ವಿಷಯಕ್ಕೆ ಹೋಗು

ಬಿರ್ಸಾ ಮುಂಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿರ್ಸಾ ಮುಂಡಾ
Bornನವೆಂಬರ್ ೧೫, ೧೮೭೫
ಉಳಿಹಾಟು, ರಾಂಚಿ
Diedಜೂನ್ ೯, ೧೯೦೦
ರಾಂಚಿಯ ಜೈಲಿನಲ್ಲಿ
Occupation(s)ಆದಿವಾಸಿ ಜನಾಂಗದ ನಾಯಕ, ಭಾರತ ಸ್ವಾತಂತ್ರ್ಯ ಹೋರಾಟಗಾರ

ಬಿರ್ಸಾ ಮುಂಡಾ (ನವೆಂಬರ್ ೧೫, ೧೮೭೫ - ಜೂನ್ ೯, ೧೯೦೦) ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು.

ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಬ್ರಿಟಿಶ್ ಸಾಮ್ರಾಜ್ಯಕ್ಕೆ ದೊಡ್ಡ ದುಃಸ್ವಪ್ನದಂತಿದ್ದರು. ಬಿರ್ಸಾ ಮುಂಡಾ ಅವರು ಜನಿಸಿದ ದಿನ ನವೆಂಬರ್ ೧೫, ೧೮೭೫. ಆತನ ಊರು ರಾಂಚಿಯ ಬಳಿಯ ಉಳಿಹಾಟು. ಆತ ಬದುಕಿದ್ದು ಕೇವಲ 25 ವರ್ಷ. ತನ್ನ ಜನಾಂಗಕ್ಕಾಗಿನ ಹೋರಾಟದಲ್ಲಿ ಆತ ಸೆರೆಮನೆಯಲ್ಲಿ ತನ್ನ ಜೀವವನ್ನು ಕಳೆದುಕೊಂಡ ದಿನ ಜೂನ್ ೯, ೧೯೦೦ರಂದು. ಭಾರತದ ಪಾರ್ಲಿಮೆಂಟ್ ಭವನದಲ್ಲಿ ರಾರಾಜಿಸುತ್ತಿರುವ ಏಕೈಕ ಆದಿವಾಸಿ ಜನಾಂಗೀಯನ ಭಾವ ಚಿತ್ರ ಬಿರ್ಸಾ ಮುಂಡಾ ಅವರದು. ಬಿರ್ಸಾ ಎಂಬುದು ಆತನು ಹುಟ್ಟಿದ ಮುಂಡಾ ಆದಿವಾಸಿ ಗುಂಪಿನ ಪದ್ಧತಿಗಳಂತೆ ಆತನ ಹುಟ್ಟಿದ ದಿನವಾದ ಗುರುವಾರದ ಸೂಚಕವಂತೆ.

ಬ್ರಿಟಿಷರು ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯ ಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟು, ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಇನ್ನು ಮುಂದೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆಜ್ಞೆ ಹೊರಡಿಸಿದರು. ಅದೇ ಸಮಯದಲ್ಲಿ ಈ ಆದಿವಾಸಿಗಳನ್ನು ವ್ಯಾಪಾರಸ್ಥರು ಮತ್ತು ಲೇವಾದೇವಿಗಾರರು ಸುಲಿಯಲಾರಂಭಿಸಿದರು. ಇವೆರಡರ ಮಧ್ಯೆ ಮತಾಂತರಿಗರು ಮತ್ತು ಧಾರ್ಮಿಕ ಮೂಲ ಭೂತವಾದಿಗಳು, ಆದಿವಾಸಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಹೊಂಚುಹಾಕುತ್ತಿದ್ದರು. ಭೇದಭಾವ ಎಂಬುದೇ ಗೊತ್ತಿಲ್ಲದಿದ್ದ ಈ ಜನರು, ತಮ್ಮ ಮೇಲೆ ಮೂರೂ ದಿಕ್ಕುಗಳಿಂದ ದಾಳಿಗಳು ಪ್ರಾರಭವಾದಾಗ, ವಿವಿಧ ಪ್ರದೇಶಗಳಲ್ಲಿ, ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟಿಸಲಾರಂಭಿಸಿದ್ದರು. ಇಂತಹ ಸಂದರ್ಭದಲ್ಲಿ ಓರ್ವ ರೆತ ಗುತ್ತಿಗೆದಾರನ ಕುಟುಂಬದಲ್ಲಿ ಸುಗನ ಮುಂಡಾ ಮತ್ತು ಕರ್ಮಿ ಹಾತು ಅವರ ಮಗನಾಗಿ ಬಿರ್ಸಾ ಮುಂಡಾ ಜನಿಸಿದ.

ಛತ್ತೀಸಗಢದ ಜನಪದಗಳ ಪ್ರಕಾರ ಬಿರ್ಸಾನ ಬಾಲ್ಯ ಎಲ್ಲ ಮಕ್ಕಳಂತೆ ಸಹಜವಾಗಿಯೇ ಇತ್ತು. ಇತರೆ ಹುಡುಗರಂತೆ ಆಟವಾಡುತ್ತಾ ಈ ಹುಡುಗ ಬೊಹೊಂಡ ಕಾಡುಗಳಲ್ಲಿ ಕುರಿ ಕಾಯುತ್ತಿದ್ದ. ಹೀಗೆ ಆಟವಾಡಿಕೊಂಡು ಬೆಳೆಯುತ್ತಿದ್ದಾಗಲೇ ಬಿರ್ಸಾನಿಗೆ ಕೊಳಲಿನ ಬಗ್ಗೆ ಆಸಕ್ತಿ ಹೆಚ್ಚಾಯಿತು. ಅದನ್ನು ಆತ ಎಷ್ಟು ಚೆನ್ನಾಗಿ ನುಡಿಸುತ್ತಿದ್ದನೆಂದರೆ ಎಲ್ಲರೂ ಅದನ್ನು ಕೇಳಲೆಂದೇ ಮುಗಿಬೀಳುತ್ತಿದ್ದರು. ಬಡತನದ ಅಸಹಾಯಕತೆಯಿಂದ ಬಿರ್ಸಾನ ತಂದೆ ಸುಗನ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದ. ಈ ದೆಸೆಯಿಂದ ಬಿರ್ಸಾನಿಗೆ ಪ್ರಾಥಮಿಕ ಶಾಲೆ ತನಕ ಕ್ರಿಶ್ಚಿಯನರು ನಡೆಸುತ್ತಿದ್ದ ಶಾಲೆಗಳಲ್ಲಿ ವಿದ್ಯೆ ಪಡೆಯುವ ಅವಕಾಶ ಸಿಕ್ಕಿತ್ತು. ಕ್ರಿಶ್ಚಿಯನ್ನನಾಗಿದ್ದಾಗ ಬಿರ್ಸಾನಿಗೆ ದೌದ್ ಪುರ್ತಿ ಎಂದು ಮರುನಾಮಕರಣ ಮಾಡಲಾಗಿತ್ತು.

ಆಕ್ರೋಶದಿಂದ ಹೋರಾಟದತ್ತ

[ಬದಲಾಯಿಸಿ]

ಆಗ ಬಿರ್ಸಾನಿಗೆ ೧೩ ವರ್ಷ ವಯಸ್ಸೂ ಆಗಿರಲಿಲ್ಲ. ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕೃತಿಯನ್ನು ಹೀಗಳೆಯುವುದರ ವಿರುದ್ದ ಆಗಲೇ ಆತ ಆಕ್ರೋಶ ಕೊಂಡಿದ್ದ. ಮತ್ತೊಂದೆಡೆ ಬಿಳಿಯರ ಕಾನೂನುಗಳು ಮತ್ತು ವ್ಯಾಪಾರಸ್ಥರ ಕಪಟತನಗಳ ನಡುವೆ ತನ್ನ ಜನ ತಮ್ಮ ಭೂಮಿಗಳನ್ನು ಕಳೆದುಕೊಂಡು ದಿನಗೂಲಿಗಳಾಗುತ್ತಿರುವುದನ್ನು ನೋಡಿ ಆತ ಆತಂಕ ಗೊಂಡಿದ್ದ. ಇಂಥಹ ದಿನಗಳಲ್ಲೇ ಬ್ರಿಟಿಷರ ವಿರುದ್ಧ ಆದಿವಾಸಿಗಳು ದಂಗೆ ಏಳಲಾರಂಭಿಸಿದ್ದರು.

ಹೊಸ ಅವತಾರ

[ಬದಲಾಯಿಸಿ]

ಅಣ್ಣ ಬಿರ್ಸಾ ಮತ್ತು ಆತನ ಇಡೀ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನು ತಿರಸ್ಕರಿಸಿ ತಮ್ಮ ಆದಿವಾಸಿ ಸಂಸ್ಕೃತಿಗೆ ಹಿಂದಿರುಗಿತು. ಅಷ್ಟು ಹೊತ್ತಿಗೆ ಬಿರ್ಸಾ ೧೭ ವರ್ಷ ವಯಸ್ಸಿನ ಆಕರ್ಷಕ ಹುಡುಕನಾಗಿದ್ದ. ಓರ್ವ ಆದಿವಾಸಿ ಹುಡುಗಿಯನ್ನು ಪ್ರೇಮಿಸಿ ಅವಳನ್ನು ಮದುವೆ ಆಗುವುದಾಗಿ ಆಕೆಯ ತಂದೆತಾಯಿಗೆ ಹೇಳಿ ನಿಶ್ಚಿತಾರ್ಥವನ್ನು ಮಾಡಿಕೊಂಡ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿರ್ಸಾ ತನ್ನ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕ್ರಿತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದ. ಆದಿವಾಸಿಗಳ ಮಿಥ್ಯೆ ಮತ್ತು ಸಂಕೇತಗಳೆನ್ನೇ ಉಪಯೋಗಿಸಿಕೊಂಡು ಅವರಲ್ಲಿ ಮತ್ತೆ ಸ್ವಾಭಿಮಾನ ಮೂಡುವಂತೆ ಮಾಡಿದ. ಈ ಮಧ್ಯೆ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಮತ್ತು ಆದಿವಾಸಿಗಳಲ್ಲಿ ಹೊಸ ಚೆತನ್ಯವನ್ನು ಮೂಡಿಸಲಿಕ್ಕೆ ಎಂಬ ಕಾರಣದಿಂದಲೋ ಏನೋ ಬಿರ್ಸಾ ತನ್ನನ್ನೇ ದೇವರ ಅವತಾರ ಎಂದು ಘೋಷಿಸಿದ. ತನ್ನ ಈ ಅವತಾರದಲ್ಲಿ ಆತ ಘೋಷಿಸಿದ ಹೊಸ ಧರ್ಮದಲ್ಲಿ ಪ್ರಕೃತಿಯೇ ದೇವರೆಂದೂ, ಸಮಾನ ಸಮಾಜವೇ ನೀತಿಯೆಂದು ಹೇಳುವುದರ ಜೊತೆಗೆ, ಸುಳ್ಳು, ವ್ಯಭಿಚಾರ, ಕಳ್ಳತನ, ಭಿಕ್ಷಾಟನೆ, ಕಪಟತನ, ಸ್ವಾರ್ಥಗಳು ನಿಷೇಧ ಎಂದು ಘೋಷಿಸಿದ.


ಬಿರ್ಸಾ ಮುಂಡಾನ ಈ ಹೊಸ ಧರ್ಮದ ಎಲ್ಲಾ ನೀತಿಗಳು ಆದಿವಾಸಿಗಳ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರಿಂದ, ಆತ ಬಹುಬೇಗ ಜನಪ್ರಿಯತೆ ಪಡೆದ. ಆತನನ್ನು “ದೇವಮಾನವ ” ಎಂದೂ “ಧರ್ತಿ ಅಬ್ಬಾ” (ಭೂಮಿಯ ತಂದೆ) ಎಂದೂ ಜನ ಕೊಂಡಾಡಲಾರಂಭಿಸಿದರು. ಇತರೆ ಬುಡಕಟ್ಟು ಸಮುದಾಯಗಳೂ ಆತನ ಹಿಂಬಾಲಕರಾದರು.

ಬ್ರಿಟಿಷರ ವಿರುದ್ಧ ಸೆಣಸು

[ಬದಲಾಯಿಸಿ]

೧೮೯೩-೯೪ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ದ ಬಿರ್ಸಾ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ. ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ. ೧೮೯೪ರ ಅಕ್ಟೋಬರ್ ೧ ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬ್ರಹತ್ ಮೆರವಣಿಗೆಗೆ ಕರೆ ನೀಡಿದ. “ಉಳುವವನೇ ಭೂಮಿಯ ಒಡೆಯನಾಗಬೇಕು”, ‘ಮಹಾರಾಣಿಯ ಆಡಳಿತವನ್ನು ಸ್ಥಾಪಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿ ಮೆರವಣಿಗೆ ಯಶಸ್ವಿಯಾಯಿತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು ಹೊರಬರುತ್ತಿದ್ದಂತೆಯೇ, ಬಿರ್ಸಾ ತನ್ನ ಚಳುವಳಿಯ ರೂಪವನ್ನೇ ಬದಲಾಯಿಸಿದ. ಬಿಡುಗಡೆಯ ನಂತರ ಭೂಗತನಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ.

ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ ಅವರನ್ನು ಬೆಂಬಲಿಸುತ್ತಿದ್ದ ಜನರ ಮನೆಗಳ ಮೇಲೆ ಮತ್ತು ಪೋಲಿಸರ ತಂಡಗಳ ಮೇಲೆ ಬಿರ್ಸಾನ ಆದಿವಾಸಿಗಳ ಗೆರಿಲ್ಲಾ ಸೈನ್ಯ ದಾಳಿಗಳನ್ನು ಮಾಡಿತು. ನೂರಾರು ಪೋಲೀಸರನ್ನು ಕೊಂದು ಹಾಕಿತು. ಒಮ್ಮೆ ರಾಂಚಿ ಮತ್ತು ಕುಂತಿ ಎಂಬಲ್ಲಿ ಸುಮಾರು ನೂರಾರು ಕಟ್ಟಡಗಳನ್ನು ಭಸ್ಮ ಮಾಡಿತು. ಬಿರ್ಸಾನನ್ನು ಹಿಡಿದು ಕೊಟ್ಟವರಿಗೆ ೫೦೦ರೂಪಾಯಿಗಳ ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತು ಚೋಟಾ ನಾಗ್ಪುರ್ ಸುತ್ತಲಿನ ೫೫೦ ಚದರ ಮೆಲಿ ಪ್ರದೇಶದಲ್ಲಿ ಆತನ ಹೋರಾಟ ವ್ಯಾಪಿಸಿತ್ತು. 1899ರಲ್ಲಿ ಆತ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಕುಂತಿ, ಒಮರ್, ಬಸಿಯ, ರಾಂಚಿ ಇತ್ಯಾದಿ ಕಡೆಗಳಲ್ಲಿ ಪೋಲಿಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. 8 ಪೋಲೀಸರು ಕೊಲ್ಲಲ್ಪಟ್ಟು, ೩೨ಜನ ಪರಾರಿಯಾದರು. ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. ೮೯ ಭೂಮಾಲೀಕರ ಮನೆಗಳು ಬೂದಿಯಾದವು. ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರಗೊಂಡಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ, ಕೊನೆಗೆ ಸೆನ್ಯಕ್ಕೇ ಬರ ಹೇಳಿದ. ೧೯೦೦ರ ಜನವರಿಯಲ್ಲಿ ಬಿರ್ಸಾ ತನ್ನ ದಂಗೆಯ ಎರಡನೇ ಅಧ್ಯಾಯಕ್ಕೆ ಚಾಲನೆ ನೀಡಿದ. ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈ ಜೋಡಿಸಿದ್ದ ಲೇವಾದೇವಿಗಾರರು, ಭೂಮಾಲೀಕರು, ಗುತ್ತಿಗೆದಾರರು ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರು. ಬಹಳಷ್ಟು ಜನ ಸಾವಿಗೀಡಾದರು ಲೆಕ್ಕವಿಲ್ಲದಷ್ಟು ಕಟ್ಟಡಗಳು ದ್ವಂಸಗೊಂಡವು.

ಅಂತ್ಯ

[ಬದಲಾಯಿಸಿ]

ಈ ವೇಳೆಗೆ ಬ್ರಿಟಿಷರ ಸೈನ್ಯ ರಾಂಚಿಗೆ ಆಗಮಿಸಿತು. ಅವರ ಬಂದೂಕುಗಳ ಮುಂದೆ ಬಿರ್ಸಾನ ಆದಿವಾಸಿಗಳ ಸೈನ್ಯದ ಬಿಲ್ಲು ಬಾಣಗಳು ಯಾವ ಲೆಕ್ಕಕ್ಕೂ ಇರಲಿಲ್ಲ. ದುಂಬಾರಿ ಬೆಟ್ಟದ ಹತ್ತಿರ ಬಿರ್ಸಾ ಮತ್ತು ಬ್ರಿಟಿಷರ ಸೈನ್ಯದ ಮುಖಾಮುಖಿ ಆಯಿತು. ಬ್ರಿಟಿಷರ ಬಂದೂಕುಗಳಿಗೆ ನೂರಾರು ಆದಿವಾಸಿಗಳ ಹೆಣಗಳು ಉರುಳಿದವು. ದುಂಬಾರಿ ಬೆಟ್ಟದ ಮೇಲೆ ಹೆಣಗಳ ರಾಶಿ ಬಿತ್ತು. ಈ ಹತ್ಯಾಕಾಂಡದ ನಂತರ ಜನ ಈ ಬೆಟ್ಟವನ್ನು “ಹೆಣಗಳ ಬೆಟ್ಟ” ಎಂದು ಕರೆಯಲಾರಂಬಿಸಿತು. ೧೮೯೯ರ ಮಾರ್ಚ್ ತಿಂಗಳಿನಲ್ಲಿ ಚಕ್ರ ಧರ್ಫ಼ುರ್ ಎಂಬ ಕಾಡಿನಲ್ಲಿ ಬಿರ್ಸಾ ನಿದ್ರಿಸುತ್ತಿದ್ದಾಗ ಆತನನ್ನು ಬ್ರಿಟಿಷರು ಬಂಧಿಸಿದರು. ಬಿರ್ಸಾ ಮತ್ತು ಆತನ ೪೮೨ ಸಂಗಡಿಗರ ವಿರುದ್ದ ಹಲವಾರು ಆರೋಪಗಳನ್ನು ದಾಖಲಿಸಿ ವಿಚಾರಣೆಗಳನ್ನು ಪ್ರಾರಂಭಿಸಲಾಯಿತು. ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗಲೇ ಬಿರ್ಸಾ ಜೈಲಿನಲ್ಲಿ ರಕ್ತವನ್ನು ವಾಂತಿ ಮಾಡಿಕೊಳ್ಳಲು ಆರಂಭಿಸಿದ. ೧೯೦೦ರ ಜೂನ್ ೯ರಂದು ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆದ. ಆಗ ಆತನಿಗೆ ಕೇವಲ ೨೫ವರ್ಷ ವಯಸ್ಸು..

ಕೀರ್ತಿಯಲ್ಲಿ ಜೀವಂತ

[ಬದಲಾಯಿಸಿ]

ತನ್ನ ಜನಗಳಿಗಾಗಿ ಹೋರಾಡಿದ ಬಿರ್ಸಾ ಮುಂಡಾ ಆದಿವಾಸಿಗಳಲ್ಲಿ ಇಂದೂ ಜೀವಂತನಾಗಿದ್ದಾನೆ.

ಇಂದು ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ.ಬಿರ್ಸಾ ತಂತ್ರಜ್ಞಾನ ಕಾಲೇಜು, ಬಿರ್ಸಾ ಕೃಷಿ ಕಾಲೇಜು, ಪ್ರಸಿದ್ಧ ಆಟದ ಮೈದಾನ್ ಇವೆಲ್ಲಾ ಇವೆ. ಪ್ರಸಿದ್ಧ ಬರಹಗಾರ್ತಿ ಮಹಾಶ್ವೇತಾ ದೇವಿ ಅವರ ‘ಅರಣ್ಯೇರ್ ಅಧಿಕಾರ್’ ಎಂಬ ಬೆಂಗಾಲಿ ಕೃತಿ ಬಿರ್ಸಾ ಮುಂಡಾ ಅವರ ಸಾಹಸಮಯ ಬದುಕನ್ನು ಆಧರಿಸಿದೆ.

ಉಲ್ಲೇಖ

[ಬದಲಾಯಿಸಿ]