ವಿಷಯಕ್ಕೆ ಹೋಗು

ಮಣಿಭವನ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಣಿಭವನ್, ಮುಂಬೈ ಇಂದ ಪುನರ್ನಿರ್ದೇಶಿತ)

ಮಣಿಭವನ್, ದಕ್ಷಿಣ ಮುಂಬಯಿನಗರದ ಮರಗಿಡಗಳ ಹಸಿರು ಪರಿಸರವನ್ನು ಹೊಂದಿರುವ, ಲಬರ್ನಮ್ ರಸ್ತೆಯಲ್ಲಿದೆ. ಮಣಿಭವನ್, ೧೯೧೪ ರಿಂದ ೧೯೩೪ ರ ವರೆಗೆ, ಮಹಾತ್ಮಾ ಗಾಂಧಿಯವರ ಮುಂಬಯಿ ವಾಸ್ತವ್ಯದ ತಾಣವಾಗಿತ್ತು. [] ಈ ಭವನ ಬಾಪುರವರ ಪ್ರೀತಿಯ ಗೆಳೆಯ ರೇವಾಶಂಕರ್ ಜಗಜೀವನ್ ಝವೇರಿಯವರಿಗೆ ಸೇರಿತ್ತು. ಈ ಭವನ ಹಿಂದೆ 'ಮಣಿ ಪರಿವಾರ'ಕ್ಕೆ ಸೇರಿತ್ತು. ಗಾಂಧೀಜಿಯವರನ್ನು ತೀರಾ ಹತ್ತಿರದಿಂದ ಬಲ್ಲ 'ರೇವಾಶಂಕರ್' ಮುಂಬಯಿನಲ್ಲಿ ಇರುವಷ್ಟು ದಿನ ಇಡೀಭವನವನ್ನು ಅವರಿಗೆ ಬಿಟ್ಟುಕೊಟ್ಟಿದ್ದರು. ಅಲ್ಲಿಯೇ ಗಾಂಧೀಜಿಯವರ ದೈನಂದಿನ ದೇವರ ಪ್ರಾರ್ಥನೆಗಳು, ಹಾಗೂ ನೂರಾರು ಜನರ ಭೇಟಿ, ಪತ್ರವ್ಯವಹಾರಗಳು,ಗಣ್ಯರ ಜೊತೆಯಲ್ಲಿ ಮಾತುಕತೆಯ ಪ್ರಸಂಗಗಳನ್ನು ಕಾಲಕಾಲಕ್ಕೆ ಅತ್ಯಂತ ಸಮರ್ಪಕವಾಗಿ ಎಲ್ಲಾ ಬೇಕಾದ ವ್ಯವಸ್ಥೆಗಳನ್ನು ತಾವೇ ಖುದ್ದಾಗಿ ರೇವಾಶಂಕರರೇ ನೋಡಿಕೊಳ್ಳುತ್ತಿದ್ದರು.

ಮಣಿಭವನ್ ಹಾಗೂ ಕ್ವಿಟ್ ಇಂಡಿಯ ಆಂದೋಳನ

[ಬದಲಾಯಿಸಿ]

ರಾಷ್ಟ್ರಪಿತ ಬಾಪೂಜಿಯವರು ಮುಂಬಯಿಗೆ ಬಂದಾಗಲೆಲ್ಲಾ ತಂಗುತ್ತಿದ್ದ ಎರಡಂಸ್ತಿನ ಮನೆ,'ಮಣಿಭವನ' ಭಾರತದ ಸ್ವಾತಂತ್ರ್ಯ ಚಳುವಳಿಯ ಚಾರಿತ್ರ್ಯಿಕ ಹಾಗೂ ಅದ್ಭುತ ಕತೆಯನ್ನು ಮೌನವಾಗಿ ಹೇಳುವ ಪರಿ ಅನನ್ಯ. ಈಗ 'ಮಣಿಭವನ್'ಮ್ಯೂಸಿಯಮ್ ಆಗಿ ಬದಲಾಗಿದೆ. ಮಹಾತ್ಮರ ಜೀವನದ ಮೇಲೆ ಬೆಳಕು ಚೆಲ್ಲುವ ಹಲವು ಅಪರೂಪದ ಛಾಯಾಚಿತ್ರಗಳ,ಬಾಪು ಬರೆದ ಕಾಗದ ಪತ್ರಗಳ ಪ್ರತಿಗಳು, ಅವರು ಬಳಸುತ್ತಿದ್ದ,ಚರಖಾ, ಕನ್ನಡಕ, ಚಪ್ಪಲಿ, ಧೋತಿ, ಅಂಗವಸ್ತ್ರ, ವಾಕಿಂಗ್ ಸ್ಟಿಕ್, ಬಾಪುರವರ ಸೊಂಟಕ್ಕೆ ಕಟ್ಟಿದ ಗಡಿಯಾರ, ಲೇಖನಿ, ಭಗವದ್ಗೀತೆಯ ಪ್ರತಿ, ಮತ್ತು ಅನೇಕ ಪುಸ್ತಕಗಳ ಆಗರವಾಗಿದೆ. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿನಗರದ ಮೊದಲು ಬ್ರಿಟಿಷ್ ಸಾಮ್ರಾಟನಿಗೆ ಸ್ವಾಗತತಾಣ. ಕೊನೆಗೆ ಬ್ರಿಟಿಷ್ ಚಕ್ರಾಧಿಪತ್ಯದ ಅತಿಬಲಶಾಲಿ ಸೈನ್ಯದ ಟುಕಡಿಯ ನಿರ್ಗಮನತಾಣವೂ ಆಗಿರುವುದನ್ನು ಇತಿಹಾಸ ಗುರುತಿಸುತ್ತದೆ. ಇದೆಲ್ಲದರ ಮೂಕ ಸಾಕ್ಷಿಯಾಗಿ ಮಣಿಭವನ ನಿಂತಿದೆ. ಹಲವು ಮಹತ್ತರ ನಿರ್ಧಾರಗಳು ಮೂಡಿಬಂದು ಕಾರ್ಯಾನ್ವಯಗೊಂಡಿದ್ದು ಇಲ್ಲಿಂದಲೇ. ಬ್ರಿಟಿಷ್ ಸಾಮ್ರಾಜ್ಯದ ಜೊತೆಗೆ ನಡೆದ ಅನೇಕ ಮಾತುಕತೆಗಳನ್ನು ಮುಂದುವರೆಸುವ ಅಥವಾ ನಿಶೇಧಿಸುವ ನಿರ್ಧಾರಗಳನ್ನು ಒಳಗೊಂಡ ಹಲವಾರು ಮಹತ್ವದ ಸಭೆಗಳು ಇಲ್ಲಿ ಸಮಾವೇಶಗೊಂಡಿದ್ದವು. ಗಾಂಧೀಜಿಯಷ್ಟು ಪತ್ರವ್ಯವಹಾರಮಾಡಿದ ಮತ್ತೊಬ್ಬ ನಾಯಕನಿಲ್ಲ.ಅಡಾಲ್ಫ್ ಹಿಟ್ಲರ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್ ರವರಿಗೆ ಪತ್ರ ಇಲ್ಲಿ ಜೋಪಾನವಾಗಿ ಇರಿಸಲಾಗಿದೆ. ಆ ತರಹ ನೂರಾರು ಪತ್ರವ್ಯವಹಾರಗಳನ್ನು ಬಾಪು ಬ್ರಿಟಿಷ್ ಸರ್ಕಾರದ ಜೊತೆಗೆ ಮಾಡುತ್ತಿದ್ದರು. ಆಗಸ್ಟ್ ಕ್ರಾಂತಿ ಮೈದಾನವೆಂದೇ ಹೆಸರಾದ 'ಗೊವಾಲಿಯ ಕ್ರೀಡಾಂಗಣ'ದ ಹತ್ತಿರದಲ್ಲಿ ಇದ್ದು,೧೯೪೨, ಆಗಸ್ಟ್, ೮ ರಂದು, ಇಲ್ಲಿಂದಲೇ ಮಹಾತ್ಮಾ ಗಾಂಧಿಯವರು ಬ್ರಿಟಿಷ್ ಅಧಿಕಾರವನ್ನು ಕೊನೆಗೊಳಿಸಿ ಭಾರತದಿಂದ ತೊಲಗಲು ಕರೆಕೊಟ್ಟ ಚಾರಿತ್ರ್ಯಿಕ ಆಂದೋಳನ (ಕ್ವಿಟ್ ಇಂಡಿಯಾ ಚಳುವಳಿಯನ್ನು) ಭಾರತದ ಹಾಗೂ ವಿಶ್ವದ ಇತಿಹಾಸದಲ್ಲಿ ದಾಖಲಾಯಿತು.

ಮಣಿಭವನ ತಲುಪಲು

[ಬದಲಾಯಿಸಿ]

ದಕ್ಷಿಣ ಮುಂಬಯಿನ ತುದಿಯಾದ,ತಾಜ್ ಮಹಲ್ ಹೋಟೆಲ್ ನಿಂದ ೪೦ ನಿಮಿಷಗಳಲ್ಲಿ ವಾಹನದಲ್ಲಿ ಬರಬಹುದು. 'ಗಾಮ್ ದೇವಿ ವಲಯ'ದಲ್ಲಿರುವ ಈ ಸ್ಮಾರಕ, ಬಾಬುಲ್ ನಾಥ್ ದೇವಾಲಯ,ಮತ್ತು ಭಾರತೀಯ ವಿದ್ಯಾಭವನ, ಮತ್ತು ಹರೆರಾಮ ಹರೆ ಕೃಷ್ಣ ಮಂದಿರ'ದ ಸಂಘಟನೆಯ ವತಿಯಿಂದ ನಿರ್ಮಿತವಾದ ರಾಧಾ ಗೋಪೀನಾಥ್ ದೇವಾಲಯ' ದ ಬಳಿ ಇದೆ. ಇಲ್ಲಿಗೆ 'ಚೌಪಾತಿ ಸಮುದ್ರ ದಂಡೆ' ಮತ್ತು 'ವಿಲ್ಸನ್ ಕಾಲೇಜ್' ಅತಿ ಸಮೀಪದಲ್ಲಿದೆ.

ಪ್ರಪ್ರಥಮ ಆಫ್ರೋ ಅಮೆರಿಕನ್ ಅಧ್ಯಕ್ಷ ಒಬಾಮ, ಹಾಗೂ ಅವರ ಪತ್ನಿ, ಮಿಶೆಲ್ ಒಬಾಮಾ ಭೇಟಿ ನೀಡಿದರು

[ಬದಲಾಯಿಸಿ]

ಅಮೆರಿಕದ ಮೊಟ್ಟಮೊದಲ ಆಫ್ರಿಕನ್ ಅಮೆರಿಕನ್ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾರವರು, ಗಾಂಧಿ ಮ್ಯೂಸಿಯಮ್ ಗೆ ಭೇಟಿನೀಡಿ ತಮ್ಮ ಶ್ರದ್ಧಾಂಜಲಿ ಸಮರ್ಪಿಸಿದರು. ಬಾಪು, ಡಾ.ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಆಫ್ರಿಕನ್ ಅಮೆರಿಕನ್ನರಿಗೆ ಪ್ರೇರಣೆಯಾಗಿದ್ದರು.

ಸಮರಗೀತೆಯ ಸಿ.ಡಿ.ಯನ್ನು ಅಧ್ಯಕ್ಷರಿಗೆ

[ಬದಲಾಯಿಸಿ]

ಶುಭಾ ಮುಧಗಲ್ ಹಾಡಿದ ಆಡಿಯೊ ’ಸಮರಗೀತ’ ಸಿಡಿಯನ್ನು 'ಬರಾಕ್ ಓಬಾಮ ದಂಪತಿಗಳಿಗೆ ಉಡುಗೊರೆ'ಯಾಗಿ ನೀಡಿದರು. ಅಮೆರಿಕದ ಅಧ್ಯಕ್ಷ ಒಬಾಮಾ ರವರು ತಾವು ಬರೆದ ಪುಸ್ತಕವೊಂದನ್ನು ಮಣಿಭವನದ ಪುಸ್ತಕಾಲಯಕ್ಕೆ ಉಡುಗೊರೆಯಾಗಿ ನೀಡಿದರು. ಭಾರತದ ಸ್ವಾತಂತ್ರ್ಯ ಸಮರದ ಸಮಗ್ರ ಹೋರಾಟದ ಚಿತ್ರವನ್ನು ರೂಪಿಸಿದ ಎರಡೂವರೆ ತಾಸಿನ ೨ ಸಿಡಿಗಳನ್ನು ಹಿಂದಿನ ಟ್ರಸ್ಟಿ, ವಿಠಲ್ ಭಾಯಿ ಜವೇರಿಯವರು ಅಮೆರಿಕನ್ ಅಧ್ಯಕ್ಷ ಬರಾಕ್ ಓಬಾಮಾರವರಿಗೆ ಅರ್ಪಿಸಿದರು. 'ಉಷಾ ಠಕ್ಕರ್' ಹಾಗೂ 'ನೀರಾ ದೇಸಾಯಿ' ಬರೆದ 'Women in Indian Society',ಎಂಬ ಪುಸ್ತಕವನ್ನು ಓಬಾಮಾರವರಿಗೆ ಕೊಡಲಾಯಿತು. ಮತ್ತೊಂದು ಪುಸ್ತಕ, Mahatma-Golden Treasure of History,ಎಂಬ ಮಹಾತ್ಮಾ ಗಾಂಧಿಯವರ ವಿಚಾರ ಧಾರೆಗಳನ್ನೊಳಗೊಂಡ ಪುಸ್ತಕವನ್ನೂ ಕೊಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Mahatma Gandhi's Association With Mani Bhavan (1917-1934)". Archived from the original on 2016-03-04. Retrieved 2015-04-15.
  • ದೂರ ಧ್ವನಿ ಕ್ರಮಾಂಕ : 022/2380-5864
  • ಪ್ರವೇಶ ದರ : ಉಚಿತ. ಆದರೆ ಏನಾದರೂ ಧನ ಸಹಾಯಮಾಡುವುದಾದರೆ ಸ್ವಾಗತ.
  • ಮಣಿ ಭವನದ ವಿಶೇಷತೆ : ಮಹಾತ್ಮ ಗಾಂಧಿಯವರ ಜೀವನ ಯಾತ್ರೆಗೆ ಹೆಚ್ಚು ಮಹತ್ವ ಕೊಡಲಾಗಿದೆ.
  • ಮಣಿಭವನದ ವೇಳೆ : ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ಬೆಳಿಗ್ಯೆ 9.30 ರಿಂದ 6 ಗಂಟೆಯ ವರೆಗೆ,
  • 'MANI BHAVAN GANDHI SANGRAHALAYA 19, Laburnum Road, Gamdevi, Mumbai 400 007'

ಬಾಹ್ಯ ಸಂಪರ್ಕ

[ಬದಲಾಯಿಸಿ]