ಬೇಡೆನ್ ಪೊವೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಕೌಟ್ ಚಳವಳಿಯ ಸಂಸ್ಥಾಪಕ ರಾಬರ್ಟ್ ಬಾಡೆನ್-ಪೊವೆಲ್.(Baden-Powell USZ62-96893 -retouched and cropped)

ಬೇಡನ್ ಪೊವೆಲ್ (Robert Baden-Powell, 1st Baron Baden-Powell) 1857-1941. ಬ್ರಿಟನ್ ಸೇನಾನಿ ಮತ್ತು ಸ್ಕೌಟ್ ಚಳವಳಿಯ ಸ್ಥಾಪಕ, ಸರ್ ರಾಬರ್ಟ್ ಸ್ಟೀಫನ್‍ಸನ್ ಸ್ಮಿತ್ ಬೇಡನ್ ಪೋವೆಲ್ ಈತನ ಪೂರ್ಣ ಹೆಸರು.

ಆರಂಭಿಕ ಬದುಕು[ಬದಲಾಯಿಸಿ]

ಆಕ್ಸ್‍ಫರ್ಡಿನ ಪ್ರಾಧ್ಯಾಪಕ ಬೇಡನ್ ಪೊವೆಲನ ಆರನೆಯ ಮಗನಾಗಿ ಲಂಡನಿನಲ್ಲಿ 1857 ಫೆಬ್ರವರಿ 22 ರಂದು ಜನನ. ಸರ್ ಜಾರ್ಜ್ ಸ್ಮಿತ್ ಬೇಡನ್ ಪೊವೆಲ್ ಈತನ ಸಹೋದರ.

ವೃತ್ತಿ ಬದುಕು[ಬದಲಾಯಿಸಿ]

ಪೊವೆಲ್ ಶಿಕ್ಷಣ ಮುಗಿಸಿದ ನಂತರ 1870ರಲ್ಲಿ ಅಶ್ವಪಡೆಗೆ ಸೇರಿಕೊಂಡ. ಆ ಪಡೆಯ ಅಧಿಕಾರಿಯಾಗಿ ಭಾರತ, ಆಫ್‍ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸೇವೆ ಸಲ್ಲಿಸಿದ. 1883ರಲ್ಲಿ ಜೂಲು ಪ್ರದೇಶದ ಮೇಲೆ ನಡೆಸಲಾದ ಆಕ್ರಮಣದಲ್ಲಿ ಭಾಗವಹಿಸಿದ. 1890 ರಿಂದ 1893ರ ತನಕ ಮಾಲ್ಟಾದಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿ. ಅನಂತರ 1895ರಲ್ಲಿ ಅಶಾಂತೀ ಪ್ರದೇಶದಲ್ಲಿ ನಡೆದ ಕದನದಲ್ಲಿ ಸ್ಥಳೀಯ ದಳಗಳ ನಾಯಕತ್ವ ವಹಿಸಿ ಕಾರ್ಯಾಚರಣೆ ನಡೆಸುವುದಕ್ಕಾಗಿ ಪಶ್ಚಿಮ ಆಫ್ರಿಕೆಗೆ ಕಳುಹಿಸಲಾಯಿತು. 1896-97ರಲ್ಲಿ ಮಾಟಬೀಲೀ ಲ್ಯಾಂಡ್ ಆಕ್ರಮಣದಲ್ಲಿ ಪ್ರಧಾನ ಸಹಾಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ. ಆ ಸೇವೆಗೆ ಪುರಸ್ಕಾರವಾಗಿ 1897ರಲ್ಲಿ ಲೆಫ್ಟಿನೆಂಟ್ ಕರ್ನಲನಾಗಿ ಬಡತಿ ಕೊಟ್ಟು. ಐದನೆಯ ಡ್ರಾಗೂನ್ ಕಾಪುದಳದ ಅಧಿಪತಿಯಾಗಿ ಕಾರ್ಯ ನಿರ್ವಹಿಸಿದ. ದಕ್ಷಿಣ ಆಫ್ರಿಕಾದ ಕಾಳಗದಲ್ಲಿ (1899-1902) ಅತ್ಯಲ್ಪ ಪಡೆಯ ಅಧಿಕಾರಿಯಾಗಿ ಮಾಫೆಕಿನ್ ಪ್ರದೇಶವನ್ನು 1899 ಅಕ್ಟೋಬರ್ 15 ರಿಂದ 1900 ಮೇ 17ರ ತನಕ ಸುಮಾರು 217 ದಿನಪರ್ಯಂತ ಬೋಯರ್ ಆಕ್ರಮಣಕಾರರಿಂದ ಸಂರಕ್ಷಿಸಿ ಪ್ರಖ್ಯಾತನಾದ. ಈ ಸಾಧನೆಗಾಗಿ ಪೊವೆಲನನ್ನು ಪ್ರಧಾನ ಸೇನಾಧಿಕಾರಿಯಾಗಿ ನೇಮಿಸಿ ಗೌರವಿಸಲಾಯಿತು. ಟ್ರಾನ್ಸ್ ವಾಲ್ ಕದನಾನಂತರ ದಕ್ಷಿಣ ಆಫ್ರಿಕಾದ ಪೋಲಿಸ್ ದಳವನ್ನು ಬೆಳೆಸಿ, ತರಬೇತು ಕೊಡುವುದಕ್ಕಾಗಿ ನಿಯೋಜಿಸಲಾಯಿತು. ಪೊವೆಲ್ 1903ರ ತನಕ ಪ್ರಧಾನಾಧಿಕಾರಿಯಾಗಿ ಅಲ್ಲಿ ಕಾರ್ಯನಿರ್ವಹಿಸಿದ. ಆ ದಳಕ್ಕೆ ಸೇರಲು ಬಂದ ಹೊಸಬರಿಗೆ ಅವರು ಸ್ವಾವಲಂಬನೆ, ಧೈರ್ಯ ಹಾಗೂ ಚುರುಕುತನ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಾಡಿದ. ತನ್ನ ಏಯ್ಡ್‍ಸ್ ಟು ಸ್ಕೌಟಿಂಗ್ (1899) ಕೃತಿಯಲ್ಲಿ ವಿವರಿಸಲಾದ ಯೋಜನೆಯ ಆಧಾರದ ಮೇಲೆ 1907ರಲ್ಲಿ ಡಾರ್‍ಸೆಟ್‍ನ ಬ್ರೌನ್‍ಸಿ ದ್ವೀಪದಲ್ಲಿ ಒಂದು ಪ್ರಯೋಗ ಶಿಬಿರ ನಡೆಸಿದ.

ಸ್ಕೌಟ್ ಮತ್ತು ಗೈಡ್ ಚಳವಳಿ[ಬದಲಾಯಿಸಿ]

ಬ್ರಿಟನಿಗೆ ಹಿಂತಿರುಗಿದಾಗ ಅವನ ಈ ತತ್ತ್ವಗಳ ಆಧಾರದ ಮೇಲೆ ಬಾಲಕರಿಗಾಗಿ ಒಂದು ಹೊಸ ಕಾರ್ಯಕ್ರಮ ಯೋಜಿಸುವಂತೆ ಅವನನ್ನು ಕೋರಲಾಯಿತು. ಅದನ್ನು ಮನ್ನಿಸಿ ಬೇಡನ್ ಪೊವೆಲ್ 1908ರಲ್ಲಿ ಸ್ಕೌಟ್ ಚಳವಳಿಯನ್ನು ಪ್ರಾರಂಭಿಸಿದ. ಅದು ಬೆಳೆದು ಪ್ರಪಂಚದಲ್ಲೆಲ್ಲ ಹರಡಿತು. ಅದೇ ವರ್ಷ ಸ್ಕೌಟಿಂಗ್ ಫಾರ್ ಬಾಯ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿದ. ಈ ಎಲ್ಲ ಸಾಧನೆಗಳಿಗಾಗಿ ಅವನಿಗೆ 1909ರಲ್ಲಿ ನೈಟ್ ಪದವಿ ಕೊಡಲಾಯಿತು. 1910ರಲ್ಲಿ 5ನೆಯ ಜಾರ್ಜ್ ದೊರೆಯ ಅಪೇಕ್ಷೆ ಹಾಗೂ ಅಣತಿಯ ಮೇರೆಗೆ ಮಿಲಿಟರಿ ಸೇವಾವೃತ್ತಿಯಿಂದ ನಿವೃತ್ತನಾಗಿ (ಬಾಲಚಮೂ) ಸ್ಕೌಟ್ ಚಳವಳಿಯನ್ನು ಬೆಳಸುವ ಕಾರ್ಯದಲ್ಲಿ ತೊಡಗಿದ. ಅದೇ ವರ್ಷ ಶ್ರೀಮತಿ ಅಗ್ನೆಸ್ ಬೇಡನ್ ಪೊವೆಲ್ ಎಂಬ ತನ್ನ ಸಹೋದರಿಯೊಂದಿಗೆ ಸೇರಿಕೊಂಡು ಬಾಲಿಕಾಚಮೂ ಚಳವಳಿ ಹಾಗೂ ಅದರ ಸಂಸ್ಥೆಯನ್ನು ಸ್ಥಾಪಿಸಿದ. 1912ರಲ್ಲಿ ಒಲಾವೆ ಸೆಯೆಂಟ್ ಕ್ಲೆರ್ ಸೊಮಿಸ್ ಎಂಬಾಕೆಯನ್ನು ವಿವಾಹವಾದ. ಈತನ ಸಹೋದರಿ ಹಾಗೂ ಪತ್ನಿ ಮುಂದೆ ಬಾಲಿಕಾಚಮೂ ಚಳವಳಿ (ಗರ್ಲ್‍ಗೈಡ್ಸ್) ಬೆಳೆಯುವುದಕ್ಕೆ ಕಾರಣರಾದರು. ಲಂಡನ್ ನಗರದಲ್ಲಿ 1920ರಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಬಾಲಚಮೂ (ಸ್ಕೌಟ್ ಜಾಂಬೂರಿ) ಸಮಾರಂಭದಲ್ಲಿ ಬೇಡನ್ ಪೊವೆಲ್ಲನನ್ನು ಪ್ರಧಾನ ಸ್ಕೌಟ್ ಎಂದು ಗೌರವಿಸಲಾಯಿತು. ಮುಂದೆ ಪೊವೆಲನಿಗೆ ಅನೇಕ ಬಗೆಯ ಗೌರವ ಪದವಿಗಳು ದೊರಕಿದವು. ಪೊವೆಲ್ ಬಾಲಚಮೂ (ಸ್ಕೌಟ್) ಸಂಸ್ಥೆಗಳ ಕಾರ್ಯಾಚರಣೆಗಳನ್ನು ಪರೀಕ್ಷಿಸಿ ಯುಕ್ತ ಸಲಹೆಗಳನ್ನು ಕೊಡುವುದಕ್ಕಾಗಿ ಪ್ರಪಂಚದ ಎಲ್ಲ ದೇಶಗಳಿಗೆ ಭೇಟಿಕೊಟ್ಟ. ಮುಪ್ಪಿನ ಕಾಲದಲ್ಲೂ ಚುರುಕಾಗಿ ಕೆಲಸ ಮಾಡುತ್ತಿದ್ದ ಪೊವೆಲ್ 80ನೆಯ ವಯಸ್ಸಿನಲ್ಲಿ 1941 ಜನವರಿ 8 ರಂದು ಕೀನ್ಯಾದ ನೀರೀ ನಗರದಲ್ಲಿ ಮರಣ ಹೊಂದಿದ.

ರಚಿಸಿದ ಕೃತಿಗಳು[ಬದಲಾಯಿಸಿ]

ದಿ ಮಟಬೀಲೀ ಕ್ಯಾಂಪೇನ್ (1896), ಸ್ಸೌಟಿಂಗ್ ಫಾರ್ ಬಾಯ್ಸ್ (1908), ಕ್ವಿಕ್ ಟ್ರೈನಿಂಗ್ ಫಾರ್‍ವಾರ್ (1914), ಮೈ ಅಡ್ವೆನ್‍ಚರ್ಸ್ ಆಸ್ ಏ ಸ್ಪೈ (1915), ದಿ ವುಲ್ಫ್ ಕಬ್ಸ್ ಹ್ಯಾಂಡ್ ಬುಕ್ (1916), ಗರ್ಲ್‍ಗೈಡಿಂಗ್ (1917), ಏಯ್ಡ್ಸ್ ಟು ಸ್ಕೌಟ್ ಮಾಸ್ಟರ್‍ಷಿಪ್ (1920), ಹ್ವಾಟ್ ಸ್ಕೌಟ್ಸ್ ಕ್ಯಾನ್ ಡೂ (1921), ರೋವರಿಂಗ್ ಟೂ ಸಕ್ಸಸ್ (1922), ಪಿಗ್ ಸ್ಟಿಕಿಂಗ್ (1922), ಸ್ಸೌಟಿಂಗ್ ಅಂಡ್ ಯೂತ್ ಮೂವ್‍ಮೆಂಟ್ಸ್ (1929), ಲೆಸನ್ಸ್ ಆಫ್ ಏ ಲೈಫ್ ಟೈಮ್ ಎಂಬ ಆತ್ಮಕಥೆ (1933), ಅಡ್ವೆನ್‍ಚರ್ಸ್ ಅಂಡ್ ಆಕ್ಸಿಡೆಂಟ್ಸ್ (1934), ಆಫ್ರಿಕನ್ ಆ್ಯಡ್‍ವೆನ್ ಚರ್ (1936), ಬಡ್ರ್ಸ್ ಅಂಡ್ ಬೀಸ್ಟ್ಸ್ ಇನ್ ಆಫ್ರಿಕ (1938), ಮೋರ್ ಸ್ಕೆಚಸ್ ಆಫ್ ಕೀನ್ಯಾ (1940) ಮುಂತಾದವು ಬೇಡನ್ ಪೊವೆಲ್ ರಚಿಸಿದ ಕೃತಿಗಳು.


ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: