ವಿಷಯಕ್ಕೆ ಹೋಗು

ಬೆರಳ್ಗೆ ಕೊರಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬೆರಳ್ಗೆ ಕೊರಳ್' ಕಥೆ

[ಬದಲಾಯಿಸಿ]

ಕುವೆಂಪು ಅವರು ಏಕಲವ್ಯನನ್ನು ನಾಯಕನನ್ನಾಗಿ ಮಾಡಿಕೊಂಡು ಈ ನಾಟಕ ರಚಿಸಿದ್ದಾರೆ. ಮೂರು ದೃಶ್ಯಗಳಿಗೂ ಗುರು, ಕರ್ಮ, ಯಜ್ಞ ಎಂದು ಹೆಸರಿಸಿದ್ದಾರೆ. ಅರ್ಜುನನ ಶ್ರೇಷ್ಟ ಬಿಲ್ವಿದ್ಯಾ ನಿಪುಣನಾಗಬೇಕೆಂಬ ಅತಿಯಾಸೆ ಹಾಗೂ ಅಸಹನೆಯ ಫಲವಾಗಿ ಗುರು ದ್ರೋಣನಿಗೆ ದುಂಬಾಲು ಬಿದ್ದು ಏಕಲವ್ಯನ ಬೆರಳನ್ನು ಗುರುಕಾಣಿಕೆಯಾಗಿ ಪಡೆಯುವ ವಸ್ತು ಈ ಕೃತಿಯಲ್ಲಿದೆ. ತನ್ನಲ್ಲಿಗೆ ವಿದ್ಯೆ ಕಲಿಯಲು ಬಂದ ಏಕಲವ್ಯನಿಗೆ ಅರ್ಜುನನ ಮಾತ್ಸರ್ಯದ ಕಾರಣದಿಂದ ವಿದ್ಯೆಯನ್ನು ಕಲಿಸಲಾಗದೆ ಅಸಹಾಯಕರಾದ ‘ಕಾಡಾದೊಡಂ ನೂರು ಮಡಿ ಲೇಸು, ಕರುಬು ಕಿಚ್ಚುರಿವ ಆ ನಮ್ಮ ನಾಡಿಗಿಂ’ ಎಂದುಕೊಂಡ ದ್ರೋಣ ತನ್ನ ವಿಗ್ರಹವನ್ನು ಇರಿಸಿಕೊಂಡು ವಿದ್ಯೆ ಕಲಿತ ಕಾಡಿನ ಹುಡುಗನ ಹೆಬ್ಬೆರಳನ್ನು ಬಲಿಯಾಗಿ ಕೇಳಿದ. ಅದಕ್ಕೆ `ಪಡೆವುದೆಲ್ಲಂ ಕೊಡುವುದಕ್ಕಲ್ತೆ ಆರ್ಯ? ಮೇಣ್ ಪೂರ್ಣಮಂ ಕೊಡದೆ ಪಡೆದೆವೆಂತು ಪೂರ್ಣಮಂ' ಎನ್ನುತ್ತಾ `ಕೊಳ್ ದಕ್ಷಿಣೆಯನ್ ಇದನ್! ಗೆಲ್ಗೆ ಧರ್ಮಂ!ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ ನಿಲ್ಗೆ! ಮೇಣ್ ಅರ್ಜುನನ ಪೆರ್ ಬಯಕೆಯುಂ ಸಲ್ಗೆ' ಎಂದು ಏಕಲವ್ಯ್ ಕತ್ತರಿಸಿಕೊಡುತ್ತಾನೆ. ಆ ಬೆರಳ ರಕ್ತವನ್ನು ನೋಡುತ್ತಲೇ ಅದರಲ್ಲಿ ತನ್ನ ಬಿಂಬವನ್ನು ಭೀಮಹಸ್ತವೊಂದು ಕತ್ತರಿಸಿದ ಮುನ್ಸೂಚನೆ ಗಮನಿಸಿದ ದ್ರೋಣ `ಬೆರಳ್ಗೆ ಕೊರಳ್ ವತ್ಸಾ, ನಿನ್ನ ಬೆರಳ್ಗೆ ನನ್ನ ಕೊರಳ್' ಎಂದು ಹೇಳುತ್ತಾನೆ. ಕರ್ಮದ ಪರಿಯನ್ನು ಕುರಿತು ಮರಿಗೆ ಮರಿ, ಮರಿಗೆ ಮರಿ, ಬೆರಳ್ಗೆ ಕೊರಳ್ ಎಂಬ ದರ್ಶನ ದೃಷ್ಟಿಕೋನದಿಂದ ಕುವೆಂಪು ಈ ನಾಟಕವನ್ನು ರಚಿಸಿದ್ದಾರೆ.

ನಾಟಕ ಪ್ರದರ್ಶನ

[ಬದಲಾಯಿಸಿ]

ಈ ನಾಟಕವನ್ನು ಕಲಾವಿದ ಶ್ರೀಹರ್ಷ ಹಳಗನ್ನಡದ ಭಾಷಾಸ್ವರೂಪದಲ್ಲಿಯೇ ಕನ್ನಡದಲ್ಲಿ ಚಲನಚಿತ್ರ ತಯಾರಿಸಿ ತಾವೇ ಪ್ರಧಾನ ಪಾತ್ರ ಮಾಡಿದ್ದರು. ಹಿರಿಯನಟಿ ಫಂಡರಿಬಾಯಿ ಅಬ್ಬೆಯ ಪಾತ್ರದಲ್ಲಿ ನಟಿಸಿದ್ದರು. ಅಮೇರಿಕಾದ ಕನ್ನಡಿಗರಿಂದ ಹಿಡಿದು ಸಾಣೆಹಳ್ಳಿಯ ಶಿವಸಂಚಾರ ತಂಡವೂ ಸೇರಿದಂತೆ ಅನೇಕ ತಂಡಗಳು ರಂಗಪ್ರಯೋಗ ನಡೆಸಿವೆ. ಬೆಂಗಳೂರಿನ ಸೂರ್ಯ ಕಲಾವಿದರು ನೃತ್ಯರೂಪದಲ್ಲಿಯೂ ಪ್ರಯೋಗಿಸಿದ್ದಾರೆ.

ಈ ಕೃತಿಯನ್ನು ಕುವೆಂಪು ಅವರು ಬಿ.ಎಂ.ಶ್ರೀಕಂಠಯ್ಯನವರಿಗೆ ಅರ್ಪಿಸಿದ್ದಾರೆ. ಅರ್ಪಣೆಯ ಭಾಗ ಕೆಳಗಿನಂತಿದೆ.

ಶ್ರೀಯವರಿಗೆ

ಅಂದು ನಿಮ್ಮಳ್ಕರೆಯ ಪರಸಿತೆನ್ನಂ ಮೊದಲ್:
ಇಂದು ರಾಮಾಯಣಕೆ ತಿರುಗಿ ಆ ಕೊಳಲಿನ ತೊದಲ್
ಕಾವ್ಯಗೈದಿದೆ ಬೃಹದ್ ಗಾನಮಂ. “ನನ್ನೊಡನೆ ಬಾ;
ಕನ್ನಡದ ನಾಡನೆಳ್ಚರಿಸುವಾವೇಶಮಂ ತಾ.
ವಾಙ್ಮಯ ತಪೋಬಲದಿ ಜಿಹ್ವಾತಟಿಚ್ಛಕ್ತಿ ತಾಂ
ಹೃದಯ ಗಹ್ವರದಲ್ಲಿ ಚಿಜ್ಚ್ಯೋತಿಃಪ್ರದೀಪಮಂ.
ಪೊತ್ತಿಪೋಲ್ ಮಾಳ್ಪಂ, ತವಿಸಿ ತಮಶ್ಯಾಪಮಂ.”
— ಇಂತೆನಿತ್ತೆನಿತೊ ನೀಂ ಪೆಳ್ದೆನ್ನ ಕರೆದೊಡಂ
ನಾಂ ಪೊರಮಟ್ಟೆನಿಲ್ಲೆನ್ನ ಪೊಕ್ಕ ವಲ್ಮೀಕದಿಂ:
“ನಿಮ್ಮ ಧರ್ಮ ನಿಮಗೆ; ನನ್ನ ಧರ್ಮಂ ನನಗೆ.
ಪಲವು ಬಟ್ಟೆಗಳಲ್ತೆ ಭಗವದಿಚ್ಛೆಯ ಮನೆಗೆ?
— ಕೈಕೊಂಡ ರಸತಪಸ್ ಸಿದ್ಧಿಯ ಅನಂತರಮೆ
ನೋಳ್ಪೆನ್; ಅದಕಿಂ ಮುನ್ನ ಏಳ್ವುದೇಂ ತರಮೆ?”
ಎಂದೆನ್. ಅರಿತವರಲ್ತೆ ಸೊಗಸುತೆಂದಿರಿ “ನಲ್!
ಆ ಋದ್ಧಿಯ ಸಮುದ್ರದ ತರಂಗಮೊಂದೆನಲ್
ನಿಮಗಿದು ನಿವೇದನಂ ಈ “ಬೆರಳ್ ಗೆ ಕೊರಳ್!”