ಬೆಯಾರ್ಡ್ ಟೇಲರ್
ಬೆಯಾರ್ಡ್ ಟೇಲರ್ (೧೮೨೫-೧೮೭೮). ಅಮೆರಿಕದ ಸಂಯುಕ್ತಸಂಸ್ಥಾನದ ಒಬ್ಬ ಲೇಖಕ; ಮುಖ್ಯವಾಗಿ ತನ್ನ ಪ್ರವಾಸ ಕಥನಗಳಿಂದ ಮತ್ತು ಗಯಟೆಯ ಫೌಸ್ಟ್ ನಾಟಕದ ಅನುವಾದದಿಂದ ಖ್ಯಾತನಾದವ.
ಬದುಕು ಮತ್ತು ಬರಹ
[ಬದಲಾಯಿಸಿ]ಹುಟ್ಟಿದ್ದು ಚೆಸ್ಟರ್ ಕೌಂಟಿಯಲ್ಲಿ. ಪಶ್ಚಿಮ ಚೆಸ್ಟರ್‍ನ ಬೊಲ್‍ಮರ್ ಮತ್ತು ಯೂನಿಯನ್‍ವಿಲ್ ಅಕಾಡೆಮಿಗಳಲ್ಲಿ ಓದಿದ. ಹದಿನೇಳನೆಯ ವಯಸ್ಸಿಗೆ ಮುದ್ರಣಾಲಯವೊಂದರಲ್ಲಿ ಕೆಲಸಕ್ಕೆ ಸೇರಿದ.
೧೮೪೪ ರಲ್ಲಿ ಈತನ ಮೊಟ್ಟಮೊದಲ ಪುಸ್ತಕ, ಒಂದು ಕವನ ಸಂಕಲನ, ಕ್ಸೈಮೆನ ಪ್ರಕಾಶಗೊಂಡಿತು. ಸಾಟರ್‍ಡೆ ಈವಿನಿಂಗ್ ಪೋಸ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಜೆಟ್ ಸಂಸ್ಥೆಗಳೊಂದಿಗೆ, ತನ್ನ ಪ್ರವಾಸ ಕಥನದ ಪ್ರಕಟಣೆಯ ಹಕ್ಕನ್ನು ಕೊಡುವುದಾಗಿ ಒಂದು ಒಪ್ಪಂದ ಮಾಡಿಕೊಂಡು, ವಿದೇಶ ಪ್ರಯಾಣಕ್ಕೋಸ್ಕರ ಹಣ ಒದಗಿಸಿಕೊಂಡ. ವ್ಯೂಸ್ ಅಫುಟ್ (೧೮೪೬) ಎಂಬ ಜನಪ್ರಿಯ ಪುಸ್ತಕದಲ್ಲಿ ಈತನ ಯೂರೋಪು ಪ್ರವಾಸದ ಚಿತ್ರಗಳಿವೆ. ೧೮೪೭ ರಲ್ಲಿ ನ್ಯೂಯಾರ್ಕ್ ಪಟ್ಟಣದಲ್ಲಿ ನೆಲಸಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ. ಕ್ಯಾಲಿಫೋರ್ನಿಯದಲ್ಲಿ ಅಂದಿಗೆ ಬಂಗಾರಕ್ಕಾಗಿ ಜನ ನಡೆಸಿದ ಮೇಲಾಟದ ವರ್ಣನೆ ಎಲ್‍ಡೂರ್ಯಾಡೊ (೧೮೫೦) ಎಂಬ ಗ್ರಂಥದಲ್ಲಿದೆ. ಅನಂತರ ಅತಿ ದೂರದ ದೇಶಗಳಿಗೆ-ಪೂರ್ವದೇಶಗಳು, ಆಫ್ರಿಕ, ರಷ್ಯ ಮತ್ತಿತರ ದೇಶಗಳಿಗೆ-ಪ್ರವಾಸ ಹೋಗಿ ಬಂದು ಆಧುನಿಕ ಮಾರ್ಕೊಪೋಲೋ ಎಂದು ಹೆಸರುವಾಸಿಯಾದ. 1862 ರಲ್ಲಿ ಸೇಂಟ್ ಪೀಟರ್ಸ್ ಬರ್ಗ್‍ಗೆ ಸಂಯುಕ್ತಸಂಸ್ಥಾನದ ಪ್ರತಿನಿಧಿ ಮಂಡಲಿಯ ಕಾರ್ಯದರ್ಶಿಯಾದ. ೧೮೭೮ ರಲ್ಲಿ, ಮರಣ ಹೊಂದುವ ಕೆಲವು ದಿನಗಳ ಮೊದಲು. ಜರ್ಮನಿಗೆ ಸಂಯುಕ್ತಸಂಸ್ಥಾನದ ರಾಯಾಭಾರಿಯಾಗಿ ಹೋದ. ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ಈತ ಬರೆದ ಕೆಲವು ಗ್ರಂಥಗಳಿವು : ದಿ ಪೊಯೆಟ್ಸ್ ಜರ್ನಲ್ (೧೮೬೨), ಹನ್ನಾ ತರ್ಸ್‍ಟನ್ (೧೮೬೩), ಜಾನ್ ಗಾಡ್ ಫ್ರೇಸ್ ಫಾರ್ಚೂನ್ಸ್ (೧೮೬೪), ದಿ ಸ್ಟೋರಿ ಆಫ್ ಕೆನೆಟ್. ಇವು ಮೂರೂ ಕಾದಂಬರಿಗಳು. ಇವನ ಶ್ರೇಷ್ಠ ಕೃತಿಯಾದ ಫೌಸ್ಟ್ ನಾಟಕದ ಅನುವಾದ ೧೮೭೦-೭೧ರಲ್ಲಿ ಪೂರ್ಣಗೊಂಡಿತು. ಈತ ಕೆಲವು ನಾಟಕಗಳನ್ನೂ ಬರೆದಿದ್ದಾನೆ.