ಭಾರತೀಯ ಯುಏವಿಗಳು

ವಿಕಿಪೀಡಿಯ ಇಂದ
Jump to navigation Jump to search

ಭಾರತೀಯ ಯುಏವಿಗಳು ಭಾರತವು ಭೂಸೇನೆಯ ಅವಶ್ಯ ಪೂರೈಕೆಗಾಗಿ ತನ್ನದೇ ಆದ ಯುಏವಿ ಕಾರ್ಯಕ್ರಮವನ್ನು ೧೯೯೮ರಲ್ಲಿ ಭಾರತೀಯ ರಕ್ಷಣಾ ಪ್ರಯೋಗಲಾಯದ (Defence Research & Development Organisation, DRDO) ಮೂಲಕ ಪ್ರಾರಂಭಿಸಿತು. ೧೯೯೧ರಲ್ಲಿ ಈ ಕಾರ್ಯಕ್ರಮಕ್ಕಾಗಿ ೩೪ ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರಿನಲ್ಲಿರುವ ವೈಮಾನಿಕ ಅಭಿವೃದ್ಧಿ ಕೇಂದ್ರವು (Aeronautical Development Establishment) ’ನಿಶಾಂತ್’ ಎಂಬ ದೂರ ನಿಯಂತ್ರಿತ ವಿಮಾನದ (Remotely Piloted Vehicle) ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿತು. ಗುಪ್ತಚರ ಕಾರ್ಯಗಳು, ಗುರಿ ಗುರುತಿಸುವಿಕೆ ಹಾಗೂ ಗಮನ (Target Identification & Observation), ನಷ್ಟ ಸಮೀಕ್ಷೆ (Damage Assessment) ಮುಂತಾದ ಕೆಲಸಗಳಿಗಾಗಿ ಅಭಿವೃದ್ಧಿಪಡಿಸಲಾದ ನಿಶಾಂತ್ ಕೋಲಾರದಲ್ಲಿ ಹಲವು ಪ್ರಾಯೋಗಿಕ ಹಾರಾಟಗಳನ್ನು ಕಂಡಿದೆ.

ನಿಶಾಂತ್

ಇದು ೩೬೦ ಕಿ.ಗ್ರಾಂ ಭಾರವಿದ್ದು, ೧೦೦ ಕಿ.ಮೀ ದೂರಮಿತಿ ಹೊಂದಿದೆ. ನಿಶಾಂತ್ ಮೊತ್ತ ಮೊದಲಾಗಿ ಹಾರಾಟ ನಡೆಸಿದ್ದು ೧೯೯೫ರಲ್ಲಿ. ೧೯೯೬-೧೯೯೭ರಲ್ಲಿ ಭಾರತೀಯ ಭೂ ಸೇನೆಯು ಇದನ್ನು ಉಪಯೋಗಿಸ ತೊಡಗಬೇಕಿತ್ತಾದರೂ ನಿರ್ಮಾಣ ಕಾರ್ಯದಲ್ಲಿ ಆದ ವಿಳಂಬಗಳಿಂದ ಹಾಗೂ ತಾಂತ್ರಿಕ ದೋಷಗಳಿಂದಾಗಿ ಇಂದಿನವರೆಗೂ ನಿಶಾಂತ್ ಅಭಿವೃದ್ಧಿ ಹಂತದಲ್ಲೇ ಇದೆ. ಸಕಾಲದಲ್ಲಿ ನಿಶಾಂತ್ ದೊರಕದ ಕಾರಣ ಭಾರತೀಯ ರಕ್ಷಣಾ ಪಡೆಗಳು ಇಸ್ರೇಲಿನಿಂದ ಯುಏವಿಗಳನ್ನು ಖರೀದಿಸಿವೆ. ಸರ್ಚರ್ ಮಾರ್ಕ್-೨ ಹಾಗೂ ಹೆರಾನ್ ಎಂಬ ಎರಡು ವಿಧದ ಯುಏವಿಗಳನ್ನು ಇಸ್ರೇಲಿನ ಐಎಐ (ಇಸ್ರೇಲ್ ವಿಮಾನ ಕಾರ್ಖಾನೆ-Israel Aircraft Industries) ಭಾರತೀಯ ಭೂ ಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆಗಳಿಗೆ ಪೂರೈಸಿದೆ.

ಹೆರಾನ್

ಭಾರತವು ಗುರಿ ಅಭ್ಯಾಸಕ್ಕಾಗಿ ಲಕ್ಷ್ಯ ಎಂಬ ದೂರ ನಿಯಂತ್ರಿತ ವಿಮಾನವನ್ನು (Remotely Piloted Vehicle) ತಯಾರಿಸಿದೆ. ಇದನ್ನು ಚಾಲಕರಹಿತ ಗುರಿ ವಿಮಾನ (Pilotless Target Aircraft) ಎಂದೂ ಕರೆಯಲಾಗುತ್ತದೆ.

ಲಕ್ಷ್ಯ

ಲಕ್ಷ್ಯವನ್ನು ೨೦೦೨ರಲ್ಲಿ ಪೂರ್ಣವಾಗಿ ಅಭಿವೃದ್ಧಿಗೊಳಿಸಲಾಗಿದ್ದು ಇದನ್ನು ಭಾರತೀಯ ವಾಯು ಸೇನೆ ಹಾಗೂ ನೌಸೇನೆಗಳು ಗುರಿ ಅಭ್ಯಾಸಕ್ಕಾಗಿ ಬಳಸುತ್ತಿವೆ. ಲಕ್ಷ್ಯ ವಿಮಾನಕ್ಕೆ ಸಿಡಿತಲೆಯನ್ನು ಅಳವಡಿಸಿ ಕ್ಷಿಪಣಿಯಾಗಿ ಮಾರ್ಪಡಿಸುವ ಯೋಜನೆಯನ್ನು ಭಾರತೀಯ ರಕ್ಷಣಾ ಪ್ರಯೋಗಾಲಯಗಳು ಹೊಂದಿವೆ.

ಇವಲ್ಲದೆ ಕಪೋತಕ ಎಂಬ ಸಣ್ಣ ಯುಏವಿಯೊಂದನ್ನು ಭಾರತ ಅಭಿವೃದ್ಧಿಗೊಳಿಸುತ್ತಿದೆ ಎಂದು ನಂಬಲಾಗಿದೆ. ಇದರ ವಿನ್ಯಾಸವನ್ನು ಗುಪ್ತಚರ ಕಾರ್ಯಗಳಿಗೆ ತಕ್ಕಂತೆ ರಚಿಸಲಾಗಿದೆ ಎಂಬ ವದಂತಿಗಳಿದ್ದರೂ ಇದರ ಉಪಯೋಗವು ಇನ್ನೂ ಸ್ಪಷ್ಟವಾಗಿಲ್ಲ.