ಬಿಂದಿಗೆ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂದಿಗೆ ಗಿಡವು ಮ್ಯಾಲ್ವೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ (ಹಾಲಿಹಾಕ್). ದಾಸವಾಳ, ಬೆಂಡೆ ಮುಂತಾದವುಗಳ ಹತ್ತಿರ ಸಂಬಂಧಿ. ಆಲ್ತೀಯ ರೋಸಿಯ ಇದರ ವೈಜ್ಞಾನಿಕ ಹೆಸರು. ನೋಡಲು ಹೆಚ್ಚು ಕಡಿಮೆ ಪುಂಡಿಗಿಡವನ್ನು (ಹೈಬಿಸ್ಕಸ್ ಕ್ಯಾನಬಿನಸ್) ಹೋಲುತ್ತದೆ. ಇದು ಸುಮಾರು 2 ಮೀ ಎತ್ತರಕ್ಕೆ ಬೆಳೆಯುವ ವಾರ್ಷಿಕ ಸಸ್ಯ. ಎಲೆಗಳು ಸರಳರೀತಿಯವು; ಹಸ್ತಾಕಾರದವು. ಎಲೆ ಹಾಗೂ ಕಾಂಡಗಳ ಮೇಲೆ ನಯ ರೋಮಗಳುಂಟು. ಗಿಡದ ತುದಿಯೆಡೆಗೆ ಪ್ರತಿಯೊಂದು ಎಲೆಯ ಕಕ್ಷದಲ್ಲಿ ಒಂದೊಂದು ಹೂ ಅರಳುತ್ತದೆ. ಹೂಗಳು ಬಿಳಿ ನಸುಗೆಂಪು ಇಲ್ಲವೆ ಕೆಂಪು ಬಣ್ಣದವಾಗಿದ್ದು ಬಲು ಆಕರ್ಷಕವಾಗಿವೆ.

ಈ ಗಿಡವನ್ನು ವೃದ್ಧಿಸುವುದು ಬೀಜಗಳ ಮೂಲಕ. ಬೀಜ ಬಿತ್ತಿದ ಸುಮಾರು ಎರಡೂವರೆ ತಿಂಗಳ ತರುವಾಯ ಹೂಬಿಡಲು ಆರಂಭಿಸಿ ಮುಂದೆ ಸುಮಾರು ಎರಡು ತಿಂಗಳ ಕಾಲ ಹೂ ಕೊಡುತ್ತದೆ.

ಎಲೆ, ಕಾಂಡ, ಹೂಗಳನ್ನು ಹಿಸುಕಿದರೆ ಲೋಳೆಯಂಥ ದ್ರವ ಒಸರುತ್ತದೆ. ಗಾಯಗೊಳಿಸಿದ ಎಲೆ, ಹೂಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕಲಕಿದರೆ ಬರುವ ರಸ ಆಮಶಂಕೆಯಲ್ಲಿ ಶಮನಕಾರಿಯಾಗಿ ಬಳಕೆಯಾಗುತ್ತದೆ. ಎಲೆಗಳನ್ನು ಅರೆದು ಗಾಯಗಳಿಗೆ ಹಚ್ಚುವುದುಂಟು. ಎಲೆ ಹೂಗಳನ್ನು ಎಣ್ಣೆ ಹಚ್ಚಿ ಸುಟ್ಟ ಗಾಯಕ್ಕೆ ಕಟ್ಟುವುದಿದೆ.