ಬಿ.ಎಸ್.ಪಾಟೀಲ(ಸಾಸನೂರ)

ವಿಕಿಪೀಡಿಯ ಇಂದ
Jump to navigation Jump to search

ಬಿ.ಎಸ್.ಪಾಟೀಲ(ಸಾಸನೂರ)ರು ವಿಜಯಪುರ ಜಿಲ್ಲೆಯ ಹಿರಿಯ ಗಾಂಧಿವಾದಿ, ಶಾಸಕ, ರಾಜಕಾರಣಿ ಮತ್ತು ಮಂತ್ರಿಯಾಗಿದ್ದರು.

ಜನನ[ಬದಲಾಯಿಸಿ]

1932ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಸಾಸನೂರ ಗ್ರಾಮದಲ್ಲಿ ಜನಿಸಿದ ಬಿ.ಎಸ್.ಪಾಟೀಲರು ಮೂಲತಃ ಒಕ್ಕಲುತನ ಕುಟುಂಬದಿಂದ ಬಂದ ಬಿ.ಎಸ್.ಪಾಟೀಲರು ತಂದೆಗೆ ಇಬ್ಬರು ಪುತ್ರರು. ಮೊದಲ ಬಾರಿಗೆ ಬಸವನ ಬಾಗೇವಾಡಿ ತಾಲ್ಲೂಕಾ ಬೋರ್ಡ್ ಸದಸ್ಯರಾಗಿ ರಾಜಕೀಯ ಪ್ರಾರಂಭಿಸಿರುವ ಬಿ.ಎಸ್. ಪಾಟೀಲರು ಆ ನಂತರ ಹಂತಹಂತವಾಗಿ ರಾಜಕೀಯ ಚದುರಂಗದಾಟದಲ್ಲಿ ಏಳು ಬೀಳು ಸಾಗಿಸುತ್ತಲೇ ಬಂದರು.

ರಾಜಕೀಯ[ಬದಲಾಯಿಸಿ]

1978ರಲ್ಲಿ ಜನತಾ ಪಕ್ಷದಿಂದ ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಾಸನೂರ ಅವರು ವಿಧಾನಸಭೆ ಪ್ರವೇಶಿಸಿದರು. 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪುನರಾಯ್ಕೆಯಾದರು. ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿಯೂ ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಒಟ್ಟು 4 ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿದರು.

ಸಚಿವರು[ಬದಲಾಯಿಸಿ]

1994ರಲ್ಲಿ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ನೇಮಕಗೊಂಡರು. 1999ರಲ್ಲಿ ಎಸ್.ಎಂ.ಕೃಷ್ಣರವರ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಏಳುಬೀಳಿನ ಕಥೆ[ಬದಲಾಯಿಸಿ]

1978ರಲ್ಲಿ ಜನತಾ ಪಕ್ಷದಿಂದ ಅಖಾಡಕ್ಕಿಳಿದ ಬಿ.ಎಸ್.ಪಾಟೀಲ(ಸಾಸನೂರ)ರು ಪ್ರಥಮ ಬಾರಿಗೆ ಜನತಾ ಪಕ್ಷದ ವಿಜಯ ಪತಾಕೆ ಹಾರಿಸಿದರು. ನಂತರ ಅವರು ಕಾಂಗ್ರೆಸ್​ನತ್ತ ಮುಖ ಮಾಡಿದರು. 1983ರಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದರು. ಆದರೆ, ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದರು. 1985ರಲ್ಲಿ ಶಿವಪುತ್ರಪ್ಪ ದೇಸಾಯಿ ವಿರುದ್ಧ ಪರಾಜಯಗೊಂಡರು. ಬಳಿಕ 1989 ಚುನಾವಣೆಯಲ್ಲಿ ಮೈಕೊಡವಿಕೊಂಡು ಎದ್ದ ಪಾಟೀಲರು ಶಿವಪುತ್ರಪ್ಪ ದೇಸಾಯಿ ಅವರನ್ನು 15,395 ಮತಗಳಿಂದ ಸೋಲಿಸಿದರು. ಆಗ ದೇಸಾಯಿ ಅವರು ಜನತಾ ದಳದಿಂದ ಸ್ಪರ್ಧಿಸಿದ್ದರೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಸನಗೌಡ ಲಿಂಗನಗೌಡ ಪಾಟೀಲ ಕಣಕ್ಕಿಳಿದ್ದು ತೃತೀಯ ಸ್ಥಾನಕ್ಕಿಳಿದಿದ್ದರು.

ಅಳಿಯ ಮಾವನ ಕಾಳಗ 1994ರಲ್ಲಿ ಮತ್ತಷ್ಟು ತೀವ್ರಗೊಂಡು ಜನತಾ ದಳದಿಂದಲೇ ಸ್ಪರ್ಧಿಸುವ ಮೂಲಕ ದೇಸಾಯಿ 12,427 ಮತಗಳ ಅಂತರದಿಂದ ಪಾಟೀಲರನ್ನು ಮಣ್ಣು ಮುಕ್ಕಿಸಿದರು. ಆಗ ಬಿಜೆಪಿಯಿಂದ ಬಿ.ಎಸ್.ಕುಂಬಾರ (6080 ಪಡೆದ ಮತ) ಕಣದಲ್ಲಿದ್ದರು. 1999ರಲ್ಲಿ ಮತ್ತೆ ಪಾಟೀಲರು 17,596 ಮತಗಳ ಅಂತರದಿಂದ ದೇಸಾಯಿ ಅವರನ್ನು ಸೋಲಿಸಿದರು. ಆ ಸಲ ದೇಸಾಯಿ ಅವರು ಜೆಡಿಯುನಿಂದ ಕಣಕ್ಕಿಳಿದರೆ ಜೆಡಿಎಸ್​ನಿಂದ ರಾಯಣ್ಣಗೌಡ ಬಸನಗೌಡ ಪಾಟೀಲ (6510 ಪಡೆದ ಮತ) ಕಣದಲ್ಲಿದ್ದರು. 2004ರಲ್ಲಿ ಮತ್ತದೇ ಅಳಿಯ ಮಾವರ ನಡುವೆ ತುರುಸಿನ ಕಾಳಗ ನಡೆದು 6299 ಮತಗಳ ಅಂತರದಿಂದ ದೇಸಾಯಿ ಅವರು ಬಿ.ಎಸ್.ಪಾಟೀಲರನ್ನು ಸೋಲಿಸಿದರು. ಆಗ ದೇಸಾಯಿ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಪಾಟೀಲರು ಅವರು ಎಂದಿನಂತೆ ಕಾಂಗ್ರೆಸ್​ನಿಂದಲೇ ಕಣಕ್ಕಿಳಿದಿದ್ದರು. ಜೆಡಿಎಸ್​ನಿಂದ ಮಲಕೇಂದ್ರಗೌಡ ಬಸನಗೌಡ ಪಾಟೀಲ (12774 ಪಡೆದ ಮತ) ಕಣದಲ್ಲಿದ್ದರು.[೧]

2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರವು ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಆ ಬಳಿಕವೇ ಸಾಸನೂರ ಅವರು ರಾಜಕೀಯದಿಂದ ನಿವೃತ್ತಿ ಹೊಂದಿದ್ದರು.

ಬಿ.ಎಸ್.ಪಾಟೀಲ(ಸಾಸನೂರ)ರ ಮಗ ಸೋಮನಗೌಡ ಪಾಟೀಲ(ಸಾಸನೂರ)ರು 2018ರಲ್ಲಿ ಬಿಜೆಪಿಯಿಂದ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗುವ ಮೂಲಕ ತಂದೆ-ಮಗ ಇಬ್ಬರೂ ಸಾಕ್ಷಿಯಾಗಿದ್ದಾರೆ.

ರಾಜಕೀಯ ನಿವೃತ್ತಿ[ಬದಲಾಯಿಸಿ]

ಬಿ.ಎಸ್.ಪಾಟೀಲರು 2008ರಲ್ಲಿ ರಾಜಕೀಯ ನಿವೃತ್ತಿ ಘೊಷಿಸಿದರು.

ನಿಧನ[ಬದಲಾಯಿಸಿ]

ವಯೋಸಹಜ ಕಾಯಿಲೆಯಿಂದ ಬಳಸಲುತ್ತಿದ್ದ ಬಿ.ಎಸ್.ಪಾಟೀಲರು 87ನೇ ವಯಸ್ಸಿನಲ್ಲಿ ನಿಧನರಾದರು.[೨] [೩]

ಉಲ್ಲೇಖಗಳು[ಬದಲಾಯಿಸಿ]

ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ

ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ