ಬಿಕ್ಕಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಕ್ಕಳಿಕೆ ಎಂದರೆ ಉಸಿರು ಎಳೆದುಕೊಳ್ಳುವಾಗ ಹಠಾತ್ತಾಗಿ ಅದಕ್ಕೆ ತಡೆಯೊಡ್ಡುವ ಅನೈಚ್ಚಿಕ ಕ್ರಿಯೆ ಮತ್ತು ಇದರಿಂದ ಉದ್ಭವಿಸುವ ಸದ್ದು (ಹಿಕ್ಕಪ್ಸ್). ಬಿಕ್ಕಳಿಕೆ ತುಟಿಕೆ ಪರ್ಯಾಯ ಪದಗಳು. ಮಿನಿಟಿಗೆ ಎರಡು ಮೂರು ಸಲ ಈ ಕ್ರಿಯೆ ಮರುಕಳಿಸುತ್ತ ಹಲವಾರು ಮಿನಿಟುಗಳ ಬಳಿಕ ತಾನಾಗಿಯೇ ನಿಲ್ಲುವುದು ವಾಡಿಕೆ. ಕೆಲವು ಸಂದರ್ಭಗಳಲ್ಲಿ ಇದು ಪಟ್ಟು ಹಿಡಿದಂತೆ ದೀರ್ಘಕಾಲಿಕವಾಗಿಯೂ ಇರಬಹುದು. ದಿನಗಟ್ಟಲೆಕೂಡ. ಇಂಥ ದೀರ್ಘಕಾಲಿಕ ಬಿಕ್ಕಳಿಕೆ ಕೆಲವು ಸಂದರ್ಭಗಳಲ್ಲಿ ಮರಣಸೂಚಕವಾಗಿರುವುದೂ ಉಂಟು.

ಹಠಾತ್ತಾಗಿ ವಪೆ ಸಂಕೋಚಿಸುವುದರಿಂದ ಬಿಕ್ಕಳಿಕೆ ಉಂಟಾಗುತ್ತದೆ. ಆಗ ವ್ಯಕ್ತಿ ಉಸಿರನ್ನು ಎಳೆದು ಕೊಳ್ಳಬೇಕಾಗುತ್ತದೆ. ಆದರೆ ಮರುಕ್ಷಣ ಉಸಿರು ನಾಳದ ದ್ವಾರ (ಗ್ಲಾಟೈಸ್-ಇದು ಗಂಟಲಿನಲ್ಲಿದೆ) ಹಠಾತ್ತಾಗಿ ಮುಚ್ಚಿಕೊಳ್ಳುವುದರಿಂದ ಉಚ್ಛ್ವಾಸವೂ ಹಠಾತ್ತಾಗಿ ತಡೆಯಲ್ಪಡುತ್ತದೆ. ಈ ತಡೆ ಗಂಟಲಲ್ಲೇ ಉಂಟಾಗುವುದರಿಂದ ಬಿಕ್ಕಳಿಕೆಯ ವಿಶಿಷ್ಟ್ಟ ಸದ್ದು ಹೊಮ್ಮುತ್ತದೆ. ಅಂದರೆ ಬಿಕ್ಕಳಿಕೆ ವಿಶಿಷ್ಟ ರೀತಿಯ ಮತ್ತು ಕ್ಷಣಿಕವಾದ ಉಚ್ಛ್ವಾಸ ಹಾಗೂ ಅಸಂದರ್ಭದಲ್ಲಿ ಉದ್ಭವಿಸುವ ಸದ್ದು. ನಿಯತಕಾಲಗಳಲ್ಲಿ ವಪೆ ಕ್ರಮಬದ್ಧವಾಗಿ ಸಂಕೋಚಿಸುತ್ತ ಉಚ್ಛ್ವಾಸಕ್ಕೆ ಕಾರಣವಾಗುವುದು ಸರಿಯಷ್ಟೆ. ಇದರ ಜೊತೆಗೆ ಮಧ್ಯೆ ವಪೆ ಸಂಕೋಚಿಸಿ ಬಿಕ್ಕಳಿಕೆ ಉಂಟುಮಾಡಬೇಕಾದರೆ ಅದಕ್ಕೆ ಕಾರಣವಿರಬೇಕು. ಅಲ್ಲದೆ ವಪೆ ನರಸಂದೇಶದಿಂದ ಮಾತ್ರ ಸಂಕೋಚಿಸಬಲ್ಲುದಾದ್ದರಿಂದ (ಅನೈಚ್ಚಿಕ ಸಂಕೋಚನವಿದು) ಹೆಚ್ಚುವರಿ ಸಂಕೋಚನಗಳಿಗೂ ಯುಕ್ತ ನರ ಸಂದೇಶ ಒದಗಬೇಕಾಗುತ್ತದೆ. ಬಿಕ್ಕಳಿಕೆಗೆ ಕಾರಣಭೂತವಾದ ಪ್ರಚೋದನೆ ಯಾವುದೋ ನಿರ್ದಿಷ್ಟ ಸ್ಥಳದಲ್ಲಿ ಪ್ರಾರಂಭವಾಗಿ ಅಲ್ಲಿ ಪೂರೈಕೆ ಆಗುವ ನರದ ಮೂಲಕ ಮಿದುಳಿನ ಮೆಡುಲ್ಲ ಎಂಬ ಭಾಗ ತಲಪುತ್ತದೆ. ಬಿಕ್ಕಳಿಕೆ ಕೇಂದ್ರ (ಹಿಕ್ಕಪ್ ಸೆಂಟರ್) ಇರಬೇಕಾದುದು ಮತ್ತು ಬಹುಶ: ಇರುವುದು ಇಲ್ಲೇ. ಇಲ್ಲಿಂದ ಕ್ರಿಯಾಸಂದೇಶ ಫ್ರೆನಿಕ್ ನರದ ಉಗಮಸ್ಥಳಕ್ಕೆ ತಲುಪಿ ಆ ನರದ ಮೂಲಕ ವಪೆಗೆ ಒಯ್ಯಲ್ಪಟ್ಟು ಇದರ ಸಂಕೋಚನಕ್ಕೆ ಕಾರಣವಾಗುತ್ತದೆ. ಕೇಂದ್ರದಿಂದ ಕ್ರಿಯಾತ್ಮಕ ಸಂದೇಶ ವೇಗಸ್ ನರದ ಮೂಲಕವೂ ಅದೇ ವೇಳೆ ಸಾಗಿ ಗಂಟಲಿನಲ್ಲಿ ಶ್ವಾಸನಾಳದ ದ್ವಾರ ಹಠಾತ್ತಾಗಿ ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಇವೆರಡು ಕ್ರಿಯೆಗಳೂ ಒಂದಾದ ಮೇಲೆ ಇನ್ನೊಂದು ಜರಗುವುದೇ ಬಿಕ್ಕಳಿಕೆಯ ಕ್ರಿಯಾವಿನ್ಯಾಸ (ಮೆಕ್ಯಾನಿಸಮ್).

ಬಿಕ್ಕಳಿಕೆಯ ಅನೈಚ್ಛಿಕ ಪ್ರತಿವರ್ತನೆ ಚಾಪದಲ್ಲಿ (ರಿಫ್ಲೆಕ್ಸ್ ಆರ್ಕ್) ಕ್ರಿಯೆ ಎಲ್ಲಿಂದಾದರೂ ಪ್ರಾರಂಭವಾಗಿ ಬಿಕ್ಕಳಿಕೆ ಉಂಟಾಗಬಹುದು.

ಉಗಮ ಸ್ಥಳ[ಬದಲಾಯಿಸಿ]

ಜಠರ, ಯಕೃತ್ತು, ಕರುಳು ಮುಂತಾದ ಸ್ಥಳಗಳಿಂದ ಪ್ರಚೋದನೆ ಉಂಟಾಗುವುದು ಸಾಮಾನ್ಯ. ಬಾಲ್ಯದಲ್ಲಿ ಜಂತುಹುಳು ವಗೈರೆ, ವಯಸ್ಕರಲ್ಲಿ ಮದ್ಯಸೇವನೆ, ಅಧಿಕ ಮಸಾಲೆ ಸಾಮಾನುಗಳೊಡನೆ ತಯಾರಾದ ಹಾಗೂ ಬಿಸಿಯಾದ ಆಹಾರ ವಸ್ತುಗಳ ಸೇವನೆ ಮುಂತಾದವು ಬಿಕ್ಕಳಿಕೆಯ ಸಾಮಾನ್ಯ ಪ್ರಚೋದಕಗಳು. ವಲಸೆಯಾಗಿ ಬಂದು ಯಕೃತ್ತಿನಲ್ಲಿ ನೆಲಸಿರುವ ಏಡಿಗಂತಿ, ಜಠರದ ಏಡಿಗಂತಿ, ದೊಡ್ಡಕರುಳಿನ ಏಡಿಗಂತಿ, ಗರ್ಭಾಶಯದ ಏಡಿಗಂತಿ, ಯಕೃತ್ತಿನಲ್ಲಿ ಪರಂಗಿ ರೋಗದ ಕೊನೆಯ ಹಂತದ ಗಮ್ಮ ಎಂಬ ಗಂಟು ಮತ್ತು ಯಕೃತ್ತಿನ ಕೀವು ಬಾವು ಸ್ಥಿತಿ (ಆಬ್ಬಿಸ್) ಇವು ಬಿಕ್ಕಳಿಕೆಗೆ ಪ್ರಚೋದಕಗಳೆಂದು ತಿಳಿದಿದೆ. ಉದರದ ಒಳಪೊರೆಯ ಉರಿಊತ (ಪೆರಟೊನೈಟಿಸ್), ಕರುಳಿನಲ್ಲಿ ಹಠಾತ್ ಆಡಚಣೆ, ಉದರದಲ್ಲಿ ಶಸ್ತ್ರಕ್ರಿಯಾನಂತರ ಕಾಣಬರಬಹುದಾದ ಜಠರದ ತೀವ್ರ ಹಿಗ್ಗು (ಅಕ್ಯೂಟ್ ಡೈಲಟೇಷನ್ ಆಫ್ ದಿ ಸ್ಟೊಮಕ್) ಈ ರೋಗ ಪರಿಸ್ಥಿತಿಗಳಲ್ಲಿ ಕೂಡ ಬಿಕ್ಕಳಿಕೆಯ ಅನೈಚ್ಛಿಕ ಪ್ರತಿವರ್ತನ ಚಾಪದ ಪ್ರಾರಂಭದಲ್ಲೇ ಪ್ರಚೋದನೆ ಉಂಟಾಗುತ್ತದೆ. ಈ ಸಂದರ್ಭಗಳಲ್ಲಿ ಪಟ್ಟು ಬಿಡದ ಬಿಕ್ಕಳಿಕೆ ಕಂಡುಬಂದರೆ ಅದು ಮರಣಸೂಚಕ ಎಂದು ಗಣಿಸಬಹುದು.

ಕೇಂದ್ರ[ಬದಲಾಯಿಸಿ]

ಬಿಕ್ಕಳಿಕೆ ಕೇಂದ್ರವೇ ಪ್ರಚೋದನೆಗೆ ನೇರವಾಗಿ ಈಡಾಗಿ ಬಿಕ್ಕಳಿಕೆ ಉಂಟಾಗಬಹುದು. ಮಿದುಳಿನ ಉರಿಊತ (ಎನ್‍ಸಿಫಲೈಟಿಸ್), ಮಿದುಳುಪೊರೆ ಉರಿಊತ (ಮೆನಿಸ್ ಜೈಟಿಸ್), ಮಿದುಳಿನಲ್ಲಿ ದುರ್ಮಾಂಸ (ಟ್ಯೂಮರ್), ಮಿದುಳಿನ ರಕ್ತಸ್ರಾವ (ಝರೀಮಿಯ), ನ್ಯುಮೋನಿಯ ಗೌಟ್ ಮುಂತಾದ ರೋಗಗಳಲ್ಲಿ ಕಾಣಬರುವ ವಿಷಮತೆ (ಟಾಕ್ಸೀಮಿಯ) ಮನೋಕ್ಲೇಶ ಒತ್ತಡ ಮತ್ತು ಉನ್ಮಾದ (ಹಿಸ್ಟೀರಿ ಕಲ್‍ಕನ್‍ವರ್ಶನ್‍ಡಿಸಾರ್ಡರ್), ಮುಪ್ಪಿನಲ್ಲಿ ಕೇಂದ್ರದ ನೆರೆಯಲ್ಲಿ ಕಾಣಬರಬಹುದಾದ ಶೈಥಿಲ್ಯ ಇವುಗಳಿಂದ ಕೇಂದ್ರದ ನೇರ ಪ್ರಚೋದನೆ ಉಂಟಾಗಿ ಬಿಕ್ಕಳಿಕೆ ಪ್ರಾರಂಭವಾಗಬಹುದು. ಮಾನಸಿಕಜನ್ಯ ಬಿಕ್ಕಳಿಕೆ ಸಾಮಾನ್ಯವಾಗಿ 15 ರಿಂದ 25 ವಯಸ್ಸಿನ ಸ್ತ್ರೀಪುರುಷರಲ್ಲಿ ಕಂಡುಬರುತ್ತದೆ. ಇವರು ದಿನದಲ್ಲಿ ಎಚ್ಚರವಾಗಿರುವ ಕಾಲವೆಲ್ಲ ಸತತವಾಗಿ ಮಿನಿಟಿಗೆ 2-3 ಬಾರಿ ಬಿಕ್ಕಳಿಸುತ್ತ ಇರುತ್ತಾರೆ. ನಿದ್ರಾಕಾಲದಲ್ಲಿ ಬಿಕ್ಕಳಿಕೆ ತಾನಾಗಿಯೇ ಮಾಯವಾಗುತ್ತದೆ. ಊಟಮಾಡುವಾಗ ಬಿಕ್ಕಳಿಕೆಯಿಂದ ಕಷ್ಟಪಡುತ್ತಿದ್ದರೂ ಬಿಕ್ಕಳಿಕೆ ನಿಲ್ಲದೆ ಮುಂದುವರಿಯುತ್ತದೆ. ವರ್ಷಾಂತರ ಈ ರೀತಿ ಬಿಕ್ಕಳಿಕೆ ಇರಬಹುದಾದರೂ ಇದ್ದಕ್ಕಿದ್ದಂತೆ ಅದು ತಾನಾಗಿಯೇ ನಿಂತುಹೋಗುತ್ತದೆ. ಬಹುಶಃ ತನ್ನ ಭಾವೋನ್ಮಾದಿ, ನಿರಾಶೆಯನ್ನು ನಡವಳಿಕೆಯ ಮೂಲಕ ಪ್ರಕಟಿಸುವುದರಿಂದ ವ್ಯಕ್ತಿಗೆ ಬಿಕ್ಕಳಿಕೆಯ ನಿಲ್ಲುತ್ತದೆ.

ಅಂತ್ಯ[ಬದಲಾಯಿಸಿ]

ಫ್ರೆನಿಕ್ ನರದ ಮಾರ್ಗದಲ್ಲಿ ಎಲ್ಲಯೇ ಆಗಲಿ ಪ್ರಚೋದನೆ ಪ್ರಾರಂಭವಾಗಿ ಬಿಕ್ಕಳಿಕೆ ಬರಬಹುದು. ಎದೆಯ ಅಡ್ಡತಡಿಕೆಯಲ್ಲಿ (ಮ್ಭಿಡಿಯಾಸ್ಟೈನಮ್) ದುರ್ವಾಂಸ, ಮಕ್ಕಳಲ್ಲಿ ಫ್ರೆನಿಕ್ ನರದ ನೆರೆಯಲ್ಲಿ ಕ್ಷಯಗಂತಿ ಅವನತಿ, ಹೃದಯದ ಮೇಲ್ಪೊರೆಯ (ಪೆರಿತಿರ್ಡಿಯಮ್) ಉರಿಊತ, ಫ್ರೆನಿಕ್ ನರದ ನೆರೆಯಲ್ಲಿ ಶ್ವಾಸಕೋಶದ ಮೇಲ್ಪೊರೆಯ ಉರಿಊತ (ಮೀಡಿಯಾಸೈನಲ್ ಪ್ಲೂರಿಸಿ), ಮಹಾಪಥಮನಿ ಹಿಗ್ಗಿದ ಸ್ಥಿತಿ (ಅಯೋರ್ಟಿಕ್ ಅನ್ಯೂರಿಸಮ್); ವಪೆಯ ಬುಡದಲ್ಲಿ ವ್ರಣ, ವಪೆಯ ಮೂಲಕ ಎದೆ ಒಳಕ್ಕೆ ಚಾಚಿಕೊಂಡಿರುವ ಅಂತ್ರವೃದ್ಧಿ (ಡಯಾಪ್ರಾಗ್ ಮ್ಯಾಟಿಕ್ ಹರ್ನಿಯ) ಈ ಸ್ಥಿತಿಗಳಲ್ಲಿ ಫ್ರೆನಿಕ್ ನರದ ನೇರ ಪ್ರಚೋದನೆಯಿಂದಾಗಿ ಬಿಕ್ಕಳಿಕೆ ಉಂಟಾಗಬಹುದು. ನ್ಯೂಮೋನಿಯದಲ್ಲಿ ಬರುವ ಬಿಕ್ಕಳಿಕೆ ವಿಷಮತೆ ಮಾತ್ತ ಕಾರಣವಲ್ಲದೆ ವಪೆಯ ಮೇಲಿನ ಪೊರೆಯ ಉರಿಊತವೂ (ಡಯಾಫ್ರಾಗ್‍ಮ್ಯಾಟಿಕ್ ಪ್ಲೊರಿಸಿ) ಕಾರಣವಾಗಬಹುದು.

ಅಪರೂಪವಾಗಿ ತಲೆದೋರುವ ಸಾಂಕ್ರಾಮಿಕ ಬಿಕ್ಕಳಿಕೆಯಲ್ಲಿ (ಎಪಿಡೆಮಿಕ್ ಹಿಕ್ಕಪ್, ಇನ್‍ಫೆಕ್ಷಿಯ ಹಿಕ್ಕಪ್) ಬಿಕ್ಕಳಿಕೆ ಸತತವಾಗಿರುತ್ತದೆ. ನಡುನಡುವೆ ಹಲವು ಕ್ಷಣಗಳ ಬಿಡುವುಗಳಿಂದ ಕೂಡಿರುತ್ತದೆ. ಸುಮಾರು ಒಂದು ವಾರದಲ್ಲಿ ತಾನಾಗಿಯೇ ನಿಂತುಹೋಗುತ್ತದೆ. ಬಹುಶಃ ಎನ್ ಸಿಫಲೈಟೀಸ್ ಲೆಥಾರ್ಜಿಕ ಎಂಬ ರೋಗದ ವಿಶೇಷ ರೂಪವಿದು. ಮಾಮೂಲ ಲೆಫಾರ್ಜಿಕದಲ್ಲಿ ರೋಗ ವಿಕಾರ ನಡು ಮಿದುಳಿನ ಭಾಗಗದಲ್ಲಿಯು (ಮಿಡ್ ಬ್ರ್ರೆಯ್ನ್) ಸಾಂಕ್ರಾಮಿಕ ಬಿಕ್ಕಳಿಕೆಯಲ್ಲಿ ಮೆಡುಲ್ಲದಲ್ಲಿಯೂ ಕಾಣಬರುತ್ತದೆ.

ಗೊತ್ತುಗುರಿ ಇಲ್ಲದ (ಕ್ಯಾಶುಯಲ್) ಬಿಕ್ಕಳಿಕೆ ಕೆಲವು ಮಿನಿಟುಗಳಲ್ಲಿ ತಾನಾಗಿಯೇ ನಿಂತುಹೋಗುತ್ತದೆ. ಆದರೂ ಅದರ ತೊಂದರೆ ಸಾಕಷ್ಟು, ಇದರ ನಿವಾರಣೆಗೆ ಹಲವಾರು ಉಪಾಯಗಳು ರೂಢಿಯಲ್ಲಿವೆ, ಒಂದೆರಡು ಗುಟುಕು ನೀರು ಕುಡಿಯುವುದು, ಕಲ್ಲುಸಕ್ಕರೆ ತುಂಡು ಬಾಯಲ್ಲಿಟ್ಟುಕೊಂಡು ಚೀಪುತ್ತಿರುವುದು ಇದನ್ನು ಪ್ರಯೋಗಿಸಿದಾಗ ಬಿಕ್ಕಳಿಕೆ ನಿಲ್ಲುವುದು ಇವುಗಳಿಂದಲೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಬಹುಶ: ಬಿಕ್ಕಳಿಕೆ ಅಕಾಲಕ್ಕೆ ತಾನಾಗಿಯೇ ನಿಂತುಹೋಗುತ್ತಿತ್ತೇನೋ. ಏನೇ ಆಗಲಿ ಪದೇ ಪದೇ ಬರುವ ಬಿಕ್ಕಳಿಕೆಗೆ ವೈದ್ಯಕೀಯ ನೆರವು ಅಗತ್ಯ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Provine, Robert R. Curious Behavior: Yawning, Laughing, Hiccupping, and Beyond (Harvard University Press; 2012) 246 pages; examines the evolutionary context for humans
  • Shubin, Neil (February 2008). "Fish Out of Water". Natural History. 117 (1): 26–31. ಟೆಂಪ್ಲೇಟು:INIST. – hiccup related to reflex in fish and amphibians.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: