ವಿಷಯಕ್ಕೆ ಹೋಗು

ಬೆಡಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಡಗು ಕರ್ನಾಟಕದ ಒಂದು ವಿಶಿಷ್ಟ ಜನಪದ ಸಾಹಿತ್ಯ ಪ್ರಕಾರ. ಈ ರೂಪವನ್ನು ಉತ್ತರ ಕರ್ನಾಟಕದಲ್ಲಿ ಒಡಪು ಎಂಬುದಾಗಿ ಕರೆಯುತ್ತಾರೆ. ಜನಪದರಲ್ಲಿ ಕಲಾವಂತಿಕೆಯಿಂದ ಸೃಷ್ಟಿಗೊಂಡ ಈ ಸಾಹಿತ್ಯ ಗಾದೆಯಂತೆ ಲೋಕಾನುಭವವನ್ನು ಒಳಗೊಂಡಿರದೆ, ಒಗಟಿನಂತೆ ಗೋಪ್ಯವಾಗಿರದೆ, ಜನಪದರ ಬದುಕಿನ ನೋವು-ನಲಿವುಗಳ ಆಳ ಅನುಭವವನ್ನು ಸ್ವಾರಸ್ಯವಾಗಿ ಪ್ರಾಸ, ಲಯ ಮತ್ತು ನೈಜತೆಯ ಮಾತಿನ ಮೋಡಿಯಲ್ಲಿ, ಚಮತ್ಕಾರ ರೀತಿಯಲ್ಲಿ ಅಭಿವ್ಯಕ್ತಗೊಳಿಸಿರುವ ಚುಟಕ ಸಾಹಿತ್ಯ ಎಂದು ಹೇಳಬಹುದು. ಬೆಡಗು ಎಂಬ ಪದಕ್ಕೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ವಿಶಿಷ್ಟ ಅರ್ಥವಿದೆ. ಈ ಪದದ ಉಲ್ಲೇಖವನ್ನು ಅನೇಕ ಲಕ್ಷಣ ಗ್ರಂಥಗಳಲ್ಲಿ ಮತ್ತು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ಬೆಡಗಿಗೆ ಸುಂದರವಾದುದು, ಮನೋಹರವಾದುದು ಎಂಬ ಅರ್ಥವಿರುವಂತೆಯೇ ಗಂಭೀರವಾದುದು, ನಿಗೂಢವಾದುದು ಎಂಬ ಅರ್ಥವೂ ಇದೆ. ತಾತ್ತ್ವಿಕ ಚಿಂತನೆಯನ್ನು ಹುರಿಗಟ್ಟಿ ಹೇಳು ಅನುಭಾವಿಗಳು ಈ ಪ್ರಕಾರವನ್ನು ಸಶಕ್ತವಾಗಿ ಬಳಸಿಕೊಂಡರು. ಅಲ್ಲಮಪ್ರಭು, ಚನ್ನಬಸವಣ್ಣ ಮುಂತಾದವರು ಅನೇಕ ಬೆಡಗಿನ ವಚನಗಳನ್ನು ಬರೆದಿದ್ದಾರೆ. ಜನಪದದಲ್ಲಿ ಬೆಡಗು ಎಂದಾಗ ಇಂಥ ಗಂಭೀರತೆಗಿಂತ ಹೆಚ್ಚಾಗಿ ಚತುರ ನುಡಿ, ಚಮತ್ಕಾರದ ಮಾತು ಎಂಬ ಅರ್ಥವೇ ಬಹಳ ಮುಖ್ಯವಾಗುತ್ತದೆ.

ಮದುವೆಯಲ್ಲಿ ಗರತಿಯೊಬ್ಬಳು ವಧುವರರಿಗೆ ಆರತಿ ಮಾಡಿ ಕೆಳಗೆ ಇಡುವಾಗ ಸುತ್ತನೆರೆದವರು ಆಕೆಯ ಗಂಡನ ಹೆಸರು ಕೇಳಲು ಮಣೆಯನ್ನು ತೆಗೆಯುತ್ತಾರೆ; ಅಥವಾ ಸೆರಗು ಹಿಡಿಯುತ್ತಾರೆ. ಅವಳು ಬರಿಹೆಸರು ಹೇಳಿದರೆ ಸಾಲದು ಬೆಡಗಿನ ಮೇಲೆ ಹೇಳು ಎಂದು ಗೋಗರೆಯುತ್ತಾರೆ. ಹೆಸರು ಹೇಳುವ ಮುಂಚೆ ವ್ಯಕ್ತಿಯ ಬಗ್ಗೆ ವಿಶೇಷಣಗಳನ್ನು ಸೇರಿಸಿ ವರ್ಣನಾತ್ಮಕವಾಗಿ ತಮ್ಮ ಅನುಭವಗಳನ್ನು ಬೆಡಗಿನಲ್ಲಿ ಹೇಳಿ ಅನಂತರ ಹೆಸರನ್ನು ಹೇಳುತ್ತಾರೆ. ಮುಖ್ಯವಾಗಿ ಮದುವೆಯಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವಲ್ಲಿ, ಹೆಣ್ಣು ಮೈನೆರದ ಸಂದರ್ಭಗಳಲ್ಲಿ ಹೆಸರು ಕೇಳುವುದು, ಹೇಳುವುದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಂಡುಬಂದರೆ, ಉತ್ತರ ಕರ್ನಾಟಕದಲ್ಲಿ ಇಂಥ ಮಂಗಲ ಪ್ರಸಂಗಗಳಲ್ಲಿಯೇ ಅಲ್ಲದೆ ಕೆಲವು ಹಬ್ಬಗಳಲ್ಲಿಯೂ ಸಂಪ್ರದಾಯ ರೂಪದಲ್ಲಿ ಬೆಡಗಿನಲ್ಲಿ ಹೆಸರು ಹೇಳುವುದುಂಟು. ಅನುಭವಿಗಳಾದ ವಧೂವರರು ಹೇಳುವ ಬೆಡಗುಗಳು ಅನನುಭವಿಗಳು ಹೇಳುವುದಕ್ಕಿಂತ ಭಿನ್ನವಾಗಿರುತ್ತವೆ.

ವರ್ಗಗಳು

[ಬದಲಾಯಿಸಿ]

ಬೆಡಗು ಹೇಳುವ ಸಂಪ್ರದಾಯವನ್ನು ಪ್ರಮುಖವಾಗಿ ಮೂರು ವರ್ಗಗಳಲ್ಲಿ ಕಾಣುತ್ತೇವೆ. ಈ ಮೂರು ವರ್ಗಗಳಲ್ಲಿ ಆಯಾ ಸಂದರ್ಭಕ್ಕೆ ಮತ್ತು ಅನುಭವಕ್ಕೆ ತಕ್ಕ ಹಾಗೆ ಸಾಹಿತ್ಯಬಳಕೆಯಾಗುತ್ತದೆ. ಶೃಂಗಾರ, ಹಾಸ್ಯ, ಅಣಕ, ವಿಡಂಬನೆಯಿಂದ ಕೂಡಿರುವ ಅನೇಕ ಬಗೆಯ ಬೆಡಗುಗಳಿವೆ.

ಹೆಂಗಸರ ಬೆಡಗು: ಈ ಗುಂಪಿನಲ್ಲಿ ಬೆಡಗು ಹೇಳುವವರು ಮುತ್ತೈದೆಯರು ಮಾತ್ರ.. ಕುಟುಂಬ ಜೀವನದಲ್ಲಿ ಕಂಡುಂಡದ್ದನ್ನು ಭಾವಗೀತೆಯಂತೆ ಹಾಡಿಕೊಂಡ ಸೊಗಸಾದ ಸಾಹಿತ್ಯರೂಪವೊಂದು ಹೀಗಿದೆ: ವನ್ನನಾರಿ ಮನ ಶೃಂಗಾರಿ| ಅಂಗಾರುಳ್ಳ ಬಂಗಾರಗೆಜ್ಜೆ| ಸಾಲು ಮುತ್ತೈದೆಯರು| ಸೆರಗು ಹಿಡಿದು ಕೇಳ್ವಾಗ| ನಾನೇನು ಹೇಳಲಿ| ನವ್ಮ್ಮರಾಯರ ಹೆಸರು| ಕಣ್ಣಾಗಿರುವರು ಕಣ್ಣವಾರಗ್ಯಾಗಿರುವರು| ದಸರಿಕಟ್ಟೆ ಮೇಲೆ ಕುತ್ಗಂಡು| ಹಸರು ವಿಳ್ಯೇವು ಹಂಚ್ತಾರೆ. ಈ ಬೆಡಗಿನಲ್ಲಿ ಗರತಿಯೊಬ್ಬಳು ತನ್ನ ಗಂಡನ ಬಗ್ಗೆ ಇರುವ ಒಲವು, ಗೌರವ ಹಾಗೂ ಸಮಾಜದಲ್ಲಿ ಆತನಿಗಿರುವ ಸ್ಥಾನಮಾನವೇನು ಎಂಬುದನ್ನು ಸಾಹಿತ್ಯಕವಾಗಿ ಸುಂದರವಾಗಿ ಧ್ವನಿಸಿದ್ದಾಳೆ.

ಗಂಡಸರ ಬೆಡಗು: ಗುಂಗುರ ಕೂದ್ಲಿನೋಳು| ಮಂಗ್ನ ಬುದ್ಧಿಯೋಳು| ಅಂಗ್ಳದಾಗಳ ಕಸ| ಬಂಗಾರ್ದಂಗೆ ಹೊಡಿತಾಳೆ| ಅಕ್ಕೇಗಳ ಸಗಣಿ| ಗೋಡೆ ಮ್ಯಾಗಳ ತಗಣಿ| ತಿಕ್ಕಿ ನೋಡಂದ್ರೆ| ನೆಕ್ಕಿ ನೋಡ್ತಾಳೆ. ಈ ಬೆಡಗುಗಳಲ್ಲಿ ಹೆಚ್ಚಾಗಿ ಕಂಡುಬರುವುದು ಪ್ರಾಸ ಮತ್ತು ಹಾಸ್ಯ.

ವಧುವರರ ಬೆಡಗು: ಕೆರೆಯಾಗಿ ಸುರ ಹೊನ್ನೆಮರ| ಸರ್ವರು ಸೆರಗಿಡಿದು ಕೇಳ್ವಾಗ| ನಾನೇನು ಹೇಳಲಿ ನಮ್ಮವರ ಹೆಸರು| ನಮ್ಮತ್ತೆ ಅಡುದಾರೆ ಮುತ್ತಿನಂತ ಪುತ್ರನ ಎಂದು ವಧು ಬೆಡಗುನುಡಿದರೆ, ಸಂಪಿಗೆ ಹೂವು ಮುಡಕಂಡು| ಕೆಂಪು ಬಣ್ಣ ಆಕ್ಕಂಡು| ಮಿಂಚಿನಂಗೆ ಕುಂತವಳೆ ಎಂದು ವರ ನುಡಿಯುತ್ತಾನೆ. ಇಂಥ ಬೆಡಗಿನಲ್ಲಿ ಹೆಸರನ್ನು ಬೆಡಗಿನ ಮೇಲೆ ಹೇಳು ಎಂದು ಒತ್ತಾಯಿಸಿದಾಗ ಆ ಕ್ಷಣಕ್ಕೆ ಏನಾದರೂ ಹೇಳಿ ಜವಾಬ್ದಾರಿಯನ್ನು ಕಳೆದು ಕೊಳ್ಳುವ ಅಂಶ ಒಳಗೊಂಡಿರುವುದು ಕಂಡುಬರುತ್ತದೆ. ಸಂಚಾರಿ ಸ್ವಭಾವದ ಈ ಪ್ರಕಾರ ಊರಿಂದ ಊರಿಗೆ ಕಾಲದಿಂದ ಕಾಲಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ನಡೆದಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬೆಡಗು&oldid=955340" ಇಂದ ಪಡೆಯಲ್ಪಟ್ಟಿದೆ