ಬುಲ್ಲೇಶಾಹ್
ಬುಲ್ಲೇಶಾಹ್ - (1680-1752): ಪಂಜಾಬಿನ ಪ್ರಸಿದ್ಧ ಸೂಫಿಸಂತ ಹಾಗೂ ಕವಿ.
ಬದುಕು[ಬದಲಾಯಿಸಿ]
ಲಾಹೋರ್ ಬಳಿಯ ಪಂಡೋಲ್ ಎಂಬ ಗ್ರಾಮ ಈತನ ಜನ್ಮಸ್ಥಳ. ತಂದೆಯ ಹೆಸರು ಮಹಮ್ಮದ್ ದರನೇಶ್. ಚಿಕ್ಕಂದಿನಲ್ಲಿ ಮನೆಯ ವಾತಾವರಣ ಭಕ್ತಿ ಹಾಗೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು. ಆಗಲಿಂದಲೇ ಶಾಹನಿಗೆ ಭಕ್ತಿಯ ಸವಿ ಹತ್ತಿ ಲೌಕಿಕ ವಿದ್ಯೆಗಳಿಂದ ದೂರಸರಿದು ನಿಂತ. ಲಾಹೋರಿಲ್ಲಿ ಈತನಿಗೆ ಖಾದರೀ ಪಂಥದ ಪ್ರವರ್ತಕ ಶಾಹ್ ಇನಾಯತ್ ಖಾದರಿ ಎಂಬ ಗುರುವಿನ ಸಂಪರ್ಕ ಉಂಟಾಗಿ ಖಾದರೀ ಪಂಥದ ದೀಕ್ಷೆ ದೊರೆಯಿತು. ಆನಂತರ ಈತ ಕುಸೂರ್ ಎಂಬಲ್ಲಿಗೆ ಇರಲು ಹೋದ. ಅಲ್ಲಿದ್ದಾಗ ಗುರುವಿನೊಂದಿಗೆ ಅನೇಕ ವಿಚಾರಗಳಲ್ಲಿ ಮತ ಭೇದ ಉಂಟಾದ್ದರಿಂದ ಗುರು ಇವನನ್ನು ತ್ಯಜಿಸಿದ. ಈ ಘಟನೆ ಬುಲ್ಲೇಶಾಹನ ಮೇಲೆ ವಿಶೇಷ ಪರಿಣಾಮ ಉಂಟುಮಾಡಿತು. ಗುರುವಿರಹದ ವೇದನೆ ತಡೆಯಲು ಸಾಧ್ಯವಾಗದೆ, ಅದನ್ನು ಕಾವ್ಯವಾಗಿ ಬರೆದು ಪ್ರಕಟಿಸಿದ. ಆ ಕಾವ್ಯದ ಭಾವಸೌಂದರ್ಯ ದೂರಸರಿದ ಗುರುವಿನ ಮನಸ್ಸನ್ನು ಸೆರೆಹಿಡಿದು ಶಿಷ್ಯನ ಮೇಲೆ ಪ್ರೇಮವೃಷ್ಟಿ ಕರೆಯುವಂತೆ ಮಾಡಿತು. ಶಾಹ್ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಮರಣಹೊಂದಿದ. ಕುಸೂರಿನಲ್ಲಿ ಈತನ ಸಮಾಧಿ ಇದೆ. ಪ್ರತಿ ವರ್ಷ ಇಲ್ಲಿ ಶಾಹನ ಜನ್ಮೋತ್ಸವ ನಡೆಯುತ್ತದೆ.
ಸೂಫಿಕವಿಯಾಗಿ, ಸಮಾಜ ಸುಧಾರಕನಾಗಿ[ಬದಲಾಯಿಸಿ]
ಪಂಜಾಬೀ ಸಾಹಿತ್ಯದಲ್ಲಿ ಬುಲ್ಲೇಶಾಹ್, ಶ್ರೇಷ್ಟ ಸೂಫಿಕವಿಯಾಗಿಯೂ ಸಮಾಜ ಸುಧಾರಕನಾಗಿಯೂ ಗೌರವಕ್ಕೆ ಪಾತ್ರನಾಗಿದ್ದಾನೆ. ಈತ ದೋಡೇ (ದ್ವಿಪದಿ), ಕಾಫೀ (ಪ್ರಾಸವಿಶೇಷಗಳು), ಸೀಂಹರ್ಫೀ, ಅಠವಾರಾ, ಬಾರಹಮಾಸಾ ಇತ್ಯಾದಿ ನಾನಾ ಬಗೆಯ ಗೀತರಚನೆಗಳನ್ನು ಮಾಡಿದ್ದಾನೆ. ಸಮಾಜದ ಲೋಪದೋಷಗಳ ಮೇಲೆ ಈತ ಚಾಟಿ ಬೀಸಿದ್ದಾನೆ. ತನ್ನ ಮೇಲೆ ಹಲ್ಲೆಮಾಡಿದ ಮುಲ್ಲಾ ಮೌಲ್ವಿಗಳಿಗೆ ಶಾಂತಚಿತ್ತನಾಗಿಯೇ ನಾಲಿಗೆಯ ಮೇಲೆ ನಿಂತ ಸುವಿಚಾರವನ್ನು ನಿಲ್ಲಿಸಕ್ಕಾಗದು; ಕಣ್ಣಿನಿಂದ ಕಂಡದ್ದನ್ನು ಸುಳ್ಳು ಹೇಳಲಿಕ್ಕಾಗದು; ಸತ್ಯ ಹೇಳಿದರೆ ಬೆಂಕಿ ಹತ್ತುತ್ತದೆ. ಮನಸ್ಸು ಈ ಎರಡರಿಂದ ಗಾಬರಿಗೊಂಡಿದೆ. ಆದರೆ ಗಾಬರಿಯಾಗಿ ಕುದಿಯುತ್ತದೆ. ಕುದ್ದು ಕುದ್ದು ಹೇಳುತ್ತದೆ, ನಾಲಗೆಯ ಮೇಲೆ ನಿಂತ ಸುವಿಚಾರವನ್ನು ನಿಲ್ಲಿಸಲಿಕ್ಕಾಗದು ಎಂದು ಉತ್ತರಿಸಿದ್ದಾನೆ. ಇವನ ರಚನೆಗಳು ಪಂಜಾಬಿನಲ್ಲಿ ಇಂದಿಗೂ ಜನಪ್ರಿಯವಾಗಿವೆ.