ವಿಷಯಕ್ಕೆ ಹೋಗು

ಬೋನಸ್ ಶೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಸಂಸ್ಥೆಯು ತನ್ನ ಶೇರುಗಳನ್ನು ಹೊಂದಿರುವ ಶೇರುದಾರರಿಗೆ ಅಥವಾ ಹೂಡಿಕೆದಾರರಿಗೆ ಉಚಿತವಾಗಿ ಕೊಡುವ ಶೇರುಗಳನ್ನು ಬೋನಸ್ ಶೇರು ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ಸಿಗುವ ಶೇರುಗಳಿಗೆ ಹೂಡಿಕೆದಾರರು ಅಥವಾ ಶೇರುದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ಹೂಡಿಕೆದಾರರಿಗೆ ಬೋನಸ್ ಶೇರುಗಳನ್ನು ವಿತರಿಸಿದಾಗ, ಅಸ್ತಿತ್ವದಲ್ಲಿರುವ ಆ ಶೇರಿನ ಮಾರುಕಟ್ಟೆ ಬೆಲೆ ಇಳಿಯಬಹುದಾಗಿದೆ[].

ಬೋನಸ್ ಶೇರು ನೀಡುವ ಕಾರಣ

[ಬದಲಾಯಿಸಿ]

ಒಂದು ತ್ರೈಮಾಸಿಕದಲ್ಲಿ ಅಥವಾ ಒಂದು ಆರ್ಥಿಕ ವರ್ಷದಲ್ಲಿ ಉತ್ತಮ ಲಾಭವನ್ನು ಗಳಿಸಿದ ಹೊರತಾಗಿಯೂ ನಿಧಿಯ ಕೊರತೆಯಿಂದಾಗಿ ತನ್ನ ಷೇರುದಾರರಿಗೆ ಲಾಭಾಂಶವನ್ನು ಪಾವತಿಸಲು ಸಾಧ್ಯವಾಗದಿದ್ದಾಗ ಕಂಪನಿಯಿಂದ ಬೋನಸ್ ಷೇರುಗಳನ್ನು ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಯು ಲಾಭಾಂಶ(ಡಿವಿಡೆಂಡ್)ವನ್ನು ಪಾವತಿಸುವ ಬದಲು ತನ್ನ ಮೀಸಲು ಹಣ ಮತ್ತು ಲಾಭಾಂಶವನ್ನು ಸೇರಿಸಿ ಅಸ್ತಿತ್ವದಲ್ಲಿರುವ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತದೆ. ಈ ಷೇರುಗಳನ್ನು ಪ್ರಸ್ತುತ ಷೇರುದಾರರಿಗೆ ಅವರು ಹೊಂದಿರುವ ಶೇರುಗಳ ಅನುಪಾತದ ಆಧಾರದ ಮೇಲೆ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುವುದನ್ನು ಲಾಭದ ಬಂಡವಾಳೀಕರಣ ಎಂದೂ ಕರೆಯಲಾಗುತ್ತದೆ ಏಕೆಂದರೆ ಇದನ್ನು ಕಂಪನಿಯ ಲಾಭ ಅಥವಾ ಮೀಸಲುಗಳಿಂದ ನೀಡಲಾಗುತ್ತದೆ[][].

ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಒಂದು ಶೇರಿನ ಬೆಲೆ ಸಾಮಾನ್ಯಕ್ಕಿಂತ ಜಾಸ್ತಿ ಏರಿದಾಗ, ಹೆಚ್ಚು ಬೆಲೆಯ ಕಾರಣದಿಂದ ಹೊಸ ಹೂಡಿಕೆದಾರರು ಆ ಶೇರನ್ನು ಕೊಳ್ಳಲು ಹಿಂಜರಿಯುತ್ತಾರೆ. ಈ ಸಂದರ್ಭದಲ್ಲಿ ಬೋನಸ್ ಶೇರನ್ನು ಘೋಷಿಸಿದಾಗ ಆ ಶೇರಿನ ಮಾರುಕಟ್ಟೆ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದು. ಹೀಗಾದಾಗ ಮಾರುಕಟ್ಟೆಯಲ್ಲಿ ಶೇರಿನ ಚಲನಶೀಲತೆ ಹೆಚ್ಚುತ್ತದೆ. ಮಾರುಕಟ್ಟೆಗೆ ಹೊಸ ಶೇರುಗಳ ಪ್ರವೇಶವಾಗುತ್ತವೆ. ಹೂಡಿಕೆದಾರರು ಆ ಶೇರನ್ನು ಕೊಳ್ಳಲು ಆಸಕ್ತಿಯನ್ನು ಹೊಂದುತ್ತಾರೆ.

ಬೋನಸ್ ಶೇರು ಲೆಕ್ಕಾಚಾರ

[ಬದಲಾಯಿಸಿ]

ಬೋನಸ್ ಶೇರುಗಳನ್ನು ಕೇವಲ ಅಸ್ತಿತ್ವದಲ್ಲಿರುವ ಶೇರುದಾರರಿಗೆ ಮಾತ್ರ ನೀಡಲಾಗುತ್ತದೆ. ಶೇರು ವಿತರಿಸುವಾಗ ನಿರ್ದಿಷ್ಟ ಅನುಪಾತವನ್ನು ಲೆಕ್ಕ ಮಾಡಿ ಹಂಚಲಾಗುತ್ತದೆ. ಉದಾಹರಣೆಗೆ ೫:೧(೧ ಅಸ್ತಿತ್ವದಲ್ಲಿರುವ ಶೇರಿಗೆ ೫ ಬೋನಸ್ ಶೇರು), ೧:೨(೨ ಅಸ್ತಿತ್ವದಲ್ಲಿರುವ ಶೇರಿಗೆ ೧ ಬೋನಸ್ ಶೇರು), ೨:೩(೩ ಅಸ್ತಿತ್ವದಲ್ಲಿರುವ ಶೇರಿಗೆ ೨ ಬೋನಸ್ ಶೇರು). ಒಬ್ಬ ಹೂಡಿಕೆದಾರ ಒಂದು ಕಂಪೆನಿಯ ೧೦೦೦ ಶೇರು ಹೊಂದಿದ್ದನೆಂದು ಭಾವಿಸೋಣ. ಕಂಪೆನಿಯು ಪ್ರಸಕ್ತ ಸಾಲಿನಲ್ಲಿ ೫:೧ ಅನುಪಾತದಲ್ಲಿ ಬೋನಸ್ ಘೋಷಿಸಿದಾಗ ಹೂಡಿಕೆದಾರನಿಗೆ ೫೦೦೦ ಶೇರುಗಳು ಸಿಗುತ್ತವೆ. ಅಂದರೆ ಈಗ ಇರುವುದೂ ಸೇರಿ ಒಟ್ಟು ೬೦೦೦ ಶೇರುಗಳನ್ನು ಹೊಂದುತ್ತಾನೆ[].

ಪ್ರಕ್ರಿಯೆ

[ಬದಲಾಯಿಸಿ]

ಬೋನಸ್ ಷೇರುಗಳ ವಿತರಣೆಗಾಗಿ ಕೆಲವೊಂದು ಆಡಳಿತ ಸಂಬಂಧಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.

  • ಸಭೆ- ಆಡಳಿತ ಮಂಡಳಿಯ ಸಭೆ ಕರೆಯುವುದು ಮೊದಲ ಹೆಜ್ಜೆಯಾಗಿದೆ. ಕಂಪೆನಿ ಕಾಯಿದೆಯ ಸೆಕ್ಷನ್ ೧೭೩(೩) ರ ಪ್ರಕಾರ, ಸಭೆ ಕರೆಯುವ ಕನಿಷ್ಠ ೭ ದಿನಗಳ ಮೊದಲು ಆಡಳಿತ ಮಂಡಳಿಯ ನಿರ್ದೇಶಕರಿಗೆ ನೋಟಿಸ್ ಕಳಿಸಲಾಗುತ್ತದೆ. ಸಭೆಯಲ್ಲಿ ಬೋನಸ್ ಶೇರುಗಳನ್ನು ವಿತರಿಸುವ ವಿಷಯವನ್ನು ಪ್ರಸ್ತಾಪಿಸಲಾಗುತ್ತದೆ. ಆಡಳಿತ ಮಂಡಳಿಯ ಒಟ್ಟು ಸದಸ್ಯರಲ್ಲಿ ೩ನೇ ೧ಭಾಗ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿರಬೇಕು. ನೀಡಬೇಕಾದ ಬೋನಸ್ ಷೇರುಗಳ ಪ್ರಮಾಣ, ಬೋನಸ್ ಷೇರುಗಳಾಗಿ ನೀಡಬೇಕಾದ ಅನುಪಾತ, ಸಾಮಾನ್ಯ ಸಭೆ (EGM) ನಡೆಸಲು ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ[].
  • ಮತದಾನ- ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಎಲ್ಲಾ ಶೇರುದಾರರಿಗೆ ತಿಳಿಸಿ ಬಹುಮತದ ಒಪ್ಪಿಗೆಯನ್ನು ಪಡೆಯಲು ೩೦ ದಿನದ ಕಾಲಾವಕಾಶವನ್ನು ನೀಡಲಾಗುತ್ತದೆ ಮತ್ತು ಮತಕ್ಕೆ ಹಾಕಲಾಗುತ್ತದೆ. ಪ್ರಸ್ತುತ ಹೆಚ್ಚಿನೆಲ್ಲಾ ಶೇರು ವ್ಯವಹಾರಗಳು ಅಂತರಜಾಲದ ಮೂಲಕವೇ ನಡೆಯುವ ಹಾಗೆ, ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಸಹ ಅಂತರಜಾಲದ ಮೂಲಕವೇ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನ್ಯಾಶನಲ್ ಸೆಕ್ಯುರಿಟಿಸ್ ಡೆಪಾಸಿಟರಿ ಲಿಮಿಟೆಡ್(NSDL) ಅಥವಾ ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ ಲಿಮಿಟೆಡ್(CDSL) ಸಂಸ್ಥೆಗಳು ತಮ್ಮ ಇ-ಮತದಾನ ಜಾಲತಾಣದ ಮೂಲಕ ನಡೆಸಿಕೊಡುತ್ತವೆ[].
  • ಸಾಮಾನ್ಯ ಸಭೆ- ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದ ದಿನಾಂಕದಂದು ವಿಶೇಷ ಸಾಮಾನ್ಯ ಸಭೆಯನ್ನು ನಡೆಸಲಾಗುತ್ತದೆ. ಬೋನಸ್ ಶೇರು ಹಂಚಿಕೆಗೆ ಸಂಬಂಧಿಸಿದಂತೆ ಶೇರುದಾರರು ಚಲಾಯಿಸಿದ ಮತಗಳ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅರ್ಹ ಶೇರುದಾರರಿಗೆ ಬೋನಸ್ ಶೇರು ವಿತರಿಸುವ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ. ಜೊತೆಗೇ ಅರ್ಹ ಶೇರುದಾರರು ತಾವು ಹೊಂದಿರಬೇಕಾದ ಶೇರುಗಳ ಪ್ರಮಾಣ, ಕೊನೆಯ ದಿನಾಂಕ ಮತ್ತು ಬೋನಸ್ ಅನುಪಾತ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ. ಅಂತಿಮವಾಗಿ ಶೇರುಗಳಿಗೆ ಅಂತರರಾಷ್ಟ್ರಿಯ ಭದ್ರತಾ ಠೇವಣಿ ಗುರುತಿನ ಸಂಖ್ಯೆ(ISIN)ಯನ್ನು ಹಂಚಿಕೆ ಮಾಡಿ, ೧೦-೧೫ ದಿನಗಳಲ್ಲಿ ಅರ್ಹ ಶೇರುದಾರರ ಡಿಮ್ಯಾಟ್ ಖಾತೆಗೆ ಸಂದಾಯವಾಗುತ್ತವೆ[].

ಶೇರುದಾರರಿಗೆ ನಿಯಮಗಳು

[ಬದಲಾಯಿಸಿ]

ex Date(ಹಿಂದಿನ ದಿನಾಂಕ) ಮತ್ತು Record Date(ದಾಖಲೆ ದಿನಾಂಕ) ಗಳ ಆಧಾರದ ಮೇಲೆ ಶೇರುದಾರರು ಬೋನಸ್ ಶೇರು ಪಡೆಯಲು ಅರ್ಹರೇ ಎಂಬುದನ್ನು ಗುರುತಿಸಲಾಗುತ್ತದೆ. ಎಕ್ಸ್-ಡೇಟ್ ಮತ್ತು ರೆಕಾರ್ಡ್ ದಿನಾಂಕದ ಮೊದಲು ಶೇರುಗಳನ್ನು ತಮ್ಮ ಖಾತೆಯಲ್ಲಿ ಹೊಂದಿರುವ ಎಲ್ಲಾ ಷೇರುದಾರರು ಬೋನಸ್ ಷೇರುಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ.

  • ಹಿಂದಿನ ದಿನಾಂಕ (Ex Date)- ಕಂಪೆನಿಯು ಘೋಷಿಸಿದ ಯಾವುದೇ ಲಾಭಾಂಶವಿಲ್ಲದೆ ವಹಿವಾಟು ನಡೆಯುವ ದಿನ.
  • ದಾಖಲೆ ದಿನಾಂಕ (Record Date)- ಕಂಪೆನಿಯು ಅರ್ಹ ಶೇರುದಾರರನ್ನು ಗುರುತಿಸುವ ಸಲುವಾಗಿ ತನ್ನ ದಾಖಲೆ ಪತ್ರಗಳನ್ನು ತೆರೆಯುವ ಅಥವಾ ಪರಿಶೀಲಿಸುವ ದಿನಾಂಕ.

ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ ಶೇರು ನಮ್ಮ ಖಾತೆಗೆ ಸಂದಾಯವಾಗುವ ಸಮಯ. ಭಾರತದಲ್ಲಿ, ಶೇರು ಖರೀದಿಸಿದ ದಿನಾಂಕದಿಂದ ೨ ದಿನಗಳ ನಂತರ (ಇದಕ್ಕೆ ಟಿ+೨-T+2 ವಿಧಾನ ಎಂಬ ಹೆಸರಿದೆ) ನಮ್ಮ ಡಿಮ್ಯಾಟ್ ಖಾತೆಯಲ್ಲಿ ಆ ಶೇರು ಕಾಣಿಸಿಕೊಳ್ಳುತ್ತದೆ[].

ಉದಾಹರಣೆಗೆ- ಬೋನಸ್ ಶೇರು ಹಂಚಿಕೆಯ ದಾಖಲೆ ದಿನಾಂಕ (ರೆಕಾರ್ಡ್ ಡೇಟ್) ಬುಧವಾರ ಎಂದು ಊಹಿಸಿ. ಈ ಶೇರಿನ ಹಿಂದಿನ ದಿನಾಂಕವು(ಎಕ್ಸ್ ಡೇಟ್) ಮಂಗಳವಾರ, ಬೋನಸ್ ಶೇರು ಪಡೆಯಲು ಷೇರುಗಳನ್ನು ಸೋಮವಾರ ಅಥವಾ ಅದಕ್ಕಿಂತ ಮೊದಲು ಖರೀದಿಸಿರಬೇಕು ಮತ್ತು ನಮ್ಮ ಡಿಮ್ಯಾಟ್ ಖಾತೆಗೆ ಜಮೆಯಾಗಿರಬೇಕು. ಸೋಮವಾರದವರೆಗೆ, ಆ ಶೇರು ಸಹಜವಾದ ಮಾರುಕಟ್ಟೆ ದರದಲ್ಲಿಯೇ ವ್ಯವಹರಿಸುತ್ತದೆ. ಮಂಗಳವಾರ ಖರೀದಿಸಿದ ಷೇರುಗಳು ಕಾರ್ಪೊರೇಟ್ ಕ್ರಿಯೆಯ ಪ್ರಯೋಜನಗಳಿಗೆ ಅರ್ಹವಾಗಿರುವುದಿಲ್ಲ[].

ಕೆಲವೊಮ್ಮೆ ಸಾರ್ವಜನಿಕ ರಜಾದಿನಗಳು ಈ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ- ಹಿಂದಿನ ದಿನಾಂಕ ಮತ್ತು ದಾಖಲೆ ದಿನಾಂಕದಂದು ಅಥವಾ ಅದರ ನಡುವೆ ಒಂದು ಸಾರ್ವಜನಿಕ ಅಥವಾ ಸೆಟ್ಲ್‌ಮೆಂಟ್ ರಜೆ ಇದ್ದರೆ, ರಜಾದಿನದ ನಂತರದ ಕೆಲಸದ ದಿನದಂದು ಷೇರುಗಳನ್ನು ಡಿಮ್ಯಾಟ್ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದರೆ, ಷೇರುಗಳನ್ನು ಸೋಮವಾರ ಖರೀದಿಸಿದರೆ ಮತ್ತು ಬುಧವಾರ ರೆಕಾರ್ಡ್ ಡೇಟ್ ಆಗಿದ್ದು ಆ ದಿನ ರಜೆಯಾಗಿದ್ದರೆ, ಷೇರುಗಳನ್ನು ಗುರುವಾರದೊಳಗೆ ವಿತರಿಸಲಾಗುತ್ತದೆ (ಅಂದರೆ ರೆಕಾರ್ಡ್ ಡೇಟ್ ನಂತರ). ಇಂಥ ಸನ್ನಿವೇಶದಲ್ಲಿ ಬೋನಸ್ ಶೇರುಗಳನ್ನು ಪಡೆಯಲು ಅಸಾಧ್ಯವವಗುತ್ತದೆ ಷೇರುಗಳನ್ನು ಸೋಮವಾರದ ಮೊದಲು ಕನಿಷ್ಠ ಒಂದು ಟ್ರೇಡಿಂಗ್ ದಿನದ ಮೊದಲು ಖರೀದಿಸಬೇಕು ಇದರಿಂದ ಷೇರುಗಳು ದಾಖಲೆ ದಿನಾಂಕದಂದು ಡಿಮ್ಯಾಟ್ ಖಾತೆಯಲ್ಲಿ ಲಭ್ಯವಿರುತ್ತವೆ[೧೦].

ಬೋನಸ್ ಪಡೆದ ನಂತರದ ಬದಲಾವಣೆಗಳು

[ಬದಲಾಯಿಸಿ]

ಅನುಕೂಲ ಹಾಗೂ ಅನಾನುಕೂಲಗಳು

[ಬದಲಾಯಿಸಿ]
  • ಅನುಕೂಲಗಳು - ಕಡಿಮೆ ನಗದು ಹೊಂದಿರುವ ಅಥವಾ ಲಾಭಾಂಶವನ್ನು ಹಂಚುವಷ್ಟು ಲಾಭ ಬಂದಿರದ ಕಷ್ಟಕರ ಸಂದರ್ಭದಲ್ಲಿ ಕಂಪನಿಗಳು ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡಬಹುದು. ಬೋನಸ್ ಷೇರುಗಳನ್ನು ನೀಡುವುದರಿಂದ ಕಂಪನಿಯ ಷೇರು ಬಂಡವಾಳವನ್ನು ಹೆಚ್ಚಿಸುತ್ತದೆ. ಕಂಪನಿಯು ನಿಜವಾಗಿಯೂ ದೊಡ್ಡದಾಗಿದೆ ಎಂದು ಮಾರುಕಟ್ಟೆಯಲ್ಲಿ ಗ್ರಹಿಸಲಾಗುತ್ತದೆ ಮತ್ತು ಶೇರುದಾರರ ನಂಬಿಕೆಯನ್ನು ಗಳಿಸಲು ಸಹಾಯಕ. ಹೊಸ ಹೂಡಿಕೆದಾರರಿಗೆ ಇದು ಹೆಚ್ಚು ಆಕರ್ಷಕವಾಗಿ ಕಾಣಬಹುದು. ಬೋನಸ್ ಶೇರು ವಿತರಣೆ ಆದಾಗ ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಷೇರುಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಬೆಲೆ ಕಡಿಮೆಯಾಗುತ್ತದೆ. ಇದರಿಂದಾಗಿ ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳು ಸುಲಭ ಬೆಲೆಯಲ್ಲಿ ಕೈಗೆಟುಕುವಂತೆ ಇರುತ್ತದೆ[೧೧].
  • ಅನಾನುಕೂಲಗಳು- ಲಾಭಾಂಶವನ್ನು ನೀಡುವುದಕ್ಕಿಂತ ಬೋನಸ್ ಷೇರುಗಳನ್ನು ನೀಡುವುದರಿಂದ ನಗದು ಮೀಸಲು ಹೆಚ್ಚು ಹಣವನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ಬೋನಸ್ ಷೇರುಗಳನ್ನು ನೀಡುವುದರಿಂದ ಕಂಪನಿಗೆ ನಗದು ಉತ್ಪತ್ತಿಯಾಗುವುದಿಲ್ಲ, ಇದು ಭವಿಷ್ಯದಲ್ಲಿ ಪ್ರತಿ ಷೇರಿಗೆ ಲಾಭಾಂಶದಲ್ಲಿ ಇಳಿಕೆಗೆ ಕಾರಣವಾಗಬಹುದು, ಷೇರುದಾರರು ಅನುಕೂಲಕರವಾಗಿ ವೀಕ್ಷಿಸುವುದಿಲ್ಲ. ಹೆಚ್ಚುವರಿಯಾಗಿ, ದ್ರವ್ಯತೆ ಅಗತ್ಯಗಳನ್ನು ಪೂರೈಸಲು ಬೋನಸ್ ಷೇರುಗಳನ್ನು ಮಾರಾಟ ಮಾಡುವ ಷೇರುದಾರರು ಕಂಪನಿಯಲ್ಲಿ ಷೇರುದಾರರ ಶೇಕಡಾವಾರು ಪಾಲನ್ನು ಕಡಿಮೆ ಮಾಡುತ್ತಾರೆ, ಕಂಪನಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ಅವರಿಗೆ ಕಡಿಮೆ ನಿಯಂತ್ರಣವನ್ನು ನೀಡುತ್ತದೆ[೧೨].

ಉಲ್ಲೇಖಗಳು

[ಬದಲಾಯಿಸಿ]
  1. "ಬೋನಸ್ ಶೇರುಗಳು ಏನಿದು". kannada.goodreturns.in. Greynium Information Technologies Pvt. Ltd. Retrieved 2 November 2022.
  2. "Bonus Issue of Shares Explained: How They Work". investopedia.com. Dotdash Meredith. Retrieved 2 November 2022.
  3. "ಬೋನಸ್ ಶೇರು ಮತ್ತು ಶೇರು ವಿಭಜನೆ". avadhimag.in. ಅವಧಿ. Retrieved 2 November 2022.
  4. "What are Bonus Shares?". kotaksecurities.com. Kotak Securities Limited. Retrieved 2 November 2022.
  5. "Issues of Bonus Shares". taxmann.com. Taxmann. Retrieved 2 November 2022.
  6. "Issues of Bonus Shares". taxmann.com. Taxmann. Retrieved 2 November 2022.
  7. "What Is Bonus Share: Eligibility Criteria & Benefits". motilaloswal.com. Motilal Oswal Commodities Broker Pvt. Ltd. Retrieved 2 November 2022.
  8. "What Is Bonus Share: Eligibility Criteria & Benefits". motilaloswal.com. Motilal Oswal Commodities Broker Pvt. Ltd. Retrieved 2 November 2022.
  9. "What does record date and ex-date mean?". support.zerodha.com. Zerodha. Retrieved 2 November 2022.
  10. "Why were the shares not eligible for corporate action benefits even though they were purchased before the ex-date?". support.zerodha.com. Zerodha. Retrieved 2 November 2022.
  11. "Bonus Issue of Shares Explained: How They Work". investopedia.com. Dotdash Meredith. Retrieved 2 November 2022.
  12. "Bonus Issue of Shares Explained: How They Work". investopedia.com. Dotdash Meredith. Retrieved 2 November 2022.