ಭೃಂಗಿ
ಭೃಂಗಿಯು ಶೈವಧರ್ಮದಲ್ಲಿ ಬರುವ ಓರ್ವ ಪ್ರಾಚೀನ ಪ್ರಥಮ. ಭೃಂಗಿರಿಟ, ಭೃಂಗೀಶ್ವರ, ಮಹಾಕೋಲಾಹಲ ಪರ್ಯಾಯನಾಮಗಳು. ಕೈಲಾಸದ ಐವರು ಪ್ರಮುಖ ಪ್ರಮಥರಲ್ಲಿ ಒಬ್ಬ.[೧] ಮಾಯೆಯನ್ನು ಜಯಿಸಿದವ. ಇವನಿಗೆ ಮೂರು ಕಾಲುಗಳು. ನಂದಿ-ಭೃಂಗಿಗಳು ಶಿವನ ದ್ವಾರಪಾಲಕರು. ಗಣಸಹಸ್ರನಾಮದಲ್ಲಿ ಭೃಂಗಿಯ ಹೆಸರಿದೆ. ಸಿದ್ಧರಾಮ ಭೃಂಗಿಯ ಅವತಾರವೆಂದು ಹೇಳಲಾಗಿದೆ. ಶಿವನ ಸಭೆಯಲ್ಲಿ ಹಾಸ್ಯರಸ ಪ್ರಧಾನವಾದ ನೃತ್ಯಮಾಡುವುದರಲ್ಲಿ ಈತ ಪ್ರಸಿದ್ಧ. ವೀರಶೈವ ಪುರಾಣ ಮತ್ತು ಕಾವ್ಯಗಳಲ್ಲಿ ಈತನ ಉಲ್ಲೇಖ ಬರುತ್ತದೆ.
ಒಮ್ಮೆ ಪಾರ್ವತಿ ಪರಮೇಶ್ವರರ ಓಲಗದಲ್ಲಿದ್ದಾಗ ಭೃಂಗಿ ಸರ್ಪಕುಂಡಲ, ರತ್ನಖಚಿತ ತೋಳಬಳೆ, ವಜ್ರಕಂಕಣ, ಮುತ್ತಿನಹಾರ, ಪಾದದಲ್ಲಿಗೆಜ್ಜೆ, ಬಿರಿದಿನ ಪೆಂಡೆಯ ಧರಿಸಿಕೊಂಡು ಚಲ್ಲಣಉಟ್ಟು ಕಾಸೆಯ ಕಟ್ಟಿ, ಭಸಿತೋದ್ಧೊಳನವ ಮಾಡಿ ಲಾಕುಳವ ಹಿಡಿದು ಶಿವನನ್ನು ನಗಿಸುತ್ತ ಶಿವನಿಗೆ ಮಾತ್ರ ಕೈಯ ಮುಗಿದು, ದೇವಿಗೆ ಕೈಯ ಮುಗಿಯದೆ ಮುಂದೆ ಹೋದಾಗ ಕೋಪಿಸಿಕೊಂಡ ಪಾರ್ವತಿ ತಾನಿತ್ತ ದೇಹವನ್ನು ಹಿಂದಕ್ಕೆ ತೆಗೆದುಕೊಂಡು ಚಂಡಮಾರುತನನ್ನು ಕರೆದು ಭೃಂಗಿಯನ್ನು ಹಾರಿಸಿಕೊಂಡು ಹೋಗಲು ಅಪ್ಪಣೆ ಮಾಡಿದಳು. ಆಗ ಭೃಂಗಿ ಶಿವಸ್ತುತಿ ಮಾಡಿದ. ಶಿವ ಅವನಿಗೆ ಮೂರನೆಯ ಪಾದ ಕರುಣಿಸಿದ. ಇದನ್ನು ಕಂಡು ಚಂಡಮಾರುತ ಅಂಜಿ ದೂರಹೋದ. ಬಳಿಕ ಶಿವ ಭೃಂಗಿಯನ್ನು ತನ್ನ ಬಳಿ ಇರುವಂತೆ ಹೇಳಿದ. ಅಂದಿನಿಂದ ಭೃಂಗಿ ಶಿವನನ್ನು ತನ್ನ ನಾಟ್ಯದಿಂದ ಸೇವಿಸತೊಡಗಿದ. ಈ ಉಲ್ಲೇಖ ಬಸವಲಿಂಗನ ಬಸವೇಶ್ವರ ಪುರಾಣ ಕಥಾಸಾಗರ, ಪಾಲ್ಕುರಿಗೆ ಸೋಮನಾಥನ ಸೋಮೇಶ್ವರ ಪುರಾಣ, ಗುರುರಾಜ ಚಾರಿತ್ರ, ಹರಿಹರನ ಭೃಂಗೀಶನ ರಗಳೆ ಮುಂತಾದ ಕಡೆಗಳಲ್ಲಿ ಬಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 78.