ಭಾಷಾ ವೈಶಿಷ್ಟ್ಯ

ವಿಕಿಪೀಡಿಯ ಇಂದ
Jump to navigation Jump to search

ಭಾಷೆಯ ವೈಶಿಷ್ಟ್ಯಗಳು - ಒಂದು ಭಾಷೆ ಉತ್ತಮವೆಂದು ಗುರುತಿಸಿಕೊಳ್ಳಬೇಕಾದರೆ, ಆ ಭಾಷೆಯಲ್ಲಿ ಉತ್ತಮಾಂಶಗಳು ಇರಬೇಕು. ಭಾಷಾ ಶಾಸ್ತ್ರಜ್ಞ ಹಾಕೆಟ್ ಭಾಷೆಯ ಉತ್ತಮಾಂಶಗಳನ್ನು ಈ ಕೆಳಗಿನಂತೆ ಭಾಷೆಯ ವೈಶಿಷ್ಟ್ಯಗಳೆಂದು ಗುರುತಿಸಿದ್ದಾನೆ.

ದ್ವಿವಿಧತೆ (Duality)[ಬದಲಾಯಿಸಿ]

ಭಾಷೆಯಲ್ಲಿ ಬಳಕೆಯಾಗುವ ಶಬ್ದಗಳು ಎರಡು ಅಂಶಗಳನ್ನು ಹೊಂದಿರುತ್ತವೆ. ಒಂದು ಧ್ವನಿ ಮತ್ತೊಂದು ಅರ್ಥ. ಇವು ಶಬ್ದಕ್ಕೆ ಒಂದು ಬಾಹ್ಯ ರೂಪವನ್ನು ಮತ್ತೊಂದು ಅಂತಃರೂಪವನ್ನು ನೀಡುತ್ತವೆ. ಇವುಗಳನ್ನೇ ಅಭಿವ್ಯಕ್ತಿ (expression) ಮತ್ತು ಆಶಯ (content) ಎನ್ನುತ್ತಾರೆ. ಭಾಷೆ ಹೀಗೆ ಎರಡು ಅಂಶಗಳನ್ನು ಪಡೆದುಕೊಂಡಿರುವುದಕ್ಕೆ ದ್ವಿವಿಧತೆ ಎನ್ನುತ್ತಾರೆ. ಇದು ಭಾಷೆಯ ಪ್ರಥಮ ಲಕ್ಷಣವಾಗಿದೆ. ಉದಾಹರಣೆಗೆ; ‘ಕೋಲು’ ಎಂಬ ಶಬ್ದದಲ್ಲಿ ಕ್, ಓ, ಲ್, ಉ ಎಂಬ ನಾಲ್ಕು ಧ್ವನಿಗಳಿದ್ದು ಇವು ಶಬ್ದದ ಧ್ವನಿರೂಪವನ್ನು ನಿರ್ಮಿಸಿದೆ. ಈ ಧ್ವನಿರೂಪ ಒಂದು ವಸ್ತುವನ್ನು ಸೂಚಿಸುತ್ತದೆ. ಈ ಅರ್ಥವೇ ಅದರ ಅಂತಃರೂಪವನ್ನು ನಿರ್ಮಿಸಿದೆ. ಹೀಗೆ ಶಬ್ದ ಒಂದು ಮುಖ ಧ್ವನಿರೂಪವಾದರೆ ಅದರ ಮತ್ತೊಂದು ಮುಖ ಅರ್ಥ. ಪದ ಎಂಬ ನಾಣ್ಯ ಚಲಾವಣೆಯಲ್ಲಿ ಇರಬೇಕಾದರೆ ಈ ಎರಡು ಮುಖಗಳನ್ನು ಪಡೆದಿರಬೇಕಾಗುತ್ತದೆ. ಹೀಗೆಯೇ ಪ್ರತಿಯೊಂದು ಭಾಷೆಯ ಪ್ರತಿಯೊಂದು ಶಬ್ದವು ಧ್ವನು ಮತ್ತು ಅರ್ಥ ಎಂಬೆರಡು ಅಂಶಗಳನ್ನು ಹೊಂದಿರುವುದು ದ್ವಿವಿಧತೆ ಎನಿಸುತ್ತದೆ.

ಉತ್ಪಾದಕತೆ (Productivity)[ಬದಲಾಯಿಸಿ]

ಯಾವುದೇ ಸಮಾಜದಲ್ಲಿ ಹೊಸ ಹೊಸ ಆವಿಷ್ಕಾರಗಳು ಆದಂತೆಲ್ಲ ಅವುಗಳನ್ನು ಗುರುತಿಸಲು ಹೊಸ ಹೊಸ ಶಬ್ದಗಳು ಆ ಜನರ ಭಾಷೆಯಲ್ಲಿ ಸೃಷ್ಟಿಯಾಗುತ್ತಿರುತ್ತವೆ. ಒಂದು ವೇಳೆ ಪರಭಾಷೆಯಲ್ಲಿ ಈಗಾಗಲೇ ಈ ಕುರಿತ ಶಬ್ದಗಳಿದ್ದರೆ ಅಂಥ ಭಾಷೆಯಿಂದ ನೇರವಾಗಿಯೋ ಇಲ್ಲವೇ ಭಾಷಾಂತರಿಸಿಯೋ ಅವುಗಳನ್ನು ಸ್ವೀಕರಿಸುತ್ತಾರೆ. ಮತ್ತೆ ಕೆಲವೊಮ್ಮೆ ಹಳೆಯ ರೂಪಗಳು ಹೊಸ ಅರ್ಥ ಪಡೆದು ಬಳಕೆಯಾಗುವುದೂ ಇದೆ. ಹೀಗೆ ವಸ್ತು, ವಿಷಯ, ವಿಚಾರಗಳನ್ನು ನಿರ್ದೇಶಿಸಲು ಹೊಸ ಹೊಸ ಭಾಷಾ ಪ್ರಯೋಗಗಳೂ ಆಗುವುದಿದೆ. ಹೊಸ ಶಬ್ದಗಳು ನಿರ್ಮಾಣವಾಗುವುದರ ಜೊತೆಗೆ ಕೆಲವೊಮ್ಮೆ ಹೊಸ ಧ್ವನಿಗಳೂ ಭಾಷೆಗೆ ಸೇರ್ಪಡೆಯಾಗುತ್ತವೆ. ಇದು ಜೀವಂತ ಭಾಷೆಯ ಗುಣವಾಗಿದೆ. ಭಾಷೆ ಹೀಗೆ ಶಬ್ದ ನಿರ್ಮಿಸಲು ಪಡೆದಿರುವ ಶಕ್ತಿಯನ್ನೆ ಅದರ ಉತ್ಪಾದಕ ಗುಣ ಎಂದು ಗುರುತಿಸುತ್ತಾರೆ. ಕನ್ನಡದಲ್ಲಿ ಇತ್ತೀಚೆಗೆ ಕಂಪ್ಯೂಟರ್‍ಗೆ ಗಣಕಯಂತ್ರ, ಇಂಟರ್‍ನೆಟ್‍ಗೆ ಅಂತರ್‍ಜಾಲ, ಟೆಲಿವಿಷನ್‍ಗೆ ದೂರದರ್ಶನ, ಮೊವೈಲ್‍ಗೆ ಜಂಗಮವಾಣಿ ಮುಂತಾದ ಶಬ್ದಗಳು ಸೃಷ್ಟಿಯಾಗಿವೆ. ಹೀಗೆ ಅಗತ್ಯ ಬಿದಾಗಲೆಲ್ಲ ಹೊಸ ಶಬ್ದಗಳನ್ನು ಸೃಷ್ಟಿಸುವ ಭಾಷೆಯ ಶಕ್ತಿಯೇ ಉತ್ಪಾದಕತೆ.

ಯಾದೃಚ್ಛಿಕತೆ (Arbitrariness)[ಬದಲಾಯಿಸಿ]

ಭಾಷೆಯಲ್ಲಿ ಶಬ್ದಗಳಿಗೆ ಅರ್ಥ ರೂಢಿಗತವಾಗಿ ಬಂದಿರುತ್ತದೆ. ಸಮಾಜದಲ್ಲಿ ಜನತೆ ಒಪ್ಪಿಕೊಂಡ ಅರ್ಥಗಳಿಂದಲೇ ಶಬ್ದಗಳ ಬಳಕೆಯಾಗುತ್ತದೆ. ವಸ್ತುಗಳನ್ನು, ಶಾಬ್ದಿಕವಾಗಿ ಗುರುತಿಸುವುದು ಮತ್ತು ಅದನ್ನು ಬಳಸಿಕೊಂಡು ಬರುವುದು ಆಯಾ ಜನಸಮುದಾಯಕ್ಕೆ ಸಂಬಂಧಿಸಿದಾಗಿರುತ್ತದೆ. ಉದಾಹರಣೆಗೆ, ಕನ್ನಡದಲ್ಲಿ ಬಳಕೆಯಾಗುವ ‘ಕಲ್ಲು’ ಎಂಬ ಪದಕ್ಕೆ ಇಂಗ್ಲಿಷಿನಲ್ಲಿ ‘ಸ್ಟೋನ್’ ಹಿಂದಿಯಲ್ಲಿ ‘ಪಥ್ಥರ್’, ಮರಾಠಿಯಲ್ಲಿ ‘ದಗಡ್’, ಸಂಸ್ಕøತದಲ್ಲಿ ‘ಶಿಲಾ’ ಮುಂತಾದ ಶಬ್ದಗಳಿವೆ. ಹೀಗೆ ಒಂದೇ ವಸ್ತುವಿಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಪದಗಳು ಬಳಕೆಯಾಗಲು ಕಾರಣ ಭಾಷೆ ಯಾದೃಚ್ಛಿಕವಾಗಿರುವುದೇ ಆಗುದೆ. ಆದ್ದರಿಂದಲೇ ವಿಶ್ವದಾದ್ಯಂತ ಸಾರ್ವತ್ರಿಕವಾಗಿ ವಸ್ತು ಒಂದೇ ಇದ್ದರೂ ಅದರ ರಚನೆ ಒಂದೇ ತೆರನಾಗಿದ್ದರೂ ಅದನ್ನು ಗುರುತಿಸುವ ಪದಗಳು ಭಾಷೆಯಿಂದ ಭಾಷೆಗೆ ಬೇರೆಯಾಗಿರುತ್ತವೆ. ಇದಕ್ಕೆ ಕಾರಣ ಪ್ರತಿಯೊಂದು ಭಾಷಿಕ ಗುಂಪು ತನತನಗೆ ಅನುಕೂಲಕರವಾಗುವಂತೆ ವಸ್ತುವನ್ನೋ ವಿಷಯವನ್ನೋ ಗುರುತಿಸುದಾಗಿದೆ. ಇದನ್ನೇ ಯಾದೃಚ್ಛಿಕತೆ ಎಂದು ಕರೆಯುವುದು.

ವಿಶಿಷ್ಟ ಪ್ರಾವೀಣ್ಯತೆ (Specialization)[ಬದಲಾಯಿಸಿ]

ಪ್ರತಿಯೊಂದು ಭಾಷೆ ನಿರ್ಧಿಷ್ಟವಾದ, ನಿಖರವಾದ ರಾಚನಿಕ ವಿನ್ಯಾಸವನ್ನು ಹೊಂದಿದೆ. ಅದರ ಪ್ರತಿಯೊಂದು ಘಟಕವೂ ರಚನೆಯ ನಿಯಮಕ್ಕನುಸಾರವಾಗಿ ಬಂದು ವೃತ್ತಂತವನ್ನೊದಗಿಸುತ್ತದೆ. ಇಂಥ ಭಾಷೆಯನ್ನು ಸ್ವಭಾಷೆಯಾಗಿ ಹೊಂದಿದವರು ಅದನ್ನು ಲೀಲಾಜಾಲವಾಗಿ ಬಳಸುತ್ತಿರುತ್ತಾನೆ. ಅಂದರೆ ಮಾತನಾಡುವವನಾಗಿ, ಕೇಳುಗನಾಗಿ ಆತ ತನ್ನ ಭಾಷೆಯನ್ನು ಬಳಸುವ ವಿಶಿಷ್ಟ ಜ್ಞಾನ ಪಡೆದಿರುತ್ತಾನೆ. ಪ್ರಾವೀಣ್ಯ ಗಳಿಸಿರುತ್ತಾನೆ. ಓದಲು, ಬರೆಯಲು ಬಾರದ ನಿರಕ್ಷರಿಗೂ ಭಾಷಾ ಬಳಕೆಯ ಇಂಥ ಜ್ಞಾನ ಇದ್ದೇ ಇರುತ್ತದೆ. ಇದನ್ನೇ ವಿಶಿಷ್ಟ ಪ್ರಾವೀಣ್ಯ ಎಂದು ಗುರುತಿಸುತ್ತಾರೆ.

ವಿನಿಮಯ ಗುಣ (Inter changeability)[ಬದಲಾಯಿಸಿ]

ಸಮಾಜದಲ್ಲಿ ವ್ಯಕ್ತಿಗಳ ನಡುವೆ ಅನಿಸಿಕೆಗಳ ಅಥವಾ ವಿಚಾರಗಳ ಪರಸ್ಪರ ವಿನಿಮಯ ಭಾಷೆಯಿಂದ ಮಾತ್ರ ಸಾಧ್ಯ. ಭಾಷಿಗನೋರ್ವ ಮಾತನಾಡುವವನಾಗಿ, ಕೇಳುಗನಾಗಿ ತನ್ನ ಭಾಷೆಯನ್ನು ಬಳಸುತ್ತಿರುತ್ತಾನೆ. ಆ ಭಾಷೆಯನ್ನು ಬಲ್ಲ ಮತ್ತೋರ್ವ ಅದನ್ನು ತಿಳಿಯಬಲ್ಲ ಹಾಗೂ ಅದಕ್ಕೆ ಪ್ರತಿಕ್ರಿಯಿಸಬಲ್ಲ. ಹೀಗೆ ಪರಸ್ಪರ ವಿನಿಮಯ ಶಕ್ತಿ ಭಾಷೆಗಿದೆ. ಮಾನವ ಭಾಷೆಯಲ್ಲಿ ಕಂಡುಬರುವ ಈ ಗುಣ ಕೆಲವು ಮಾನವೇತರ ಸಂವಹನೆಗಳಲ್ಲೂ ಇದೆ ಎಂದು ಸಿ.ಎಫ್.ಹಾಕೆಟ್ ಗುರುತಿಸಿದ್ದಾನೆ. ಗಿಬ್ಬಗನ(ಒಂದು ಜಾತಿಯ ಕೋತಿ) ಕೂಗಿನಲ್ಲಿ, ದುಂಬಿಗಳ ಕುಣಿತದಲ್ಲಿ ಈ ಲಕ್ಷಣ ಇದೆ ಎಂದು ಆತ ಹೇಳುತ್ತಾನೆ.

ಸ್ಥಾನಪಲ್ಲಟತೆ (Displacement)[ಬದಲಾಯಿಸಿ]

ಭಾಷೆ ವ್ಯವಹಾರದ ನೇರ ಸಂದರ್ಭದಲ್ಲಿ ಮಾತ್ರ ಬಳಕೆಯಾಗುವುದಿಲ್ಲ. ಆ ಸಂದರ್ಭ ಅಥವಾ ವಸ್ತು ಕಣ್ಣೆದುರು ಇಲ್ಲದಿದ್ದಾಗ್ಯೂ ನಾವದನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಬಲ್ಲೆವು. ಮತ್ತು ಅಭಿವ್ಯಕ್ತಿಸಿದ್ದನ್ನು ಅರ್ಥ ಮಡಿಕೊಳ್ಳಬಲ್ಲೆವು. ಹೀಗೆ ಒಂದು ಕಾಲಘಟ್ಟದಿಂದ ಅಥವಾ ಪ್ರದೇಶದಿಂದ ಅಥವಾ ಸಂದರ್ಭದಿಂದ ಅನುಭವಗಳನ್ನು ಪ್ರತ್ಯೇಕಿಸಿ ಹೇಳುವುದು ಹಾಗೂ ಗ್ರಹಿಸುವುದು ಸ್ಥಾನಪಲ್ಲಟತೆ ಎನಿಸುತ್ತದೆ. ಎಸ್ಟೋ ಸಲ ವಸ್ತುವನ್ನು, ಸ್ಥಳವನ್ನು ನೋಡಿರದೇ ಇದ್ದರೂ ಕಲ್ಪನೆ ಮಾಡಿಕೊಳ್ಳುತ್ತೇವೆ. ಅರ್ಥಮಾಡಿಕೊಳ್ಳುತ್ತೇವೆ. ಉದಾ: ಪುಷ್ಪಕವಿಮಾನ, ಸಂಜೀವಿನಿ ಕಡ್ಡಿ, ಸ್ವರ್ಗ, ನರಕ, ಭಕ್ತಿ, ವಾತ್ಸಲ್ಯ ಇವು ಅಮೂರ್ತವಾದವು. ಆದರೂ ಇವುಗಳ ಕಲ್ಪನೆ ಮಾಡಿಕೊಳ್ಳಲು ನಾವು ಶಕ್ತರಾಗಿದ್ದೇವೆ. ಭಾಷೆಯಿಂದ ಇದು ಸಾಧ್ಯವಾಗಿದೆ. ಹೀಗೆ ಎದುರಿಗಿರದ ಹಾಗೂ ಅಮೂರ್ತವಾಗಿರುವುದನ್ನು ಮೂರ್ತವೆಂಬಂತೆ ಮನಸ್ಸಿಗೆ ತಿಳುವಳಿಕೆ ಮಾಡಿಕೊಡುವ ಭಾಷೆಯ ಲಕ್ಷಣ ಸ್ಥಾನಪಲ್ಲಟತೆ ಎನಿಸಿಕೊಳ್ಳುತ್ತದೆ.

ಸಂಸ್ಕೃತಿ ವಾಹಕತೆ (Cultural transmission)[ಬದಲಾಯಿಸಿ]

ನಮ್ಮ ಜ್ಞಾನ, ತಿಳಿವಳಿಕೆ ನಮ್ಮ ಮುಂದಿನ ಜನಾಂಗಕ್ಕೆ ಸಾಗುವುದು ಭಾಷೆಯ ಮೂಲಕ. ಭಾಷೆ ಕೇವಲ ಪದಗಳನ್ನಷ್ಟೇ ಒಳಗೊಂಡಿರದೇ ಆ ಪದಗಳ ಹಿಂದಿನ, ಆ ಭಾಷೆಯನ್ನಾಡುವ ಜನರ ಬದುಕು ಹಾಗೂ ಜೀವನಕ್ರಮದ ಅನೇಕ ಅಂಶಗಳನ್ನು ಹೊಂದಿರುತ್ತದೆ. ಹೀಗೆ ಒಂದು ಜನಾಂಗದ ಸಾಂಸ್ಕøತಿಕ ಅಂಶಗಳನ್ನು ಭಾಷೆ ತನ್ನಲ್ಲಿ ಹಿಡಿದಿಟ್ಟುಕೊಂಡಿರುತ್ತದೆ. ಮೇಲ್ನೋಟಕ್ಕೆ ಪದಗಳು ಸ್ವತಂತ್ರ ಎನಿಸಿದರೂ ಅದರಲ್ಲಿ ಒಂದು ಜನಾಂಗದ ಸಂಸ್ಕøತಿ ದಾಖಲಾಗಿರುತ್ತದೆ. ಈ ಸಾಂಸ್ಕೃತಿಕ ಅಂಶಗಳು ಒಂದು ತಲೆಮಾರಿನಿಂದ ಅದರ ಮುಂದಿನ ತಲೆಮಾರಿಗೆ ಭಾಷೆಯ ಮೂಲಕ ಸಾಗುತ್ತವೆ. ಅದು ನುಡಿಯಾಗಿರಬಹುದು, ಅಥವಾ ಲಿಪಿಯಾಗಿರಬಹುದು. ಇತಿಹಾಸ, ಚರಿತ್ರೆಗಳು, ಪ್ರಾಚೀನ ಸಾಹಿತ್ಯಗಳು ಬದುಕಿನ ಸಾಂಸ್ಕೃತಿಕ ಮೌಲ್ಯಗಳನ್ನು ಇಂದಿಗೂ ನಮಗೆ ನೀಡುತ್ತಿವೆ. ಭಾಷೆಯಿಂದಾಗಿ ಇದು ಸಾದ್ಯವಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾಷೆ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತ ಸಂಸ್ಕøತಿ ವಾಹಕವಾಗಿ ಕಾರ್ಯಗೈಯುತ್ತಿದೆ. ಹೀಗೆ ಒಂದು ಸಂಸ್ಕøತಿಯ ಅಂಗವಾಗಿರುವ ಭಾಷೆ; ಸಮಗ್ರ ಸಂಸ್ಕೃತಿಯ ವಾಹಕವಾಗಿಯೂ ಕೆಲಸ ಮಾಡುತ್ತದೆ. ಭಾಷೆಯ ಈ ಗುಣವನ್ನು ಸಂಸ್ಕೃತಿ ವಾಹಕತೆ ಎನ್ನುತ್ತಾರೆ.