ವಿಷಯಕ್ಕೆ ಹೋಗು

ಭಾಷಾಭೂಗೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಎ. ಗ್ರಿಯರ್ ಸನ್

ಭಾಷಾಭೂಗೋಳ ಭಾಷಾವಿಜ್ಞಾನದ ಪ್ರಮುಖ ಶಾಖೆಗಳಲ್ಲಿ ಒಂದು. ಉಪಭಾಷೆಗಳಿಗೆ ಸಂಬಂಧಿಸಿದ ಅಧ್ಯಯನವನ್ನು ಈ ಹೆಸರಿನಿಂದ ಕರೆಯಲಾಗಿದೆ (ಲಿಂಗ್ವಿಸ್ಟಿಕ್‍ಜಾಗ್ರಫಿ; ಡಯಲೆಕ್ಟಾಲೊಜಿ).[೧] ಭಾಷೆ ಮಾನವ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಮಾನವ ಸಂವೇದನೆಯ ಅಭಿವ್ಯಕ್ತಿಗೆ ಸಮರ್ಥ ಮಾಧ್ಯಮ. ವ್ಯಕ್ತಿಗೆಂತೋ ಭಾಷೆಗೂ ಅಂತೆ ಬದಲಾವಣೆ ಬೆಳೆವಣಿಗೆಗಳಿವೆ. ಭಾಷೆ ನಿರಂತರ ಪರಿವರ್ತನಶೀಲವಾದದ್ದು. ಮಾನವನ ಆಚಾರ, ವಿಚಾರ, ಸಂಪ್ರದಾಯಗಳು ಬದಲಾದಂತೆ ಭಾಷೆಯಲ್ಲೂ ಬದಲಾವಣೆ ಉಂಟಾಗುತ್ತದೆ. ಒಂದೇ ಭಾಷೆ ಆಡುವ ಬೇರೆ ಬೇರೆ ಪ್ರದೇಶಗಳಲ್ಲಿಯ ಜನ ತಮ್ಮ ಜೀವನಕ್ರಮದಲ್ಲಿ ವ್ಯತ್ಯಾಸ ಹೊಂದಿರುವುದರಿಂದ ಭಾಷೆಯಲ್ಲಿಯೂ ಭಿನ್ನತೆಗಳು ಕಂಡುಬರುವುದು ಸಹಜ. ಒಂದು ಭಾಷೆಯ ಪ್ರದೇಶ ವಿಸ್ತಾರವಾದಷ್ಟು ಭಿನ್ನತೆಗಳು ಹೆಚ್ಚಾಗಿ ಕಾಣಬರುತ್ತವೆ. ಈ ಭಿನ್ನತೆಗಳೇ ಉಪಭಾಷೆ ಮತ್ತು ಹೊಸ ಭಾಷೆಗಳ ಉಗಮಕ್ಕೆ ಕಾರಣವಾಗುತ್ತವೆ.

ಉಪಭಾಷೆಗಳು[ಬದಲಾಯಿಸಿ]

ಉಪಭಾಷೆಗಳಲ್ಲಿ ಎರಡು ವಿಧ. ಪ್ರಾದೇಶಿಕ ಉಪಭಾಷೆಗಳು ಸಾಮಾಜಿಕ ಉಪಭಾಷೆಗಳು. ಒಂದು ಭಾಷೆ ಆಡುವ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಭಾಷೆ ಒಂದೇ ರೀತಿ ಇರುವುದಿಲ್ಲ. ಅಂದರೆ ವಿವಿಧ ಭಾಗಗಳಲ್ಲಿ ಆ ಭಾಷೆಯ ಸ್ವರೂಪ ಭಿನ್ನವಾಗಿರುತ್ತದೆ. ಈ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಕಾಣುವ ಭಾಷಾ ಪ್ರಭೇದಗಳೇ ಪ್ರಾದೇಶಿಕ ಉಪಭಾಷೆಗಳು. ಇವುಗಳಲ್ಲಿ ಕಂಡುಬರುವ ಪರಸ್ಪರ ವ್ಯತ್ಯಾಸವೇ ಪ್ರಾದೇಶಿಕ ಉಪಭಾಷೆಗಳು. ಇವುಗಳಲ್ಲಿ ಕಂಡುಬರುವ ಪರಸ್ಪರ ವ್ಯತ್ಯಾಸಕ್ಕೆ ಪ್ರಾದೇಶಿಕ ಭಿನ್ನತೆಯೇ ಮುಖ್ಯಕಾರಣ. ಉದಾಹರಣೆಗೆ ಮೈಸೂರು, ಧಾರವಾಡ, ಬಿಜಾಪುರ ಮತ್ತು ಬೆಳಗಾಂವಿ ಉಪಭಾಷೆಗಳು ಕನ್ನಡ ಭಾಷೆಯ ಬೇರೆ ಬೇರೆ ಪ್ರಾದೇಶಿಕ ಉಪಭಾಷೆಗಳು.

ಜಾತಿ ಆಧಾರಿತ ಭಿನ್ನ ಭಾಷೆಗಳು[ಬದಲಾಯಿಸಿ]

ಸಾಮಾಜಿಕ ಭಿನ್ನಾಂಶ[ಬದಲಾಯಿಸಿ]

ಒಂದು ಭಾಷೆ ಆಡುವ ಯಾವುದೇ ಪ್ರದೇಶವನ್ನು ಗಮನಿಸಿದಾಗ ಅಲ್ಲಿ ಒಂದು ಜಾತಿ ಅಥವಾ ವರ್ಗದ ಭಾಷೆ ಅಲ್ಲಿಯ ಇನ್ನೊಂದು ಜಾತಿ ಅಥವಾ ವರ್ಗದ ಭಾಷೆಗಿಂತ ಭಿನ್ನವಾಗಿರುವುದು ಕಂಡುಬರುತ್ತದೆ. ಹೀಗೆ ಸಮಾಜವನ್ನು ಆಧರಿಸಿ ಮಾಡಿದ ಭಾಷಾಪ್ರಭೇದಗಳಿಗೆ ಸಾಮಾಜಿಕ ಉಪಭಾಷೆ ಎಂದು ಹೆಸರು. ಉದಾಹರಣೆಗೆ, ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಹರಿಜನರ ಕನ್ನಡ. ಈ ಉಪಭಾಷೆಗಳು ಬಳಕೆ ಆಗುವ ಸಂದರ್ಭಗಳು ಬೇರೆ ಬೇರೆ ಆಗಿರುವುದರಿಂದ ಇವುಗಳಲ್ಲಿ ಭಿನ್ನತೆ ಕಂಡು ಬರುತ್ತದೆ. ಮುಖ್ಯವಾಗಿ ಸಂಪರ್ಕದ ಅಭಾವ ಪ್ರಾದೇಶಿಕ ಭಿನ್ನತೆಗೆ ಕಾರಣವಾದರೆ ಸಾಕ್ಷರತೆಯ ಅಭಾವ ಸಾಮಾಜಿಕ ಭಿನ್ನತೆಗೆ ಕಾರಣವಾಗುತ್ತದೆ. ಸಾಕ್ಷರತೆ ಹೆಚ್ಚಿದಂತೆಲ್ಲ ಸಾಮಾಜಿಕ ಭಿನ್ನತೆ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಪ್ರಾದೇಶಿಕ ವ್ಯತ್ಯಾಸ ಎಂದಿಗೂ ಇರುವಂಥಾದ್ದೆ. ಸಾಮಾಜಿಕ ಭಿನ್ನತೆ ತಾತ್ಕಾಲಿಕವಾದದ್ದು. ಈ ಕಾರಣದಿಂದಲೇ ಸಾಮಾಜಿಕ ಉಪಭಾಷೆಗಳನ್ನು ಕಲ್ಪಿಸುವುದು ಸರಿಯಲ್ಲ, ಇರುವುದು ಪ್ರಾದೇಶಿಕ ಉಪಭಾಷೆಗಳು ಮಾತ್ರ ಎಂಬುದು ಕೆಲವರ ಅಭಿಪ್ರಾಯ.

ವರ್ಗ ಅಂತರ ಭಿನ್ನಾಂಶ[ಬದಲಾಯಿಸಿ]

ಈ ಎರಡು ಉಪಭಾಷೆಗಳ ನಡುವೆ ಮತ್ತೊಂದು ಮುಖ್ಯ ವ್ಯತ್ಯಾಸವಿದೆ. ಒಂದು ಪ್ರದೇಶದಲ್ಲಿಯ ಮೇಲುವರ್ಗಕ್ಕೆ ಸೇರಿದ ವ್ಯಕ್ತಿ ಅಲ್ಲಿಯ ಕೆಳವರ್ಗದವರ ಭಾಷೆಯನ್ನು ಅರ್ಥಾತ್ ಸಾಮಾಜಿಕ ಉಪಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯ ಪಡೆದಿರುತ್ತಾನೆ. ಕೆಳವರ್ಗದವರಿಗೂ ಈ ಸಾಮರ್ಥ್ಯ ಇರುವುದಾದರೂ ಹೋಲಿಸಿದಲ್ಲಿ ಇದು ಕಡಿಮೆ. ಆದರೆ ಪ್ರಾದೇಶಿಕ ಉಪಭಾಷೆಗಳ ವಿಷಯದಲ್ಲಿ ಹಾಗಲ್ಲ. ಇಲ್ಲಿ ಉಪಭಾಷೆಗಳ ನಡುವಣ ಅಂತರ ಹೆಚ್ಚಿದಂತೆ ಪರಸ್ಪರ ಗ್ರಹಿಕೆಯೂ ಕಡಿಮೆ ಆಗುತ್ತದೆ.

ಪ್ರಾದೇಶಿಕ ಭಿನ್ನಾಂಶ[ಬದಲಾಯಿಸಿ]

ಭಾಷೆಯ ಪ್ರಾದೇಶಿಕ ಭಿನ್ನತೆಯ ಕಲ್ಪನೆ ಹಳೆಯದಾದರೂ ಅದರ ವ್ಯವಸ್ಥಿತ ಹಾಗೂ ವ್ಯಾಪಕ ಅಧ್ಯಯನ ನಡೆದದ್ದು 19ನೆಯ ಶತಮಾನದಿಂದೀಚೆಗೆ. 1876ರಲ್ಲಿ ಜರ್ಮನಿಯಲ್ಲಿ ಜಾರ್ಜ್ ವೆಂಕರ್ ನಡೆಸಿದ ಅಧ್ಯಯನವೇ ಮೊದಲ ಸಮಗ್ರ ಅಧ್ಯಯನ. ಮೊದಲು ಈತ ಜರ್ಮನಿಯ ಡಸೆಲ್‍ಡಾರ್ಫ್ ಸುತ್ತಲಿನ ಹಾಯಿನ್ ನಾಡಿನ ಉಪಭಾಷಾಧ್ಯಯನ ಕೈಗೊಂಡ. ಅನಂತರ ಇಡೀ ಜರ್ಮನಿಗೆ ತನ್ನ ಪರಿವೀಕ್ಷಣಾಕಾರ್ಯ ವಿಸ್ತರಿಸಿದ. ವಿಭಿನ್ನ ಪ್ರದೇಶಗಳಲ್ಲಿ ಭಾಷೆ ಭಿನ್ನತೆ ಪಡೆದಿರುತ್ತದೆ ಎಂಬ ವಿಚಾರ ಈತನ ಪರಿವೀಕ್ಷಣೆಯಿಂದ ತಿಳಿದುಬಂತು. ಈತನ ಅನಂತರ ಗಿಲಿಯೆರೋನ್ ಎಂಬಾತ ಫ್ರಾನ್ಸ್ ದೇಶದ ಪರಿವೀಕ್ಷಣೆ ನಡೆಸಿ 1950ರಲ್ಲಿ, ಅಟ್ಲಾಸ್ ಲಿಂಗ್ವಿಸ್ಟಿಕ್ ಡಿ ಲಾ ಫ್ರಾನ್ಸ್ ಎಂಬ ಪುಸ್ತಕ ಪ್ರಕಟಿಸಿದ. ಈತನ ಕಾರ್ಯ ಹೆಚ್ಚು ವೈಜ್ಞಾನಿಕವಾದದ್ದರಿಂದ ಈತನನ್ನು ಉಪಭಾಷಾಧ್ಯಯನದ ಪಿತಾಮಹನೆಂದು ಕರೆಯುತ್ತಾರೆ. 1939-43 ಅವಧಿಯಲ್ಲಿ ಕುರಾತ್ ಅವರ ನೇತೃತ್ವದಲ್ಲಿ ನ್ಯೂ ಇಂಗ್ಲೆಂಡಿನಲ್ಲಿ ನಡೆಸಿದ ಉಪಭಾಷಾ ಅಧ್ಯಯನದ ಫಲವಾಗಿ ಹ್ಯಾಂಡ್ ಬುಕ್ ಆಫ್ ದಿ ಲಿಂಗ್ವಿಸ್ಟಿಕ್ ಜಾಗ್ರಫಿ ಆಫ್ ನ್ಯೂ ಇಂಗ್ಲೆಂಡ್[೨],[೩] ಎಂಬ ಪುಸ್ತಕ ಪ್ರಕಟವಾಯಿತು. ಇದೇ ಕ್ರಮದಲ್ಲಿ ಮುಂದುವರಿದ ಮ್ಯಾಕ್ ಡೇವಿಡ್ ಎಂಬಾತ ದಿ ಡಯಲೆಕ್ಟ್ಸ್ ಆಫ್ ಅಮೆರಿಕನ್ ಇಂಗ್ಲಿಷ್[೪] ಎಂಬ ಪರಿವೀಕ್ಷಣಾ ಕೃತಿಯನ್ನು ಹೊರತಂದ. ಭಾರತದಲ್ಲಿ ಕೂಡ ಭಾಷೆಗಳ ಪರಿವೀಕ್ಷಣಾ ಕಾರ್ಯ ನಡೆದಿದೆ. ಜಾರ್ಜ್ ಗ್ರಿಯರ್‍ಸನ್[೫] ಅವರು ಭಾರತದ ಭಾಷೆ ಉಪಭಾಷೆಗಳ ಪರಿವೀಕ್ಷಣಾ ಕಾರ್ಯ ನಡೆಸಿ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ[೬] ಎಂಬ ಬೃಹತ್ ಸಂಪುಟಗಳನ್ನು ಹೊರ ತಂದಿದ್ದಾರೆ.

ಭಾಷಾ ಪುನರ್ ರಚನೆ[ಬದಲಾಯಿಸಿ]

ಒಂದು ಭಾಷೆಯ ಕೆಲವು ಪ್ರಾದೇಶಿಕ ಉಪಭಾಷೆಗಳು ಆ ಭಾಷೆಯ ಹಳೆಯ ರೂಪಗಳನ್ನು ಕೆಲಮಟ್ಟಿಗೆ ಉಳಿಸಿಕೊಂಡಿರುವ ಸಾಧ್ಯತೆ ಇರುವುದರಿಂದ ಹಾಗೂ ಆ ಭಾಷೆಗೆ ಸಂಬಂಧಪಟ್ಟಂಥ ಐತಿಹಾಸಿಕ ಬದಲಾವಣೆಗಳ ದಿಕ್ಕನ್ನು ಸೂಚಿಸುವ ಸಾಧ್ಯತೆ ಇರುವುದರಿಂದ ಈ ಉಪಭಾಷೆಯ ಕಲ್ಪನೆ ಐತಿಹಾಸಿಕ ಭಾಷಾವಿಜ್ಞಾನಿಗಳಿಗೆ ಭಾಷೆಯ ಪುನಾರಚನೆಯ ದೃಷ್ಟಿಯಿಂದ ಬೆಲೆಯುಳ್ಳದ್ದು. ಹಾಗೂ ಈ ದಿಸೆಯಲ್ಲಿ ಉಪಭಾಷಾ ಅಧ್ಯಯನ ಅಗತ್ಯವಾದದ್ದು.

ಉಪಭಾಷಾ ಅಧ್ಯಯನ[ಬದಲಾಯಿಸಿ]

ಉಪಭಾಷಾಧ್ಯಯನ ಮುಖ್ಯವಾಗಿ ಮೂರುಘಟ್ಟಗಳಲ್ಲಿ ನಡೆಯುತ್ತದೆ.

 1. ಪ್ರಶ್ನಾವಳಿಯ ತಯಾರಿಕೆ - ಯಾವುದೇ ಉದ್ದೇಶಿತ ಉಪಭಾಷೆಯ ಎಲ್ಲ ರಚನೆಗಳನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಅಳವಡಿಸಿಕೊಂಡ ಧ್ವನಿ, ಪದ, ಪದಪುಂಜ, ವಾಕ್ಯಗಳ ಸಮೂಹವೇ ಪ್ರಶ್ನಾವಳಿ ಎನಿಸಿಕೊಳ್ಳುತ್ತದೆ. ಅಧ್ಯಯನಕಾರ ಈ ಪ್ರಶ್ನಾವಳಿ ಆಧರಿಸಿ, ಆಯಾ ಉಪಭಾಷೆ ಮಾತನಾಡುವವನೊಡನೆ ಸಂಭಾಷಿಸಿ, ಸಂಭಾಷಣೆಯನ್ನು ಧ್ವನಿಲಿಪಿಗೆ ಇಳಿಸಿಕೊಳ್ಳಬಹುದು ಅಥವಾ ಧ್ವನಿಮುದ್ರಣ (ಟೇಪ್‍ರೆಕಾರ್ಡ್) ಮಾಡಿಸಿಕೊಳ್ಳಬಹುದು.
 2. ಉಪಭಾಷಾ ಪರಿವೀಕ್ಷಣೆ - ಉಪಭಾಷಿಕನಿರುವ ಪ್ರದೇಶಕ್ಕೆ ಹೋಗಿ ಅವನಿಂದ ಸಾಮಗ್ರಿ ಕಲೆ ಹಾಕುವುದಕ್ಕೆ ಉಪಭಾಷಾ ಪರೀಕ್ಷಣೆ ಎಂದು ಹೆಸರು. ಹೀಗೆ ಸಂಗ್ರಹಿಸಿದ ಭಾಷಾಸಾಮಗ್ರಿಯನ್ನು ವಿಶ್ಲೇಷಣೆಗೂ ಭೂಪಟ ರಚನೆಗೂ ಬಳಸಿಕೊಳ್ಳಬಹುದು.
 3. ಉಪಭಾಷಾ ಭೂಪಟರಚನೆ - ಉಪಭಾಷಾ ಭೂಪಟ ತಯಾರಿಸುವಾಗ ಮೊದಲು ಭೌಗೋಳಿಕವಾಗಿ ಯಾವ ಯಾವ ಶಬ್ದಗಳ ವ್ಯಾಪ್ತಿ ಎಲ್ಲೆಲ್ಲಿಯವರೆಗಿದೆ ಎಂಬುದನ್ನು ಕಂಡುಕೊಳ್ಳಬೇಕು. ಅನಂತರ ನಿರ್ದಿಷ್ಟ ಶಬ್ದವನ್ನು ಆಯ್ದುಕೊಂಡು ಅದು ಬಳಕೆಯಲ್ಲಿರುವ ಸ್ಥಾನಗಳನ್ನೆಲ್ಲ ಭೂಪಟದಲ್ಲಿ ಗುರುತಿಸುತ್ತ ಹೋಗಬೇಕು. ಅದೇ ಅರ್ಥಕೊಡುವ ಇನ್ನಿತರ ರೂಪಗಳು ಬಳಕೆಯಲ್ಲಿರುವ ಸ್ಥಾನಗಳನ್ನೂ ಗುರುತಿಸಿಕೊಳ್ಳಬೇಕು. ಅನಂತರ ಒಂದೇ ರೂಪದ ಹಾಗೂ ಅದೇ ಅರ್ಥದ ರೂಪ ಬಳಕೆಯಲ್ಲಿರುವ ಸ್ಥಾನಗಳೆಲ್ಲ ಒಳಗೊಳ್ಳುವಂತೆ ರೇಖೆಯನ್ನು ಎಳೆಯಬೇಕು. ಈ ರೇಖೆ ಆ ಭಾಷಾ ರೂಪದ ವ್ಯಾಪ್ತಿಯನ್ನು ಹೇಳುತ್ತದೆ. ಇದಕ್ಕೆ ಸೀಮಾರೇಖೆ (ಐಸೋಗ್ಲಾಸ್) ಎಂದು ಹೆಸರು. ಭಾಷಾ ರೂಪಗಳನ್ನು ಆಧರಿಸಿ ಇಂಥ ಅನೇಕ ಸೀಮಾರೇಖೆಗಳನ್ನು ಎಳೆಯಬಹುದು. ಸೀಮಾರೇಖೆಗಳಿಂದ ಕೂಡಿದ ಇಂಥ ಭೂಪಟಗಳನ್ನು ಉಪಭಾಷಾ ಭೂಪಟ ಎನ್ನುತ್ತಾರೆ.

ಇತರ ಕಾರಣಗಳು[ಬದಲಾಯಿಸಿ]

 1. ಉಪಭಾಷೆಯಲ್ಲಿ ಕಂಡುಬರುವ ವ್ಯತ್ಯಾಸಗಳು ಧ್ವನಿವ್ಯವಸ್ಥೆಯಲ್ಲಿರಬಹುದು, ಶಬ್ದಗಳಲ್ಲಿರುಬಹುದು, ವಾಕ್ಯರಚನೆಯಲ್ಲಿರಬಹುದು. ಅರ್ಥವ್ಯವಸ್ಥೆಯಲ್ಲಿರಬಹುದು ಅಥವಾ ಪದಪ್ರಯೋಗಗಳಲ್ಲಿ ಕಂಡುಬರಬಹುದು. ಶಬ್ದದ ಬದಲು ನಿರ್ದಿಷ್ಟ ಧ್ವನಿಯನ್ನೋ ರಚನೆಯನ್ನೋ ಸೀಮಾರೇಖೆಗೆ ಆಧಾರವಾಗಿಟ್ಟುಕೊಳ್ಳಬಹುದು. ಕೆಲವೊಮ್ಮೆ ಅನೇಕ ಸೀಮಾರೇಖೆಗಳು ಸಮಾಂತರವಾಗಿ ಸಾಗಿಸಬಹುದು. ಇವು ಒಂದು ಉಪಭಾಷೆಯ ಗಡಿಯನ್ನು ಮತ್ತೊಂದರಿಂದ ಪ್ರತ್ಯೇಕಿಸುವ ರೇಖೆಗಳು.
 2. ಭಾಷಾಪ್ರದೇಶವನ್ನು ಉಪಭಾಷಾಪ್ರದೇಶಗಳಾಗಿ ವಿಂಗಡಿಸುವಾಗ ಶಬ್ದವನ್ನು ಆಧಾರವಾಗಿಟ್ಟುಕೊಳ್ಳುವುದಕ್ಕಿಂತ ನಿರ್ದಿಷ್ಟ ಧ್ವನಿಯನ್ನೊ ವ್ಯಾಕರಣರಚನೆಯನ್ನೊ ಆಧರಿಸುವುದು ಒಳ್ಳೆಯದು. ಕಾರಣ ಪದವನ್ನು ಆಧಾರವಾಗಿಟ್ಟುಕೊಂಡ ಸೀಮಾರೇಖೆಗಳು ಸಮಾಂತರವಾಗಿ ಹರಿಯುವ ಸಂಭವ ಕಡಿಮೆ. ಇವು ಒಂದನ್ನೊಂದು ಛೇದಿಸುವ ಅನೇಕ ಚಿಕ್ಕ ಚಿಕ್ಕ ವೃತ್ತಗಳಾಗಿರುತ್ತವೆ.
 3. ಕೊಡುಕೊಳ್ಳುವಿಕೆಯಿಂದಾಗಿ ಭಾಷೆಯ ಶಬ್ದಭಂಡಾರ ಸದಾ ವ್ಯತ್ಯಾಸ ಗೊತ್ತಿರುವುದರಿಂದ ಸೀಮಾರೇಖೆಗಳು ಆಗಾಗ ಬದಲಾಗುತ್ತಿರುತ್ತವೆ. ತುಲನಾತ್ಮಕವಾಗಿ ಧ್ವನಿ ಅಥವಾ ವ್ಯಾಕರಣ ರಚನೆಯನ್ನಾಧರಿಸಿದ ಸೀಮಾರೇಖೆಗಳು ಸ್ಥಿರವಾದವು. ಆದ್ದರಿಂದ ಉಪಭಾಷೆಗಳ ವಿಂಗಡಣೆಗೆ ಇವು ಹೆಚ್ಚು ಸಹಾಯಕಾರಿ.

ಉಲ್ಲೇಖ[ಬದಲಾಯಿಸಿ]

 1. https://eric.ed.gov/?id=ED023656
 2. https://catalog.hathitrust.org/Record/001902709
 3. https://www.tandfonline.com/doi/abs/10.1080/00138384808596794?journalCode=nest20
 4. "ಆರ್ಕೈವ್ ನಕಲು". Archived from the original on 2010-05-12. Retrieved 2018-11-06.
 5. https://www.britannica.com/biography/George-Abraham-Grierson#ref277456
 6. https://dsal.uchicago.edu/books/lsi/
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: