ಬೆರಳಚ್ಚು ಯಂತ್ರ
ಬೆರಳಚ್ಚು ಯಂತ್ರ ಎಂದರೆ ಕೀಲಿಮಣೆಯಲ್ಲಿ ಅಳವಡಿಸಿರುವ ಅಕ್ಷರಕೀಲಿಗಳನ್ನು ಬೆರಳುಗಳಿಂದ ಒತ್ತಿದಾಗ ಅನುರೂಪ ಉಕ್ಕಿನ ಮೊಳೆಗಳು ತಮ್ಮ ನೆಲೆಗಳಿಂದ ಸನ್ನೆ ತತ್ತ್ವಾನುಸಾರ ಎದ್ದು ಶಾಯಿಪಟ್ಟಿಯ ಮೇಲೆ ಬಡಿದು ಅದರ ಅಡಿಯಲ್ಲಿರುವ ಕಾಗದ ಸುರಳಿಯ ಮೇಲೆ ಮುದ್ರಣಾಕ್ಷರಸದೃಶ ಅಕ್ಷರಗಳನ್ನು ಪಡಿಮೂಡಿಸುವ ಸಲಕರಣೆ ಅಥವಾ ಯಂತ್ರ (ಟೈಪ್‍ರೈಟರ್).
ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ: ಇತಿಹಾಸ ಅಭಿವರ್ಧನೆ ಭಾರತದಲ್ಲಿ ಬೆರಳಚ್ಚು ಯಂತ್ರ ಭಾರತೀಯ ಭಾಷೆಗಳಲ್ಲಿ ಬೆರಳಚ್ಚು ಯಂತ್ರ ಕನ್ನಡದಲ್ಲಿ ಬೆರಳಚ್ಚು ಯಂತ್ರ ಸುಧಾರಣೆಗಳು ಭವಿಷ್ಯ
ಇತಿಹಾಸ
[ಬದಲಾಯಿಸಿ]ಮನುಷ್ಯರಿಗೆ ಭಾಷೆ ಒಂದು ವರ. ಇದರ ಸಹಾಯದಿಂದಲೇ ವರ್ತಮಾನಕಾಲದ ಮಾನವನಿಗೆ ಭೂತಕಾಲದ ಸಮಸ್ತ ಜ್ಞಾನ ಸಂಪತ್ತು ಮುಂತಾದವು ಲಭಿಸುವುದಾಗಿದೆ. ಮೊದಲು ಆಡು ಭಾಷೆ ರೂಪುಗೊಂಡು ಕ್ರಮೇಣ ಘನೀಭವಿಸಿ ಲಿಖಿತರೂಪ ಪಡೆದು ಮುಂದೆ ಮುದ್ರಣ ಕಲೆಗೆ ಕಾರಣವಾಯಿತು. ಮುದ್ರಣಾಲಯ ಒಂದು ಸಂಕೀರ್ಣ ಯಂತ್ರಾಗಾರ. ನೂರಾರು ಸಂಖ್ಯೆಗಳಲ್ಲಿ ಕಾಗದಗಳನ್ನೊ ಪುಸ್ತಕಗಳನ್ನೊ ಪ್ರಕಟಿಸುವುದು ಉದ್ದೇಶವಾದಾಗ ಇದರ ಉಪಯೋಗ ಸರ. ಆದರೆ ಒಂದೆರಡು ಪುಟಗಳ ಕಾಗದ ಇಲ್ಲವೇ ಒಂದು ಕಾಗದದ ಹಲವು ನಕಲುಗಳು ಬೇಕಾದಾಗ ಮುದ್ರಣ ಯಂತ್ರಕ್ಕಿಂತ ಬೇರೆಯದೆ ಆದ, ಆದರೆ ಮುದ್ರಣಾಕ್ಷರ ಗಳನ್ನು ಹೋಲುವ ಅಕ್ಷರಗಳ ಜೋಡಣೆಯಿಂದ ವಿನ್ಯಾಸ ಸಿದ್ಧಪಡಿಸುವ, ಯಂತ್ರವನ್ನು ಆಶ್ರಯಿಸಬೇಕಾಗುತ್ತದೆ. ಹೀಗೆ ಸಹಜವಾಗಿ ಮುದ್ರಣಾಕ್ಷರಗಳನ್ನು ಒತ್ತಬಲ್ಲ ಕೈಯಂತ್ರದತ್ತ ಲಕ್ಷ್ಯ ಹರಿಯಿತು.
ಬೆರಳಚ್ಚು ಯಂತ್ರದ ನಿರ್ಮಾಣದಲ್ಲಿ ಮೊದಲಿಗೆ ಉದ್ಯುಕ್ತನಾದವ ಹೆನ್ರಿಮಿಲ್, 1714. ಮುಂದೆ 1829ರಲ್ಲಿ ಡೆಟ್ರಾಯಿಟ್‍ನ ವಿಲಿಯಮ್ ಬಟ್ ಎಂಬಾತ ಟೈಪೊಗ್ರಾಫರ್ ಯಂತ್ರ ತಯಾರಿಸಿದ-ಮೊಳೆ ಬರೆಹಗಾರ ಯಂತ್ರ ಎಚಿದರ್ಥ. ತರುವಾಯದ ಹಂತಗಳಿವು: ಫ್ರಾನ್ಸ್: ಕ್ಸೇವಿಯರನಿಂದ ಕೀಲಿ ಯಂತ್ರದ ರಚನೆ (1833), ಚಾರ್ಲ್ಸ್ ತರ್ಬರನಿಂದ ಚಕ್ರಯಂತ್ರದ ನಿರ್ಮಾಣ (1843), ಜಾನ್ ಬಿ. ಫೇರ್ ಬ್ಯಾಂಕ್‍ನಿಂದ ಫೊನೆಟಿಕ್ ಯಂತ್ರದ ತಯಾರಿಕೆ (1850), ಎಡ್ಲಿ ಬಾಟ್ಲಿಮೋರ್‍ನಿಂದ ಪಿಯಾನೊ ಮಾದರಿಯಂತ್ರದ ರೂಪಣೆ (1850). 1868ರಲ್ಲಿ ಕ್ರಿಸ್ಟೊಫರ್ ಲಥಾಮ್‍ಶೋಲ್ಸ್ ಎಂಬಾತ ಹಲವು ಕೀಲಿಗಳ ಯಂತ್ರ ಸಿದ್ಧಪಡಿಸಿದಾಗ ನಿಜವಾದ ಪ್ರಗತಿ ಆಯಿತು. ಕೈಬರೆಹದ ಗತಿಗಿಂತ ಚುರುಕಾಗಿ ಯಂತ್ರಲೇಖನವಿದ್ದುದರಿಂದ ಯಂತ್ರ ನಿಜಕ್ಕೂ ಉಪಯುಕ್ತವೆನ್ನಿಸಿತು. ಶೋಲ್ಸನ ನೆರವಿಗೆ ಕಾರ್ಲೊಸ್ ಗ್ಲಿಡನ್ ಮತ್ತು ಸ್ಯಾಮ್ಯುಯಲ್ ಸೌಲಿ ಎಂಬುವರು ಮುಂಬಂದರು. ಪ್ರಾರಂಭದಲ್ಲಿ ಜನ ಇದನ್ನು ಕುರುಡರ ಯಂತ್ರವೆಂದು ಭಾವಿಸಿದ್ದರು. ಆದರೆ ಕ್ರಮೇಣ ಇದೊಂದು ಉಪಯುಕ್ತ ಹಾಗೂ ಪರಿಣಾಮಕಾರಿ ಯಂತ್ರವಾಗಿ ಮಾರ್ಪಟ್ಟಿತು. ಅಮೆರಿಕದ ಇಲಿನಾಯ್‍ನ ಫೆಲೊ ರೆಮಿಂಗ್ಟನ್ ಕಂಪೆನಿಯವರು (ಬಂದೂಕು ತಯಾರಕರು) 1874ರಲ್ಲಿ ಶೋಲ್ಸ್‍ನಿಂದ ಈ ಯಂತ್ರ ಸಮಸ್ತ ಹಕ್ಕುಗಳನ್ನು ಪಡೆದು ರೆಮಿಂಗ್ಟನ್ ಛಾಪಿನ ಬೆರಳಚ್ಚು ಯಂತ್ರಗಳನ್ನು ತಯಾರಿಸಿ ಮಾರತೊಡಗಿದರು.
ಕಾಲಕ್ರಮದಲ್ಲಿ ಆಲಿವರ್ (1892), ಅಂಡರ್‍ವುಡ್ (1893), ಎಲ್.ಸಿ.ಸ್ಮಿತ್ (1895) ಇವರು ಕೂಡ ಬೇರೆ ಬೇರೆ ತರಹದ ಯಂತ್ರಗಳನ್ನು ರಚಿಸಿದರು. ಮೊದಲ ಯಂತ್ರಗಳಲ್ಲಿ ಇಂಗ್ಲಿಷ್ ವರ್ಣಮಾಲೆಯ ದೊಡ್ಡ ಅಕ್ಷರಗಳು ಮಾತ್ರ ಇರುತ್ತಿದ್ದುವು. ಸ್ಮಿತ್ ಕಂಪೆನಿಯವರು ದೊಡ್ಡ ಮತ್ತು ಸಣ್ಣ ಅಕ್ಷರಗಳೆರಡಕ್ಕೂ ಎರಡು ಕೀಲಿ ಮಣೆಗಳನ್ನು ಜೋಡಿಸಿದರು. ಅನಂತರ ಪ್ರೀಮಿಯರ್ (1904), ರಾಯಲ್ (1906) ಯಂತ್ರಗಳು ತಯಾರಾದವು. ಬೆರಳಚ್ಚು ಮಾಡುವಾಗ ಹೆಚ್ಚು ಶಬ್ದವಾಗದಂಥ ಯಂತ್ರವನ್ನು 1908 ರಲ್ಲಿ ತಯಾರಿಸಲಾಯಿತು. 1929ರಲ್ಲಿ ಜೇಮ್ಸ್ ರ್ಯಾಂಡ್ ಎಂಬಾತ ತಯಾರಿಸಿದ ಯಂತ್ರ ಬಳಕೆಗೆ ಬಂದಿತು. ರೆಮಿಂಗ್ಟನ್ ರ್ಯಾಂಡ್ ಎಂಬ ಯಂತ್ರವೂ ಆಗಲೇ ತಯಾರಾಯಿತು. ಅನಂತರ ಕೊರೊನಾ ಕಂಪೆನಿಯವರು ಕೈಯಲ್ಲಿ ಸುಲಭವಾಗಿ ಒಯ್ಯುವಂಥ ಸಣ್ಣ (ಪೋರ್ಟಬಲ್) ಯಂತ್ರಗಳನ್ನು ತಯಾರಿಸಿದರು. ಅದೇ ರೀತಿ ಇತರ ಯಂತ್ರಕರ್ತರೂ ಈ ಮಾದರಿಯವನ್ನು ತಯಾರಿಸಿದರು.
ಹೀಗೆ ಸ್ಪರ್ಧಾತ್ಮಕವಾಗಿ ಬೇರೆ ಬೇರೆ ಕಂಪೆನಿಗಳವರು ನಾನಾ ವಿಧವಾದ ಯಂತ್ರಗಳನ್ನು ತಯಾರಿಸಿದರೂ ಎಲ್ಲರೂ ಶೋಲ್ಸ್‍ನ ಪ್ರಥಮ ಕೀಲಿ ಮಣೆಯನ್ನೇ (ಕೀಬೊರ್ಡ್) ತಮ್ಮ ಎಲ್ಲ ಯಂತ್ರಗಳಲ್ಲೂ ಅಳವಡಿಸಿದ್ದರು. ಬೆರಳಚ್ಚು ಯಂತ್ರಗಳ ವ್ಯಾಪಾರ ಬಲು ಬೇಗನೆ ಅಭಿವೃದ್ಧಿಗೆ ಬಂದಿತು. ಇಂಗ್ಲಿಷ್ ಭಾಷೆಯ ವ್ಯವಹಾರವೂ ಬಹಳ ಚೆನ್ನಾಗಿ ಬೆಳೆವಣಿಗೆ ಹೊಂದಿತು. ಬಲು ಸುಲಭವಾಗಿ ಮತ್ತು ಏಕಕಾಲದಲ್ಲಿ ಅನೇಕ ಯಂತ್ರಗಳಲ್ಲೂ ಅನೇಕ ಕಡೆಗಳಲ್ಲೂ ಮುದ್ರಿಸಬಹುದಾದಂಥ ವಿದ್ಯುತ್ ಬೆರಳಚ್ಚುಯಂತ್ರಗಳೂ ತಯಾರಾಗಿ ಪ್ರಚಾರಕ್ಕೆ ಬಂದುವು. ಹೀಗೆ ಬೆರಳಚ್ಚು ಯಂತ್ರಗಳ ಬೆಳೆವಣಿಗೆ ಆದಂತೆ ವಿದೇಶಗಳಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಲಭಿಸಿದುವು. ಭಾರತದಲ್ಲಿಯೂ ಈಗ ಬಹಳ ಜನ ಮಹಿಳೆಯರು ಬೆರಳಚ್ಚುವಿದ್ಯೆ ಕಲಿತು ಉದ್ಯೋಗಸ್ಥರಾಗುತ್ತಿದ್ದಾರೆ.
ಅಭಿವರ್ಧನೆ
[ಬದಲಾಯಿಸಿ]ಇಂಗ್ಲೆಂಡ್, ಅಮೆರಿಕಗಳಲ್ಲಿ ಈ ರೀತಿ ಬೆರಳಚ್ಚು ಯಂತ್ರಗಳು ನಾನಾ ರೂಪಗಳಲ್ಲಿ ಬೇಗ ಬೇಗನೆ ಪ್ರಯೋಗಕ್ಕೆ ಬಂದಂತೆಯೇ ಇತರ ದೇಶಗಳಲ್ಲಿಯೂ ಇಂಥವೇ ಬೆರಳಚ್ಚು ಯಂತ್ರಗಳು ತಯಾರಾದವು. ಅಲ್ಲದೆ ಪಾಶ್ಚಾತ್ಯ ದೇಶಗಳ ಎಲ್ಲ ಭಾಷೆಗಳ ಲಿಪಿಗಳೂ ಬಲುಮಟ್ಟಿಗೆ ಇಂಗ್ಲಿಷ್ ಅಕ್ಷರಗಳಂತೆಯೇ ಇರುವುದರಿಂದ ಅಲ್ಲೆಲ್ಲ ತಯಾರಾದ ಬೆರಳಚ್ಚು ಯಂತ್ರಗಳ ಕೀಲಿಮಣೆಗಳೂ ಇಂಗ್ಲಿಷ್ ಕೀಲಿ ಮಣೆಯಂತೆಯೇ ಇವೆ. ಇದರಿಂದ ಇಡೀ ಪ್ರಪಂಚದಲ್ಲಿಯೇ ಇಂಗ್ಲಿಷ್ ಮತ್ತು ಅದರಂಥ ಲಿಪಿಗಳಿಗೆ ಒಂದೇ ವಿಧದಲ್ಲಿ ಕೀಲಿ ಮಣೆಗಳಿದ್ದಂತಾಗಿ ಯಾವ ದೇಶದವರು ಯಾವ ದೇಶದ ಯಂತ್ರವನ್ನಾದರೂ ಉಪಯೋಗಿಸಲು ಅನುಕೂಲವಾಗಿದೆ. ಹಾಗೆ ಇಟಲಿಯಲ್ಲಿ ಆಲಿವೆಟ್ಟಿ, ಜರ್ಮನಿಯಲ್ಲಿ ಒಲಂಪಿಯಾ, ಆಡ್ಲರ್, ಟ್ರಯಂಫ್ ಯಂತ್ರಗಳನ್ನು ತಯಾರಿಸಿದರು. ರಷ್ಯಾ ಮತ್ತು ಜಪಾನುಗಳಲ್ಲೂ ಇಂಗ್ಲಿಷ್ ಲಿಪಿಗೆ ಯಂತ್ರಗಳು ತಯಾರಾಗಿವೆ. ವಿಶೇಷವೆಂದರೆ 1880ರಲ್ಲಿ ಜೇಮ್ಸ್ ಹ್ಯಾಮಂಡ್ ಎಂಬಾತ ಒಂದೇ ಯಂತ್ರದಲ್ಲಿ ಎಷ್ಟು ಭಾಷೆಗಳ ಅಕ್ಷರಗಳನ್ನು ಬೇಕಾದರೂ ಕ್ಷಣ ಮಾತ್ರದಲ್ಲಿ ಜೋಡಿಸಿ ಬೆರಳಚ್ಚು ಮಾಡುವಂಥ ಯಂತ್ರವನ್ನೂ ತಯಾರಿಸಿದ.
ಹೀಗೆ ಇಡೀ ಪ್ರಪಂಚದಲ್ಲಿ ಬೆರಳಚ್ಚು ಯಂತ್ರ ಅನೇಕ ರೂಪಗಳಲ್ಲಿ ಅನೇಕ ಸೌಕರ್ಯಗಳಿಂದ ಕೂಡಿ ಇನ್ನೂ ಸುಧಾರಣೆಯಾಗುತ್ತಲೇ ಇದೆ. ಬೆರಳಚ್ಚು ಯಂತ್ರಗಳು ಬಂದ ಬಳಿಕ ಪತ್ರಿಕೆ, ಪುಸ್ತಕಗಳ ಮುದ್ರಣ ಕಾಂiÀರ್iಕ್ಕೂ ಅನುಕೂಲವಾಗುವಂತೆ ಮಾನೊಟೈಪ್, ಲೈನೊಟೈಪ್, ಇಂಟರ್‍ಟೈಪ್, ಫೋಟೊಸೆಟರ್ ಮುಂತಾದವೂ ಅನೇಕ ಭಾಷೆಗಳಲ್ಲಿ ತಯಾರಾಗಿಬಂದಿದೆ.
ಭಾರತದಲ್ಲಿ ಬೆರಳಚ್ಚು ಯಂತ್ರ
[ಬದಲಾಯಿಸಿ]ಭಾರತದಲ್ಲಿ ನೂರಾರು ವರ್ಷಗಳ ಕಾಲ ಇಂಗ್ಲಿಷರು ರಾಜ್ಯವಾಳುತ್ತಿದ್ದುದರಿಂದ, ಇಂಗ್ಲಿಷ್ ವಿದ್ಯಾಭ್ಯಾಸವೇ ಎಲ್ಲ ರಾಜ್ಯಗಳಲ್ಲಿ ಪ್ರಮುಖವಾಗಿದ್ದುದರಿಂದ ಮತ್ತು ಸರ್ಕಾರಿ ಕಚೇರಿಗಳಲ್ಲಿ ವ್ಯವಹಾರಗಳು ಇಂಗ್ಲಿಷಿನಲ್ಲೇ ನಡೆಯುತ್ತಿದ್ದುದರಿಂದ ಇಂಗ್ಲಿಷ್ ಶೀಘ್ರಲಿಪಿಯೂ ಇಂಗ್ಲಿಷ್ ಬೆರಳಚ್ಚು ಯಂತ್ರಗಳೂ ಪ್ರಚಾರಕ್ಕೆ ಬಂದುವು. ಈ ಮಾಧ್ಯಮಗಳ ನಿರ್ವಹಣೆಯಲ್ಲಿ ಕಲಿಸಲು ಇಡೀ ರಾಷ್ಟ್ರದಲ್ಲಿ ವಾಣಿಜ್ಯ ಶಾಲೆಗಳು ಬಹುಸಂಖ್ಯೆಯಲ್ಲಿ ತಲೆ ಎತ್ತಿದುವು.
ದೇಶದಲ್ಲಿ ಇಂಗ್ಲಿಷ್ ಭಾಷೆಗೆ ಪ್ರಾಮುಖ್ಯ ಹೆಚ್ಚಿದಂತೆಲ್ಲ ಇಂಗ್ಲೆಂಡ್, ಅಮೆರಿಕ, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಚೆಕೊಸ್ಲಾವಾಕಿಯಾ ಮತ್ತು ರಷ್ಯಾ ದೇಶಗಳಿಂದ ಇಂಗ್ಲಿಷ್ ಬೆರಳಚ್ಚು ಯಂತ್ರಗಳು ಲಕ್ಷಗಟ್ಟಲೆ ಇಲ್ಲಿಗೆ ಆಮದಾದುವು. ಮುಂದೇ ದೇಶೀಯವಾಗಿ ಗಾಡ್ರೆಜ್ ಕಂಪನಿ ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ತಯಾರಿಸಲು ತೊಡಗಿತು. ಇತ್ತೀಚಿಗೆ ಅದು ಭಾರತೀಯ ಭಾಷೆಗಳಲ್ಲಿಯೂ ಬೆರಳಚ್ಚು ಯಂತ್ರಗಳನ್ನು ನಿರ್ಮಿಸುತ್ತಿದೆ.
ಭಾರತೀಯ ಭಾಷೆಗಳಲ್ಲಿ ಬೆರಳಚ್ಚು ಯಂತ್ರ
[ಬದಲಾಯಿಸಿ]ಭಾರತಕ್ಕೆ ಸ್ವಾತಂತ್ರ್ಯ ಲಭಿಸವುದಕ್ಕೆ ಹಲವು ವರ್ಷಗಳ ಮೊದಲೇ ಬಂಗಾಳಿ, ಗುಜರಾತಿ, ಮರಾಠಿ ಮುಂತಾದ ಕೆಲವು ಭಾಷೆಗಳಲ್ಲಿ ಬೆರಳಚ್ಚು ಯಂತ್ರಗಳು ತಯಾರಾಗಿದ್ದುವು. ಸ್ವಾತಂತ್ರ್ಯ ಬಂದು (1947) ರಾಜ್ಯಾಂಗ ರಚನೆಯಾಗುವ ಕಾಲದಲ್ಲಿ ಹಿಂದೀ ಭಾಷೆ ರಾಷ್ಟ್ರ ಭಾಷೆಯಾಗುವುದೆಂದು ಇನ್ನೂ ಕರಡು ಪ್ರತಿಯನ್ನು ಬರೆಯುತ್ತಿದ್ದಾಗಲೇ ಹಿಂದಿ ಭಾಷೆಯಾಡುವ ಅನೇಕ ವಾಣಿಜ್ಯೋದ್ಯಮಿಗಳು ನಾನಾ ವಿದೇಶೀ ಬೆರಳಚ್ಚು ಯಂತ್ರಗಳ ತಯಾರಿಕೆಗೆ ತಕ್ಕ ವ್ಯವಸ್ಥೆ ಮಾಡಿಕೊಂಡರು. ಹಿಂದೀ ಭಾಷಾತಜ್ಞರ ಮೂಲಕ ಹಿಂದೀ ಕೀಲಿಮಣೆಯನ್ನು ಸಿದ್ಧಪಡಿಸಿ ಹಿಂದೀ ರಾಷ್ಟ್ರಭಾಷೆಯೆಂದು ರಾಜ್ಯಾಂಗ ಸಭೆಯಲ್ಲಿ ಘೋಷಿಸುವುದರೊಳಗೇ ನಾನಾ ತರಹದ ಹಿಂದೀ ಬೆರಳಚ್ಚು ಯಂತ್ರಗಳನ್ನು (ಅಂದರೆ ಒಬ್ಬೊಬ್ಬ ಉದ್ಯಮಿ ಒಂದೊಂದು ಬಗೆಯ ಕೀಲಿವ್ಮಣೆ ಇರುವ ಯಂತ್ರಗಳನ್ನು) ಸಹಸ್ರ ಸಂಖ್ಯೆಯಲ್ಲಿ ತಯಾರಿಸಿ ವಾಣಿಜ್ಯ ಶಾಲೆಗಳಿಗೂ ಸರ್ಕಾರಕ್ಕೂ ಸರಬರಾಜು ಮಾಡಿದರು. ಇದರಿಂದ ಹಿಂದೀ ಭಾಷೆಯ ವ್ಯವಹಾರಕ್ಕೆ ಹೆಚ್ಚು ಅನುಕೂಲವಾಯಿತೆಂದು ಭಾವಿಸುವಂತಾದರೂ ನಿಜಕ್ಕೂ ಅದು ಹಾಗೆ ಆಗಲಿಲ್ಲ. ಕಾರಣವೇನೆಂದರೆ ಬೆರಳಚ್ಚುಗಾರಿಕೆಯ ಶಿಕ್ಷಣವನ್ನು ಒಂದು ಬಗೆಯ ಯಂತ್ರದಲ್ಲಿ ಪಡೆದವರು ಸರ್ಕಾರದಲ್ಲಾಗಲಿ ಖಾಸಗಿ ಸಂಸ್ಥೆಗಳಲ್ಲಾಗಲಿ ಇನ್ನೊಂದು ಬಗೆಯ ಯಂತ್ರದಲ್ಲಿ ಕೆಲಸಮಾಡಬೇಕಾಗಿ ಬಂದು ಎಲ್ಲರಿಗೂ ಬಲು ತ್ರಾಸವಾಯಿತು. ವಾಣಿಜ್ಯೋದ್ಯಮಿಗಳು ವ್ಯವಹಾರದ ಸೌಕರ್ಯವನ್ನು ಪರಿಗಣಿಸದೆ ಕೇವಲ ವ್ಯಾಪಾರದ ದೃಷ್ಟಿಯಿಂದ ತಯಾರಿಸಿದ ಯಂತ್ರಗಳು ಪ್ರಯೋಜನಕ್ಕೆ ಬರಲಿಲ್ಲ. ಕಡೆಗೆ ಈಗ ಕೇಂದ್ರ ಸರ್ಕಾರ ತನ್ನ ಎಲ್ಲ ಕಚೇರಿಗಳಿಗೂ ಒಂದೇ ವಿಧವಾದ ಕೀಲಿ ಮಣೆಯ ಯಂತ್ರಗಳನ್ನು ಸರಬರಾಜು ಮಾಡಿಕೊಳ್ಳುತ್ತಿದೆ. ಅದರಿಂದಾಗಿ ಈಗ ಹಿಂದೀ ವ್ಯವಹಾರಗಳು ಸುಗಮವಾಗಿ ನಡೆಯುವಂತಾಗಿದೆ.
ಈ ಮಧ್ಯೆ ಭಾರತ ಸರ್ಕಾರ ಆಚಾರ್ಯ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ಹಿಂದೀ ಭಾಷೆಯ ಲಿಪಿಗೆ ಯುಕ್ತವಾದ ಒಂದು ಬೆರಳಚ್ಚು ಕೀಲಿ ಮಣೆಯನ್ನು ರಚಿಸಿ ಸಲಹೆ ಮಾಡಲು ಸಮಿತಿಯನ್ನು ರಚಿಸಿತು. ಇದು ದೀರ್ಘಕಾಲ ಪರ್ಯಾಲೋಚಿಸಿ ಪ್ರಪಂಚದಲ್ಲಿ ಈಗ ಸಾಮಾನ್ಯವಾಗಿ ಇರುವ ಎಲ್ಲ ತರಹ ಬೆರಳಚ್ಚು ಯಂತ್ರಗಳಿಗಿಂತಲೂ ವಿಶಿಷ್ಟವಾದ ರೀತಿಯಲ್ಲಿ ಕೀಲಿ ಮಣೆಯನ್ನು ಸೂಚಿಸಿತು. ಅದರಲ್ಲಿ 19 ಪೂರ್ಣಾಕ್ಷರ ಕೀಲಿಗಳೂ 20 ಅರ್ಧಾಕ್ಷ ಚಲಿತ ಕೀಲಿಗಳೂ 6 ಅಚಲಿತ ಅಥವಾ ಸ್ಥಗಿತ (ಡೆಡ್‍ಕೀ) ಕೀಲಿಗಳೂ ಇರಬೇಕೆಂದು ಸಲಹೆ ಮಾಡಿತ್ತು. ಆದರೆ ಆ ಯಂತ್ರ ತಯಾರಾಗಿ ಬರಲಿಲ್ಲ ಎಂದು ತಿಳಿದುಬರುತ್ತದೆ.
1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದ ಬಳಿಕ ಭಾರತದ ಎಲ್ಲ ರಾಜ್ಯಗಳ ಭಾಷೆಗಳಿಗೂ ಬೆರಳಚ್ಚು ಯಂತ್ರಗಳು ಬೇಗನೆ ತಯಾರಾಗಿ ಬಂದುವು. ಅವುಗಳ ಪೈಕಿ ಕನ್ನಡದ್ದೇ ಕಡೆಯದಾಗಿದೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಇಡೀ ಭಾರತದಲ್ಲಿ ಎಲ್ಲಿಯೂ ನಡೆಯದಿದ್ದಂಥ ಲಿಪಿ ಬದಲಾವಣೆಯ ಹೋರಾಟ 30 ವರ್ಷ ಪರ್ಯಂತ ನಡೆದುದೇ ಆಗಿದೆ. ಅತ್ಯಂತ ಕಠಿನವೆಂಬಂಥ ಉರ್ದು ಲಿಪಿಗೂ ಬೆರಳಚ್ಚು ಯಂತ್ರ ಸ್ವಾತಂತ್ರ ಪೂರ್ವದಲ್ಲಿಯೇ ತಯಾರಾಗಿತ್ತು.
ಕನ್ನಡದಲ್ಲಿ ಬೆರಳಚ್ಚು ಯಂತ್ರ
[ಬದಲಾಯಿಸಿ]ಏಕೀಕರಣಪೂರ್ವದ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರು ಸಭೆಯ ಕಾರ್ಯಕಲಾಪಗಳ ವರದಿ ಮತ್ತು ಸರ್ಕಾರದ ಎಲ್ಲ ಪತ್ರ ವ್ಯವಹಾರ ನಾಡಿನ ನುಡಿಯಾದ ಕನ್ನಡದಲ್ಲಿ ಇರಬೇಕೆಂದು 1930ಕ್ಕಿಂತ ಹಿಂದಿನಿಂದಲೂ ಒತ್ತಾಯ ಮಾಡುತ್ತಿದ್ದರು. ಅದಕ್ಕೆ ಸರ್ಕಾರ ಕನ್ನಡದಲ್ಲಿ ಇಂಗ್ಲೀಷಿನಂತೆ ಶೀಘ್ರಲಿಪಿ ಮತ್ತು ಬೆರಳಚ್ಚು ಸೌಕರ್ಯ ಒದಗುವ ತನಕ ಅದು ಸಾಧ್ಯವಾಗದೆಂದು ಹೇಳುತ್ತಿತ್ತು. ಭಾಷಾವಾರು ರಾಜ್ಯಗಳು ರಚನೆಯಾದ ಬಳಿಕ ಈ ಸೌಕರ್ಯವನ್ನು ಹೇಗಾದರೂ ಒದಗಿಸಿಕೊಳ್ಳಬೇಕೆಂದು ಖುದ್ದು ಮೈಸೂರು ಸರ್ಕಾರಕ್ಕೇ ಮನವರಿಕೆಯಾಯಿತು. ಅಲ್ಲದೆ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಬೇಕಾದ ಆವಶ್ಯಕತೆಯೂ ಉಂಟಾಯಿತು.
ಕನ್ನಡ ಶೀಘ್ರಲಿಪಿ: ನೂರಾರು ವರ್ಷಗಳಿಂದಲೂ ಭಾರತದಲ್ಲಿ ಇಂಗ್ಲೀಷಿನ ಪಿಟ್‍ಮನ್ ಶೀಘ್ರಲಿಪಿ ಹೆಚ್ಚು ಪ್ರಚಾರದಲ್ಲಿದ್ದುದರಿಂದ ಕನ್ನಡ ಶೀಘ್ರಲಿಪಿಗೂ ಅದನ್ನೇ ಅನೇಕರು ಅಳವಡಿಸಿದರು. ಕೆಲವು ಸ್ವತಂತ್ರ ಶೀಘ್ರಲಿಪಿಗಳೂ ರಚನೆಯಾದುವು. ಆದರೆ ಅವುಗಳ ಪೈಕಿ ಕೆ. ಸೀತಾರಾಮರಾಯರು ರಚಿಸಿದ ಪಿಟ್‍ಮನ್ ಕನ್ನಡ ಶೀಘ್ರಲಿಪಿ ಮಾತ್ರ ಪ್ರಚಾರಕ್ಕೆ ಬಂದಿದೆ.
ಕನ್ನಡ ಬೆರಳಚ್ಚು: ಇನ್ನು ಕನ್ನಡ ಬೆರಳಚ್ಚು ಯಂತ್ರ ತಯಾರಿಕೆಯ ಬಗೆಗೆ ಮಾತ್ರ 30 ವರ್ಷಗಳ ಕಾಲ ಭಾರೀ ಹೋರಾಟಗಳು ನಡೆದುವು. ಮೊದಲು ಲಿಪಿ ಬದಲಾವಣೆ. ಇಂಗ್ಲೀಷಿನಲ್ಲಿ ಕೇವಲ 26 ಅಕ್ಷರಗಳಿ ರುವುದರಿಂದ ಅದಕ್ಕೆ ಸುಲಭವಾಗಿ ಟೈಪ್‍ರೈಟರ್ ತಯಾರಾಗಿದೆಯೆಂದೂ ಅದೇ ಕನ್ನಡದಲ್ಲಿ 52 ಅಕ್ಷರ, 16 ಕಾಗುಣಿತ, 34 ಒತ್ತಕ್ಷರ ಮತ್ತು ನೂರಾರು ಕಾಗುಣಿತ ಸಂಯೋಜನೆ ಇರುವುವಲ್ಲದೆ ಮುದ್ರಣಾಕ್ಷರಗಳು ಸಹ 250 ಇದೆ. ಆದ್ದರಿಂದ ಕನ್ನಡದಲ್ಲಿ ಬೆರಳಚ್ಚು ಯಂತ್ರದ ರಚನೆ ಸಾಧ್ಯವೇ ಇಲ್ಲ; ಆದಾಗಬೇಕಾದರೆ ಈಗಿನ ಕನ್ನಡ ಲಿಪಿಯನ್ನೇ ಬದಲಾಯಿಸಬೇಕು ಎಂಬುದಾಗಿ ಬಿ.ಎಂ.ಶ್ರೀಕಂಠಯ್ಯ, ಕುಪ್ಪುಸ್ವಾಮಿ, ದೇವುಡು ನರಸಿಂಹಶಾಸ್ತ್ರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನವರು ಮುಂತಾಗಿ ಅನೇಕ ವಿದ್ವಾಂಸರು ನಾನಾ ವಿಧವಾದ ಸಲಹೆಗಳನ್ನಿತ್ತರು. ಕೆ.ಸುಬ್ಬರಾಮಪ್ಪನವರು ಕನ್ನಡ ಮತ್ತು ತೆಲಗು ಲಿಪಿಗಳೆರಡನ್ನೂ ಸೇರಿಸುವ ಸಲಹೆ ನೀಡಿದರು.
ಭಿನ್ನಾಕ್ಷರ ಯಂತ್ರ ಕ್ರಮಗಳು: ಕನ್ನಡದಲ್ಲಿರುವ ಎಲ್ಲ ವ್ಯಂಜನಾಕ್ಷರಗಳನ್ನೂ ಬ,ಲ,ಜ,ಟ ಎಂಬಂತೆ ತಲೆಕಟ್ಟಿಲ್ಲದ ಮೂಲಾಕ್ಷರಗಳಂತೆ ಮಾತ್ರ ಇಟ್ಟುಕೊಂಡು ಅನಂತರ ಅವುಗಳಿಗೆ ತಲೆಕಟ್ಟು, ಗುಡಿಸು, ಏತ್ವಗಳನ್ನು ಸೇರಿಸುವುದು. ಇದರಿಂದ ಯಂತ್ರದಲ್ಲಿ ಎಲ್ಲ ವ್ಯಂಜನಾಕ್ಷರಗಳೂ ಅಚಲಿತಗಳಾಗುವುವು. ಅಥವಾ ತಲಕಟ್ಟು, ಗುಡಿಸು ಮತ್ತು ಏತ್ವಗಳು ಅಚಲಿತವಾಗಿ ಅವನ್ನು ಮೊದಲು ಮುದ್ರಿಸಿ ಅನಂತರ ಮೂಲ ವ್ಯಂಜನಾಕ್ಷರಗಳನ್ನು ಮುದ್ರಿಸುವುದು ಇಂಥ ಕ್ರಮಗಳನ್ನು ಕೆ. ನಾರಾಯಣಾಚಾರ್ಯ, ಮ.ನ. ಮೂರ್ತಿ. ಎಸ್. ಸುಬ್ಬರಾವ್, ಚಿಟಗುಪ್ಪಿ ಮುಂತಾಗಿ ಅನೇಕರು ಮಾದರಿ ಯಂತ್ರಗಳೊಡನೆ ರೂಪಿಸಿದರು.
ಇಕಾರಾಂತ ಕ್ರಮಗಳು: ವಿ.ಎಸ್. ಕುಡ್ವ, ಎಸ್.ಸುಬ್ಬರಾವ್ ಮತ್ತು ಎ.ನಾಗರಾಜ ಮುಂತಾದವರು ಕನ್ನಡದಲ್ಲಿರುವ ಪ್ರತಿಯೊಂದು ವ್ಯಂಜನಾಕ್ಷರವನ್ನೂ ಕಿ, ಗಿ, ಚಿ, ತಿ, ಡಿ ಹೀಗೆ ಇಕಾರಾಂತ ಮೂಲಾಕ್ಷರಗಳಾಗಿ ಇಟ್ಟು ಕೊಂಡು ಅವಕ್ಕೆ ಅನಂತರ ತಲೆಕಟ್ಟು, ಮತ್ತು ಏತ್ವಗಳನ್ನು ಸೇರಿಸುವುದು ಎಂಬಂತೆ ಮತ್ತೊಂದು ಕ್ರಮವನ್ನು ರೂಪಿಸಿದರು. ಇದು ಸಹ ಸ್ವಲ್ಪ ಹೆಚ್ಚು ಕಡಿಮೆ ಮೇಲೆ ಹೇಳಿದ ಭಿನ್ನಾಕ್ಷರ ಕ್ರಮದಂತೆಯೇ ಆಗಿತ್ತು.
ಪೂರ್ಣಾಕ್ಷರ ಕ್ರಮ: ಇದನ್ನು ದೇಶದಲ್ಲಿ ಎಲ್ಲ ಜನರೂ ಬಾಲ್ಯದಲ್ಲಿ ಅಕ್ಷರಾಭ್ಯಾಸ ಮಾಡುವಂತೆಯೇ ಕ, ಗ, ಚ, ಡ ಮುಂತಾಗಿ ಎಲ್ಲ ಆಕಾರಾಂತ ಅಕ್ಷರಗಳನ್ನೂ ಕಿ. ಗಿ, ಚಿ, ಡಿ, ಮುಂತಾಗಿ ಎಲ್ಲ ಇಕಾರಾಂತ ಅಕ್ಷರಗಳನ್ನೂ ಒಂದೊಂದೇ ಸಲಕ್ಕೆ ಸಂಪೂರ್ಣವಾಗಿ ಮುದ್ರಿಸುವಂತೆಯೂ ಎಲ್ಲ ಅಕಾರಾಂತ ಅಕ್ಷರಗಳಿಗೂ ಏತ್ವವನ್ನು ಮಾತ್ರ ಸೇರಿಸುವಂತೆಯೂ ಕೆ. ಅನಂತಸುಬ್ಬರಾಯರು ಸೂಚಿಸಿ 1932ರಿಂದಲೇ ಅನೇಕ ಮಾದರಿಗಳನ್ನು ರಚಿಸಿದರು.
ಬೆರಳಚ್ಚು ಪರಿಶೀಲನೆಗೆ ಸಮಿತಿ: ಹೀಗೆ ಒಂದು ಕನ್ನಡ ಬೆರಳಚ್ಚಿಗಾಗಿ ನಾನಾ ವಿಧಗಳಲ್ಲಿ ಪ್ರಯತ್ನಗಳು ನಡೆದು ಅದೇ ಒಂದು ಭಾರೀ ಸ್ಪರ್ಧೆ ಮತ್ತು ಹೋರಾಟವಾದಾಗ ಮೈಸೂರು ರಾಜ್ಯದ ಮೊತ್ತಮೊದಲ ಪ್ರಜಾಪ್ರತಿ ನಿಧಿ ಸರ್ಕಾರದ ಕೆ.ಸಿ. ರೆಡ್ಡಿಯವರು ಇವೆಲ್ಲವುಗಳ ಪರಿಶೀಲನೆ ಮತ್ತು ಸಲಹೆಗಾಗಿ ಆಗ ವಿಶ್ವ ಕರ್ನಾಟಕ ಪತ್ರಿಕಾ ಸಂಪಾದಕರಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮ ಅವರ ಅಧ್ಯಕ್ಷತೆಯಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಮತ್ತು ಇತರರೊಡನೆ 1950ರಲ್ಲಿ ಒಂದು ಸಮಿತಿಯನ್ನು ರಚಿಸಿದರು. ಈ ಸಮಿತಿಯ ಅನೇಕ ಸದಸ್ಯರು ಮೊದಲಿಂದಲೂ ಲಿಪಿ ಬದಲಾವಣೆಯ ಮನೋಭಾವವನ್ನೇ ಹೊಂದಿದ್ದುದರಿಂದ ಮೇಲಿನ ಎಲ್ಲ ಕ್ರಮಗಳನ್ನೂ ಪರಿಶೀಲನೆ ನಡೆಸಿದಂತೆ ಮಾಡಿ ಕಡೆಗೆ ತಮ್ಮದೇ ಆದ ಲಿಪಿ ಬದಲಾವಣೆಯ ಯಂತ್ರಕ್ರಮವನ್ನು ಸರ್ಕಾರಕ್ಕೆ ಶಿಫಾರಸು ಮಾಡಿ ಅಂಗೀಕಾರ ಪಡೆದುಕೊಂಡರು. ಅದಕ್ಕಾಗಿ ಮಾದರಿ ಯಂತ್ರವನ್ನೂ ತಯಾರಿಸಲಾಯಿತು. ಆದರೆ ಈ ಸಮಿತಿಯ ಬೆರಳಚ್ಚು ರಚನಾ ಕ್ರಮ ಪ್ರಕಟವಾದ ಕೂಡಲೆ ನಾಡಿನಾದ್ಯಂತ ಜನತೆ ಶರ್ಮ ಸಮಿತಿ ಸೂಚಿಸಿದ ಲಿಪಿ ಬದಲಾವಣೆಯನ್ನಾಗಲಿ ಇತರರು ಸೂಚಿಸಿದ ಲಿಪಿ ಬದಲಾವಣೆಯನ್ನಾಗಲಿ ಒಪ್ಪದೆ ಉಗ್ರವಾಗಿ ಪ್ರತಿಭಟಿಸಿತು. ಆ ತನಕ ನಾಡಿನಾದ್ಯಂತ ಅನೇಕ ಸಭೆ, ಸಮ್ಮೇಳನ, ಪತ್ರಿಕೆ ಮುಂತಾದವುಗಳಲ್ಲಿ ಯಶಸ್ವಿಯಾಗಿ ಪ್ರಯೋಗ ಮಾಡಲ್ಪಟ್ಟು ಜನ ಪ್ರಿಯತೆ ಗಳಿಸಿದ್ದ ಪೂರ್ಣಾಕ್ಷರ ಯಂತ್ತವನ್ನೇ ಸರ್ಕಾರ ತಯಾರು ಮಾಡಿಸಬೇಕೆಂದು ಮನವಿಗಳು ಹೇರಳವಾಗಿ ಬಂದುವು.
1956ರಲ್ಲಿ ಭಾಷಾವಾರು ರಾಜ್ಯ ರಚನೆಯಾದಾಗ ಆಗಿನ ಮೈಸೂರು ರಾಜ್ಯದ ಎಸ್.ನಿಜಲಿಂಗಪ್ಪನವರು ಈ ವಿಚಾರ ಕುರಿತು ಯಂತ್ರಕರ್ತರು, ಶರ್ಮ ಸಮಿತಿಯವರು, ಸರ್ಕಾರಿ ತಜ್ಞ ಅಧಿಕಾರಿಗಳು ಮತ್ತು ಮಂತ್ರಿ ಮುಖಂಡರ ಸಭೆ ಕರೆದು ಎಲ್ಲ ವಿಚಾರಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿ, ಚರ್ಚಿಸಿ ಕಡೆಗೆ ಅನಂತಸುಬ್ಬರಾಯರ ಪೂರ್ಣಾಕ್ಷರ ಯಂತ್ರ ಕ್ರಮವೇ ಕನ್ನಡಕ್ಕೆ ಅನುಕೂಲವಾದುದೆಂದು ಹೇಳಿ ಅದಕ್ಕೆ ಸರ್ಕಾರದ ಅಂಗೀಕಾರವಿತ್ತರು. ಇದರ ತಯಾರಿಕೆಗಾಗಿ ಒಂದು ವರ್ಷದ ಅನಂತರ ಕರಾರೂ ಆಯಿತು. ಆದರೆ ಮುಂದೆ ಬಿ.ಡಿ.ಜತ್ತಿಯವರು ರಾಜ್ಯದ ಮುಖ್ಯಮಂತ್ರಿ ಆದಾಗ ಕರಾರು ಕಾರ್ಯ ರೂಪಕ್ಕೆ ಬರದೆ ಯಂತ್ರ ತಯಾರಿಕೆಗೆ ಏರ್ಪಾಡಾಗಲಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಪ್ರತಿಭಟನೆಗಳಾದುವು. ಆಗ ಮುಖ್ಯಮಂತ್ರಿಯವರು ಕನ್ನಡದ ಹಿತ ಪ್ರಗತಿಗಾಗಿ ಈ ವಿಚಾರವನ್ನು ಪುನಃ ಪರಿಶೀಲಿಸಿ 1958ರಲ್ಲಿ ಮತ್ತೊಂದು ಕರಾರು ಮಾಡಿಕೊಂಡರು. ಆದರೂ ಇತರ ಯಂತ್ರಕರ್ತರ ಸಲುವಾಗಿ ಪುನಃ ಸರ್ಕಾರಿ ಮುದ್ರಣಾಲಯದ ನಿರ್ದೇಶಕರಾದ ಗುರುಬಸಪ್ಪನವರ ಸಮಿತಿಯ ರಚನೆ, ಆರು ಮಾದರಿ ಯಂತ್ರಗಳ ರಚನೆ ಮುಂತಾದ ಕಾರ್ಯ ಕ್ರಮಗಳು ನಡೆದ ಮೇಲೆ, 1960ರಲ್ಲಿ, ಸ್ವೀಡನ್ನಿನ ಹಾಲ್ಡಾ ಯಂತ್ರದಲ್ಲಿ ಕನ್ನಡ ಬೆರಳಚ್ಚು ಯಂತ್ರಗಳನ್ನು ತಯಾರಿಸಲು ಆಜ್ಞೆ ಮಾಡಲಾಯಿತು. 1961ರಲ್ಲಿ ಮೊತ್ತ ಮೊದಲು 100 ಕನ್ನಡ ಯಂತ್ರಗಳು ಕನ್ನಡಿಗರಿಗೆ ಲಭಿಸಿದುವು. ಇಷ್ಟರೊಳಗೆ ನಾಲ್ಕು ಸಲ ಕರಾರುಗಳಾಗಿದ್ದುವು. ಕನ್ನಡ ಲಿಪಿ ಬದಲಾವಣೆ ಮಾಡಬೇಕೆಂಬ ಪ್ರಭಾವವೇ ಇದಕ್ಕೆ ಕಾರಣ. ಅನಂತರ ಸರ್ಕಾರದ ಆಜ್ಞೆಯಂತೆ ಅನೇಕ ಸರ್ಕಾರಿ ಕಚೇರಿಗಳಲ್ಲೂ ಮೈಸೂರು ವಿಶ್ವವಿದ್ಯಾನಿಲಯದಲ್ಲೂ ಎಲ್ಲ ಇಂಗ್ಲಿಷ್ ಬೆರಳಚ್ಚುಗಾಗರಿಗೆ ಕೇವಲ ಒಂದೇ ವಾರದಲ್ಲಿ ಕನ್ನಡದಲ್ಲೂ ಬೆರಳಚ್ಚು ಮಾಡುವ ಶಿಕ್ಷಣ ಕೊಡಲಾಯಿತು. ಹೀಗೆ ಎಲ್ಲ ಕಡೆಗಳಲ್ಲೂ ವ್ಯವಹಾರಗಳು ಕನ್ನಡದಲ್ಲಿ ಸುಲಭವಾಗಿ ನಡೆಯಲು ಆರಂಭವಾದುವು.
ಮೊದಮೊದಲು ಸರ್ಕಾರವೇ ಸಾರ್ವಜನಿಕರಿಗೂ ಯಂತ್ರಗಳನ್ನು ಸುಲಭ ಬೆಲೆಯಲ್ಲಿ ಒದಗಿಸಿಕೊಟ್ಟಿತು. ರೆಮಿಂಗ್ಟನ್, ಫ್ಯಾಸಿಟ್ ಮತ್ತು ಗಾಡ್ರೆಜ್ ಕಂಪನಿಗಳೂ ಈಗ ಕನ್ನಡ ಯಂತ್ರಗಳನ್ನು ಸುಲಭವಾಗಿ ತಯಾರು ಮಾಡುತ್ತಿವೆ. ಸಹಸ್ರಾರು ಯಂತ್ರಗಳು ಸರ್ಕಾರದಲ್ಲಿಯೂ ಸಾರ್ವಜನಿಕರಲ್ಲಿಯೂ ಪ್ರಯೋಗಕ್ಕೆ ಬಂದಿದೆ. ರಾಜ್ಯದಲ್ಲಿ ನೂರಾರು ವಾಣಿಜ್ಯ ಶಾಲೆಗಳು ಈ ಬಗೆಗೆ ಶಿಕ್ಷಣ ಕೊಡುತ್ತಿವೆ. ಒಂದು ಅಂದಾಜಿನ ಪ್ರಕಾರ ಸುಮಾರು 36,000 ಜನ ಈ ತನಕ (1982) ಬೆರಳಚ್ಚು ಶಿಕ್ಷಣ ಪಡೆದಿದ್ದಾರೆ. ವಿವರ ಹೀಗಿದೆ:
ವರ್ಷ | ಪ್ರಾಥಮಿಕ | ಪ್ರೌಢ |
---|---|---|
1967 | 87 | 41 |
1968 | 153 | 69 |
1969 | 358 | 136 |
1970 | 544 | 200 |
1971 | 705 | 277 |
1972 | 1060 | 585 |
1973 | 1699 | 750 |
1974 | 2722 | 839 |
1975 | 2073 | 1393 |
1976 | 2238 | 1527 |
1977 | 3991 | 1900 |
1978 | 3409 | 2227 |
1979 | 4430 | 3135 |
1980 | 6544 | 3457 |
1981 | 6648 | |
ಒಟ್ಟು | 36661 | 16536 |
ಸರ್ಕಾರದ ಎಲ್ಲ ಕಚೇರಿಗಳು, ಭಾರತ ಸರ್ಕಾರದ ಕೆಲವು ಕಚೇರಿಗಳು, ವಿಧಾನ ಮಂಡಲ ಕಾರ್ಯಾಲಯ, ವಿಶ್ವವಿದ್ಯಾಲಯಗಳು ಮತ್ತು ಅನೇಕ ಖಾಸಗಿ ಸಂಘ ಸಂಸ್ಥೆಗಳು ಮಾತ್ರವಲ್ಲದೆ ರಷ್ಯಾ, ಅಮೆರಿಕ, ಜಪಾನ್, ಜರ್ಮನಿ, ಚೆಕೊಸ್ಲೊವಾಕಿಯಾ, ಯೂಗೋಸ್ಲಾಮಿಯಾ ಮತ್ತು ನೆದರ್ಲೆಂಡ್ಸ್ ಮುಂತಾದ ರಾಯಭಾರಿ ಕಚೇರಿಗಳ ವಾರ್ತಾ ಶಾಖೆಗಳಲ್ಲೂ ಕನ್ನಡ ಯಂತ್ರವನ್ನು ಅತ್ಯಂತ ಯಶಸ್ವಿಯಾಗಿ ಉಪಯೋಗಿಸಲಾಗುತ್ತಿದೆ. ಇದರ ಮುಂದಿನ ಹೆಜ್ಜೆಯಾಗಿ ಮಾನೊಟೈಪ್, ಲೈನೊಟೈಪ್ ಮತ್ತು ಇಂಟರ್‍ಟೈಪ್ ಯಂತ್ರಗಳೂ ಯಾವುದೇ ಲಿಪಿ ಬದಲಾವಣೆ ಇಲ್ಲದೆ ತಯಾರಾಗಿ ಬಂದಿವೆ.
ಮುಖ್ಯವಾಗಿ ಕನ್ನಡಕ್ಕಿರುವುದೇ ಕಾಗುಣಿತದ ಸಮಸ್ಯೆ. ಮಹಾಪ್ರಾಣ, ಒತ್ತಕ್ಷರಗಳದೂ ಅಷ್ಟು ಕಷ್ಟವಲ್ಲ. ಇಂಗ್ಲಿಷಿನಲ್ಲಿ ಸ್ವರಕ್ಷರಗಳೂ ವ್ಯಂಜನಾಕ್ಷರಗಳೂ ಪ್ರತ್ಯೇಕವಾಗಿರುವುವಲ್ಲದೆ ವ್ಯಂಜನಾಕ್ಷರಗಳಿಗೆ ಬೇರೊಂದು ಸ್ವರ ಚಿಹ್ನೆ ಗಳನ್ನು ಸೇರಿಸಬೇಕಾದ ಪ್ರಮೇಯವಿಲ್ಲ. ಅದೇ ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಾಕ್ಷರದ ಒಂದೇ ಸ್ಥಾನದಲ್ಲಿ ಸ್ವರ ಚಿಹ್ನೆಗಳನ್ನು ಕೂಡ ಅಳವಡಿಸಬೇಕಾಗಿರುವುದರಿಂದ ಮೇಲೆ ಹೇಳಿದಂತೆ ಲಿಪಿ ಬದಲಾವಣೆಯ ಪ್ರಯತ್ನಗಳೂ ಭಿನ್ನಾಕ್ಷರ ಕ್ರಮಗಳೂ ನಡೆದುಹೋದುವು. ಈ ದೃಷ್ಟಿಯಿಂದ ಇಂಗ್ಲಿಷಿನಲ್ಲಿ 26 ಅಕ್ಷರಗಳಿವೆಯೆಂದೂ ಕನ್ನಡದಲ್ಲಿ ನೂರಾರು ಅಕ್ಷರಗಳಿವೆಯೆಂದೂ ಅನೇಕರು ಭಾವಿಸುವಂತಾಯಿತು. ನಿಜವಾಗಿ ನೋಡಿದರೆ ಇಂಗ್ಲಿಷಿನ 26 ಅಕ್ಷರ ಗಳಲ್ಲಿ ಮಾತ್ರವೇ ಬೆರಳಚ್ಚು ತಯಾರಾಗಿಲ್ಲ. ಬರೀ ದೊಡ್ಡ ಅಕ್ಷರಗಳಿಂದಲೇ ಯಾವ ಪುಸ್ತಕವೂ ಮುದ್ರಣವಾಗುವುದಿಲ್ಲ. ಕೈಬರವಣಿಗೆಯೂ ನಡೆಯುವುದಿಲ್ಲ. ಇವುಗಳ ಜೊತೆಗೆ ಸಣ್ಣ ಅಕ್ಷರಗಳು ಬೇರೆ ಬೇಕೆಬೇಕು. ಅಲ್ಲಿಗೆ ಮಕ್ಕಳಾದಿಯಾಗಿ ಯಾರೇ ಆಗಲಿ, ಇಂಗ್ಲಿಷಿನಲ್ಲಿ ಓದಿ ಬರೆಯಬೇಕಾದರೆ ಮುದ್ರಣದ ಮತ್ತು ಬರವಣಿಗೆಯ 104 ಅಕ್ಷರಗಳನ್ನು ಕಲಿಯಲೇ ಬೇಕು. ಈ ಕಾರಣದಿಂದಲೇ ಮೊತ್ತಮೊದಲು ಇಂಗ್ಲಿಷ್ ಬೆರಳಚ್ಚು ಯಂತ್ರದಲ್ಲಿ 84 ಅಕ್ಷರಗಳಿದ್ದುವು. ಈಗ 92 ಅಕ್ಷರಗಳನ್ನು ಸೇರಿಸುವಷ್ಟು ಅದನ್ನು ವಿಸ್ತರಿಸಲಾಗಿದೆ. ಅಲ್ಲದೆ ಆ ಬೆರಳಚ್ಚು ಯಂತ್ರ ರಚಿಸುವಾಗ ಸಾವಿರಾರು ಎಂಜಿನಿಯರುಗಳು ಬಹಳವಾಗಿ ಚಿಂತನೆಮಾಡಿ ಕೇವಲ ಇಂಗ್ಲಿಷಿಗೆ ಮಾತ್ರವಲ್ಲ, ಪ್ರಪಂಚದ ಸಮಸ್ತ ಭಾಷೆಗಳಿಗೂ ಅನುಕೂಲವಾಗುವಂತೆ ಅದನ್ನು ರಚನೆ ಮಾಡಿದ್ದಾರೆ. ಆದ್ದರಿಂದಲೇ ಕನ್ನಡದಂಥ ಕಷ್ಟಕರವಾದ ಲಿಪಿಗೂ ಅದನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಇಂಗ್ಲಿಷ್ ಯಂತ್ರ ವಿಜ್ಞಾನ ಸೌಕರ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ಕನ್ನಡಕ್ಕೂ ಯಶಸ್ವಿಯಾಗಿ ಯಂತ್ರ ಸಾಧನೆ ಮಾಡಲಾಗಿದೆ. ಇದಕ್ಕಾಗಿ ಮೇಲೆ ಹೇಳಿದಂತೆ ಲಿಪಿ ಬದಲಾವಣೆಕಾರರೂ ಭಿನ್ನಾಕ್ಷರ ಕ್ರಮದವರೂ ಭಾವಿಸಿದಂತೆ ಅಕ್ಷರಗಳ ಲೆಕ್ಕಾಚಾರ ಹಾಕದೆ ಕನ್ನಡ ಬರವಣಿಗೆಯ ಮೂಲಾ ಕ್ಷರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಉಳಿದ ಹೆಚ್ಚುವರಿ ಜೋಡಣೆಗಳನ್ನು ಅನಂತರ ಸೇರಿಸುವಂತೆ ಮಾಡಲಾಗಿದೆ. ಇದರಿಂದ ಬೇಗನೆ ಬೆರಳಚ್ಚು ಮಾಡಲು ಪೂರ್ಣಾಕ್ಷರ ಕ್ರಮವೂ ಸಾಧ್ಯವಾಯಿತು. ನಮ್ಮ ನಾಡಿನ ಎಲ್ಲ ವಿದ್ವಾಂಸರೂ ಷರತ್ತು ಹಾqದಂತೆ ಸಿದ್ಧವಾಗಿರುವ ಇಂಗ್ಲಿಷ್ ಯಂತ್ರಕ್ಕೇ ಕನ್ನಡವನ್ನು ಸುಲಭವಾಗಿ ಅಳವಡಿಸಲೂ ಸಾಧ್ಯವಾಯಿತು. ಈ ಕನ್ನಡ ಬೆರಳಚ್ಚು ಕೀಲಿ ಮಣೆಯನ್ನು ಕನ್ನಡಕ್ಕೇ ವಿಶಿಷ್ಟವಾದ ರೀತಿಯಲ್ಲಿ ರಚಿಸ ಬಹುದಾಗಿದ್ದರೂ ಮುಂದಿನ ಹಲವು ಮುಖ್ಯ ಕಾರಣ ಮತ್ತು ಉದ್ದೇಶಗಳಿಂದ ಅದರಲ್ಲಿ ಅಕ್ಷರಗಳನ್ನು ಇಂಗ್ಲಿಷ್ ಕೀಲಿ ಮಣೆಯಂತೆ ಅಳವಡಿಸಲಾಗಿದೆ:
- ಕನ್ನಡ ನಾಡಿನಲ್ಲಿ ಹಿಂದೆ ವಿವರಿಸಿರುವಂತೆ ಲಿಪಿ ಬದಲಾವಣೆಯ ಕಾರಣವಾಗಿ 30 ವರ್ಷಗಳ ಕಾಲ ಕನ್ನಡದ ಪ್ರಗತಿ ಕುಂಠಿತವಾಗಿದೆ. ಇದನ್ನು ತುಂಬಿಕೊಳ್ಳುವುದು ಈಗ ಅತ್ಯಾವಶ್ಯಕ.
- ಕನ್ನಡ ನಾಡಿನಲ್ಲಿ ಸುಮಾರು 50,000ಕ್ಕೂ ಹೆಚ್ಚು ಮಂದಿ ಇಂಗ್ಲಿಷಿನಲ್ಲಿ ಬೆರಳಚ್ಚು ಕಲಿತವರಿದ್ದಾರೆ. ಇವರಲಿ ದೊಡ್ಡ ದೊಡ್ಡ ವಿದ್ಯಾವಂತರೂ ಸಾಹಿತಿಗಳೂ ಇದ್ದಾರೆ. ಇವರೆಲ್ಲರಿಗೂ ಕನ್ನಡ ಬೆರಳಚ್ಚಿನ ಸೌಲಭ್ಯ ಲಭಿಸಬೇಕು.
- ಕನ್ನಡ ಬೆರಳಚ್ಚುಗಾರರನ್ನೇ ಪ್ರತ್ಯೇಕ ಮಾಡಿದರೆ ಸರ್ಕಾರದಲ್ಲಾಗಲಿ ಖಾಸಗಿ ಸಂಘ ಸಂಸ್ಥೆಗಳಲ್ಲಾಗಲಿ ಕನ್ನಡವನ್ನು ಆಡಳಿತ ಭಾಷೆಯಾಗಿಯೂ ವ್ಯಾವಹಾರಿಕ ಭಾಷೆಯಾಗಿಯೂ ಜಾರಿಗೆ ತರುವಾಗ ಈಗ ಸೇವೆಯಲ್ಲಿರುವ ಸಹಸ್ರಾರು ಇಂಗ್ಲಿಷ್ ಬೆರಳಚ್ಚುಗಾರರನ್ನೆಲ್ಲ ತೆಗೆದುಹಾಕಿ ಅವರ ಸ್ಥಾನದಲ್ಲಿ ಒಂದೇ ಸಲಕ್ಕೆ ಕನ್ನಡ ಬೆರಳಚ್ಚುಗಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದು ಪ್ರಾಯೋಗಿಕ ಅಲ್ಲ. ಲಾಭದಾಯಕವೂ ಅಲ್ಲ.
- ಭಾರತದಲ್ಲಿ ಇಂಗ್ಲಿಷನ್ನು ಸಂಪೂರ್ಣವಾಗಿ ಕೈಬಿಡಲು ಈಗ ಸಾಧ್ಯವಿಲ್ಲ. ಚಿಕ್ಕ ಮಕ್ಕಳ ಶಾಲೆಗಳಲ್ಲೇ ಕನ್ನಡಕ್ಕಿಂತಲೂ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಆದ್ದರಿಂದ ಒಂದು ವೇಳೆ ಮುಂದೆ ಸಹ ಇಂಗ್ಲಿಷ್ ಉಳಿದರೆ ಆ ಬೆರಳಚ್ಚನ್ನು ಕನ್ನಡಿಗರು ಕಲಿಯಬೇಕಾಗಬಹುದು.
- ಭಾರತದ ಇತರ ದೇಶಗಳ ಜನರಂತೆ-ಉದಾಹರಣೆಗೆ ಇಂಗ್ಲೆಂಡ್-ಕೇವಲ ತಮ್ಮ ತಮ್ಮ ಮಾತೃ ಭಾಷೆಯೊಂದರಿಂದಲೇ ಬಾಳು ಬದುಕು ನಡೆಸುವಂತಿಲ್ಲ. ಭಾರತೀಯರು ಹಲವಾರು ಭಾಷೆಗಳನ್ನು ಕಲಿಯಲೇ ಬೇಕಾಗಿದೆ. ಅಂದ ಮೇಲೆ ಈ ಪ್ರತಿಯೊಂದು ಭಾಷೆಗೂ ಬೇರೆ ಬೇರೆ ವಿಧವಾದ ಬೆರಳಚ್ಚು ಕ್ರಮಗಳನ್ನು ಕಲಿಯುವುದು ಪ್ರಾಯೋಗಿಕವಲ್ಲ.
- ಕನ್ನಡ ಸರ್ವಭಾಷಾಮಯೀ ಸಿರಿಭೂವಲಯ ಸಿದ್ಧಾಂತದಂತೆ, ಪ್ರಪಂಚದ ಎಲ್ಲ ಭಾಷೆಗಳ ಧ್ವನಿಗಳೂ ಅಕ್ಷರಗಳೂ ಲಿಪಿಗಳೂ ಒಂದೇ ಮೂಲ ಲಕ್ಷಣವುಳ್ಳವಾಗಿರುವುದರಿಂದ ಈ ಬೆರಳಚ್ಚು ಕೀಲಿ ಮಣೆಯಲ್ಲೂ ಯಾವುದೇ ಭಾಷಾ-ಲಿಪಿ ಭೇದಭಾವ ಎಣಿಸದೆ ಎರಡೂ ಲಿಪಿಗಳಿಗೆ ಹೊಂದುವಂಥ ಉಚ್ಚಾರಣಾ ಕ್ರಮ (ಫೊನೆಟಿಕ್) ಅನುಸರಿಸಿ -ಅ, -ಕ, -ಬ, -ಪ, ಹೀಗೆ ಅಳವಡಿಸಲಾಗಿದೆ.
- ಈಗ ಸಾಮಾನ್ಯವಾಗಿ ಎಲ್ಲ ಭಾಷೆಗಳಿಗೂ ಇಂಗ್ಲಿಷ್ ಶೀಘ್ರಲಿಪಿಯನ್ನೇ ಹೊಂದಿಸಿಕೊಳ್ಳಲಾಗಿದೆ. ಅದರಂತೆ ಬೆರಳಚ್ಚಿಗೂ ಹೊಂದಿಸಿಕೊಂಡು ಕಲಿಯುವವರಿಗೆ ಸುಲಭಗೊಳಿಸಲಾಗಿದೆ.
- ಸಾಮಾನ್ಯವಾಗಿ ಪ್ರಪಂಚದಲ್ಲಿ ಪ್ರತಿಯೊಂದು ಯಂತ್ರಕ್ಕೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೀತಿ ಇವೆ. ಅದರಂತೆ ಪ್ರಪಂಚದಲ್ಲಿ ಮೊತ್ತ ಮೊದಲು ರಚನೆಯಾಗಿರುವ ಇಂಗ್ಲಿಷ್ ಬೆರಳಚ್ಚು ಯಂತ್ರ ಕ್ರಮವನ್ನೇ ಕನ್ನಡದಲ್ಲಿಯೂ ಇಟ್ಟುಕೊಳ್ಳಲಾಗಿದೆ. ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದೇ ನೀತಿ ಅನುಸರಣೆಯಲ್ಲಿದೆ. ಬೇರೆ ದೇಶದ, ಭಾಷೆಯ ಯಂತ್ರಗಳನ್ನು ಇಟ್ಟುಕೊಂಡು ನಮ್ಮತನವನ್ನು ಬೇರ್ಪಡಿಸುವುದು ಸರಿಯೂ ಅಲ್ಲ. ಸಾಧ್ಯವೂ ಇಲ್ಲ.
ಅನಂತ ಕೀಲಿ ಮಣೆಯಲ್ಲಿರುವ ಮೂಲಾಕ್ಷರಗಳು ಮತ್ತು ಇತರ ಅಕ್ಷರಗಳ ರೂಪು ರಚನೆ:
ಸ್ವರಾಕ್ಷರಗಳು ಅ ಇ ಉ ಎ ಒ ಮತ್ತು ಆ ಐ
ಅಕಾರಾಂತ ವ್ಯಂಜನಾಕ್ಷರಗಳು ಕ ಗ ಚ ಜ ಟ ಡ ತ ದ ಪ ಬ ನ
ಣ ಯ ರ ಲ ವ ಶ ಷ ಸ ಹ ಳ
ಇಕಾರಾಂತ ವ್ಯಂಜನಾಕ್ಷರಗಳು ಕಿ ಗಿ ಜಿ ಡಿ ತಿ ದಿ ಪಿ ನಿ -- ರಿ ವಿ ಶಿ ಸಿ ಹಿ ಳಿ
ಉಕಾರಾಂತ ವ್ಯಂಜನಾಕ್ಷರಗಳು ಕ ಗ ಮುಂತಾದ ಎಲ್ಲ ಅಕಾರಾಂತ ಅಕ್ಷರಗಳಿಗೂ ಕೊಂಬನ್ನು ಸೇರಿಸುವುದು; ಕು ಗು ಚು ಜು ಟು ಡು ತು ದು ಪು ಬು ನು ಣು ರು ಲು ಶು ಸು ಹು ಳು ವು ಎಂಬ ಅಕ್ಷರ ಪ್ರತ್ಯೇಕವಾಗಿ ಇವೆ.
ಆಕಾರಾಂತ ವ್ಯಂಜನಾಕ್ಷರಗಳು ಕ ಮುಂತಾದ ಎಲ್ಲ ಅಕಾರಾಂತ ಅಕ್ಷರಗಳಿಗೂ ಇಳಿ ಸೇರಿಸುವುದು: ಕಾ ಗಾ ಚಾ ಜಾ ಟಾ ಡಾ ತಾ ದಾ ಪಾ ಬಾ ರಾ ಲಾ ವಾ ಶಾ ಸಾ ಹಾ ಳಾ.
ಎಕಾರಾಂತ ವ್ಯಂಜನಾಕ್ಷರಗಳು ಕ ಗ ಮುಂತಾದ ಎಲ್ಲ ಅಕ್ಷರಗಳಿಗ್ತ್ರೂ ಏತ್ವ ಸೇರಿಸುವುದು; ಕೆ ಗೆ ಚೆ ಜೆ ಸೆ ತೆ ದೆ ಪೆ ಬೆ ನೆ ಣೆ ರೆ ಲೆ ವೆ ಶೆ ಸೆ ಹೆ ಳೆ ಇತ್ಯಾದಿ.
ಇತರ ದೀರ್ಘಾಕ್ಷರಗಳು ಕೀ ಗೀ ಚೀ ಡೀ ಇತ್ಯಾದಿ; ಕೇ ಗೇ ಚೇ ಜೇ ಇತ್ಯಾದಿ; ಕೂ ಗೂ ಚೂ ಜೂ ಇತ್ಯಾದಿ; ಕೋ ಗೋ ಜೋ ಇತ್ಯಾದಿ.
ಉಳಿದ ಅಕ್ಷರಗಳು: ` . , ಈ ಚಿಹ್ನೆಗಳನ್ನು ಸೇರಿಸಿಕೊಂಡು ರಚಿಸಬೇಕು.
ಮಹಾ ಪ್ರಾಣಾಕ್ಷರಗಳು ಪ ಫ-ಬ ಭ-ಡ ಢ-ದ ಧ-ದ ಥ-ಪ ಫ-ವ ಛ ಝ-ರ, ಠ;ಖ ಎಂಬ ಅಕ್ಷರ ಬೇರೆ ಇದೆ.
ಒತ್ತಕ್ಷರಗಳು ಕ ಗ ಮುಂತಾದ ಅಕ್ಷರಗಳ ಕೀಲಿಗಳನ್ನು ಸ್ಥಳಾಂತರಿಸುವ (ಷಿಫ್ಟ್) ಕೀಲಿ ಒತ್ತುವುದರಿಂದ ಇವು ಲಭಿಸುತ್ತವೆ, ಕ್ಕ ಗ್ಗ ಚ್ಚ ಜ್ಜ ಟ್ಟ ಡ್ಡ ತ್ತ ದ್ದ ಪ್ಪ ಬ್ಬ ಯ್ಯ ರ್ರ ಲ್ಲ ವ್ವ ಸ್ಸ ಳ್ಳ
ಮಹಾಪ್ರಾಣ ಒತ್ತಕ್ಷರಗಳು ಅಲ್ಪಪ್ರಾಣಾಕ್ಷರಗಳ ಒತ್ತಕ್ಷರಗಳಿಗೇ . , ಹೊಕ್ಕಳ ಚುಕ್ಕೆ ಕೊಡುವುದು ್ಟ ್ಫ ್ಥ
್ಛ ್ಭ - ್ಠ ಒತ್ತು ಬೇರೆ ಇದೆ.
ಖ ಮತ್ತು ಝ ಒತ್ತು, ಶ ಒತ್ತು ಮತ್ತು ಹ ಒತ್ತುಗಳಿರುವ ಶಬ್ಧಗಳು ಕನ್ನಡದಲ್ಲಿ ಕೇವಲ ಒಚಿದೆರಡು ಮಾತ್ರ ಇರುವುದರಿಂದ ಅವುಗಳಿಗೆ ಪ್ರತ್ಯೇಕ ಒತ್ತುಗಳನ್ನು ಕೊಟ್ಟಿಲ್ಲ. ಒಂದು ವೇಳೆ ಅಂಥ ಶಬ್ದಗಳನ್ನು ಬರೆಯಬೇಕಾದರೆ-ಅಸ್‍ಖಲಿತ, ವಾಗ್‍ಝರಿ, ನಿಶ್‍ಶೇಷ, ಕಲ್‍ಹಾರ ಹೀಗೆ ಬರೆಯಬೇಕು.
ಅಂಕೆಗಳು ಕನ್ನಡದ ಬೆರಳಚ್ಚು ಯಂತ್ರದಲ್ಲಿ ಕನ್ನಡದ ಅಂಕೆಗಳನ್ನು ಹಾಕ ಬೇಕಾಗಿದದರೂ ಸರ್ಕಾರದ ಆದೇಶದಂತೆ ಅಂತಾರಾಷ್ಟ್ರೀಯ ಅಂಕೆಗಳನ್ನು ಅನಿರ್ವಾಹವಾಗಿ ಹಾಕಬೇಕಾಯಿತು. ಕನ್ನಡದ ಅಂಕಗಳನ್ನೇ ಹಾಕಿದ್ದರೆ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸಲು ಅನುಕೂಲವಾಗುತ್ತಿತ್ತು. ಮುಂದೆ ಕನ್ನಡಿಗರು ಅವನ್ನೂ ಹಾಕಿಸಿ ಕೊಳ್ಳುವ ಪ್ರಯತ್ನ ಮಾಡಬಹುದಾಗಿದೆ.
ಲೇಖನ ಚಿಹ್ನೆಗಳು ಈ ಯಂತ್ರದಲ್ಲಿ ಈಗ , . , ; ` ` ? ( ) ಚಿಹ್ನೆಗಳಿವೆ.
ಅಚಲಿತ ಕೀಲಿಗಳು (ಡೆಡ್ ಕೀಸ್) ಕನ್ನಡ ಯಂತ್ರದಲ್ಲಿ ಕೇವಲ ಮೂರು ಅಚಲಿತ ಕೀಲಿಗಳಿವೆ. ಇವನ್ನು ಕನ್ನಡ ಯಂತ್ರಕ್ಕಾಗಿ ಮಾಡಿದುದೇನಲ್ಲ. ವಿದೇಶದಲ್ಲಿ ಇಂಗ್ಲಿಷ್ ಬೆರಳಚ್ಚು ಯಂತ್ರಗಳಲ್ಲೂ ಇವೆ. ಭಾರತದ ಇತರ ಭಾಷೆಗಳ ಬೆರಳಚ್ಚು ಯಂತ್ರಗಳಲ್ಲಿ 5 ರಿಂದ 12 ರ ವರೆಗೂ ಇಂಥ ಅಚಲಿತ ಕೀಲಿಗಳಿವೆ. ಕನ್ನಡಲ್ಲಿಯೇ ಅತ್ಯಂತ ಕಡಿಮೆ. ಇವನ್ನು ಒಂದು ಸ್ಥಾನದಷ್ಟು ಹಿಂದಕ್ಕೆ ಬಗ್ಗಿಸಿದೆ. ಆದ್ದರಿಂದ ಯಾವುದೇ ಅಕ್ಷರಕ್ಕೆ ಏತ್ವ, ಮಹಾ ಪ್ರಾಣ ಚಿಹ್ನೆಗಳು, ಬ ಲ ಜ ಟ ಎಂಬ ಅಕ್ಷರಗಳಿಗೆ ಇ ಕಾರವನ್ನು ಸೇರಿಸುವುದು, ಮತ್ತು ಅರ್ಧಾಕ್ಷರ ಸೂಚಿಸುವುದು, ಒತ್ತನ್ನು ಒತ್ತಿ ಷ ಷಿ ಎಂದು ಮಾಡುವುದು ಮತ್ತು `` ಎಂಬ ಉದ್ಧರಣ ಚಿಹ್ನೆಗಳನ್ನು ಸೂಚಿಸುವುದು ಈ ಕೆಲಸಗಳನ್ನು ಅಚಲಿತ ಕೀಲಿಗಳು ಸುಲಭವಾಗಿ ಮುದ್ರಿಸುತ್ತವೆ.
ಕನ್ನಡ ಲಿಪಿಗೆ ತಕ್ಕಂತೆ ಅತಿ ಮುಖ್ಯವಾದ ಅಕ್ಷರಗಳೆಲ್ಲವೂ ಪೂರ್ಣಾಕ್ಷರಗಳಲ್ಲಿರುವುದರಿಂದಲೂ ಕನ್ನಡ ಬೆರಳಚ್ಚು ಯಂತ್ರದಲ್ಲಿ ಕೇವಲ ಮೂರು ಅಚಲಿತ ಕೀಲಿಗಳಿರುವುದರಿಂದಲೂ ಈ ಯಂತ್ರ ಭಾರತದ ಇತರ ಎಲ್ಲ ಭಾಷೆಗಳ ಯಂತ್ರಗಳಿಗಿಂತಲೂ ಈ ಯಂತ್ರ ಭಾರತದ ಇತರ ಎಲ್ಲ ಭಾಷೆಗಳ ಯಂತ್ರಗಳಿಗಿಂತಲೂ ಅತಿ ಸುಲಭವೆಂದು ಪರಿಗಣಿಸಲ್ಪಟ್ಟಿದೆ. ಸರಿಯಾದ ಶಬ್ದ ಕ್ರಮದ ಲೆಕ್ಕಾಚಾರದಂತೆ ಇಂಗ್ಲಿಷಿಗಿಂತಲೂ ಕಡಿಮೆ ಸ್ಥಳದಲ್ಲಿ ಕನ್ನಡ ಮುದ್ರಣವಾಗುತ್ತದೆ.
ಪರೀಕ್ಷೆಗಳು ಇಂಗ್ಲಿಷಿನಂತೆ ಕನ್ನಡದಲ್ಲೂ ಬೆರಳಚ್ಚು ಪರೀಕ್ಷೆಗಳು ಅಕ್ಷರಗಳ ಒತ್ತುವಿಕೆಯ ಲೆಕ್ಕದಲ್ಲಿ ನಡೆಸಲ್ಪಡುತ್ತಿವೆ. ಪ್ರಾಥಮಿಕ ಪರೀಕ್ಷೆಗೆ 1875 ಒತ್ತುಗಳು, ಪ್ರೌಢ ಪರೀಕ್ಷೆಗೆ 2550 ಒತ್ತುಗಳು, ಪ್ರವೀಣ ಪರೀಕ್ಷೆಗೆ 3750 ಒತ್ತುಗಳು ಎಂದು ನಿರ್ಧರಿಸಲ್ಪಟ್ಟಿವೆ. ಈ ತನಕ (1982) ಪ್ರಾಥಮಿಕ ಪರೀಕ್ಷೆಯಲ್ಲಿ 36,611 ಜನರೂ ಪ್ರೌಢ ಪರೀಕ್ಷೆಯಲ್ಲಿ 16,304 ಜನರೂ ಪ್ರವೀಣ ಪರೀಕ್ಷೆಯಲ್ಲಿ 50 ಜನರೂ ಉತ್ತೀರ್ಣರಾಗಿದ್ದಾರೆ.
ಸುಧಾರಣೆಗಳು
[ಬದಲಾಯಿಸಿ]ಸುಮಾರು 50 ವರ್ಷಗಳ ಹಿಂದೆ ಭಾರತಕ್ಕೆ ಬಂದ ಸಹಸ್ರಾರು ಇಂಗ್ಲಿಷ್ ಬೆರಳಚ್ಚು ಯಂತ್ರಗಳಲ್ಲಿದ್ದುದು ಕೇವಲ 42 ಕೀಲಿ ಮತ್ತು 84 ಅಕ್ಷರಗಳು. ಅನಂತರ ಇವುಗಳ ಸಂಖ್ಯೆ 44 ಕೀಲಿಗಳೂ 88 ಅಕ್ಷರಗಳೂ ಆಯಿತು. ಈಗ 46 ಕೀಲಿಗಳೂ 92 ಅಕ್ಷರಗಳೂ ಇವೆ ಅಷ್ಟೇ ಅಲ್ಲ. ವಿದೇಶಗಳಲ್ಲಿ ಇಂಗ್ಲಿಷ್ ಮತ್ತು ಇತರ ಭಾಷೆಗಳ ಶಬ್ದಗಳನ್ನು ಸರಿಯಾದ ರೀತಿಯಲ್ಲಿ ಉಚ್ಚರಿಸುವುದನ್ನು ಸೂಚಿಸುವುದಕ್ಕಾಗಿ ಅಕ್ಷರಗಳ ಮೇಲೂ ಕೆಳಗೂ ಯುಕ್ತವಾದ ಚಿಹ್ನೆಗಳನ್ನು ಶ್ರಮವಿಲ್ಲದೆ ಹಾಕುವುದಕ್ಕಾಗಿ ಕಾಗದದ ಸುರುಳಿ ಮುಂದಕ್ಕೆ ಚಲಿಸದೆ ಇರುವಂಥ ಅಚಲಿತ ಕೀಲಿಗಳನ್ನು ಅಳವಡಿಸಲಾಗಿದೆ. ಅಂಥ ಯಾಂತ್ರಿಕ ಸೌಕರ್ಯವನ್ನು ಭಾರತಕ್ಕೂ ಯಂತ್ರ ತಯಾರಕರು ಒದಗಿಸಿ ಕೊಟ್ಟಿರುವುದರಿಂದ ಭಾರತೀಯ ಭಾಷೆಗಳೆಲ್ಲಕ್ಕೂ ಸುಲಭವಾಗಿ ಬೆರಳಚ್ಚು ರಚನೆ ಮಾಡಿಕೊಳ್ಳಲು ಅನುಕೂಲವಾಗಿದೆ. ಇವಿಲ್ಲವಾಗಿದ್ದರೆ ಬೆರಳಚ್ಚು ಮುದ್ರಿಸುವುದು ಬಹಳ ಕಷ್ಟಕರವಾಗುತ್ತಿತ್ತು. ಬೆರಳಚ್ಚು ಯಂತ್ರ ವಿಜ್ಞಾನದಲ್ಲಿ ಇದೊಂದು ಮಹತ್ತ್ವದ ಸುಧಾರಣೆ ಕನ್ನಡ ಯಂತ್ರದಲ್ಲಿ ಇದನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಇದಲ್ಲದೆ ಇತ್ತೀಚಿನ ಕೆಲವು ಬೇರೆ ಭಾಷೆಗಳ ಯಂತ್ರಗಳಲ್ಲಿ ಒಂದು ಸ್ಥಾನದ ಪೂರ್ಣಾಕ್ಷರಕ್ಕೆ ಒಂದು ಸಲ ಮುದ್ರಿಸುವುದೇ ಅಲ್ಲದೆ ಕೇವಲ ಒಂದು ಉದ್ದಗೆರೆ ಅಥವಾ ಚುಕ್ಕಿ ಅಥವಾ ಚಿಹ್ನೆಗಳನ್ನು ಅಕ್ಷರಗಳಿಗೆ ಅತ್ಯಂತ ಸಮೀಪದಲ್ಲಿ ಸ್ಥಳ ನಷ್ಟವಾಗದಂತೆ ಅರ್ಧಸ್ಥಳದಲ್ಲಿ ಮುದ್ರಿಸುವಂಥ ಯಾಂತ್ರಿಕ ಸೌಕರ್ಯಗಳನ್ನೂ ಒದಗಿಸಲಾಗಿದೆ. ಇದು ಕೆಲವು ಹಿಂದೀ ಬೆರಳಚ್ಚು ಯಂತ್ರಗಳಲ್ಲಿದೆ. ಆದರೆ ಅವುಗಳ ಸರಬರಾಜು ಬಲು ಕಡಿಮೆ.
ಈ ಹಿಂದೆ ಕನ್ನಡ ಬೆರಳಚ್ಚು ರಚನೆಗಾಗಿ ಎಂದು ಅನಾವಶ್ಯಕವಾಗಿಯೂ ಅಸಹಜವಾಗಿಯೂ ಅನೇಕರು ಮಾಡಬೇಕೆಂದಿದ್ದ ನಾನಾ ವಿಧವಾದ ಲಿಪಿ ಬದಲಾವಣೆಗಳನ್ನು ಬಹು ಜನರು ಉಗ್ರವಾಗಿ ವಿರೋಧಿಸಿದರೂ ಕನ್ನಡ ಲಿಪಿಯನ್ನು ಓದಿ ಬರೆಯುವುದಕ್ಕೆ ಯಾವ ತೊಂದರೆಯೂ ಆಗದಂತೆ ಇನ್ನು ಮುಂದೆ ಮಾಡಿಕೊಳ್ಳಲೇಬೇಕಾದ ಯಾವ ಸುಧಾರಣೆಯನ್ನು ಬೇಕಾದರೂ ಈ ಬೆರಳಚ್ಚು ಯಂತ್ರದಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ವಿದ್ಯುಚ್ಚಾಲಿತ ಟೆಲಿಪ್ರಿಂಟ್ ಮತ್ತು ಟೆಲೆಕ್ಸ್ ಮುಂತಾದ ಯಂತ್ರ ಸೌಕರ್ಯಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವಾಗ ಅವಕ್ಕೆ ಅನುಕೂಲವಾಗುವಂತೆಯೂ ಈ ಯಂತ್ರ ಕ್ರಮ ರೂಪಿಸಲ್ಪಟ್ಟಿದೆ. ಈ ಹಿಂದೆ ಹೇಳಿದ ಹಲವು ಲಿಪಿ ಬದಲಾವಣೆಯ ಕ್ರಮವನ್ನೂ ಇದೇ ಯಂತ್ರದಲ್ಲಿ ಮುದ್ರಿಸಿಕೊಳ್ಳಬಹುದಾಗಿದೆ.
ಭವಿಷ್ಯ
[ಬದಲಾಯಿಸಿ]ಕನ್ನಡಕ್ಕೆ ಲಿಪಿ ಬದಲಾವಣೆ ಮಾಡದಿದ್ದರೆ ಟೈಪ್‍ರೈಟರ್, ಲೈನೊಟೈಪ್ ಮತ್ತು ಮಾನೊಟೈಪ್ ಮುಂತಾದ ಯಾವುದೇ ಯಂತ್ರಗಳನ್ನು ಪಡೆಯಲು ಸಾಧ್ಯವೇ ಇಲ್ಲವೆಂದು ಅನೇಕ ಮಹನೀಯರೂ ಸರ್ಕಾರಿ ಮುದ್ರಣ ಕಲೆಯ ತಜ್ಞರೂ ಬೇಕಾದಷ್ಟು ಹೋರಾಡಿದರೂ ಕನ್ನಡಕ್ಕೆ ಈ ಬೆರಳಚ್ಚು ಯಂತ್ರ ಯಾವ ತೊಡಕೂ ಇಲ್ಲದೆ ಯಶಸ್ವಿಯಾಗಿ ಬಂದ ಕೂಡಲೆ ವಿದೇಶೀ ಯಂತ್ರಕರ್ತರು ನಮ್ಮ ನಾಡಿಗೆ ಧಾವಿಸಿದರು. ಮಾನೊಟೈಪ್, ಲೈನೊಟೈಪ್ ಯಂತ್ರ ತಯಾರಿಕೆಯಲ್ಲಿ ಅವರು ಆಸಕ್ತಿ ವಹಿಸಿದರು. ಈ ನಿಟ್ಟಿನಲ್ಲಿ ವಿಶೇಷ ಪ್ರಗತಿ ಏನೂ ಆಗಿಲ್ಲ.
ಈಗ ಕನ್ನಡ ಮಾನೊಟೈಪಿನಲ್ಲಿ 274 ಅಕ್ಷರಗಳೂ ಕನ್ನಡ ಲೈನೊಟೈಪಿನಲ್ಲಿ 253 ಅಕ್ಷರಗಳೂ ಇಂಟರ್‍ಟೈಪಿನಲ್ಲಿ 173 ಅಕ್ಷರಗಳೂ ಕನ್ನಡ ಸಾಮಾನ್ಯ ಮುದ್ರಣದಲ್ಲಿ 250 ಅಕ್ಷರಗಳೂ ಇವೆ. ಈ ಕನ್ನಡ ಬೆರಳಚ್ಚು ಕ್ರಮದಂತೆ ಅದರ ಮುಖ್ಯ ಉದ್ದೇಶ ಮತ್ತು ಮೂಲತತ್ತ್ವಗಳನ್ನು ಲೈನೊ ಮಾನೊ ಯಂತ್ರಗಳಿಗೂ ಅಳವಡಿಸಿಕೊಂಡಿದ್ದರೆ ಕೇವಲ 120 ಅಕ್ಷರಗಳಲ್ಲೇ ಅವನ್ನು ಸುಧಾರಿಸಿಕೊಳ್ಳ ಬಹುದಾಗಿತ್ತು. ಮತ್ತು ಒಂದೇ ಯಂತ್ರದಲ್ಲಿ ಎರಡು ವಿಧವಾದ ಅಕ್ಷರಗಳನ್ನೂ ಅಳವಡಿಸಿಕೊಳ್ಳಬಹುದಾಗಿತ್ತು.