ವಿಷಯಕ್ಕೆ ಹೋಗು

ಬುಗುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಗುರಿ ಎಂಬುದು ಒಂದು ತುದಿಯಲ್ಲಿ ಮೊಳೆಯನ್ನು ಹೊಂದಿರುವ, ಒಂದು ಬಗೆಯ ಗುಂಡನೆಯ ಮರದ ಆಟಿಕೆ. ಬುಗರಿ, ಬಗರಿ ಎಂದೂ ಇದನ್ನು ಕರೆಯುವುದುಂಟು. ಈ ಆಟಿಕೆಗೆ ದಾರವನ್ನು ಸುತ್ತಿ ನೆಲದಲ್ಲಿ ಅದು ತಿರುಗುವ ಹಾಗೆ ಬಿಡುವ ಆಟಕ್ಕೆ ಬುಗುರಿಯಾಟ ಎಂದು ಹೆಸರು. ಹೀಗೆ ಸುತ್ತುವ ದಾರಕ್ಕೆ ಚಾಟಿ ಎಂದು ಕರೆಯುತ್ತಾರೆ. ಸುತ್ತಿದ ಚಾಟಿಯನ್ನು ಒಮ್ಮೆಲೇ ಜೋರಾಗಿ ಬಿಚ್ಚುವುದರಿಂದಾಗಿ ಉತ್ಪನ್ನವಾಗುವ ಪ್ರಚ್ಚನ್ನ ಶಕ್ತಿಯು ಬುಗುರಿಯು ತಿರುಗುವಂತೆ ಮಾಡುತ್ತದೆ. ಬುಗುರಿಯಾಟವನ್ನು ಒಂದು ಜಾನಪದ ಕ್ರೀಡೆಯಾಗಿ ಗುರುತಿಸಬಹುದು.



ಸಾಮಾನ್ಯವಾಗಿ ಬುಗುರಿಯನ್ನು ಗಟ್ಟಿಯಾದ ಮರದ ತುಂಡಿನಿಂದ ತಯಾರಿಸುತ್ತಾರಾದರೂ ಪ್ಲಾಸ್ಟಿಕ್ ಬುಗುರಿಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬಣ್ಣದ ಬಣ್ಣದ ಬುಗುರಿಗಳು ತಿರುಗುವಾಗ ಆಕರ್ಷಕವಾಗಿ ಕಾಣುತ್ತವೆ. ಬುಗುರಿಯಾಟವು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. [] ಮಹಾಭಾರತದಲ್ಲಿ ಕೌರವರು-ಪಾಂಡವರು ಬುಗುರಿಯಾಟವಾಡಿದ್ದರ ಬಗ್ಗೆ ಉಲ್ಲೇಖವಿದೆ. [ಸೂಕ್ತ ಉಲ್ಲೇಖನ ಬೇಕು] ಆಶಾಢ ಮಾಸ ಬಂದಾಗ ಹಳ್ಳಿಗಳಲ್ಲಿ ಮಕ್ಕಳು ಹೆಚ್ಚಾಗಿ ಬುಗುರಿಯಾಡುವುದು ಕಂಡುಬರುತ್ತದೆ. []


ಆಡುವ ರೀತಿ:

[ಬದಲಾಯಿಸಿ]

ಬುಗುರಿಯಾಟವನ್ನು ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ರೀತಿಯಲ್ಲಿ ಆಡುತ್ತಾರಾದರೂ ಸಾಮಾನ್ಯ ರೀತಿ ಹೀಗಿದೆ: ಮೊದಲಿಗೆ ಎಲ್ಲ ಆಟಗಾರರು ಬುಗುರಿಗೆ ಚಾಟಿಯನ್ನು ಸುತ್ತಬೇಕು. ಎಲ್ಲರೂ ಒಟ್ಟಿಗೇ ಬುಗುರಿಯನ್ನು ಬೀಸಿ ತಿರುಗಿಸಬೇಕು. ನಂತರ ಎಲ್ಲರೂ ತಿರುಗುತ್ತಿರುವ ಬುಗುರಿಯನ್ನು ದಾರದ ಸಹಾಯದಿಂದಲೇ ಎತ್ತಿ ಕೈಗೆ ತೆಗೆದುಕೊಳ್ಳಬೇಕು. ಹೀಗೆ ಕೈಗೆ ತೆಗೆದುಕೊಳ್ಳುವಾಗ ಯಾರ ಬುಗುರಿ ಕೊನೆಯಲ್ಲಿ ಉಳಿಯುತ್ತದೆಯೋ ಆ ಆಟಗಾರ ತನ್ನ ಬುಗುರಿಯನ್ನು ಗುರುತು ಮಾಡಿದ ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಬೇಕು. ಆತನ ಬುಗುರಿಗೆ ಉಳಿದ ಆಟಗಾರರು ತಮ್ಮ ಬುಗುರಿಯ ಸಹಾಯದಿಂದ ಹೊಡೆಯಬೇಕು. ಹೀಗೆ ಹೊಡೆದಾಗ ಹೊಡೆಸಿಕೊಂಡ ಬುಗುರಿಗೆ ಆಗುವ ಗುರುತಿಗೆ ಗುನ್ನ ಅಥವಾ ಗಿಚ್ಚಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ಹೀಗೆ ಹೊಡೆಯುವಾಗ ಬುಗುರಿ ಹೋಳಾಗುವ ಸಂಭವವೂ ಇರುತ್ತದೆ. ಹೀಗೆಯೇ ಆಟ ಮುಂದುವರೆಯುತ್ತದೆ.


ಉಲ್ಲೇಖಗಳು:

[ಬದಲಾಯಿಸಿ]
  1. D. W. Gould (1973). The Top. NY: Clarkson Potter. ISBN 0-517-50416-2.
  2. "ಆರ್ಕೈವ್ ನಕಲು". Archived from the original on 2016-03-04. Retrieved 2013-11-21.
"https://kn.wikipedia.org/w/index.php?title=ಬುಗುರಿ&oldid=1169061" ಇಂದ ಪಡೆಯಲ್ಪಟ್ಟಿದೆ