ಬೈಲುಕುಪ್ಪೆಯ ಸ್ವರ್ಣಮಂದಿರ

ವಿಕಿಪೀಡಿಯ ಇಂದ
Jump to navigation Jump to search

ಬೈಲುಕುಪ್ಪೆ[೧][೨] ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು ೨೦,೦೦೦ ಟಿಬೆಟಿಯನ್ನರು ಹಾಗೂ ೭೦೦೦ ಬೌದ್ದ ಭಿಕ್ಷುಗಳಿದ್ದಾರೆ.ಬೌದ್ಧ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‍ಗಳು ಮತ್ತು ಉದ್ಯಾನಗಳು ಇದನ್ನು ಮಿನಿ ಟಿಬೆಟನ್ನಾಗಿಸಿದೆ. ದೇಶದ ವಿವಿಧೆಡೆ ನೆಲೆಸಿರುವ ಟಿಬೆಟಿಯನ್ನರಿಗೆ ಬೈಲುಕುಪ್ಪೆ ಒಂದು ಪವಿತ್ರ ಯಾತ್ರಾಸ್ಥಳ. ನಿರಾಶ್ರಿತ ಟಿಬೆಟಿಯನ್ನರ ಕೇಂದ್ರ ಸ್ಥಾನ ಹಿಮಾಚಲ ಪ್ರದೇಶದ ಧರ್ಮಶಾಲಾ. ಬೈಲುಕುಪ್ಪೆ ಪ್ರವಾಸಿ ತಾಣವಾಗಿ ಪ್ರಖ್ಯಾತಿ ಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣ ದೇಗುಲವೇ (ಗೋಲ್ಡನ್ ಟೆಂಪಲ್) ಪ್ರಮುಖ ಕಾರಣ. ಸ್ವರ್ಣಮಂದಿರ ಸೇರಿದಂತೆ ಸುಮಾರು ಹದಿನೇಳಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ದ ವಿಹಾರ, ಬೌದ್ಧ ಬಿಕ್ಕುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧ ವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, 8 ಸ್ತೂಪಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.

ಇತಿವೃತ್ತ[ಬದಲಾಯಿಸಿ]

1959 ರಲ್ಲಿ ಚೀನಾದ ರೆಡ್ ಆರ್ಮಿ ಟಿಬೆಟ್ ಮೇಲೆ ದಾಳಿ ಮಾಡಿದಾಗ ಅವರಿಂದ ತಪ್ಪಿಸಿಕೊಳ್ಳಲು 14ನೇ ದಲಾಯಿ ಲಾಮಾ ತಮ್ಮ ಅಸಂಖ್ಯಾತ ಅನುಯಾಯಿಗಳೊಂದಿಗೆ ಭಾರತಕ್ಕೇ ಆಶ್ರಯ ಬೇಡಿ ಬಂದರು. ಅಂದಿನ ಪ್ರಧಾನಿ ನೆಹರು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಅವರಿಗೆ ನೆಲೆ ಕಲ್ಪಿಸಿಕೊಟ್ಟರು. ಧರ್ಮಶಾಲಾ ಸೇರಿದಂತೆ ದೇಶದ ಹಲವಾರು ಕಡೆ ಶಿಬಿರಗಳನ್ನು ನೀಡಲಾಯಿತು. ಹಿಂದೆ ಅರಣ್ಯವಾಗಿದ್ದ ಈ ಪ್ರದೇಶ ಅವರ ಪರಿಶ್ರಮದ ಫಲದಿಂದ ಫಲವತ್ತಾದ ಕೃಷಿ ಜಮೀನಾಗಿ ಪರಿವರ್ತನೆಗೊಂಡಿದೆ. ಭಾರತಕ್ಕೆ ಬಂದು ಸುಮಾರು ೪೫ ವರ್ಷಗಳಾದರೂ ಈ ಜನರು ತಮ್ಮ ಮೂಲ ಸಂಸ್ಕೃತಿ ಮತ್ತು ಜೀವನ ಕ್ರಮವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ.

ಕರ್ನಾಟಕದಲ್ಲಿರುವ ನಿರಾಶ್ರಿತರ ನೆಲೆಗಳು[ಬದಲಾಯಿಸಿ]

ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಬೈಲುಕುಪ್ಪೆ, ಹುಣಸೂರಿನ ಗುರುಪುರ, ಕೊಳ್ಳೆಗಾಲದ ಒಡೇರಪಾಳ್ಯ ಮತ್ತು ಉತ್ತರ ಕನ್ನಡದ ಮುಂಡಗೋಡದಲ್ಲಿ ಟಿಬೆಟಿಯನ್ನರ ಶಿಬಿರಗಳಿವೆ. ಟಿಬೆಟ್ ನಿರಾಶ್ರಿತರು ಪ್ರಸ್ತುತ ಭಾರತ ದೇಶದ ೩೪ ಜಾಗಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಕರ್ನಾಟಕದಲ್ಲಿ

  1. ಬೈಲುಕುಪ್ಪೆ,
  2. ಹುಣಸೂರು,
  3. ಕೊಳ್ಳೇಗಾಲ ಹಾಗೂ
  4. ಮುಂಡಗೋಡಗಳಲ್ಲಿ ಒಟ್ಟು ಐದು ನಿರಾಶ್ರಿತರ ನೆಲೆಗಳಲ್ಲಿವೆ.

ಸ್ವರ್ಣಮಂದಿರ[ಬದಲಾಯಿಸಿ]

ಈ ಸ್ವರ್ಣದೇಗುಲ ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿದೆ. ಪರಮಪೂಜ್ಯ ಪನೋರ್ ರಿನ್ ಪೋಚೆಯವರು ಇದನ್ನು 1995 ರಲ್ಲಿ ಆರಂಭಿಸಿ 1999 ರಲ್ಲಿ ಪೂರ್ಣಗೊಳಿಸಿದರು. ಅತ್ಯಂತ ಆಕರ್ಷಕವಾಗಿರುವ ಮಂದಿರ ಹಲವಾರು ವೈಶಿಷ್ಠ್ಯಗಳನ್ನು ಒಳಗೊಂಡಿದೆ. ಸ್ವರ್ಣ ದೇವಾಲಯವು ಉತ್ಕೃಷ್ಠ ಶಿಲ್ಪಕಲೆಯಿಂದ ಕೂಡಿದ್ದು, ಚಿನ್ನದ ಲೇಪನ ಮೆರುಗು ನೀಡಿದೆ. ವಿಶಾಲ ಹಜಾರ ಹೊಂದಿರುವ ದೇವಾಲಯದ ಪೀಠದಿಂದಲೇ ಸುಮಾರು 60 ಅಡಿ ಎತ್ತರವಿರುವ ಶಾಕ್ಯ ಮುನಿ, ಬುದ್ಧ ಹಾಗೂ ಬುದ್ಧನ ಸಂದೇಶಗಳನ್ನು ಟಿಬೆಟ್ ಗೆ ಕೊಂಡೊಯ್ದ ಗುರು ಪದ್ಮಸಾಂಭವರ ಬೃಹತ್ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ. ಟಿಬೆಟಿಯನ್ನರ ಪ್ರಾಚೀನ ಕಲೆ ಮತ್ತು ಚಿತ್ರಕಲೆ ಈ ದೇಗುಲದ ಗೋಡೆಗಳನ್ನು ಸುಂದರವಾಗಿ ಅಲಂಕರಿಸಿದ್ದೂ, ವರ್ಣರಂಜಿತವಾಗಿದೆ. ಇಲ್ಲಿ ದೇವಾನುದೇವತೆಗಳ ಮತ್ತು ದುಷ್ಟಶಕ್ತಿಗಳ ಚಿತ್ರಗಳನ್ನು ಅತ್ಯಂತ ಕಲಾತ್ಮಕವಾಗಿ ಚಿತ್ರಸಲಾಗಿದೆ. ಬೈಲುಕುಪ್ಪೆಯ ಪದ್ಮಸಂಭವ ಬೌದ್ಧವಿಹಾರ ಜಗತ್ತಿನ ಅತಿದೊಡ್ಡ ಬೌದ್ಧ ಮಂದಿರ ಗಳಲ್ಲೊಂದು. ಮಂದಿರದ ಬಹುಭಾಗ ಚಿನ್ನದ ಲೇಪನದಿಂದ ಕೂಡಿದ್ದು 'ಸ್ವರ್ಣಮಂದಿರ'[೩]/ಗೋಲ್ಡನ್ ಟೆಂಪಲ್'[೪] ಎಂದೇ ಪ್ರಸಿದ್ದವಾಗಿದೆ. ಒಳಗೆ ವಿಶಾಲವಾದ ಸಭಾಂಗಣ ೪೦ ಅಡಿ ಎತ್ತರದ ಬುದ್ಧ, ಪದ್ಮಸಂಭವ ಮತ್ತು ಅವನ ಶಿಷ್ಯರ ಚಿತ್ತಾಕರ್ಷಕ ವಿಗ್ರಹಗಳಿವೆ. ಈ ಕಟ್ಟಡವನ್ನು ಟಿಬೆಟಿಯನ್ ವಾಸ್ತುಶೈಲಿಯಂತೆ ನಿರ್ಮಿಸಲಾಗಿದೆ. ಮಂದಿರದ ಗೋಡೆಗಳಲ್ಲಿ ಬೌದ್ಧ ಧರ್ಮದ ಪೌರಾಣಿಕ ಕಥೆಗಳನ್ನು ಬಿಂಬಿಸುವ ವರ್ಣಮಯ ಭಿತ್ತಿಚಿತ್ರಗಳನ್ನು ಬಿಡಿಸಲಾಗಿದೆ. ಪ್ರಾಣಿ ಪಕ್ಷಿಗಳ ಚಿತ್ರಗಳು ಕುತೂಹಲ ಕೆರಳಿಸುತ್ತವೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದನ್ನು 1995ರಲ್ಲಿ ಆರಂಭಿಸಿ, 1999ರಲ್ಲಿ ಪೂರ್ಣಗೊಳಿಸಿದರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ಆಕರ್ಷಕ, ವೈಶಿಷ್ಟ್ಯಪೂರ್ಣವಾಗಿಯೂ ನಿರ್ಮಿಸುವಲ್ಲಿ ಪೆನೋರ್ ರಿನ್ ಪೋಚೆಯವರ ಈ ಸಾಧನೆ ಸ್ಮರಣೀಯ.

ನ್ಯಾಂಗ್ಡೋಪಾಲ್ರಿ ಮಂದಿರ[ಬದಲಾಯಿಸಿ]

ಸ್ವರ್ಣಮಂದಿರದ ಎದುರು ಸುಮಾರು ಮೂರು ಕೋಟಿ ವೆಚ್ಚದಲ್ಲಿ 'ನ್ಯಾಂಗ್ಡೋಪಾಲ್ರಿ ಮಂದಿರ' ಎಂಬ ನೂತನ ಬೌದ್ದಾಲಯವನ್ನು ಕಟ್ಟಿಸಲಾಗಿದೆ. ಇದು 'ಲಾಸಾ ದೇಗುಲ' ಮಾದರಿಯಲ್ಲಿದೆ. ಪ್ರವೇಶ ದ್ವಾರದ ಮೇಲೆ ಮೂರು ಅಂತಸ್ತುಗಳ ಗೋಪುರವಿದ್ದು, ತುದಿಯಲ್ಲಿ ಧರ್ಮ ಪ್ರವರ್ಧನ ಚಕ್ರವನ್ನು ಅಳವಡಿಸಲಾಗಿದೆ. ಸ್ವರ್ಣಮಂದಿರದಂತೆ ಇಲ್ಲೂ ಸುಂದರವಾದ ವಿಗ್ರಹಗಳು, ಭಿತ್ತಿ ಚಿತ್ರಗಳು ಹಾಗೂ ಮರದ ಕೆತ್ತನೆಗಳನ್ನು ಕಾಣಬಹುದು.

ನಂಬಿಕೆ[ಬದಲಾಯಿಸಿ]

ಪ್ರವೇಶದ್ವಾರದಿಂದ ಆರಂಭವಾಗಿ ದೇವಾಲಯಕ್ಕೇ ಸುತ್ತುವರಿದುಕೊಂಡು ಸುಮಾರು 1300 ಪ್ರಾರ್ಥನಾ ಚಕ್ರಗಳಿದ್ದು, ಈ ಪ್ರಾರ್ಥನಾ ಚಕ್ರಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ಅವುಗಳನ್ನು ತಿರುಗಿಸಿದರೆ ನಾವು ರೋಗ ರುಜಿನಗಳಿಂದ ಮುಕ್ತಗೊಂಡು ಪಾವನರಾಗುತ್ತೇವೆ ಎಂಬ ನಂಬಿಕೆಯಿದೆ. ದೇವಾಲಯದ ಬಳಿ ಸುಂದರ ಉದ್ಯಾನವನವಿದ್ದು ಇಲ್ಲಿ ಕುಳಿತು ಧ್ಯಾನ ಮಾಡಿದರೆ ಮನಸ್ಸಿಗೆ ಹೊಸ ಅನುಭವ ನೀಡಿ ನಮ್ಮಲ್ಲಿರುವ ದುಃಖ ದುಮ್ಮಾನಗಳು ಮಾಯವಾಗಿ ಮನಸ್ಸು ಉಲ್ಲಾಸದಿಂದ ತೇಲುತ್ತದೆ.

ಟಿಬೆಟಿಗನ ಕನ್ನಡ ಪ್ರೀತಿ[ಬದಲಾಯಿಸಿ]

ಗೆಲಾಕ್‌ ಜುಂಮ್ನೆ[೫] ಸ್ವ ಆಸಕ್ತಿಯಿಂದ ಕನ್ನಡ ಕಲಿತಿದ್ದಾರೆ. ಇದಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಿಸಿದ್ದಾರೆ. ಅವರು ಸ್ಥಳೀಯರೊಂದಿಗೆ ಕನ್ನಡ ಮಾತನಾಡಲು ಪ್ರಯತ್ನಿಸತೊಡಗಿದರು. ಆರಂಭದಲ್ಲಿ ಏನೂ ಅರ್ಥ ಆಗಲಿಲ್ಲವಂತೆ. ಇನ್ನು ಕೆಲವರು ಇವರೊಂದಿಗೆ ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದರಂತೆ. ಆದರೂ ಸಾಕಷ್ಟು ಪ್ರಯತ್ನಪಟ್ಟು ಒಂದೊಂದೇ ಪದ ಕಲಿಯತೊಡಗಿದರು. ಒಬ್ಬರೇ ಇರುವಾಗ ಕನ್ನಡ ಮಾತನಾಡುತ್ತಿದ್ದರು. ಆಗ ಇವರಿಗೆ ಕನ್ನಡ ಕಲಿಯಬೇಕೆನ್ನಿಸಿತು. ಇದೀಗ ಯಾವ ಕನ್ನಡಿಗರಿಗೂ ಕಡಿಮೆಯಿಲ್ಲದಂತೆ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಇವರು ಕಾಲೇಜಿನಲ್ಲಿ ಕನ್ನಡ ಕಲಿತಿಲ್ಲ. ಸೆಂಟ್ರಲ್‌ ಸಿಲಬಸ್‌ನಲ್ಲಿ ಹಿಂದಿ ಪ್ರಧಾನ ಭಾಷೆಯಾಗಿ ಗೆಲಾಕ್‌ ಜುಂಮ್ನೆ ಕಲಿತಿದ್ದಾರೆ. ಇವರು ಬೈಲುಕುಪ್ಪೆ ಪುನರ್‌ವಸತಿ ಕ್ಯಾಂಪ್‌ನ ಕೋ ಆರ್ಡಿನೇಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಬೈಲುಕುಪ್ಪೆಯಲ್ಲಿ ಎರಡು ಬೌದ್ಧ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ರೂ ನಾಲ್ಕು ಕೋಟಿ ವೆಚ್ಚದಲ್ಲಿ 'ನಳಂದ ಅಂತರಾಷ್ಟ್ರೀಯ ಸಂಸ್ಥೆ' ಸ್ಥಾಪನೆಯಾಗಿದೆ. ಇದನ್ನು ಟಿಬೆಟಿಯನ್ ಬೌದ್ಧ ಕೇಂದ್ರದ ನಮೂನೆಯಲ್ಲಿ ರೂಪಿಸಲಾಗಿದೆ. ರಾಷ್ಟ್ರದ ವಿವಿದೆಡೆಗಳಿಂದ ಆಗಮಿಸುವ ಬೌದ್ದ ಭಿಕ್ಷುಗಳಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತದೆ.

ತಲುಪುವ ಬಗೆ[ಬದಲಾಯಿಸಿ]

ಬೈಲುಕುಪ್ಪೆ ಪಿರಿಯಾಪಟ್ಟಣ ತಾಲ್ಲೂಕಿನ ಮೈಸೂರಿನಿಂದ ೭೦ ಕಿ.ಮೀ ದೂರದಲ್ಲಿ ಮಡಿಕೇರಿಗೆ ಹೋಗುವ ಮಾರ್ಗದಲ್ಲಿದೆ. ಕುಶಾಲನಗರದಿಂದ ಇಲ್ಲಿಗೆ ಐದು ಕಿ.ಮೀ ದೂರ ಹಾಗೂ ಪಿರಿಯಾಪಟ್ಟಣದಿಂದ ೧೬ ಕಿ.ಮೀ ದೂರದಲ್ಲಿದೆ. ಎರಡು ಕಡೆಯಿಂದಲೂ ಇಲ್ಲಿಗೆ ಹೋಗಬಹುದು.

ಆಕರ ಕೃತಿ[ಬದಲಾಯಿಸಿ]

  • ಕರ್ನಾಟಕ ಪ್ರವಾಸಿ ತಾಣಗಳು ಭಾಗ-೧-ಐ.ಸೇಸುನಾಥನ್

ಉಲ್ಲೇಖಗಳು[ಬದಲಾಯಿಸಿ]

  1. http://kodagunews.com/2013/04/%E0%B2%B9%E0%B2%B8%E0%B2%BF%E0%B2%B0-%E0%B2%A8%E0%B2%BE%E0%B2%A1%E0%B3%81-%E0%B2%95%E0%B3%8A%E0%B2%A1%E0%B2%97%E0%B2%BF%E0%B2%A8-%E0%B2%97%E0%B2%A1%E0%B2%BF%E0%B2%AF%E0%B2%B2%E0%B3%8D%E0%B2%B2/
  2. http://164.100.80.97/eswathu/(S(kmooih0f2janhi1otofblqci))/ED/MojiniVillagePIDwise.aspx?DistrictCode=1522&BlockCode=1522006&GPCode=1522006021&VillageCode=1522006021086
  3. https://kannada.oneindia.com/travel/buddhist-monastery-tibetean-golden-temple-is-located-near-mysuru-099394.html
  4. https://vijaykarnataka.indiatimes.com/lavalavk/weekly-magazine/year-end-trip/articleshow/56037115.cms
  5. https://vijaykarnataka.indiatimes.com/district/kodagu/-/articleshow/61374114.cms