ವಿಷಯಕ್ಕೆ ಹೋಗು

ಮಂತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂತ್ರಿ ಒಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಸರ್ಕಾರದಲ್ಲಿ ಸಾರ್ವಜನಿಕ ಪದವನ್ನು ಹೊಂದಿರುವ ಒಬ್ಬ ರಾಜಕಾರಣಿ. ಇವನು/ಇವಳು ಇತರ ಮಂತ್ರಿಗಳ ಸಂಯೋಗದೊಂದಿಗೆ ಸರ್ಕಾರದ ನೀತಿಗಳ ಮೇಲಿನ ನಿರ್ಣಯಗಳನ್ನು ಮಾಡುತ್ತಾನೆ ಮತ್ತು ಅವನ್ನು ಕಾರ್ಯಗತಗೊಳಿಸುತ್ತಾನೆ. ಕೆಲವು ಅಧಿಕಾರ ವ್ಯಾಪ್ತಿಗಳಲ್ಲಿ ಸರ್ಕಾರದ ಮುಖ್ಯಸ್ಥನೂ ಒಬ್ಬ ಮಂತ್ರಿಯಾಗಿರುತ್ತಾನೆ ಮತ್ತು ಇವನನ್ನು "ಪ್ರಧಾನ ಮಂತ್ರಿ", "ಮುಖ್ಯ ಮಂತ್ರಿ" ಅಥವಾ ಇತರ ಹೆಸರಿನಿಂದ ಕರೆಯಲಾಗುತ್ತದೆ.

ವೆಸ್ಟ್‌ಮಿನಿಸ್ಟರ್ ಸರ್ಕಾರಿ ಪದ್ಧತಿಯನ್ನು ಬಳಸುವ ಕಾಮನ್‍ವೆಲ್ತ್ ರಾಜ್ಯಗಳ ನ್ಯಾಯವ್ಯಾಪ್ತಿಗಳಲ್ಲಿ, ಮಂತ್ರಿಗಳು ಸಾಮಾನ್ಯವಾಗಿ ಸಂಸತ್ತು ಅಥವಾ ಶಾಸನ ಸಭೆಯ ಒಂದಾದರೂ ಮನೆಯ ಸದಸ್ಯರಾಗಿರಬೇಕಾಗುತ್ತದೆ, ಮತ್ತು ಸಾಮಾನ್ಯವಾಗಿ ಶಾಸನ ಸಭೆಯ ಕೆಳಮನೆಯಲ್ಲಿ ಬಹುಮತವನ್ನು ಹೊಂದಿರುವ ರಾಜಕೀಯ ಪಕ್ಷಕ್ಕೆ ಸೇರಿರುತ್ತಾರೆ. ಬೆಲ್ಜಿಯಮ್, ಅಮೇರಿಕದಂತಹ ಇತರ ಅಧಿಕಾರ ವ್ಯಾಪ್ತಿಗಳಲ್ಲಿ, ಸಂಪುಟ ದರ್ಜೆಯ ಹುದ್ದೆಯಲ್ಲಿರುವವನು ಅಥವಾ ಇತರ ಸರ್ಕಾರಿ ಅಧಿಕಾರಿಯು ಶಾಸನ ಸಭೆಯ ಸದಸ್ಯನಾಗುವಂತಿಲ್ಲ. ಪ್ರತಿ ಅಧಿಕಾರ ವ್ಯಾಪ್ತಿಯಲ್ಲಿನ ಆಡಳಿತ ವ್ಯವಸ್ಥೆಗಳನ್ನು ಅವಲಂಬಿಸಿ, ಮಂತ್ರಿಗಳು ಸಾಮಾನ್ಯವಾಗಿ ಒಂದು ಸರ್ಕಾರಿ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಸರ್ಕಾರದ ಮಂತ್ರಿಮಂಡಲ, ಸಂಪುಟ ಮತ್ತು ಪ್ರಾಯಶಃ ಸಂಪುಟದ ಸಮಿತಿಯ ಸದಸ್ಯರಾಗಿರುತ್ತಾರೆ. ಕೆಲವು ಮಂತ್ರಿಗಳು ಇತರರಿಗಿಂತ ಮೇಲ್ದರ್ಜೆಯವರಾಗಿರಬಹುದು. ದೊಡ್ಡ ಸಂಖ್ಯೆಯ ಮಂತ್ರಿಗಳಿರುವ ಕೆಲವು ಅಧಿಕಾರ ವ್ಯಾಪ್ತಿಗಳು, ಮಂತ್ರಿಗಳನ್ನು ಆಂತರಿಕ ಸಚಿವಾಲಯ ಅಥವಾ ಬಾಹ್ಯ ಸಚಿವಾಲಯಕ್ಕೆ ಗೊತ್ತುಪಡಿಸಬಹುದು.

ಮೆಕ್ಸಿಕೊ, ಹಾಲಂಡ್, ಅಮೇರಿಕದಂತಹ ಕಟ್ಟುನಿಟ್ಟಾದ ಅಧಿಕಾರ ಪ್ರತ್ಯೇಕತೆಯಿರುವ ಅಧಿಕಾರ ವ್ಯಾಪ್ತಿಗಳಲ್ಲಿ, ಮಂತ್ರಿಗಳು ಶಾಸನ ಸಭೆಯ ಸದಸ್ಯರಾಗಿ ಇರುವಂತಿಲ್ಲ ಮತ್ತು ಮಂತ್ರಿಯಾಗಲು ಆಯ್ಕೆಮಾಡಲಾದ ಶಾಸಕನು ಶಾಸನ ಸಭೆಗೆ ರಾಜೀನಾಮೆ ನೀಡಬೇಕು. ಸಾಮಾನ್ಯವಾಗಿ ಬಹುಮತವಿರುವ ಪಕ್ಷದ ನಾಯಕನು ಪ್ರಧಾನ ಮಂತ್ರಿಯಾಗುತ್ತಾನೆ (ಅಥವಾ ಸಮಾನ ಕಾರ್ಯದ ಹುದ್ದೆ) ಮತ್ತು ಇತರ ಮಂತ್ರಿಗಳನ್ನು ಆಯ್ಕೆಮಾಡುತ್ತಾನೆ. ವೆಸ್ಟ್‌ಮಿನಿಸ್ಟರ್ ಪದ್ಧತಿಯಲ್ಲಿ, ಈ ಮಂತ್ರಿಗಳು ಸರ್ಕಾರದ ಭಾಗವಾಗಿದ್ದುಕೊಂಡೇ ಸಂಸತ್ತಿನಲ್ಲಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ. ಹಲವುವೇಳೆ, ಹೊರಗಿನ ವ್ಯಕ್ತಿಯನ್ನು ಮಂತ್ರಿಯಾಗಿ ನೇಮಿಸಬಹುದು, ಸಾಮಾನ್ಯವಾಗಿ ಸರ್ಕಾರಕ್ಕೆ ವಿಶೇಷ ಕೌಶಲಗಳನ್ನು ತರಲು. ಅಂತಹ ವ್ಯಕ್ತಿಯು ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಸಂಸತ್ತಿನ ಭಾಗವಾಗಿರುವ ಅಗತ್ಯವಿಲ್ಲ, ಮತ್ತು ಸರ್ಕಾರದಲ್ಲಿರುವ ಪಕ್ಷ/ಪಕ್ಷಗಳ ಸದಸ್ಯನಾಗಿರುವುದು ಅಗತ್ಯವಿಲ್ಲ.

ಮಂತ್ರಿಗಳ ಕೆಲವು ಉದಾಹರಣೆಗಳು: ಕೃಷಿ ಮಂತ್ರಿ, ಅರಣ್ಯ ಮಂತ್ರಿ, ವಾಣಿಜ್ಯ ಮಂತ್ರಿ, ಸಂಸ್ಕೃತಿ ಮಂತ್ರಿ, ರಕ್ಷಣಾ ಮಂತ್ರಿ, ಶಿಕ್ಷಣ ಮಂತ್ರಿ, ಇಂಧನ ಮಂತ್ರಿ, ಪರಿಸರ ಮಂತ್ರಿ, ವಿತ್ತ ಮಂತ್ರಿ, ವಿದೇಶ ಮಂತ್ರಿ, ಆರೋಗ್ಯ ಮಂತ್ರಿ, ಗೃಹ ಮಂತ್ರಿ, ವಸತಿ ಮಂತ್ರಿ, ಕೈಗಾರಿಕಾ ಮಂತ್ರಿ, ಕಾರ್ಮಿಕ ಮಂತ್ರಿ, ಲೋಕೋಪಯೋಗಿ ಮಂತ್ರಿ, ಜಲಸಂಪನ್ಮೂಲಗಳ ಮಂತ್ರಿ, ವಿಜ್ಞಾನ ಮಂತ್ರಿ, ಕ್ರೀಡಾ ಮಂತ್ರಿ, ಸಾರಿಗೆ ಮಂತ್ರಿ, ಇತ್ಯಾದಿ.

ಕೆಲವು ಮಂತ್ರಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರಬಹುದು ಮತ್ತು ಏಕಕಾಲದಲ್ಲಿ ಹಲವಾರು ಸಚಿವಾಲಯಗಳನ್ನು ಮುನ್ನಡೆಸಬಹುದು, ಅದೇ ರೀತಿ ಪ್ರತ್ಯೇಕ ಖಾತೆಗಳಿರುವ ಒಬ್ಬರಿಗಿಂತ ಹೆಚ್ಚು ಮಂತ್ರಿಗಳು ಒಂದು ಒಂಟಿ ಸಚಿವಾಲಯದ ಮೇಲ್ವಿಚಾರಣೆ ಮಾಡಬಹುದು.

"https://kn.wikipedia.org/w/index.php?title=ಮಂತ್ರಿ&oldid=798367" ಇಂದ ಪಡೆಯಲ್ಪಟ್ಟಿದೆ