ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ
ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಕನ್ನಡನಾಡು ಕಂಡ ಅಪರೂಪದ ವ್ಯಕ್ತಿ-ಶಕ್ತಿ. ವಿಜಯಪುರದ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಅದರ ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು. ಕಾಲಗರ್ಭದ ಕತ್ತಲೆಯಲ್ಲಿ ನಶಿಸಿಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ, ಪ್ರಕಟಿಸಿದ ಅಪ್ರತಿಮ ಸಂಶೋಧಕರು. ಅವರ 60 ವರ್ಷಗಳ ನಿರಂತರ ಶ್ರಮದ ಫಲವನ್ನು ಇಂದು ನಾವು ಸವಿಯುತ್ತಿದ್ದೇವೆ. ಡಾ. ಹಳಕಟ್ಟಿಯವರು ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆಯನ್ನು 1910ರಲ್ಲಿ ಹುಟ್ಟು ಹಾಕಿದರು. ಅಂದು ಅವರು ನೆಟ್ಟ ಈ ಶಿಕ್ಷಣ ಸಸಿ ಇಂದು ಹೆಮ್ಮರವಾಗಿ ಸ್ವಾಯತ ವಿಶ್ವವಿದ್ಯಾಲಯದೊಂದಿಗೆ ಸುಮಾರು 80 ವಿವಿಧ ವಿದ್ಯಾಸಂಸ್ಥೆಗಳನ್ನು ನಡೆಸುತ್ತ ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಈಗ ಈ ಸಂಸ್ಥೆಗೆ 108 ವರ್ಷದ ತುಂಬುಪ್ರಾಯ.
ಬಿ.ಎಲ್.ಡಿ.ಇ.ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ.ಪಾಟೀಲರು ಮತ್ತು ಸದಸ್ಯರು ಈ ಮಹಾತ್ಮನ ಹೆಸರು ಶಾಶ್ವತವಾಗಿ ನೆಲೆ ನಿಲ್ಲುವಂತೆ ಅತ್ಯಂತ ಕೃತಜ್ಞತೆಯಿಂದ, ಶ್ರದ್ಧಾಭಕ್ತಿಯಿಂದ ಒಂದು ಅಪರೂಪದ ಸ್ಮಾರಕಭವನವನ್ನು 2003ರಲ್ಲಿ ನಿರ್ಮಿಸಿದರು. 770 ಅಮರ ಗಣಾಧೀಶ್ವರರ ಲಿಂಗದ ಗುಡಿ ಮತ್ತು ಫ.ಗು.ಹಳಕಟ್ಟಿಯವರ ಸಮಾಧಿಯ ಪಕ್ಕದಲ್ಲಿರುವ ಈ ಭವನ ಇಂದು ಈ ನಾಡಿನ ಯಾತ್ರಾಸ್ಥಳವಾಗಿದೆ. ಭವನದ ಎದುರುಗಡೆ ಎರಡಾಳೆತ್ತರದ ಹಳಕಟ್ಟಿಯವರ ಪ್ರತಿಮೆ ಯಾತ್ರಿಕರನ್ನು ಸಹರ್ಷ ಸ್ವಾಗತಿಸುತ್ತಿದೆ.
ಬಿ.ಎಲ್.ಡಿ.ಇ.ಸಂಸ್ಥೆಯ ಅಧ್ಯಕ್ಷರು, ಶಿಕ್ಷಣಾಭಿಮಾನಿಗಳು, ಜನನಾಯಕರೂ ಆದ ಡಾ. ಎಂ.ಬಿ.ಪಾಟೀಲರು ಈ ಸ್ಮಾರಕ ಭವನದಲ್ಲಿ ನಿರಂತರವಾಗಿ ಸಂಶೋಧನೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಮುಂದಾದರು. ಮೊದಲ ಯೋಜನೆಯಾಗಿ ಡಾ ಫ.ಗು.ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಸಂಶೋಧಿಸಿ, ಪ್ರಕಟಿಸಿದ ಸಮಗ್ರ ಸಾಹಿತ್ಯ ನಶಿಸಿ ಹೋಗದಂತೆ ಪುನರ್ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿತ್ತು. ಆ ಕಾರ್ಯವನ್ನು ಅನುಷ್ಠಾನಗೊಳಿಸಿ ಈ ಯೋಜನೆ ಪೂರ್ಣಗೊಳಿಸಿದರು. 12,500 ಪುಟಗಳಿಂದ ಕೂಡಿದ 15 ಸಂಪುಟಗಳನ್ನು 2008ರ ಜನವರಿ 30ರಂದು ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಿದರು.
ಸಂಶೋಧನ ಕೇಂದ್ರಕ್ಕೆ ನಾಡಿನ, ಹೊರನಾಡಿನ ಮಠಾಧೀಶರು, ಹಿರಿಯ ಸಾಹಿತಿಗಳು, ಗಣ್ಯ ನಾಗರಿಕರು, ರಾಜಕೀಯ ಮುಖಂಡರು ಭೇಟಿ ನೀಡಿ, ತಮ್ಮ ಸಂದರ್ಶನದಲ್ಲಿ ಮೆಚ್ಚುಗೆಯ ಮಾತುಗಳನ್ನು ಬರೆದು ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿದ್ದಾರೆ. ಅವರಲ್ಲಿ ಶ್ರೀ ಸುತ್ತೂರು ಮಠಾಧೀಶರು, ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠ, ತುಮಕೂರು, ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ರುದ್ರಾಕ್ಷಿ ಮಠ, ಬೆಳಗಾವಿ, ಭಾಲ್ಕಿ ಶ್ರೀಗಳು, ಶ್ರೀ ಮುರುಘಾಶರಣರು, ಚಿತ್ರದುರ್ಗ, ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಗಳು, ನಿಡುಮಾಮಿಡಿ ಮೊದಲಾದ ಪೀಠಾಧೀಶರು, ನಾಡೋಜ ಪಾಟೀಲ ಪುಟ್ಟಪ್ಪ, ನಾಡೋಜ ಚನ್ನವೀರ ಕಣವಿ, ನ್ಯಾಯಮೂರ್ತಿ ವಿ.ಎಸ್.ಮಳೀಮಠ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಗಿರೀಶ ಕಾರ್ನಾಡ, ವಿಮರ್ಶಕ ಡಾ. ಗುರುಲಿಂಗ ಕಾಪಸೆ, ಡಾ. ಎ.ಮುರಿಗೆಪ್ಪ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ, ದಿ. ಎಂ.ಪಿ.ಪ್ರಕಾಶ, ಶ್ರೀ ಚಂದ್ರಕಾಂತ ಬೆಲ್ಲದ, ಶ್ರೀ ರಮೇಶಕುಮಾರ, ಶ್ರೀ ಎಚ್.ಕೆ.ಪಾಟೀಲ, ಶ್ರೀ ಅಶೋಕ ಹಾರನಹಳ್ಳಿ, ಶ್ರೀ ಎಸ್.ಆರ್.ನಾಯಕ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಡಾ. ಮಲ್ಲಿಕಾ ಘಂಟಿ, ಕುಲಪತಿಗಳು, ಕವಿವಿ, ಹಂಪಿ, ಶ್ರೀ ಸುರೇಶ ಹೆಬ್ಳೀಕರ, ಮಹಿಮಾ ಪಟೇಲ್, ಕುಲಪತಿಗಳಾದ ಡಾ. ಮೀನಾ ಚಂದಾವರಕರ, ಮತ್ತು ಸಬಿಹಾ ಭೂಮಿಗೌಡ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ಶ್ರೀ ಆರ್.ಗೋಪಾಲ, ಮೈಸೂರು, ಶ್ರೀ ಶಿವಯೋಗಿ ಕಳಸದ, ಜಿಲ್ಲಾಧಿಕಾರಿಗಳು, ವಿಜಯಪುರ, ಡಾ. ಎಸ್.ಎಂ.ಜಾಮದಾರ, ಶ್ರೀ ಚಕ್ರವರ್ತಿ ಸೂಲಿಬೆಲೆ, ಶ್ರೀ ರಾಹುಲ್ ಎಂ. ಖರ್ಗೆ, ಡಾ. ಎಲ್.ಹನುಮಂತಯ್ಯ, ಶ್ರೀ ರಾಜಮೋಹನ ಗಾಂಧಿ, ದೆಹಲಿ, ಶ್ರೀ ಉಮಾಪತಿ, ನವದೆಹಲಿ, ಶಿವಾನಂದ ಇಂಗಳೇಶ್ವರ, ನವದೆಹಲಿ, ಡಾ. ಗಿರಡ್ಡಿ ಗೋವಿಂದರಾಜ, ಧಾರವಾಡ, ನ್ಯಾಯಾಧೀಶರುಗಳಾದ ಶ್ರೀ ಎಂ.ಎಂ.ಮಿರ್ದೆ, ಶ್ರೀ ಸದಾಶಿವ ಎಸ್. ಸುಲ್ತಾನಪುರ, ಶ್ರೀ ಎಸ್.ಕೆ.ಕುರಗೋಡಿ ವಿಜಯಪುರ ಇವರೆಲ್ಲರು ಪ್ರಮುಖರು.
ವಿದೇಶದಿಂದ ಡೊಮಿನಿಕ್ ಮ್ಯಾಕಲಿಸ್ಟರ್ ಬ್ರಿಟಿಷ್ ಹೈ ಕಮೀಶನರ್ ಬ್ಯಾಂಕಾಕ್, ಜೇಕ್ ಬೆನ್ಸಾನ್, ಲೆಡನ್ ಯೂನಿವರ್ಸಿಟಿ ಮತ್ತು ಕಿಲಾನ್ ಓರಟ್ಟಾನ ಉಲ್ಕಾ, ಇವರು ಬೇಟಿ ನೀಡಿ ಪ್ರಶಂಸಿದ್ದಾರೆ.
ಮಾನ್ಯತೆ
[ಬದಲಾಯಿಸಿ]ಈ ಮಧ್ಯದಲ್ಲಿ ಕನ್ನಡ ನಾಡಿನ ಪ್ರತಿಷ್ಠಿತ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕೇಂದ್ರದ ಕಾರ್ಯಚಟುವಟಿಕೆಗಳನ್ನು ಗಮನಿಸಿತು. ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರವಾಗಿ 12-09-2005ರಂದು ಮಾನ್ಯತೆ ಪಡೆಯಿತು. ಕೇಂದ್ರದಿಂದ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಪಿಎಚ್.ಡಿ. ಅಧ್ಯಯನದ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಇಂದು ಕೇಂದ್ರದಿಂದ 8 ಜನ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಸದ್ಯ 7 ಜನ ವಿದ್ಯಾರ್ಥಿಗಳು ಪಿಎಚ್.ಡಿ. ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.
2005ರ ಸೆಪ್ಟೆಂಬರ 16 ಮತ್ತು 17 ರಂದು ಅಖಿಲ ಕರ್ನಾಟಕ ಮೂರನೆಯ ಹಸ್ತಪ್ರತಿ ಸಮ್ಮೇಳನವನ್ನು ಕೇಂದ್ರದ ಸಹಯೋಗದೊಂದಿಗೆ ಎರಡು ದಿವಸಗಳ ಕಾಲ ಅತ್ಯಂತ ಅರ್ಥಪೂರ್ಣವಾಗಿ ನಡೆಸಲಾಯಿತು. ಕನ್ನಡದ ದಿಗ್ಗಜ ಸಾಹಿತಿಗಳಾದ ಪ್ರೊ. ಮಾಳವಾಡ, ಡಾ. ಗೋಕಾಕ, ಡಾ. ಮುಗಳಿ ಮುಂತಾದವರ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಪ್ರತಿ ವರ್ಷ ಡಾ. ಹಳಕಟ್ಟಿಯವರ ಜನ್ಮದಿನ ಹಾಗೂ ಪುಣ್ಯದಿನಗಳನ್ನು ಭಕ್ತಿಭಾವನೆಗಳಿಂದ ಆಚರಿಸಲಾಗುತ್ತದೆ.
ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ
[ಬದಲಾಯಿಸಿ]ವಿಜಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆದಿಲ್ ಶಾಹಿ ಅರಸರು ಸುಮಾರು 200 ವರ್ಷ ದಕ್ಷಿಣ ಭಾರತದ ಬಹುಭಾಗವನ್ನು ಆಳಿದರು. ಶಿಲ್ಪ ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಲೋಕಮಾನ್ಯವಾದದ್ದು. ಆದಿಲ್ ಶಾಹಿ ಕಾಲದ ಪರ್ಶಿಯನ್, ದಖನಿ ಉರ್ದು ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಒಂದು ಪ್ರಸ್ತಾವನೆಯನ್ನು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2013ರಲ್ಲಿ ಸಲ್ಲಿಸಲಾಗಿತ್ತು. ಯೋಜನೆಗೆ ಇಲಾಖೆಯು ಅನುಮತಿ ನೀಡಿತು. ಅನುವಾದಗೊಳಿಸಲು ನಾಡಿನ ಶ್ರೇಷ್ಠ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಯೋಜನೆಯ ನಿರ್ದೇಶಕರಾಗಿ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಕಾರ್ಯನಿರ್ವಹಿಸಿದರು. ಇದೀಗ ಯೋಜನೆ ಪೂರ್ತಿಗೊಂಡು 21 ಪುಸ್ತಕಗಳನ್ನು 18 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.
ಮುಂಬರುವ ಸಂಶೋಧಕರಿಗೆ ಉಪಯುಕ್ತವಾಗುವಂತೆ ಆದಿಲ್ ಶಾಹಿ ಕಾಲದಲ್ಲಿ ರಚಿತವಾದ ಅನೇಕ ಪರ್ಶಿಯನ್, ದಖನಿ ಮತ್ತು ಉರ್ದು ಹಸ್ತಪ್ರತಿಗಳನ್ನು, ಫರ್ಮಾನುಗಳನ್ನು, ಕೈಫಿಯತ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಜೊತೆಗೆ ಅತ್ಯಂತ ಹಳೆಯ ನಕಾಶೆಗಳನ್ನು ಸಂಗ್ರಹಿಸಿ ಇಡಲಾಗಿದೆ.
ದತ್ತಿನಿಧಿ
[ಬದಲಾಯಿಸಿ]ಡಾ.ಫ.ಗು.ಹಳಕಟ್ಟಿಯವರ ಸ್ಮರಣೆಗಾಗಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗಕ್ಕೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ವತಿಯಿಂದ ದಿನಾಂಕ: 02-07-2008 ರಂದು 1-ಲಕ್ಷ ರೂ ದತ್ತಿ ನಿಧಿಯನ್ನು ನೀಡಲಾಯಿತು.
ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಟ್ಟಡ
[ಬದಲಾಯಿಸಿ]ಕೇಂದ್ರದ ಬೆಳವಣಿಗೆ ದಿನೇದಿನೇ ಹೆಚ್ಚುತ್ತಿರುವುದರಿಂದ ಸ್ಮಾರಕಭವನದ ವಿಸ್ತೀರ್ಣ ಕಟ್ಟಡವನ್ನು ನಿರ್ಮಿಸಲಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೆರವು ನೀಡಿದೆ. ಕಟ್ಟಡ ಪೂರ್ತಿಯಾಗಿದೆ. ಈ ಕಟ್ಟಡದಲ್ಲಿ ಸಂಶೋಧನೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮೊದಲಿನ ಕಟ್ಟಡ ಸ್ಮಾರಕಭವನವಾಗಿ ಡಾ. ಫ.ಗು. ಹಳಕಟ್ಟಿಯವರ ವಸ್ತು ಸಂಗ್ರಹಾಲಯವಾಗಿ ಪರಿವರ್ತಿತವಾಗುತ್ತಿದೆ.
ಪಡೆದ ಪ್ರಶಸ್ತಿಗಳು
[ಬದಲಾಯಿಸಿ]ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ರಮಣಶ್ರೀ ಪ್ರತಿಷ್ಠಾನ ಬೆಂಗಳೂರು, ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರಕ್ಕೆ ಶರಣ ಸಂಸ್ಕೃತಿ ಪ್ರಸಾರಕ್ಕಾಗಿ 2013ರ
- ರಮಣಶ್ರೀ ಶರಣ ಪ್ರಶಸ್ತಿ
- ಸೇವಾರತ್ನ ನಾಗನೂರು ಶ್ರೀ ರುದ್ರಾಕ್ಷಿ ಮಠ ಬೆಳಗಾವಿ- 2014 (ಶ್ರೀ ಎಸ್.ಎಸ್. ತಂಬಾಕೆ)
- ಅಖಿಲ ಭಾರತ ಕನ್ನಡ ಸಾಹಿತ್ಯ ಪ್ರಶಸ್ತಿ, ಬೆಂಗಳೂರು-2014 (ಶ್ರೀ ಎಸ್.ಎಸ್. ತಂಬಾಕೆ)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’- 2015
- ಗೌರವ ಪ್ರಶಸ್ತಿ -2015- ನೊಳಂಬ ವೀರಶೈವ ಸಂಸ್ಥೆ(ರಿ) ಬೆಂಗಳೂರು
ಹೀಗೆ ಹಲವಾರು ಸಾಧನೆಗಳನ್ನು ಮಾಡುತ್ತ ದಾಪುಗಾಲು ಇಡುತ್ತಿದೆ. ಇದೊಂದು ಗುಣಮಟ್ಟದ ಸಂಶೋಧನ ಕೇಂದ್ರವೆಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಗ್ರಂಥಾಲಯ
[ಬದಲಾಯಿಸಿ]ಸಂಶೋಧನ ಕೇಂದ್ರ ಪ್ರಾರಂಭವಾದ ಮೇಲೆ ಕೇಂದ್ರವು ಪುಸ್ತಕ ಸಂಗ್ರಹದ ಕಡೆಗೆ ಹೆಚ್ಚು ಮುತುವರ್ಜಿ ವಹಿಸಿದೆ. ಸಂಶೋಧನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವ ಉದ್ದೇಶದಿಂದ ಗ್ರಂಥ ಸಂಗ್ರಹಕ್ಕೆ ಆದ್ಯತೆ ನೀಡಲಾಯಿತು. ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸಂದರ್ಶಿಸಿ ಅಲ್ಲಿಯ ಪ್ರಸಾರಾಂಗದಿಂದ ಪ್ರಕಟಿಸಿದ ಗ್ರಂಥಗಳನ್ನು, ಈ ನಾಡಿನ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ಪ್ರಕಟವಾದ ಕೇಂದ್ರಕ್ಕೆ ಅವಶ್ಯವಿರುವ ಪೂರಕ ಗ್ರಂಥಗಳನ್ನು ಖರೀದಿಸಿ, ಸಂಗ್ರಹಿಸಲಾಯಿತು. ಅಷ್ಟೇ ಅಲ್ಲದೇ ಮಠಮಾನ್ಯಗಳ ಪ್ರಕಟಣಾ ವಿಭಾಗದಿಂದ ಗ್ರಂಥಗಳನ್ನು ಖರೀದಿಸಲಾಯಿತು. (ಗದುಗಿನ ತೋಂಟದಾರ್ಯ ಮಠ, ಮುಂಡರಗಿ ಅನ್ನದಾನೇಶ್ವರ ಮಠ, ಸುತ್ತೂರು ಸಂಸ್ಥಾನ ಮಠ ಮುಂತಾದವುಗಳು). ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿ ಹಾಕಿದ ಪುಸ್ತಕ ಮಳಿಗೆಗಳಿಂದ ಗ್ರಂಥಗಳನ್ನು ಖರೀದಿಸಲಾಯಿತು. ವಿಶೇಷವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಸಾರಾಂಗ ಪ್ರಕಟಿಸಿದ ಪ್ರಕಟಣೆಗಳನ್ನು ಖರೀದಿಸಲಾಗಿದೆ. ಹೀಗೆ ಈ ಗ್ರಂಥಾಲಯ ಅಲ್ಪಾವಧಿಯಲ್ಲಿ ಬೆಳವಣಿಗೆಯಾದುದನ್ನು ನೋಡಿದ ಹಲವಾರು ವಿದ್ವಾಂಸರು ತಮ್ಮ ಸಂಗ್ರಹದಲ್ಲಿರುವ ಅತ್ಯುತ್ತಮ ಗ್ರಂಥಗಳನ್ನು ಕೇಂದ್ರಕ್ಕೆ ಉದಾರವಾಗಿ ನೀಡಿದರು. ಹೀಗಾಗಿ ಗ್ರಂಥಾಲಯದಲ್ಲಿ ಸುಮಾರು 11,000 ಗ್ರಂಥಗಳ ಸಂಗ್ರಹವಾಗಿದೆ. ನಾಡಿನ ಹಲವಾರು ಸಂಘಟನೆಗಳು ಪ್ರಕಟಿಸುತ್ತಿರುವ ನಿಯತಕಾಲಿಕೆಗಳನ್ನು ತರಿಸಲಾಗುತ್ತಿದೆ. (ಲಿಂಗಾಯತ, ಶರಣ ಚೇತನ, ಶಿವಾನುಭವ, ವೀರಶೈವ ವಾಣಿ ಮುಂತಾದವುಗಳು) ಸಂಶೋಧನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಕರ ಗ್ರಂಥಗಳಾಗಲು ಅಪಾರವಾಗಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ಪ್ರಕಟಣೆಗಳು
[ಬದಲಾಯಿಸಿ]ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ ಡಾ. ಎಂ.ಎಂ. ಕಲಬುರ್ಗಿಯವರು ಸಾಹಿತ್ಯದ ಮೂಲಕ ನಾಡು, ನುಡಿ ಸೇವೆಗೈದು ದೇಶ-ವಿದೇಶದಲ್ಲಿ ದಟ್ಟವಾದ ಪ್ರಭಾವವನ್ನು ಬೀರಿದ ವ್ಯಕ್ತಿ. 20ನೇ ಶತಮಾನದ ಉತ್ತರಾರ್ಧದಲ್ಲಿ 21ನೇ ಶತಮಾನದ ಪೂರ್ವಾರ್ಧದ ಹೊಸ್ತಿಲಲ್ಲಿ ನಿಂತ ಮಹಾನ್ ವಿದ್ವಾಂಸ. ಸಂಶೋಧಕ, ವಿಮರ್ಶಕ, ಚಿಂತಕ ಹಾಗೂ ಸಾಹಿತ್ಯದ ಆರಾಧಕ.
ಇಂತಹ ಅಪರೂಪದ ವ್ಯಕ್ತಿಯ ವ್ಯಕ್ತಿತ್ವದ ಬಹುಮುಖಗಳನ್ನು ಒಂದೆಡೆ ಸೇರಿಸಿ ಇಡಿಯಾಗಿ ಸಮಗ್ರ ವ್ಯಕ್ತಿತ್ವವನ್ನು ಅಕ್ಷರ, ದೃಶ್ಯ, ಧ್ವನಿ, ಚಿತ್ರ ಮಾಧ್ಯಮಗಳ ಮೂಲಕ ಪರಿಚಯಿಸುವುದು. ಅಕ್ಷರ ಮಾಧ್ಯಮದಲ್ಲಿ ಬಂದ ಅವರ ಸಮಗ್ರ ಸಾಹಿತ್ಯವನ್ನು ವಿಷಯವಾರು ವಿಂಗಡಿಸಿ ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಕೇಂದ್ರ ಹಮ್ಮಿಕೊಂಡಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಿದೆ. ಕಾರ್ಯ ಪ್ರಗತಿಯಲ್ಲಿದೆ.
ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ
ವಿಜಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆದಿಲಶಾಹಿ ಅರಸರು ಸುಮಾರು 200 ವರ್ಷ ದಕ್ಷಿಣ ಭಾರತದ ಬಹುಭಾಗವನ್ನು ಆಳಿದರು. ಶಿಲ್ಪ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಲೋಕಮಾನ್ಯವಾದದ್ದು. ಆದಿಲ್ಶಾಹಿ ಕಾಲದ ಪರ್ಶಿಯನ್ ಮತ್ತು ದಖನಿ ಉರ್ದು ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಒಂದು ಪ್ರಸ್ತಾವನೆಯನ್ನು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ 2013ರಲ್ಲಿ ಸಲ್ಲಿಸಲಾಗಿತ್ತು. ಯೋಜನೆಗೆ ಇಲಾಖೆಯು ಅನುಮತಿ ನೀಡಿತು. ಅನುವಾದಗೊಳಿಸಲು ನಾಡಿನ ಶ್ರೇಷ್ಠ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಯೋಜನೆಯ ನಿರ್ದೇಶಕರಾಗಿ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಕಾರ್ಯನಿರ್ವಹಿಸಿದರು. ಇದೀಗ ಯೋಜನೆ ಪೂರ್ತಿಗೊಂಡು 21 ಪುಸ್ತಕಗಳನ್ನು 18 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.
ಮುಂಬರುವ ಸಂಶೋಧಕರಿಗೆ ಉಪಯುಕ್ತವಾಗುವಂತೆ ಆದಿಲ್ ಶಾಹಿ ಕಾಲದಲ್ಲಿ ರಚಿತವಾದ ಅನೇಕ ಪರ್ಶಿಯನ್, ದಖನಿ ಉರ್ದು ಹಸ್ತಪ್ರತಿಗಳನ್ನು, ಫರ್ಮಾನುಗಳನ್ನು, ಕೈಫಿಯತ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಜೊತೆಗೆ ಅತ್ಯಂತ ಅಂದಿನ ಹಳೆಯ ನಕಾಶೆಗಳನ್ನು ಸಂಗ್ರಹಿಸಿ ಇಡಲಾಗಿದೆ.
ಕೇಂದ್ರದ ಪ್ರಕಟಣೆಗಳು
- ಡಾ. ಫ.ಗು.ಹಳಕಟ್ಟಿ 15 ಸಮಗ್ರ ಸಂಪುಟಗಳು-ಸಂಪಾದನೆ – 2007
- ಆದಿಲ್ ಶಾಹಿ ಸಾಹಿತ್ಯ ಅನುವಾದ- 18 ಸಂಪುಟಗಳು-2018
- ಡಾ.ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಲೇಖನ ಸೂಚಿ-ಡಾ. ಎಸ್.ಆರ್.ಗುಂಜಾಳ -2002
- Vachanas of Sri Basaveswara-Translated by Dr. P.G.HALAKATTI Edited by – Dr. C.R.YARAVINTELIMATH – 2003
- ಬಿ.ಎಲ್.ಡಿ.ಇ.ಸಂಸ್ಥೆ – ಡಾ. ಎಂ.ಎಸ್.ಮದಭಾವಿ – 2003
- ಅಮೋಘಸಿದ್ಧ ಪರಂಪರೆ – (ಪಿಎಚ್.ಡಿ. ಸಂಶೋಧನ ಮಹಾಪ್ರಬಂಧ) – ಡಾ.ಚನ್ನಪ್ಪ ಕಟ್ಟಿ – 2012
- ಚಿಕ್ಕೋಡಿ ಕುಟುಂಬ – ಒಂದು ಅಧ್ಯಯನ (ಪಿಎಚ್.ಡಿ. ಸಂಶೋಧನ ಮಹಾಪ್ರಬಂಧ) – ಡಾ.ಅಕ್ಕಿ ಉಮಾ ಕೊಟ್ರಪ್ಪ – 2012
- ವಿದ್ಯಮಾನ ಪತ್ರಿಕೆ (ತ್ರೈಮಾಸಿಕ)
- ರಾ.ಬ.ಫ.ಗು.ಹಳಕಟ್ಟಿ ಸಂಪಾದಿತ ಅಂಬಿಗರ ಚೌಡಯ್ಯನ ವಚನಗಳು-ಪರಿಷ್ಕರಣ- ಡಾ.ಎಸ್.ಕೆ.ಕೊಪ್ಪಾ – 2013
- ಗುರುಬಸಪ್ಪ ಫಕೀರಪ್ಪ ಹಳಕಟ್ಟಿ ಆತ್ಮಚರಿತ್ರೆ – ಗುರುಬಸಪ್ಪ ಹಳಕಟ್ಟಿ – 2013
- ಬಸವಣ್ಣನವರ ವಿಕಾಸಶೀಲ ವಚನಗಳು
- THE GILDED AND THE FADED
- ಸಾತ್ವಿಕ ಶಕ್ತಿಯ ನಾಯಕ ಶ್ರೀ ಬಿ.ಎಂ. ಪಾಟೀಲ-2015
- ವಚನಪಿತಾಮಹ ಶರಣ ಡಾ. ಫ.ಗು. ಹಳಕಟ್ಟಿ (ಪರಿಚಯ ಪತ್ರ)
- ಆದಿಲ್ ಶಾಹಿ ಅನುವಾದ ಯೋಜನೆ (ಪರಿಚಯ ಪತ್ರ)
- ಉಪ್ಪಲದಿನ್ನಿಯ ಸಂಗಮನಾಥ
- ಸಾಂಸ್ಥಿಕ ಪ್ರಜ್ಞೆ- ಡಾ. ಎಂ.ಎಂ. ಕಲಬುರ್ಗಿ-2015
- ಸಿದ್ಧರಾಮೇಶ್ವರ ವಚನಗಳು- ರಾ.ಬ. ಡಾ. ಫ.ಗು. ಹಳಕಟ್ಟಿ ಅವರ ಸಂಪಾದಿತ ಕೃತಿ 2016
- ಮಹಾದೇವಿಯಕ್ಕನ ವಚನಗಳು –ರಾ.ಬ. ಡಾ. ಫ.ಗು.ಹಳಕಟ್ಟಿ ಅವರ ಸಂಪಾದಿತ ಕೃತಿ 2017
- ಲಿಂಗಾಯತ ಸ್ವತಂತ್ರ ಧರ್ಮ- ಡಾ. ಎಂ.ಎಂ.ಕಲಬುರ್ಗಿ-2017
- Pandit Jawaharlal Neharu ‘A Tribute’
ವಚನ ಪಿಚಿತಾಮಹ ಡಾ. ಫ. ಗು. ಹಳಕಟ್ಟಿ
[ಬದಲಾಯಿಸಿ]ಡಾ. ಫಕೀರಪ್ಪ ಹಳಕಟ್ಟಿಯವರು 1880ರ ಜುಲೈ 2 ರಂದು, ಗುರುಬಸಪ್ಪ ಹಾಗೂ ದಾನಮ್ಮ ದಂಪತಿಗಳಿಗೆ ಜನಿಸಿದರು. ಹಳಕಟ್ಟಿಯವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. 1902ರಲ್ಲಿ ಮುಂಬೈನ ಸೆಂಟ್ ಝೇವಿಯರ್ ಕಾಲೇಜಿನಿಂದ ಬಿ.ಎ. ಪರೀಕ್ಷೆ ಮುಗಿಸಿದರು.
ಸಾರ್ವಜನಿಕ ಸೇವಾ ಅಭಿಲಾಷೆಯನ್ನು ಹೊಂದಿದ್ದ ಪೂಜ್ಯ ಹಳಕಟ್ಟಿಯವರು ಬಿ.ಎ. ಉತ್ತೀರ್ಣರಾದ ನಂತರ ತಮಗೆ ದೊರೆತ ಉದ್ಯೋಗಾವಕಾಶಗಳನ್ನು ತೊರೆದು 1904ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು. ಅದೇ ವರ್ಷ ಬಿಜಾಪುರಕ್ಕೆ (ಈಗಿನ ವಿಜಯಪುರ) ವಕೀಲ ವೃತ್ತಿಗಾಗಿ ಆಗಮಿಸಿದ ಹಳಕಟ್ಟಿಯವರು ವಚನ ಸಂಗ್ರಹಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಬಸವಾದಿ ಶರಣರ ವಚನಗಳು ಅಮೂಲ್ಯವಾದುದು ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟರು.
ಆ ಮೊದಲೇ ಅವರು ಶಿವಲಿಂಗಪ್ಪ ಮಂಚಾಲೆಯವರ ಮನೆಯಲ್ಲಿ ‘ಷಟ್ಸ್ಥಲ ತಿಲಕ’ ಮತ್ತು ‘ಪ್ರಭುದೇವರ ವಚನ’ಗಳ ತಾಳೆಗರಿಗಳನ್ನು ನೋಡಿ ಆಕರ್ಷಿತರಾಗಿದ್ದರು. ವಿಶೇಷವಾಗಿ ತಾಡೋಲೆ ಹಸ್ತಪ್ರತಿಗಳು ಅವರ ಮನಸ್ಸನ್ನು ಆಕರ್ಷಿಸಿದ್ದವು.’ ಅವರು ಅತ್ಯಂತ ಕಾಳಜಿ ಪೂರಕವಾಗಿ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಸಂಕಲ್ಪ ಮಾಡಿದರು. ವಕೀಲ ವೃತ್ತಿಯ ಜೊತೆ-ಜೊತೆಗೆ ತಾವು ಸಂಗ್ರಹಿಸಿದ ರಾಶಿ-ರಾಶಿ ವಚನಗಳನ್ನು ಮುದ್ರಿಸುವ ಸಂಕಲ್ಪ ತೊಟ್ಟು 1925ರಲ್ಲಿ ಹಿತಚಿಂತಕ ಮುದ್ರಣಾಲಯವನ್ನು ಪ್ರಾರಂಭಿಸಿದರು.
ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾಯಿತು. ತಮ್ಮ ದುಡಿಮೆಯಿಂದ ಕಟ್ಟಿಸಿದ ಮನೆಯನ್ನು ಮಾರಾಟ ಮಾಡಿದರು. ವಚನ ಸಂಗ್ರಹಕ್ಕೆ ಅವರು ತೊಟ್ಟ ದೀಕ್ಷೆಗೆ ಇದು ಒಂದು ನಿದರ್ಶನ. ‘ಹಿತಚಿಂತಕ’ ಮುದ್ರಣಾಲಯದಲ್ಲಿ ಶರಣರ ವಚನಗಳನ್ನು ಪ್ರಕಟಿಸಲು 1926ರಲ್ಲಿ ಶಿವಾನುಭವ ಪತ್ರಿಕೆಯನ್ನು ಹಾಗೂ ಶಿವಾನುಭವ ಗ್ರಂಥಮಾಲೆಯನ್ನು ಹುಟ್ಟುಹಾಕಿದರು.
1927ರಲ್ಲಿ “ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ” ಮುಂತಾದ ವಿಷಯಗಳನ್ನು ಒಳಗೊಂಡ ‘ನವಕರ್ನಾಟಕ’ ವಾರ ಪತ್ರಿಕೆಯನ್ನು ಆರಂಭಿಸಿದರು. ಹಳಕಟ್ಟಿಯವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ 1953ರ ನವೆಂಬರ್ ತಿಂಗಳಲ್ಲಿ “ಡಾಕ್ಟರ್ ಆಫ್ ಲೆಟರ್ಸ್” ಪದವಿಯನ್ನು ನೀಡಿತು.
1910ರಲ್ಲಿ ಹಳಕಟ್ಟಿಯವರು ಬಿಜಾಪುರದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಬಿಜಾಪುರ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಭದ್ರವಾದ ಅಡಿಪಾಯವನ್ನು ಹಾಕಿದರು. ಡಾ. ಫ.ಗು. ಹಳಕಟ್ಟಿಯವರು 115ಕ್ಕೂ ಹೆಚ್ಚಿನ ಸಂಖ್ಯೆಯ ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಿದರು.
1926ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿ ನೀಡಿ ಅವರನ್ನು ಸನ್ಮಾನಿಸಲಾಯಿತು. 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಡಿ. ಲಿಟ್. ಪದವಿ ನೀಡಿ ಪುರಸ್ಕರಿಸಿತು. 1964ರಲ್ಲಿ, 84 ವರ್ಷ ವಯಸ್ಸಿನ ಹಳಕಟ್ಟಿಯವರು ಶಿವಾಧೀನರಾದರು. ಆರು ದಶಕಗಳಿಗೂ ಅಧಿಕ ಕಾಲ ಅವರು ನಿರಂತರವಾಗಿ ಸಾಹಿತ್ಯ-ಸಮಾಜದ ಅಭಿವೃದ್ಧಿಗಾಗಿ ದುಡಿದರು.