ವಿಷಯಕ್ಕೆ ಹೋಗು

ಬ್ರೂಕ್ ಟೇಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರೂಕ್ ಟೇಲರ್ 1685-1731. ಆಂಗ್ಲ ಗಣಿತವಿಜ್ಞಾನಿ. ಕಲನ ಶಾಸ್ತ್ರದ ಬೆಳವಣಿಗೆ ಗಮನಾರ್ಹ ಕೊಡುಗೆಯನ್ನು ಸಲ್ಲಿಸಿದ್ದಾನೆ.

Brook Taylor

ಬದುಕು

[ಬದಲಾಯಿಸಿ]

ಜನನ 18 ನೆಯ ಆಗಸ್ಟ್, 1685, ಮಿಡ್ಲಸಕ್ಸ್‍ನ ಎಡ್ಮನ್‍ಟನ್ ನಗರದಲ್ಲಿ. ಕೇಂಬ್ರಿಜಿನ ಸೇಂಟ್ ಜಾನ್ ಕಾಲೇಜಿನಲ್ಲಿ ಅಧ್ಯಯನ. ಮೊದಲಿಗೆ ನ್ಯಾಯಶಾಸ್ತ್ರದ ಅಭ್ಯಾಸ ಮಾಡಿದರೂ ಒಲವು ಗಣಿತದೆಡೆಗೆ ಈತನನ್ನು ಸೆಳೆಯಿತು. 1731 ಡಿಸೆಂಬರ್ 29 ರಂದು ಲಂಡನ್ನಿನಲ್ಲಿ ಟೇಲರ್ ಮೃತನಾದ.

ಗಣಿತ ಕ್ಷೇತ್ರದಲ್ಲಿನ ಸಾಧನೆ

[ಬದಲಾಯಿಸಿ]
Methodus incrementorum directa et inversa, 1715

ಆಂದೋಳನ ಕೇಂದ್ರದ ಸಮಸ್ಯೆಗೆ 1708ರ ವೇಳೆಗೆ ಈತ ಪರಿಹಾರವನ್ನು ಶೋಧಿಸಿದ್ದರೂ 1714ರ ಮೇ ವರೆಗೆ ಅದನ್ನು ಪ್ರಸಿದ್ಧಿಸದಿದ್ದುದರಿಂದ ಇವನ ಸ್ವಂತಿಕೆಯ ವಿಚಾರ ವಿವಾದ ಏರ್ಪಟ್ಟಿತು. ಕಂಪಿಸುತ್ತಿರುವ ತಂತಿಯ ಸಮಸ್ಯೆಯನ್ನು ಕೂಲಂಕಷವಾಗಿ ಚರ್ಚಿಸಿ ಟೇಲರ್ ಅದಕ್ಕೆ ತ್ರಿಕೋಣಮಿತಿಯ ಉತ್ಪನ್ನಗಳನ್ನು ಒಳಗೊಂಡಿರುವ ಪರಿಹಾರವನ್ನು ಒದಗಿಸಿದ್ದಾನೆ. ಸಾಂತ ವ್ಯತ್ಯಾಸಗಳ ಕಲನಶಾಸ್ತ್ರದ (ಕ್ಯಾಲ್ಕುಲಸ್ ಆಫ್ ಫೈನೈಟ್ ಡಿಫರೆನ್ಸ್‍ಸ್) ಪ್ರಾರಂಭಕರ ಟೇಲರ್, ಕಂಪಿಸುತ್ತಿರುವ ತಂತಿಯ ಸಮಸ್ಯೆಯನ್ನು ಈ ಹೊಸ ಹತ್ಯಾರಿನ ನೆರವಿನಿಂದ ಎದುರಿಸಿ ಬಿಡಿಸಿದ. ಗಣಿತಜ್ಞರಿಗೆ ಇಂದು ಚಿರಪರಿಚಿತವಾಗಿರುವ ಫಲಿತಾಂಶ ಇದರಲ್ಲಿ ಅಡಕವಾಗಿದೆ. ಟೇಲರ್ ಶ್ರೇಣಿಯ ಅಭಿಸರಣೆಯ (ಕನ್‍ವರ್ಜೆನ್ಸ್ ) ವಿಚಾರ ಟೇಲರನಿಗೆ ಏನೂ ತಿಳಿದಿರಲಿಲ್ಲ. ಇದು ಸ್ಥಾಪನೆ ಆದದ್ದು ಒಂದು ನೂರು ವರ್ಷಗಳ ಬಳಿಕ. ಕೋಷಿ ಎಂಬ ಗಣಿತವಿಜ್ಞಾನಿಯಿಂದ. ಟೇಲರ್ ಸಂಶೋಧನೆ ನಡೆಸಿದ ಇತರ ಕ್ಷೇತ್ರಗಳೆಂದರೆ ಪರ್ಸ್‍ಪೆಕ್ಟಿವ್ ಮತ್ತು ಪ್ರಿನ್ಸಿಪಲ್ ಆಫ್ ಲೀನಿಯರ್ ಪರ್ಸ್‍ಪೆಕ್ಟಿವ್ ಅಲ್ಲದೇ ಕಾಂತದ ಆಕರ್ಷಣೆ ನಿಯಮವನ್ನು ಕುರಿತು ಪ್ರಯೋಗ ನಡೆಸಿದ್ದಾನೆ; ಸಮೀಕರಣಗಳ ಸನ್ನಿಹಿತ ಮೂಲಗಳ ಶೋಧನೆಯ ದಿಶೆಯಲ್ಲಿ ಲಘುಗಣಕಾತ್ಮಕ ಗಣನೆಯಲ್ಲಿ ಸರಳೀಕರಣ ಮಾಡುವ ದಿಶೆಯಲ್ಲಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೂಡ ಆಸಕ್ತಿ ಹಾಯಿಸಿದ್ದಾನೆ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: