ಬೆ. ಗೊ. ರಮೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಬೆ. ಗೋ. ರಮೇಶ್
ಜನನಆಗಸ್ಟ್ ೨೨, ೧೯೪೫
ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆ
ಉದ್ಯೋಗಕರ್ನಾಟಕ ವಿದ್ಯುತ್ ನಿಗಮದಲ್ಲಿ ನಿವೃತ್ತ ಇಂಜಿನಿಯರ್, ಬರಹಗಾರರು, ಗಮಕಿ

ಒಬ್ಬ ಬರಹಗಾರರು ಎಷ್ಟು ಪುಸ್ತಕ ಬರೆಯಬಹುದು. ಹತ್ತು, ಇಪ್ಪತ್ತು, ತುಂಬಾ ಹೆಚ್ಚೆಂದರೆ ನೂರು. ಆದರೆ ಕನ್ನಡದ ಪ್ರಸಿದ್ಧ ಬರಹಗಾರರಾದ ಬೆ. ಗೋ. ರಮೇಶ್ ಆಗಸ್ಟ್ ೨೨ ೧೯೪೫) ಈ ಎಲ್ಲ ಪರಿಧಿಗಳನ್ನೂ ಮೀರಿದವರು. ಅವರು ಬರೆದು ಪ್ರಕಟಪಡಿಸಿರುವ ಪ್ರಖ್ಯಾತ ಪುಸ್ತಕಗಳ ಸಂಖ್ಯೆ 600ರ ಸಮೀಪದ್ದು. ಯಂತ್ರದಿಂದ ತಂತ್ರಜ್ಞಾನದವರೆಗೆ, ಕೂದಲಿನಿಂದ ಕೋವಿಯವರೆಗೆ, ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ಅವರು ಬರೆಯದಿರುವ ವಿಷಯಗಳೇ ಇಲ್ಲ. ವೃತ್ತಿಯಿಂದ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಬೆ. ಗೋ ರಮೇಶ್, ಪ್ರವೃತ್ತಿಯಿಂದ ಸಾಹಿತಿಗಳೂ, ಗಮಕಿಗಳೂ ಆಗಿದ್ದಾರೆ. ಅವರು ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಿತರು.

ಜೀವನ[ಬದಲಾಯಿಸಿ]

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ ೨೨, ೧೯೪೫ರ ವರ್ಷದಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

ಬರಹಗಳು[ಬದಲಾಯಿಸಿ]

ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ ರಮೇಶರು ಬರೆಯದ ವಿಷಯಗಳೇ ಇಲ್ಲ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವೆನಿಸುವ ಕೃತಿಗಳ ರಚನೆಯಲ್ಲಿ ಅವರದ್ದು ಸಿದ್ಧಹಸ್ತ. ರಮೇಶರ ಮಕ್ಕಳ ಸಾಹಿತ್ಯದಲ್ಲಿ ವಿಜ್ಞಾನಿಗಳು, ಸ್ವಾತಂತ್ರ್ಯಯೋಧರು, ದೇಶಭಕ್ತರು, ಕವಿಗಳು, ಕಲಾವಿದರು, ದಾರ್ಶನಿಕರು, ಸಮಾಜ ಸುಧಾರಕರು ಮುಂತಾದವರ ಕುರಿತಾದ ಕೃತಿಗಳು ಸೇರಿವೆ. ಇದಲ್ಲದೆ ಅವರ ಕಥಾ ಸಂಕಲನಗಳು, ನಾಟಕಗಳು ಮುಂತಾದ ಬರಹಗಳು ಕೂಡಾ ಅನೇಕವಿವೆ. ಹಿಪೊಕ್ರೆಟಿಸ್, ಗ್ಯಾಲನ್, ಜಗದೀಶ ಚಂದ್ರಬೋಸ್, ಯೂಕ್ಲಿಡ್, ಮಹೇಂದ್ರಲಾಲ್ ಸರ್ಕಾರ್, ಭಾರತೀಯ ವಿಜ್ಞಾನಿಗಳು, ಪಾಶ್ಚಾತ್ಯ ವಿಜ್ಞಾನಿಗಳು, ಸರ್ದಾರ್ ವಲ್ಲಭಾಯ್ ಪಟೇಲ್, ಸರೋಜಿನಿ ನಾಯಿಡು, ಸ್ವಾತಂತ್ರ್ಯದ ಕಿಡಿಗಳು, ಮುಂತಾದ ನೂರಾರು ಮಕ್ಕಳ ಕೃತಿಗಳನ್ನು ಅವರು ಬರೆದಿದ್ದಾರೆ. ಪ್ರೌಢರಿಗಾಗಿ ಸೂಕ್ತಿಗಳು, ಸುಭಾಷಿತಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಬಂಧಗಳು, ನಿಘಂಟುಗಳು, ನಮ್ಮ ದೇವಾಲಯಗಳು, ಕರ್ನಾಟಕದ ವಾಸ್ತುಶಿಲ್ಪ, ಭಾರತದ ನದಿಗಳು, ಭೌಗೋಳಿಕದರ್ಶನ, ವಿಜ್ಞಾನ ಕೃತಿಗಳು, ಆರೋಗ್ಯ ಭಾಗ್ಯದ ಕೃತಿಗಳು, ಔಷಯ ಪುಸ್ತಿಕೆಗಳು, ವ್ಯಕ್ತಿ ಪರಿಚಯ ಕೃತಿಗಳು ಸೇರಿ ಅವರು ಬರೆದಿರುವ ಕೃತಿಗಳ ಸಂಖ್ಯೆ 500ರ ಸಮೀಪದ್ದು. ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಅವರ ಕೃತಿಗಳೂ ನೂರಾರು. ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಹಲವಾರು ಕಮ್ಮಟ, ಸಂಕಿರಣ,

ಕ್ರಿಯಾಶೀಲ ಪ್ರತಿಭೆ[ಬದಲಾಯಿಸಿ]

ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. ರಮೇಶರು ತಮ್ಮ ತಂತ್ರಜ್ಞ ವೃತ್ತಿಯಿಂದ ನಿವೃತ್ತರಾಗಿದ್ದರೂ, ತಮ್ಮ ಪ್ರವೃತ್ತಿಯ ಕ್ಷೇತ್ರವಾದ ಬರವಣಿಗೆ, ಸಾಮಾಜಿಕ ಹಾಗೂ ಸಾಂಸ್ಥಿಕ ಚಟುವಟಿಕೆಗಳಲ್ಲಿ ನಿತ್ಯ ಕ್ರಿಯಾಶೀಲರಾಗಿದ್ದು ಅವರಲ್ಲಿರುವ ಚುರುಕುತನ ಯುವಕರನ್ನೂ ನಾಚಿಸುವಂತದ್ದಾಗಿದೆ. ಬೆಂಗಳೂರಿನ ಉದಯಭಾನು ಉನ್ನತ ಅಧ್ಯಯನ ಕೆಂದ್ರದ ಕಾರ್ಯನಿರ್ವಹಣಾಧಿಕಾರಿಗಳಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಇಂದೂ ಅವರು ಅಪಾರವಾದ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಬೆ. ಗೋ. ರಮೇಶರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಎಪ್ಪತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಸುವರ್ಣ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿ, ಸಪ್ನಾ ರಾಜ್ಯೋತ್ಸವ ಪ್ರಶಸ್ತಿ, ಡಾ. ರಾಜ್ ಕುಮಾರ್ ಸದ್ಭಾವನಾ ಪುರಸ್ಕಾರ, ಕರ್ನಾಟಕ ವಿಭೂಷಣ ಪ್ರಶಸ್ತಿ, ಸರ್. ಎಂ.ವಿ ಪ್ರಶಸ್ತಿ, ನವರತ್ನ ಪ್ರಶಸ್ತಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಗೌರವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಕವಿರತ್ನ ಪ್ರಶಸ್ತಿ, ಚುಟುಕುರತ್ನ ಪ್ರಶಸ್ತಿ, ಜಯಪ್ರಕಾಶ ನಾರಾಯಣ ಗೌರವ ಪ್ರಶಸ್ತಿ ಮುಂತಾದ ಗೌರವಗಳು ಅವರಿಗೆ ಸಂದಿವೆ.