ವಿಷಯಕ್ಕೆ ಹೋಗು

ಬೇಬಿ ಬೆಟ್ಟದ ಜಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

" ಬೇಬಿ ಬೆಟ್ಟದ ಜಾತ್ರೆ ",[] ವಸಂತಾಗಮನಸಂಭ್ರಮದೊಡನೆಯೇ ಜಾತ್ರೆಗಳ ಪ್ರಾರಂಭವಾಗುತ್ತದೆ. ಇದೇತರಹ, ಬೇಬಿಬೆಟ್ಟದಲ್ಲೂ ಮಹಾಶಿವರಾತ್ರಿಯಾದ ಒಡನೆಯೇ ಜಾತ್ರೆ ನಡೆದು ಬರುವ ಸಂಪ್ರದಾಯವಿದೆ. ಮುಖ್ಯವಾಗಿ ಇಲ್ಲಿ ನಡೆಯುವುದು ದನಗಳ ಜಾತ್ರೆ. ಇಲ್ಲಿನ ಮಹಾಸನ್ನಿಧಾನಗಳಾದ ಎಡೆಯೂರು ಶ್ರೀ. ಸಿದ್ಧಲಿಂಗೇಶ್ವರ ಹಾಗೂ ಶ್ರೀ. ಮಲೈ ಮಹಾದೇಶ್ವರರರ ನೆಲೆಯ ಪ್ರಭಾವದಿಂದಾಗಿ, ಪ್ರತಿವರ್ಷವೂ ಮಾರ್ಚ್. ೫ ರಿಂದ ಆರಂಭವಾಗಿ, ಮಾರ್ಚ್ ೧೧ ರವರೆಗೆ ಜಾತ್ರೆ, ರಥೋತ್ಸವಗಳು, ಇಲ್ಲಿ ವಿಜೃಂಭಣೆಯಿಂದ ನೆರೆವೇರುತ್ತವೆ.

ಡಂಬಾಸುರನ ಕತೆ

[ಬದಲಾಯಿಸಿ]

ಬಹಳ ಹಿಂದೆ, ಪೂರ್ವದಲ್ಲಿ, ಡಂಬಾಸುರನೆಂಬ ರಕ್ಕಸನಿದ್ದನಂತೆ. ಸುತ್ತಮುತ್ತಲ ಗ್ರಾಮದವರಿಗೆ ಆತ ಬಹಳ ಪೀಡೆಕೊಡುತ್ತಿದ್ದ. ಬೆಟ್ಟದ ಗುಹೆಯೊಂದರಲ್ಲಿ ವಾಸಿಸುತ್ತಿದ್ದ ಆ ರಾಕ್ಷಸ, ಮಗುವಿನ ರೂಪತಾಳಿ ಜನರು ಅದನ್ನು ಎತ್ತಿಕೊಂಡಕೂಡಲೇ, ವಿರಾಟರೂಪಧರಿಸಿ, ಅವರನ್ನು ತಿನ್ನುತ್ತಿದ್ದನಂತೆ. ಭಯಭೀತರಾದ ಅಲ್ಲಿನ ಜನ ಶ್ರೀಮನ್ನಾರಾಯಣನ ಮೊರೆಹೋದರಂತೆ. ನಾರಾಯಣ ಡಂಬಾಸುರನನ್ನು ಸಂಹರಿಸಲು, ಮಹಾಲಕ್ಷ್ಮಿಯನ್ನು ಕಳಿಸಿದನಂತೆ. ಬೆಟ್ಟದ ಬಳಿಗೆ ಲಕ್ಷ್ಮೀದೇವಿಯು ಬಂದಾಗ, ರಾಕ್ಷಸನು ಮಗುವಿನರೂಪದಲ್ಲಿ ಕಾಣಿಸಿಕೊಂಡನಂತೆ. ಮಗುವನ್ನು ಎತ್ತಿ ಸಂತೈಸಲು ಹೋದ ಲಕ್ಷ್ಮಿಯನ್ನು ಕೊಲ್ಲಲು ಮುಂದಾದನು. ಇಬ್ಬರನಡುವೆ ಘೋರ ಕಾಳಗನಡೆಯಿತು. ಆಗ ಲಕ್ಷ್ಮಿಯು, ದುರ್ಗೆಯ ರೂಪಧಾರಣೆಮಾಡಿ, ತ್ರಿಶೂಲದಿಂದ ಅವನನ್ನು ಸಂಹರಿಸಿದಳಂತೆ. ಬ್ರಿಟಿಷರ ಕಾಲದಲ್ಲಿ ತಮ್ಮ ಯುದ್ಧಸಾಮಗ್ರಿಗಳನ್ನು ಶೇಖರಿಸಿಡಲು ಬೇಬಿಬೆಟ್ಟದ ಮೇಲಿನ ಜಾಗವನ್ನು ಉಪಯೋಗಿಸುತ್ತಿದ್ದರಂತೆ. ಹಾಗೆಯೇ ಅವರಿಗೆ ಬೇಬಿ ಬೆಟ್ಟದ ಮಹಾತ್ಮ್ಯೆಯ ವಿವರಗಳು ತಿಳಿದವು. ಸಣ್ಣಮಗುವಿನ ಮತ್ವವನ್ನು ಅರಿತು, ಅವರೇ ಬೇಬಿ ಬೆಟ್ಟದ ಹೆಸರನ್ನು "ಬೇಬಿ ಹಿಲ್," ಎಂದು ಪುನರ್ ನಾಮಕರಣಮಾಡಿದರಂತೆ. ಬೇಬಿಬೆಟ್ಟದ ಹೆಸರನ್ನು ತಮ್ಮ ಗೆಝೆಟಿಯರ್ ನಲ್ಲಿ ಮುದ್ರಿಸಿದರಂತೆ. ಹೀಗೆ ಬೇಬಿಬೆಟ್ಟದ ಹೆಸರು ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಯಿತು. ಊರಿನ ಹಿರಿಯ ಅಜ್ಜಿಯರು, ಕೆಳಗಿನ ಜಾನಪದ ಗೀತೆಗಳನ್ನು, ಹಾಡಿದ್ದಾರೆ. ಈ ಗೀತೆಗಳು, ಬೇಬಿ ಬೆಟ್ಟ ದ ಒಳಕಥೆಯನ್ನು ಸಾರಿಹೇಳುತ್ತವೆ.

" ಮಾದೇವನಾ

ಗಿರಿಯ ಮೇಲಿರೋ

ಸಿದ್ದಲಿಂಗೇಶನಾ

ತೇರನೆಳೆಯೋಣಬನ್ನಿ

ಬೇಬಿಬೆಟ್ಟದ ಬಸವನಾ

ಪರಸೆ ಮಾಡೋಣ ಬನ್ನಿ

ಡಂಬಕನ ಕೊಂದ

ಡಿಂಕದಾಂಬೆಯ

ರಾಮಯೋಗೇಶ್ವರರ

ಮಹಿಮೆಯನ್ನಾ

ಹಾಡೋಣ ಬನ್ನಿ

ಮೈಸೂರ ಮಾರಾಜರು

ಬೆಟ್ಟಕೆಬಂದ ಕತೆಯನ್ನಾ

...ತೇರನೆಳೆಯೋಣಬನ್ನಿ.

ಬೇಬಿಬೆಟ್ಟದಲ್ಲಿ, ದನ-ಕರುಗಳ ಜಾತ್ರೆ, ರಥೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ

[ಬದಲಾಯಿಸಿ]

ಶಿವರಾತ್ರಿಯಿಂದ ಒಂದುವಾರ ನಡೆಯುವ ಜಾತ್ರೆ, ರಥೋತ್ಸವದೊಂದಿವೆ ಸಂಪನ್ನವಾಗುತ್ತದೆ. ಶತಮಾನಗಳ ಇತಿಹಾಸವಿರುವ, ಬೇಬಿ ದನಗಳ ಜಾತ್ರೆಗೆ ದೂರದೂರದ ಜಿಲ್ಲೆಗಳಿಂದ ತಂದ ರಾಸುಗಳು ಬರುತ್ತವೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಮಹದೇಶ್ವರರು, ಸಿದ್ಧಲಿಂಗೇಶ್ವರರು, ಬೇಬಿ ಬೆಟ್ಟದಲ್ಲಿ ಪವಾಡಗಳನ್ನು ಮಾಡಿ ಮೆರೆದವರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಿಂದ ೪ ಮೈಲಿಗಳ ದೂರದಲ್ಲೇ ಬೇಬಿಬೆಟ್ಟವಿದೆ. ಮಹಾಶಿವರಾತ್ರಿಯಾದ ನಂತರ ಇಲ್ಲಿ ಜನಗಳ ಜಾತ್ರೆ ನಡೆಯುತ್ತದೆ. ಅಶ್ವಿನಿ ನಕ್ಷತ್ರದಲ್ಲಿ ಮಹೋತ್ಸವ. ಸಿದ್ಧಲಿಂಗೇಶ್ವರರ ಮಹದೇಶ್ವರರ ತೇರನ್ನು ಎಳೆದು, 'ಧವನ' ವನ್ನು ಎಸೆದು ಪುನೀತರಾಗಲು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಮುಮ್ಮಡಿ ಕೃಷ್ಣರಾಜ ಅರಸರಆಳ್ವಿಕೆಯಲ್ಲಿ, ಆರಂಭವಾದ ಜಾತ್ರೆ, ಸ್ವಲ್ಪಕಾಲ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿಂತಿತ್ತು. ಮಾಜೀ ಶಾಸಕ, ಸಿ. ಎಸ್. ಪುಟ್ಟರಾಜು ರವರ ವಿಶೇಷ ಆಸಕ್ತಿಯಿಂದಾಗಿ, ಈಗ ಮತ್ತೆ ಆರಂಭಿಸಿದೆ. ಇಲ್ಲಿರುವ ರಾಮಯೋಗೀಶ್ವರ ಮಠದ ಹಿರಿಯ ಹಿರಿಯಸ್ವಾಮೀಜಿಯವರು, ಬೇಬಿಗ್ರಾಮದ ದುರ್ದುಂಡೇಶ್ವರ ಮಠದ ಶತಾಯುಷಿ ಮರಿದೇವರು, ಶ್ರೀ. ಸದಾಶಿವಸ್ವಾಮಿಗಳು, ಹಾಗೂ ಶ್ರೀ. ತ್ರಿನೇತ್ರ ಸ್ವಾಮೀಜಿಯವರ ಶ್ರಮದಿಂದಾಗಿ, ಬೇಬಿಬೆಟ್ಟಕ್ಕೆ ಹೊಸಮೆರುಗು ಬಂದಿದೆ. ಅಕ್ಷರದಾಸೋಹ, ಅನ್ನದಾಸೋಹದ ಜೊತೆ-ಜೊತೆಯಲ್ಲೇ, ಇಲ್ಲಿ ಸಾಮೂಹಿಕ ಮದುವೆಗಳು ಪ್ರತಿವರ್ಷವೂ ನಡೆಯುತ್ತವೆ. ಒಂದು ಕಾಲದಲ್ಲಿ, "ಅಮೃತಮಹಲ್ ಕಾವಲ್" ಎಂದು ಹೆಸರಾಗಿದ್ದ ಬೇಬಿಬೆಟ್ಟದದಲ್ಲಿ, ಹಿಂದಿನಂತೆ ರಾಸುಗಳು ನೆಮ್ಮದಿಯಿಂದ ಹುಲ್ಲು ಮೇಯಲಾರವು. ಕಲ್ಲು ಗಣಿಗಾರಿಕೆಯಿಂದ ಪ್ರದೇಶವೆಲ್ಲಾ ಹಾಳಾಗಿ, ಹಸುರುಹುಲ್ಲುಗಾವಲು ಪ್ರದೇಶ, ಮಾಯವಾಗಿದೆ. ಬೆಟ್ಟದ ಸುತ್ತಮುತ್ತಲೂ ಸುಮಾರು ಹತ್ತಾರು ಕಿಲೊಮೀಟರ್ ನಷ್ಟು ಜಾಗದಲ್ಲಿ, ಬೃಹತ್ ಪ್ರಮಾಣದ ಕ್ಲಸರ್ ಮೂಲಕ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಾಗರಿಕರು, ಪ್ರಯತ್ನಪಟ್ಟು ನೀಗಿಸಲು ಸಹಕರಿಸಬೇಕು.

ಇತ್ತೀಚಿನ ದಿನಳಲ್ಲಿ, ಹಲವಾರು ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

[ಬದಲಾಯಿಸಿ]

ಬೇಬಿಬೆಟ್ಟಕ್ಕೆ ಹೋಗಲು ಮೊದಲು, ರಸ್ತೆಇರಲಿಲ್ಲ. ಈಗ ಎಲ್ಲಾ ರಸ್ತೆಗಳೂ ಡಾಂಬರ್ ಕಂಡಿವೆ. ದನಕರುಗಳಿಗೆ ನೀರಿನಟ್ಯಾಂಕ್, ಮತ್ತು ತೊಟ್ಟಿಗಳನ್ನು ಕಟ್ಟಿದ್ದಾರೆ. ವಿದ್ಯುತ್ ದೀಪಗಳ ಸೌಲಭ್ಯವಿದೆ. ಬೆಟ್ಟವನ್ನು ಹತ್ತಲು ಮೆಟ್ಟಿಲುಗಳನ್ನು ಕಟ್ಟಲಾಗಿದೆ. ಬೆಟ್ಟದ ಮಧ್ಯೆ ಮಂಟಪ ತಯಾರಾಗಿದೆ. ರಥೋತ್ಸವಕ್ಕಾಗಿ ನೂತನ ರಥ ಸಿದ್ಧವಾಗಿದೆ. ಸಿದ್ಧಿಪುರುಷರ ತಪೋಭೂಮಿಯಾದ ಈ ಬೆಟ್ಟದ ಪ್ರಸಿದ್ಧಿ ನೂರ್ಮಡಿಸಿದೆ. ಇಲ್ಲಿರುವ ಮಠವನ್ನು ರಾಮಯೋಗೀಶ್ವರ ಮಠ ವೆಂದು ಕರೆಯುವ ವಾಡಿಕೆ. ಸಂಸ್ಥಾಪಕರಾದ ರಾಮಯೋಗೀಶ್ವರರು, (ರಾಮಪ್ಪನೆಂದು ಹೆಸರುವಾಸಿ) ಮುಮ್ಮಡಿ ಕೃಷ್ಣರಾಜಒಡೆಯರ ಆಸ್ಥಾನದಲ್ಲಿ ಶಿವಲಿಂಗಪೂಜೆಯನ್ನು ದೊರೆಗಳಿಗೆ ಮಾಡಿಕೊಡುತ್ತಿದ್ದರು. ರಾಮಪ್ಪನವರು, ರಾಜ್ಯದಾದ್ಯಂತ ಪ್ರವಾಸಮಾಡಿದರು. ಅಪಾರ ಶಿಷ್ಯರನ್ನು ಸಂಪಾದಿಸಿದರು. ಆದರೆ ನೆಮ್ಮದಿಯ ತಾಣ ದೊರೆಯಲಿಲ್ಲ. ಅಂತಿಮವಾಗಿ ಅವರಿಗೆ ಬೇಬಿಬೆಟ್ಟಕರೆದಂತಾಗಿ, ಅಲ್ಲೇ ನೆಲಸಿದರು. ಜನ ಪಾದಯಾತ್ರೆಯ ಮೂಲಕೆ, ಮಲೈ ಮಹದೇಶ್ವರ, ಎಡೆಯೂರು ಸಿದ್ಧಲಿಂಗೇಶ್ವರ, ಸನ್ನಿಧಾನಗಳಿಗೆ ಯಾತ್ರೆಹೋಗುತ್ತಿದ್ದದ್ದನ್ನು, ರಾಮಪ್ಪನವರು, ಗಮನಿಸಿದರು. ಆ ಇಬ್ಬರು ಶರಣರನ್ನೂ ಸಾಕ್ಷಾತ್ಕರಿಸಿ, ಬೇಬಿಬೆಟ್ಟದ ಹತ್ತಿರ, ದೇಗುಲಗಳನ್ನು ಕಟ್ಟಿಸಿದರು. ಶಿವರಾತ್ರಿಯ ದಿನದಂದು ಜಾತ್ರೆಯಶುಭಾರಂಭ ಮಾಡಿಯೇಬಿಟ್ಟರು. ಇದರಜೊತೆಗೆ, ದನಗಳ ಪರಸೆ, ಹಾಗೂ ರಥೋತ್ಸವವೂ ಜರುಗಿತು. ಮೈಸೂರು ಅರಸರು, ಪ್ರತೀ ವರ್ಷವೂ ಬರಲು ಆರಂಭಿಸಿದಮೇಲೆ ಇದರ ಪ್ರಸಿದ್ಧಿ ನೂರ್ಮಡಿಸಿತು. ರಾಮಪ್ಪನವರು, ರಾಮಯೋಗೀಶರಾದರು. ಅವರ ಪವಾಡಗಳು ಮನೆಮಾತಾಡವು. ತಮ್ಮ ಆಯುಷ್ಯದ ಕೊನೆಯಲ್ಲಿ ಅವರು, ಕೊಳ್ಳೇಗಾಲದ ಶಂಭುಲಿಂಗನ ಬೆಟ್ಟದಲ್ಲಿ ಐಕ್ಯರಾದರೆಂದು ಪ್ರತೀತಿಯಿದೆ. ಈಗಿರುವ ಶತಾಯುಷಿ, ಶ್ರೀ ಮರಿದೇವ ಮಹಂತ ಶಿವಯೋಗಿಗಳು, ಉತ್ತರಕರ್ನಾಟಕದಿಂದ ಬಂದವರು. ಇವರೂ ಜಾತ್ರೆಯನ್ನು ಸತತವಾಗಿ ನಡೆಸಿಕೊಂಡುಬಂದರು. ಈ ವ್ಯವಸ್ಥೆ, ಯದುವಂಶದ ಕೊನೆಯ ರಾಜ, ಜಯಚಾಮರಾಜೇಂದ್ರ ಒಡೆಯರ್ ರವರ ಆಳ್ವಿಕೆ ಇರುವವರೆಗೆ (೧೯೭೧) ಮುಂದುವರೆಯಿತು. ಈಗ ಮುಜುರಾಯಿ ಇಲಾಖೆಯವರು ಇದನ್ನು ವಹಿಸಿಕೊಂಡಿದ್ದಾರೆ. ೧೯೯೪ ರಲ್ಲಿ ಹಿರಿಯಸ್ವಾಮಿಗಳು, ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಉತ್ತರಾಧಿಕಾರವನ್ನು ಕಿರಿಯ ಶ್ರೀಗಳಾದ, ಶ್ರೀಸದಾಶಿವ ಸ್ವಾಮಿ ಗಳಿಗೆ ವಹಿಸಿಕೊಟ್ಟಿದ್ದಾರೆ. ಅಲ್ಲದೆ ಅವರು ಬೇಬಿ ಗ್ರಾಮದಲ್ಲಿ, 'ದುರ್ದಂಡೇಶ್ವರ ಮಹಂತಶಿವಯೋಗಿಗಳ ಮಠ' ವನ್ನು ಸ್ಥಾಪಿಸಿದರು.

ಉಲ್ಲೇಖನಗಳು

[ಬದಲಾಯಿಸಿ]
  1. ಬೇಬಿ ಬೆಟ್ಟದ ಜನಗಳ ಜಾತ್ರೆಗೆ ಚಾಲನೆ,ಕನ್ನಡ ಪ್ರಭ, ಆಗಸ್ಟ್, ೨೩,೨೦೧೬


-ಬಲ್ಲೇನಹಳ್ಳಿ ಮಂಜುನಾಥ್.