತ್ತಿದ್ದುದನ್ನು ಕಂಡ ರೈತನೊಬ್ಬನಿಂದ ವಿಷಯ ಎಲ್ಲೆಡೆ ಹರಡಿ ಲಖನದಾಸ ಅಲ್ಲಿಗೆ ಬಂದು ತನ್ನ ತಾಂತ್ರಿಕ ಶಕ್ತಿಯಿಂದ ರಕ್ತ ಒಸರುವುದನ್ನು ನಿಲ್ಲಿಸುತ್ತಾನಂತೆ. ಆ ಸ್ಥಳವೇ ಇಂದು ಮನಕಾಮನಾದೇವಿಯ ಸ್ಥಳವಾಗಿ ಪೂಜಿತವಾಗುತ್ತಿರುವುದೆಂದು ಹೇಳುತ್ತಾರೆ.

ಗುಡಿಗೆ ತೆರಳಲು ತಳದಿಂದ ತೂಗುತೊಟ್ಟಿಲ (ಕೇಬಲ್‌ಕಾರ್) ವ್ಯವಸ್ಥೆಯಿದೆ. ೧೩೦೨ ಮೀಟರು ದೂರದ ಕೇಬಲ್ ಕಾರ್ ಪಯಣ ಒಂದು ಅಪೂರ್ವ ಅನುಭವ. ಪಾರದರ್ಶಕ ಗಾಜಿನ ಕ್ಯಾಬಿನ್ ಮೂಲಕ ಹೊರಗೆ ನೋಡಿದರೆ ಸುಂದರ ಚಿತ್ತಾರವಾದ ಭೂಮಿಯನ್ನು ಬಿಟ್ಟು ಮತ್ತೂ ಸುಂದರವಾದ ಸ್ವರ್ಗದೆಡೆಗೆ ನಾವು ಏರಿ ಹೋಗುತ್ತಿರುವಂತೆ ಭಾಸವಾಗುತ್ತದೆ. ಬೆಟ್ಟದ ತುತ್ತತುದಿಯಲ್ಲಿ ಇಳಿದಾಗ ಸುತ್ತಲೂ ಸಮಪಾತಳಿ ಕೃಷಿಯ ಹಸಿರು ತುಂಬಿದ ಹಿಮಾಲಯದ ಪರ್ವತಗಳ ಶ್ರೇಣಿ ಕಾಣುತ್ತದೆ.