ವಿಷಯಕ್ಕೆ ಹೋಗು

ಮಂಜುಗುಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಜುಗುಣಿ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿರುವ ಊರು. ಶಿರಸಿಯಿಂದ ೨೬ ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ತಿರುಪತಿ ಎಂದೂ ಕರೆಯುತ್ತಾರೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ, ಚಳಿಗಾಲದಲ್ಲಿ ದಟ್ಟವಾದ ಮಂಜು ಮುಸುಕಿರುವುದರಿಂದ ಈ "ಮಂಜುಗುಣಿ" ಎಂದು ಕರೆಯಲಾಗುವುದೆಂದೂ ಹೇಳಲಾಗುತ್ತದೆ.

ಶ್ರೀ ಚಕ್ರತೀರ್ಥ ಕೆರೆ

ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ, ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಪ್ರತಿನಿತ್ಯವೂ ಇಲ್ಲಿ ಉಚಿತ ಅನ್ನ ಸಂತರ್ಪಣೆ ನಡೆಯುತ್ತದೆ.

ಸ್ಥಳ ಪುರಾಣ

[ಬದಲಾಯಿಸಿ]

ಸುಮಾರು ೯ನೇ ಶತಮಾನದಲ್ಲಿ ತಿರುಮಲ ಯೋಗಿಗಳು ತಿರುಪತಿಯಿಂದ ತೀರ್ಥಯಾತ್ರೆಗೆ ಹೊರಡುತ್ತಾರೆ. ಈಗಿನ ಮಂಜುಗುಣಿಯಿಂದ ೮ ಕಿಮೀ ದೂರದಲ್ಲಿರುವ ಗಿಳಿಲಗುಂಡಿ ಊರಿನ ಕೊಳದ ಬಳಿ ತಪಸ್ಸು ಮಾಡಲು ಆರಂಭಿಸುತ್ತಾರೆ. ಆ ಸಮಯದಲ್ಲಿ, ಶಂಖ-ಚಕ್ರ-ಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನವಾಯಿತು. ಅದನ್ನು ತಂದು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸುತ್ತಾರೆ.

ಖಲಮೃಗಮೃಗಯಾರ್ಥಂ ಪಾದುಕಾಶೋಭಿಪಾದಃ |
ಕರಧೃತಶರಚಕ್ರೋದ್ದಾಮಶಂಖಾಗ್ರ್ಯಚಾಪಃ||
ಸಕಲಭುವಿ ಚರಿತ್ವಾ ಮಂಜುಗುಣ್ಯಾಖ್ಯರಮ್ಯ- |
ಸ್ಥಲಸದನಗತೋಽಭೂದ್ವೇಂಕಟೇಶೋ ಮುಕುಂದಃ ||೭೮||

ಅರ್ಥ: ವೇಂಕಟೇಶನು ದುಷ್ಟ(ರೆಂಬ) ಮೃಗಗಳ ಬೇಟೆಗಾಗಿ, ಪಾದುಕೆಗಳನ್ನು ಧರಿಸಿ, ಶಂಖ-ಚಕ್ರ ಬಿಲ್ಲು-ಬಾಣಗಳನ್ನು ಕರದಲ್ಲಿ ಹಿಡಿದು ಸಕಲ ಭೂಮಂಡಲದಲ್ಲಿ ಸಂಚರಿಸುತ್ತಿರುವಾಗ, ಮಂಜುಗುಣಿಯ ರಮ್ಯತೆಗೆ ಮನಸೋತು, ಒಂದೂ ಹೆಜ್ಜೆಯನ್ನು ಮುಂದಿಡಲಾಗದೆ ಅಲ್ಲಿಯೇ ನೆಲೆಸಿದ್ದಾನೆ.[]

ದೇವಾಲಯಗಳು

[ಬದಲಾಯಿಸಿ]

ಇಲ್ಲಿರುವ ವೆಂಕಟರಮಣ ದೇವಸ್ಥಾನ ವಿಜಯನಗರ ಶೈಲಿಯಲ್ಲಿ ಸಂಪೂರ್ಣ ಕಲ್ಲುಗಳಿಂದ ಮಾಡಲ್ಪಟ್ಟಿದೆ. ದೇವಾಲಯದ ಒಳಾಂಗಣದಲ್ಲಿ ಕಲ್ಲಿನ ಸುಂದರ ಕೆತ್ತನೆಗಳನ್ನು ನೋಡಬಹುದಾಗಿದೆ. ವೆಂಕಟರಮಣನ ಬಲಭಾಗದಲ್ಲಿ ಪದ್ಮಾವತಿಯ ದೇವಸ್ಥಾನವಿದೆ. ಎಡಬಾಗದಲ್ಲಿ ಗಣಪತಿ ವಿಗ್ರಹವಿದೆ.

ಇತ್ತೀಚಿಗೆ ಈ ದೇವಾಲಯವನ್ನು ಪುನರ್ ನವೀಕರಣ ಮಾಡಲಾಗಿದೆ. ತಾಮ್ರದ ಹೊದಿಕೆ ಅಳವಡಿಸಲಾಗಿದೆ. ಅಕ್ಕಪಕ್ಕದ ಗುಡಿಗಳಿಗೆ ಸುಸಜ್ಜಿತ ಕಟ್ಟಡ, ಪ್ರದಕ್ಷಿಣಾ ಪಥಕ್ಕೆ ನೆಲಹಾಸು ಹಾಗೂ ಇನ್ನಿತರೇ ಅಭಿವೃದ್ಧಿ ಕೆಲಸಗಲಿಗಾಗಿ ಕೋಟ್ಯಂತರ ರೂಪಾಯಿಗಳ ಖರ್ಚು ಮಾಡಲಾಗಿದೆ.[]

ರಥೋತ್ಸವ

[ಬದಲಾಯಿಸಿ]
ವಿಶಾಲ ರಥಬೀದಿ

ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವವು ಇಲ್ಲಿನ ಬಹುಮುಖ್ಯ ವಾರ್ಷಿಕ ಉತ್ಸವವಾಗಿದೆ. ಅಂದು ಶ್ರೀ ವೆಂಕಟೇಶ ತಿರುಮಲದಿಂದ ಇಲ್ಲಿ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಇದೆ[]. ಇದಕ್ಕೆ ಒಪ್ಪುವಂತ ಸಂಗತಿ ಎಂದರೆ ಅಂದು ತಿರುಪತಿಯಲ್ಲಿ ಪೂಜಾ ಕಾರ್ಯಕ್ರಮಗಳು ಹಲವು ತಾಸುಗಳ ಕಾಲ ನಡೆಯುವುದಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. ತೀರ್ಥಪ್ರಬಂಧ, ಮಂಜುಗುಣಿ ವೆಂಕಟೇಶ ಕ್ಷೇತ್ರ
  2. ಭಕ್ತರ ಶ್ರದ್ಧಾಕೇಂದ್ರ ಮಂಜುಗುಣಿ , ಕನ್ನಡಪ್ರಭ, 09 Feb 2014
  3. ಮಂಜುಗುಣಿ ಎಂಬ ತಿರುಪತಿ, ಪ್ರಜಾವಾಣಿ, 11 Sep, 2012