ಬಾಸೆಲ್ ಮಿಶನ್ ಪ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೈಸ್ತ ಮತ ಪ್ರಚಾರಕ್ಕಾಗಿ ಪೋರ್ಚುಗೀಸ್, ಇಂಗ್ಲೆಂಡ್, ಇಟಲಿ ಮೊದಲಾದ ದೇಶಗಳಿಂದ ಮತ ಪ್ರಚಾರಕರು ಕ್ರಿ.ಶ. 16ನೇ ಶತಮಾನದಷ್ಟು ಹಿಂದಿನಿಂದಲೂ ಭಾರತಕ್ಕೆ ಬರುತ್ತಿದ್ದರು. ಭಾರತದ ಎಲ್ಲಾ ಭಾಷೆಗಳಲ್ಲಿ ಮುದ್ರಣ ವ್ಯವಸ್ಥೆಯನ್ನು ಮಾಡಿಕೊಟ್ಟವರು ಇವರೇ ಎನ್ನಬಹುದು. ಭಾಷಾ ಶಾಸ್ತ್ರವನ್ನು ಕ್ರಮವಾಗಿ ಇಲ್ಲಿ ಬೆಳೆಸಿದವರೂ ಇವರೇ. ಭಾರತೀಯ ವಿವಿಧ ಭಾಷೆಗಳನ್ನು ಕಲಿಯುವುದರಲ್ಲಿ ಮಗ್ನರಾದ ಪಾಶ್ಚಾತ್ಯರಿಗೆ ಹತ್ತಾರು ಬಗೆಯ ಲಿಪಿಗಳೂ, ಅವುಗಳ ವಕ್ರತೆ ಮತ್ತು ಭಾರ ಇವೆಲ್ಲಾ ಬಹಳ ಕಷ್ಟವನ್ನುಂಟುಮಾಡಿರಬೇಕು. ಭಾರತದ ಎಲ್ಲಾ ಭಾಷೆಗಳಿಗೆ ರೊಮನ್ ಲಿಪಿಯಲ್ಲಿ ಇತರ ಸ್ವರಸೂಚಕ ಚಿಹ್ನೆಗಳೊಂದಿಗೆ ಉಪಯೋಗಿಸುವ ಕ್ರಮವನ್ನು ಬಳಕೆಗೆ ತಂದರು.

ಕನ್ನಡದಲ್ಲಿ ಮುದ್ರಣ ಪ್ರಾರಂಭ[ಬದಲಾಯಿಸಿ]

ಈಸ್ಟ್ ಇಂಡಿಯಾ ಕಂಪೆನಿಯು ತಮ್ಮ ಅಧಿಕಾರವನ್ನುಪಯೋಗಿಸಿ ರೋಮನ್ ಲಿಪಿಯನ್ನು ದೇಶದ ಭಾಷೆಗಳಿಗೆಲ್ಲ ರೂಡಿಗೆ ತರಬೇಕೆಂಬ ಪ್ರಯತ್ನದಲ್ಲಿದ್ದರೂ ಹೊಸಗನ್ನಡ ಸಾಹಿತ್ಯದ ತೇರನ್ನು ಮೊದಲಿಗೆ ಎಳೆದ ಬ್ರಿಟಿಷ್ ಅಧಿಕಾರಿಗಳು ಮಿಶನರಿಗಳು ಹಾಗೂ ದೇಶೀಯರ ನೆರವನ್ನು ಪಡೆದು ಮೊಳೆಗಳನ್ನು ತಯಾರಿಸಿ 1817ರಿಂದ ಕನ್ನಡ ಮುದ್ರಣವನ್ನು ಆರಂಭಿಸಿದರು. ಕಂಪೆನಿ ಸರಕಾರವು ತಮ್ಮ ಆಡಳಿತದ ಸೌಕರ್ಯಕ್ಕಾಗಿ ಕನ್ನಡ, ತೆಲುಗು, ತಮಿಳು ಕೋಶಗಳನ್ನು ತಜ್ಞರಾದ ಮಿಶನರಿಗಳಿಗೆ ಧನಸಹಾಯ ನೀಡಿ ಸಂಗ್ರಹಿಸಿ ಅಚ್ಚುಹಾಕಿಸಿದರು. ಲಂಡನ್ ಮಿಶನ್‍ನ ವಿಲಿಯಂ ರೀವ್ ಮದ್ರಾಸ್ ಸರಕಾರದ ಆದೇಶದ ಮೇರೆಗೆ ಇಂಗ್ಲಿಷ್ ಕನ್ನಡ (1824) ಮತ್ತು ಕನ್ನಡ ಇಂಗ್ಲಿಷ್(1832)- ಈ ಎರಡು ಶಬ್ದಕೋಶಗಳನ್ನು ತಯಾರಿಸಿದ. 1830ರಲ್ಲಿ ಕೃಷ್ಣಮಾಚರ್ಯರವರ ಕನ್ನಡ ವ್ಯಾಕರಣ ಮುದ್ರಣಗೊಂಡಿತು. ಈ ಮುದ್ರಣಗಳು ನಡೆಯುವಾಗ ಇಂಗ್ಲಿಷ್ ಮೊಳೆಗಳನ್ನು ಜೋಡಿಸುವುದು ಸುಲಭವಾಗಿತ್ತು. ಅಲ್ಲಲ್ಲಿ ಸೇರಿಸಿಕೊಳ್ಳಬೇಕಾದ ಕನ್ನಡ ಅಕ್ಷರಗಳಿಗಾಗಿ ಈ ಮೊದಲೇ ಬಳಕೆಯಲ್ಲಿದ್ದ ಮರದ ತುಂಡಿನ ಮೇಲೆ ಚಿತ್ರಗಳನ್ನು ಕೊರೆಯುವ ಕ್ರಮವನ್ನನುಸರಿಸಿ ಕನ್ನಡ ಅಕ್ಷರಗಳನ್ನು ಕೈಯಲ್ಲಿಯೇ ಕೊರೆದು ಬರೆಸಿ ಮುದ್ರಣ ಮಾಡಲಾಗುತ್ತಿತ್ತು. ತೆಲುಗು ಹಾಗೂ ಕನ್ನಡಕ್ಕೆ ಒಂದೇ ಬಗೆಯ ಅಚ್ಚುಮೊಳೆಗಳನ್ನು ಕೊಲೆಜ್ ಪ್ರೆಸ್‍ನವರು ಬಳಸುತ್ತಿದ್ದರೆಂಬ ದಾಖಲೆಗಳು ಸಿಗುತ್ತವೆ. ಆದ್ದರಿಂದ ಮೊದಲು ಮುದ್ರಣಗೊಂಡ ಕೃತಿಗಳು ತೆಲುಗು ಅಕ್ಷರದಂತೆ ಕಾಣುವ ಅಕ್ಷರದ ಮೊಳೆಗಳನ್ನು ಉಪಯೋಗಿಸಿಕೊಂಡು ಕನ್ನಡ ಪುಸ್ತಕಗಳನ್ನು ಮುದ್ರಿಸಿದ ಹಲವಾರು ಕೃತಿಗಳು ಲಭ್ಯವಿದೆ. ಉದಾ. 1817 ಕಲ್ಕತ್ತದಲ್ಲಿ ಮುದ್ರಣವಾದ ವಿಲಿಯಂ ಕೇರಿಯ ಮೊದಲ ಕನ್ನಡ ವ್ಯಾಕರಣ, ಮತ್ತು 1824ರ ಸತ್ಯವೇದದ ಭಾಗವಾಗಿರುವ ಹೊಸ ಒಡಂಬಡಿಕೆ. ನಂತರ ಬಳ್ಳಾರಿ ಮಿಶನ್ ಪ್ರೆಸ್‍ನಲ್ಲಿ ಜಾನ್ ಹಾಂಡ್ಸ್‍ನಿಂದ ಪ್ರಕಟವಾದ ಕನ್ನಡ ಸತ್ಯವೇದದ ಹಲವು ಭಾಗಗಳು ಹೀಗೆಯೇ ಮುದ್ರಣಗೊಂಡುದು ಕಂಡು ಬರುತ್ತದೆ.

ಕಲ್ಲಚ್ಚು ಮುದ್ರಣ[ಬದಲಾಯಿಸಿ]

ಕನ್ನಡದ ಅಚ್ಚುಮೊಳೆಗಳ ಮುದ್ರಣ ಬಳಕೆಗೆ ಬರುವ ಮೊದಲು ಇನ್ನೊಂದು ಬಗೆಯ ಮುದ್ರಣವಿದ್ದಿತು.ಅದುವೇ ಶಿಲಾ ಮುದ್ರಣ ಅಥವಾ ಕಲ್ಲಚ್ಚು ಮುದ್ರಣ (Lithography print) ಮಧ್ಯಯುಗ ಕಾಲದಿಂದ ಯುರೋಪಿನಲ್ಲಿ ಮುದ್ರಾಯಂತ್ರಗಳು ಲಭ್ಯವಿದ್ದವು. ರೋಮನ್, ಇಂಗ್ಲಿಷ್ ಇತ್ಯಾದಿ ಲಿಪಿಗಳ ಅಕ್ಷರಗಳೂ ನಿರ್ಮಿತವಾಗಿ ಮುದ್ರಣ ಕಾರ್ಯ ನಿಯಮಿತವಾಗಿ ಜಗತ್ತಿನಾದ್ಯಂತ ಪ್ರಸಾರವಾಯಿತು. ಆದರೆ ಕನ್ನಡ ಲಿಪಿಯ ಅಕ್ಷರ ಮೊಳೆಗಳು ಲಭ್ಯವಿಲ್ಲದಿದ್ದಾಗ ಆ ಮಧ್ಯಂತರದ ಅವಧಿಯಲ್ಲಿ ಕಲ್ಲಚ್ಚು ಮುದ್ರಣ ಅಸ್ಥಿತ್ವಕ್ಕೆ ಬಂದಿತು.

ಈ ಶಿಲಾ ಮುದ್ರಣವನ್ನು ಎಲೋಯ್ಡ್ ಸೆನೆಫೆಲ್ಡ್ ಎಂಬ ಪ್ರೇಗ್ ನಿವಾಸಿ 1796ರಲ್ಲಿ ಕಂಡು ಹಿಡಿದ. ಇದಕ್ಕಾಗಿ ಕ್ಯಾಲ್ಸಿಯಂ ಕಾರ್ಬೊನೇಟ್‍ನ ಇರುವ ಕಲ್ಲು ಮತ್ತು ಗ್ರೀಸ್‍ನಂತಹ ದ್ರವ ಇವುಗಳನ್ನು ಬಳಸಿದ. ಇದನ್ನೇ ಕಲ್ಲಚ್ಚು ಅಥವಾ ಲಿಥೋಗ್ರಫಿ ಮುದ್ರಣ ಎನ್ನುವರು. ನಮ್ಮಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತಿಸುವ ಬಗೆ ತಿಳಿದೇ ಇತ್ತು. ಅದರೆ ಹೆಚ್ಚು ಪ್ರತಿಗಳನ್ನು ಪಡೆಯುವ ವಿಧಾನ ಗೊತ್ತಿರಲಿಲ್ಲ. ಭಾರತದಲ್ಲಿ ಯುರೋಪದಿಂದ ತಂದ ಈ ತಂತ್ರವನ್ನು ನೇರವಾಗಿ ಎತ್ತಿಕೊಂಡಿರಲಿಲ್ಲ. ಕಾವಟೆ ಮುಳ್ಳು, ಮುಳ್ಳುಗಳನ್ನು ಹೊಂದಿದ ಹೊಂಗಾರ ಮರದ ತುಂಡು ಅಥವಾ ಮೆದುವಾದ ಮರದ ತುಂಡುಗಳ ಮೇಲೆ ಅಕ್ಷರಗಳನ್ನು ಕೆತ್ತಿ ಮುದ್ರಿಸುತ್ತಿದ್ದರು . ತದನಂತರ ಮೆದುವಾದ ಕಲ್ಲು. ಜಿಡ್ಡಿನ ಎಣ್ಣೆ, ಕಾಗದ, ಲೇಖನಿ ಇವಿಷ್ಟನ್ನು ಬಳಸಿ ಶಿಲಾ ಮುದ್ರಣವನ್ನು ಮಾಡುತ್ತಿದ್ದರು. ಮುಂದೆ ಅದು ಅವಿಷ್ಕಾರಗೊಂಡು ಹೆಚ್ಚು ಪ್ರತಿ ತೆಗೆಯುವಂತೆ ಮಾನವ ಚಾಲಿತ ಯಂತ್ರವೂ ತಯಾರಿಸಲ್ಪಟ್ಟು ಅದು ನಂತರ ಲಿಥೋಗ್ರಫಿ ಮುದ್ರಣವೆಂದಾಯಿತು. ಹ ಕಡಬ ಕಲ್ಲಿನಂತೆ ಹೋಲುವ ಕಲ್ಲನ್ನು ನಯಗೊಳಿಸಿ ಕಾಗದದಲ್ಲಿ ಬರೆದ ಅಕ್ಷರಗಳನ್ನು ಕನ್ನಡಿಯಲ್ಲಿ ನೋಡಿ ತಿರುಗುಮುರುಗಾಗಿ ಬರೆದು ಕಪ್ಪು ಶಾಯಿ ಬಳಸಿ ಕಾಗದಕ್ಕೆ ಬರೆದ ಅಕ್ಷರಗಳನ್ನು ಒತ್ತುವ ವಿಧಾನದಿಂದ ಕಲ್ಲಚ್ಚು ಮುದ್ರಣ ಮಾಡಲಾಗುತ್ತಿತ್ತು.

ತುಳು ನಾಡಿನಲ್ಲಿ ಮುದ್ರಣ ಆರಂಭ[ಬದಲಾಯಿಸಿ]

ತುಳುನಾಡಿನ ಮೊದಲ ಮುದ್ರಣಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಾಸೆಲ್ ಮಿಶನ್ ಪ್ರೆಸ್ ತುಳು ಜಿಲ್ಲೆಗೆ ವಿದೇಶಿಯರ ಕೊಡುಗೆಗಳಲ್ಲೊಂದು. 174 ವರ್ಷಗಳ ಹಿಂದೆ ಸ್ಥಾಪೆನೆಗೊಂಡ ಈ ಮುದ್ರಣಾಲಯವು ಈಗಲೂ ಹೊಸ ಅವಿಷ್ಕಾರದೊಂದಿಗೆ ಕಾರ್ಯವೆಸಗುತ್ತಿರುವುದು ಜಿಲ್ಲೆಗೇ ಹೆಮ್ಮೆಯ ವಿಷಯವಾಗಿರುತ್ತದೆ. 1834ರಿಂದಲೇ ಆರಂಭವಾದ ಕ್ರೈಸ್ತರ ಆರಾಧನೆ ಹಾಗೂ 1837ರಲ್ಲಿ ಪ್ರಾರಂಭವಾದ ಪ್ರಾಥಮಿಕ ಶಾಲೆ ಮುಂತಾದವುಗಳಿಗೆ ಮುದ್ರಿತ ಪುಸ್ತಕಗಳ ಅಗತ್ಯವಿತ್ತು. ಕನ್ನಡದ ಧಾರ್ಮಿಕ ಹಾಗೂ ಪಠ್ಯ ಪುಸ್ತಕಗಳನ್ನು ಮುಂಬಯಿ ಮತ್ತು ಮದ್ರಾಸ್‍ನಲ್ಲಿ ಕಲ್ಲಚ್ಚು ಮುದ್ರಣದಿಂದ ಮುದ್ರಿಸಿ ತರಲಾಗುತ್ತಿತ್ತು. ಮಲಯಾಲಂ ಪುಸ್ತಕಗಳನ್ನು ಕಲ್ಲಿಕೋಟೆಯಿಂದ ಮುದ್ರಿಸಿ ತರಿಸಲಾಗುತ್ತಿತ್ತು. 1840ರಲ್ಲಿ ಮಿಶನ್‍ಗೋಸ್ಕರ ಮಲಯಾಲಂ ಭಾಷೆಯಲ್ಲಿ ಬೈಬಲಿನ ಮೊದಲ ಪುಸ್ತಕವಾದ ಉತ್ಪತಿ ಪುಸ್ತಕವು ಕಲ್ಲಿಕೋಟೆಯಲ್ಲಿಯೂ, ಬಾಸೆಲ್ ಮಿಶನ್‍ನ ಮೊದಲ ಪುಸ್ತಕವಾದ ಗೀತಗಳು(1840) ಮುಂಬಯಿಯಲ್ಲಿಯೂ ಮುದ್ರಣಗೊಂಡಿದೆ. ಬಳ್ಳಾರಿ, ಮದ್ರಾಸ್, ಮುಂಬಯಿ ಕಡೆಗಳಲ್ಲಿ ಕಲ್ಲಚ್ಚಿನಿಂದ ಮುದ್ರಣಗೊಳ್ಳುತ್ತಿದ್ದ ಪುಸ್ತಕಗಳು ಸುಂದರವಾಗಿರಲಿಲ್ಲ. 1841ರಲ್ಲಿ ಮಂಗಳೂರಿನಲ್ಲಿ ಮುದ್ರಣ ಕ್ಷೇತ್ರವನ್ನು ಆರಂಭಿಸಿದವರು. ಜಿ. ಎಚ್. ವೈಗ್ಲೆ (ಉಔಖಿಖಿಈಖIಇಆ ಊಂಖಖಿಒಂಓ WಇIಉಐಇ ). ಇವರು ಜನಿಸಿದ್ದು 1ನೇ ಜುಲೈ 1816.ಇವರ ಜನಿಸಿದ್ದು ವುಟೆಂಬರ್ಗ್‍ನ ನೆಕಾರ್ ಎಂಬ ನದಿಯ ತಪ್ಪಲು ಪ್ರದೇಶವಾದ ಸುಂದರವಾದ ತಾಣದಲ್ಲಿದ್ದ ಜೆಲ್ ಎಂಬ ಹಳ್ಳಿಯಲ್ಲಿದ್ದ ಸಭಾಪಾಲಕರ ಮನೆಯಲ್ಲಿ. (ಒಚಿಟಿse oಜಿ Zeಟಟ ಚಿ ಗಿiಟಟಚಿge iಟಿ ಣhe ಃeಚಿuಣiಜಿuಟ vಚಿಟಟeಥಿ oಜಿ ಣhe ಓeಛಿಞಚಿಡಿ Wuಡಿಣembeಡಿg)ವಿದ್ಯಾಬ್ಯಾಸದ ಬಳಿಕ 1834ರಲ್ಲಿ ದೈವಜ್ಞಾನ ತರಬೇತಿಗೆ ಸೇರಿದರು. ಇವರು ತರಬೇತಿಗೆ ಸೇರುವಾಗ ಬೋಧಕೋದ್ಯೋಗಕ್ಕೆ ಮಾತ್ರವಲ್ಲ ವಿವಿಧ ತರಬೇತಿಯಲ್ಲಿಯೂ ಪರಿಣಿತರಾಗಿದ್ದರು. 1836ರಲ್ಲಿ ಬೋದಕೋದ್ಯೋಗಕ್ಕೆ ಸೈಂಟ್ ಜೋರ್ಜ್ ದೇವಾಲಯದಲ್ಲಿ ದೀಕ್ಷೆ ಹೊಂದಿದ ಬಳಿಕ ಬಾಸೆಲ್‍ನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ 1840ರಲ್ಲಿ ಭಾರತಕ್ಕೆ ಬಂದರು.

ವೈಗ್ಲೆ ಭಾರತಕ್ಕೆ ಬಂದಾಗ ಮುಂಬಯಿಯಲ್ಲಿದ್ದುಕೊಂಡು ದೇಶೀಯ ಭಾಷೆಗಳನ್ನು ಅರಿತುಕೊಳ್ಳುವುದು ಮಾತ್ರವಲ್ಲದೆ ಮಂಗಳೂರಿನಲ್ಲಿ ಸ್ಥಾಪಿಸಬೇಕಾದ ಕಲ್ಲಚ್ಚು ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆಯುವುದಕ್ಕಾಗಿ ಮುಂಬಯಿಯಲ್ಲಿದ್ದ ಅಮೇರಿಕನ್ ಮರಾಠಿ ಮಿಶನ್‍ನವರ ಪ್ರೆಸ್ ಮುಂತಾದ ಕಡೆಗಳಲ್ಲಿ ಅಲೆದಾಡಿದ್ದು ಮಾತ್ರವಲ್ಲದೆ ಮಂಗಳೂರಿನ ಕೈಸ್ತ ಸಭೆಗಳ ಉಪಯೋಗಕ್ಕಾಗಿದ್ದ ತಾನು ಮತ್ತು ಮ್ಯೊಗ್ಲಿಂಗ್ ಮತ್ತಿತರರು ಭಾಷಾಂತರಿಸಿ ಕಲ್ಲಚ್ಚು ಮುದ್ರಣದಲ್ಲಿ ಮುದ್ರಿಸಿದ ಕನ್ನಡ ಸಂಗೀತ ಪುಸ್ತಕವನ್ನೂ ಇದರೊಂದಿಗೆ ಒಂದು ಲಿಥೋ ಪ್ರೆಸ್(ಕಲ್ಲಚ್ಚು ಮುದ್ರಣ ಯಂತ್ರ , ಮತ್ತು ಇಬ್ಬರು ನುರಿತ ಮರಾಠಿ ಮುದ್ರಕರು, ಮತ್ತು ಜರ್ಮನಿಯ ನಾಲ್ಕು ಕಲ್ಲಚ್ಚಿನ ಕಲ್ಲನ್ನು ಹಿಡಿದುಕೊಂಡು ಬಂದರು. ಮುಂಬಯಿಯಲ್ಲಿದ್ದ ಹಲವು ಕ್ರೈಸ್ತ ಸ್ನೇಹಿತರು ಇದಕ್ಕಾಗಿ ಸಹಾಯ ಮಾಡಿದ್ದರು. ಮೊದಲು ತಂದ 50 ಗೀತೆಗಳನ್ನೊಳಗೊಂಡ “ಗೀತಗಳು” ಎಂಬ ಹೆಸರಿನ ಪುಸ್ತಕದಲ್ಲಿ ಮ್ಯೋಗ್ಲಿಂಗ್‍ರವರ 16, ವೈಗ್ಲೆಯವರ 10 ಲಯರ್‍ರವರ (ಐಚಿಥಿeಡಿ) 2 ಗೀತೆಗಳು ಮತ್ತಿತರ ಗೀತೆಗಳಿವೆ. ಮುದ್ರಣದ ಬಗ್ಗೆ ಪುಸ್ತಕದ ಮುಖ ಪುಟದಲ್ಲಿ ಮುಂಬಾಯಿ ಪಟ್ಟಣದಲ್ಲಿ ಪಂಡಿತನಾದ ಆನಂದರಾಯರ ಬರಹದಿಂದ ಕಲ್ಲಿನ ಮೇಲೆ ಚಾಪಿಸಿದ್ದು 1840 ಎಂದು ನಮೂದಿಸಲಾಗಿದೆ. ಮುಂಬಯಿಯಿಂದ ಕಲ್ಲಚ್ಚು ಮುದ್ರಣ ಯಂತ್ರ ತಂದಾಗ ಇಲ್ಲಿ ಮೊದಲು ಮುದ್ರಿಸಿದ್ದು ತುಳು ಪ್ರಾರ್ಥನೆ ಪುಸ್ತಕ. 1842ರಲ್ಲಿ ಮತ್ತೊಂದು ಶಿಲಾಯಂತ್ರವನ್ನು ಮದ್ರಾಸಿನಿಂದ ತರಿಸಲಾಯಿತು. ಈ ಶಿಲಾಯಂತ್ರದಲ್ಲಿ ಸತ್ಯವೇದದ ಒಂದು ಭಾಗವಾಗಿರುವ ಗ್ರೇನರ್ ಎಂಬ ಮಿಷನರಿಯ ಬಾಷಾಂತರವಾದ ‘ಮತ್ತಾಯೆ ಬರೆತಿ ಸುವಾರ್ತಮಾನ’ ಎಂಬ ತುಳು ಭಾಷೆಯ ಕೃತಿಯೊಂದು ಮುದ್ರಣವಾಯಿತು. ಕೇವಲ ಧಾರ್ಮಿಕ, ಪ್ರಾಥಮಿಕ ಪಠ್ಯಗಳನ್ನು ಮಾತ್ರ ಪ್ರಕಟಿಸಿದರೆ ಜನಸಾಮಾನ್ಯರನ್ನು ಮುಟ್ಟಲು ಸಾದ್ಯವಿಲ್ಲವೆಂದರಿತ ಮಿಶನರಿಗಳು ಜಾನಪದ ಸಾಹಿತ್ಯಗಳ ಪ್ರಕಟಣೆಗಳಿಗೂ ಮುಂದಾದರು. ಬೃಹತ್ ಗ್ರಂಥಗಳು, ಪಠ್ಯ ಪುಸ್ತಕಗಳು, ಶಾಲೆಗಳ ಉಪಯೋಗಕ್ಕಾಗಿ ಭೂಪಟಗಳು ಕಲ್ಲಚ್ಚಿನಿಂದ ಮುದ್ರಣಗೊಂಡಿತು. ಆಗ ಈ ಪ್ರೆಸ್‍ಗೆ ‘ಜರ್ಮನ್ ಮಿಶನ್ ಪ್ರೆಸ್’ ಎಂದು ಕರೆಯಲಾಗುತ್ತಿತ್ತು. ಮುಂಬಾಯಿ ಸರಕಾರದವರು ತಮ್ಮ ಆಡಳಿತದ ಶಾಲೆಗಳಿಗೆ ಬೇಕಾದ ಪಠ್ಯ ಪುಸ್ತಕಗಳನ್ನು ಅಚ್ಚು ಹಾಕಿಸುವುದಕ್ಕೂ ಮದ್ರಾಸ್ ಸರಕಾರದವರು ತಮ್ಮ ಪತ್ರಾಗಾರದಲ್ಲಿದ್ದ ಕನ್ನಡ ಗ್ರಂಥ ಹಸ್ತಪ್ರತಿಗಳಿಂದ ಅಚ್ಚು ಹಾಕಿಸಲು ಬಾಸೆಲ್ ಮಿಶನ್ ಮುದ್ರಣಾಲಯವನ್ನೇ ಆರಿಸಿಕೊಂಡರು. ಈ ಮುದ್ರಣಾಲಯದಲ್ಲಿ ಕನ್ನಡ ಲಿಪಿಯನ್ನು ತುಳು ಭಾಷೆಗೆ ಬಳಸಿದ್ದು ಮಾತ್ರವಲ್ಲ, ಬಡಗ, ಕೊಡವ, ಕೊಂಕಣಿ ಭಾಷೆಗಳಲ್ಲಿಯೂ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸಿದರು. ಇದರಿಂದ ಎಕೀಕೃತ ಕರ್ನಾಟಕ ಪ್ರಾಂತ್ಯದಿಂದ ಈ ಅಚ್ಚ ಕನ್ನಡಿಗರು ಸಿಡಿದು ಹೋಗದಂತೆ ಮುಂಜಾಗ್ರತೆಯನ್ನು ತೆಗೆದುಕೊಂಡ ಪ್ರಶಂಸೆ ಜರ್ಮನ್ ಮಿಶನರಿಗಳಿಗೆ ಸೇರಬೇಕು.

ಅಚ್ಚು ಮೊಳೆಗಳಿಂದ ಮುದ್ರಣ[ಬದಲಾಯಿಸಿ]

1851ರಲ್ಲಿ ಭಾರತಕ್ಕೆ ಬಂದ ಅhಚಿಡಿಟes ಉeoಡಿge ಂಟಿಜಡಿeತಿ Pಟebsಣ ಎಂಬವರ ನಾಯಕತ್ವದಲ್ಲಿ ಇಲ್ಲಿ ಲೆಟರ್ ಪ್ರೆಸ್‍ನ ಸ್ಥಾಪನೆಗೆ ತಯಾರಿಗಳು ನಡೆದವು. ವಿದೇಶದಿಂದ ಹೊಸ ಮುದ್ರಾಕ್ಷರ ಯಂತ್ರಗಳು ಅಚ್ಚು ಮೊಳೆಗಳು ತರಿಸಲ್ಪಟ್ಟವು. ಮಾತ್ರವಲ್ಲದೆ 1852 ರಿಂದ ಅಕ್ಷರ ಮೊಳೆಗಳನ್ನು ಉಪಯೋಗಿಸಿ ಮುದ್ರಣಗೊಳ್ಳುವ ಕಾರ್ಯ ಆರಂಭ. (ಖಿಥಿಠಿogಡಿಚಿಠಿhಥಿ)ಮೊತ್ತಮೊದಲು ಅಕ್ಷರಗಳನ್ನು ಕೆತ್ತಲು ಮಂಗಳೂರಿನವರೇ ಆದ ಪಾಂಡುರಂಗ ಶೆಟ್‍ರವರನ್ನು ನೇಮಿಸಿಕೊಂಡರು. ಪ್ಲೆಬ್ಸ್ಟ್‍ರಿಂದ ಮುದ್ರಣದಲ್ಲಿ ತರಬೇತಿ ಪಡೆದ ಟೋಮಿ ಲುಕ್ಲಿನ್ (ಖಿomಥಿ ಐuಛಿಞಟiಟಿ) ಪ್ರೆಸ್‍ಗೆ ಸೇರ್ಪಡೆ. ಉತ್ತಮ ನೌಕರನಾಗಿದ್ದ ಈತ 1865 ತನಕ ಸೇವೆಯಲ್ಲಿದ್ದರು. ಹೊಸ ಮುದ್ರಣ ವ್ಯವಸ್ಥೆಯಲ್ಲಿ ಮೊದಲಿಗೆ ಬಾಸೆಲ್ ಮಿಶನ್‍ನ 13ನೇ ವರ್ಷದ ವರದಿಯು ಜರ್ಮನಿಯಿಂದ ತಂದ ಇಂಗ್ಲಿಷ್ ಮೊಳೆಗಳನ್ನು ಉಪಯೋಗಿಸಿ ಇಂಗ್ಲಿಷ್‍ನಲ್ಲಿ ಮುದ್ರಣಗೊಂಡಿತು. 1853ರಿಂದ ಕನ್ನಡ ಮೊಳೆಗಳ ತಯಾರಿ ನಡೆದು ಕನ್ನಡದಲ್ಲಿ ಕನ್ನಡ ಪಂಚಾಂಗ ಮುದ್ರಣವಾಗುವುದರೊಂದಿಗೆ ಇಲ್ಲಿ ಅಚ್ಚುಮೊಳೆÀಗಳ ಕನ್ನಡ ಮುದ್ರಣ ಪ್ರಾರಂಭ. ಪ್ಲೆಬ್ಸ್ಟ್ ನಾಯಕತ್ವದಲ್ಲಿ ಪ್ರೆಸ್‍ನಲ್ಲಿ ಪ್ರತ್ಯೇಕ ಬೈಂಡಿಂಗ್ ವ್ಯವಸ್ಥೆ ಮಾಡಲಾಯಿತು. ಉಚ್ಚಿಲದಿಂದ ಬಂದ ಲೂಕಸ್ ಜೋಶ್ವ ಎಂಬಾತನನ್ನು ಬಳ್ಳಾರಿ, ಮದ್ರಾಸ್ ಮುಂತಾದೆಡೆಗೆ ಕಳುಹಿಸಿ ಬೈಂಡಿಂಗ್ ತÀರಬೇತುಗೊಳಿಸಿ ಇದರ ಮುಖ್ಯಸ್ಥನನ್ನಾಗಿ ನೇಮಕ ಮಾಡಿತು. ಕ್ರಮೇಣ ಇವರ ನಾಯಕತ್ವದಲ್ಲಿ ಬೈಂಡಿಂಗ್ ಕಾರ್ಯ ಮುಂದುವರಿದು ಸ್ವತ: ಇವರೇ ಪ್ರತ್ಯೇಕ ಬೈಂಡಿಂಗ್ ವಿಭಾಗವನ್ನು ಮಿಶನ್ ನೆರವಿನಿಂದ ತೆರೆದು ಉನ್ನತ ಮಟ್ಟಕ್ಕೇರಿಸಿ ಇದನ್ನು ಜೋಶ್ವರವರೇ ಸ್ವತ; ಈ ಬೈಂಡಿಂಗ್ ವಿಭಾಗವನ್ನು ನಡೆಸುತ್ತಿದ್ದರು. ಅದಕ್ಕೆ “ಜೋಶ್ವ ಬೈಂಡಿಂಗ್ ವಕ್ರ್ಸ್” ಎಂಬ ಹೆಸರಿದ್ದು ಈ ವಿಭಾಗವು ಪ್ರಸ್ತುತ ಅಥೆನಾ ಆಸ್ಪತ್ರೆಯಿರುವ ಸ್ಥಳದಲ್ಲಿದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಾಸೆಲ್ ಮಿಶನ್ ಪ್ರೆಸ್‍ನಲ್ಲಿ ಮುದ್ರಣಗೊಳ್ಳುತ್ತಿದ್ದ ಪುಸ್ತಕಗಳೆಲ್ಲವೂ ಇಲ್ಲಿಯೇ ಬೈಂಡ್ ಮಾಡಲಾಗುತ್ತಿತ್ತು. 1858ರಿಂದ ಹೊಸ ಮೊಳೆಗಳನ್ನು ಮಾಡಿಸುವುದಕ್ಕೂ ಹೊಯಿಸುವುದಕ್ಕೂ ಪ್ರಾರಂಭ ಮಾಡಲಾಗಿ ಪ್ರೆಸ್ ಅಭಿವೃದ್ದಿ ಹೊಂದಿತು. ಆಗ ಕೆಲಸಕ್ಕಿದ್ದವರು 28 ಮಂದಿ ( 12 ಮಂದಿ ಮೊಳೆ ಜೋಡಿಸುವವರು, 6 ಮಂದಿ ಛಾಪಿಸುವವರು, 5 ಜನ ಮೊಳೆ ಹೊಯ್ಯುವವರು, ಇಬ್ಬರು ಮೊಳೆ ಕೆತ್ತುವವರು.) 1860 ಹೊರಗಿನ ಕೆಲಸ ಕಡಿಮೆಯಾದರೂ ಕಿಟ್ಟೆಲ್ ಹಾಗೂ ಮೋಗ್ಲಿಂಗ್ ಬರಹಗಳು ಇಲ್ಲಿ ಮುದ್ರಣಗೊಳ್ಳುತ್ತಿದ್ದುದರಿಂದ ಕೆಲಸಕ್ಕೇನು ಕೊರತೆ ಇರಲಿಲ್ಲ. ಈ ತನಕ ತುಳು ಕಂಟ್ರಿ, ಕೆನರಾ, ಎಂದಿದ್ದ ಜಿಲ್ಲೆ ಇಬ್ಬಾಗವಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಾಯಿತು. ಆಗ ಮಂಗಳೂರಿನಲ್ಲಿ ಮತ್ತು ಸಿರ್ಸಿಯಲ್ಲಿ ಸರಕಾರದ 2 ಪ್ರೆಸ್ ಆರಂಭವಾಯಿತು. ಈ ಎರಡು ಪ್ರೆಸ್‍ಗೆ ಅಚ್ಚುಮೊಳೆಗಳನ್ನೂ , ಮುದ್ರಣ ಸಾಮಾಗ್ರಿಗಳನ್ನೂ , ತರಬೇತಿ ಪಡೆದ ಕೆಲಸಗಾರರನ್ನೂ ಬಾಸೆಲ್ ಮಿಶನ್ ಪ್ರೆಸ್ ಕೊಡಬೇಕಾಯಿತು. 1861ರಿಂದ ಪುಸ್ತಕ ಮಾರಟ ಮಾಡಲು ಪ್ರತ್ಯೇಕ ಬುಕ್ ಶಾಪ್ ಆರಂಭ. ತಲಚೇರಿಯಲ್ಲಿದ್ದ ಮಿಶನ್ ಪ್ರೆಸ್ ಮುಚ್ಚಿ ಮಲಯಾಲಂ ಮುದ್ರಣವು ಸಹಾ ಮಂಗಳೂರಿನಲ್ಲಿಯೇ ಮುದ್ರಣ ಮುಂದುವರಿಕೆ.

1865ರಲ್ಲಿ ಮಂಗಳೂರಿನಲ್ಲಿ ಹೊಸ ನಮೂನೆಯ ಹಂಚು ತಯಾರಿಕೆ ಕಾರ್ಖನೆ ಅಸ್ಥಿತ್ವಕ್ಕೆ ಬಂದು ಮಂಗಳೂರಿನ ಜಪ್ಪುವಿನಲ್ಲಿ ಮೊದಲ ಹಂಚು ಕಾರ್ಖಾನೆ ಆರಂಭವಾಗಿ ತುಳುನಾಡಿನಲ್ಲಿ ‘ಮಂಗಳೂರುಹಂಚು”ಪ್ರಚಾರಕ್ಕೆಬಂತು. ಇದರ ರುವಾರಿ ಮುದ್ರಣ ವ್ಯವಸ್ಥೆಯನ್ನುಮೇಲ್ದರ್ಜೆಗೆ ಏರಿಸಿದಸಿ.ಜೆ. ಎ. ಪ್ಲೆಬ್ಸ್ಟ್ ರವರೇ ಆಗಿದ್ದಾರೆ. 1866 ಕನ್ನಡ ಮತ್ತು ಮಲಯಾಲಂ ಅಚ್ಚುಮೊಳೆಗಳು ಬಾಸೆಲ್‍ನಲ್ಲಿ ಕೆತ್ತಿಸಲ್ಪಟ್ಟು ಇಲ್ಲಿ ಹೊಯಿಸಲಾಯಿತು (ಬಾಸೆಲ್ ಟೈಪ್)1868ರಲ್ಲಿ ಫ್ಲೈಡರರ್ ನಾಯಕತ್ವದಲ್ಲಿ ಪುಸ್ತಕ ಮಾರಾಟದ ವ್ಯವಸ್ಥೆಯನ್ನು ಪ್ರತ್ಯೇಕಿಸಿ ಇದಕ್ಕೆ ಬಾಸೆಲ್ ಮಿಶನ್ ಬುಕ್ ಎಂಡ್ ಟ್ರ್ಯಾಕ್ಟ್ ಡಿಪೊಸಿಟರಿ(ಃಚಿseಟ ಒissioಟಿ ಃooಞ & ಖಿಡಿಚಿಛಿಣ ಆeಠಿosiಣoಡಿಥಿ) ಎಂಬ ಹೆಸರಿನೊಂದಿಗೆ ಕಾರ್ಯಾರಂಭ. ಇದು ಮಂಗಳೂರಿನ ಬಂದರ್ ಪ್ರದೇಶದಲ್ಲಿತ್ತು. ಅನಂತರ ಅದು ಹಂಪನಕಟ್ಟೆಗೆ ಸ್ಥಳಾಂತರಗೊಂಡು 1965 ತನಕ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಪ್ರಕಟಿತ ಪುಸ್ತಕಗಳಲ್ಲದೆ ಬಾಸೆಲ್ ಮಿಶನ್ ಪ್ರೆಸ್‍ನಲ್ಲಿ ತಯಾರಾಗುತ್ತಿದ್ದ ಭೂಗೋಳ, ನಕಾಶೆ, ಮುಂತಾದವುಗಳೂ, ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ, ಬರವಣಿಗೆ ಸಾಮಾಗ್ರಿಗಳು, ಶಾಲಾ ಪ್ರಯೋಗ ಶಾಲೆಗೆ ಉಪಯೋಗವಾಗುವ ಲ್ಯಾಬೊರೇಟರಿ ಸಲಕರಣೆಗಳು, ವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಹಾ ಮಾರಾಟ ಮಾಡಲಾಗುತ್ತಿತ್ತು ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್ ಮಿಶನ್ ಪ್ರೆಸ್‍ನ ಕಾರ್ಯವು ಮಹತ್ತರವಾಗಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಅದು ಕರ್ನಾಟಕದಲ್ಲಿ ಯಾವುದೇ ಪ್ರೆಸ್‍ಗಿಂತ ದೊಡ್ದದಿದ್ದು ಕನ್ನಡ, ಇಂಗ್ಲಿಷ್, ತುಳು ಮಾತ್ರವಲ್ಲದೆ ತಮಿಳು, ಮಳಯಾಳಂ, ಸಂಸ್ಕøತ, ಜರ್ಮನ್, ಪ್ರೆಂಚ್, ಕೊಡವ, ಬಡಗ, ಕೊಂಕಣಿ ಮುಂತಾದ ಭಾಷೆಗಳ ಸಾವಿರಾರು ಪುಸ್ತಕ ಇಲ್ಲಿ ಮುದ್ರಣಗೊಂಡಿದೆ. ಬಾಸೆಲ್ ಮಿಶನ್ ಪ್ರೆಸ್ ಮುದ್ರಣ ಮಾಡುವುದು ಮಾತ್ರವಲ್ಲದೆ ಅಚ್ಚು ಮೊಳೆಗಳನ್ನು ತಯಾರಿಸುವುದು, ಪೋಟೋ ಬ್ಲಾಕ್‍ಗಳನ್ನು ತಯಾರಿಸುವುದು, ಇತರ ಪ್ರೆಸ್‍ಗಳಿಗೆ ಬೇಕಾದ ಮುದ್ರಣ ಸಾಮಾಗ್ರಿಗಳನ್ನು ತಯಾರಿಸಿ ನೀಡುವುದು, ಮರದ ಬ್ಲಾಕ್‍ಗಳನ್ನು ತಯಾರಿಸುವುದು, ಯಂತ್ರಗಳ ಸಿಲಿಂಡರ್ ತಯಾರಿಸುವುದು ಮುಂತಾದ ವಿಭಾಗದಲ್ಲಿ 1929 ರಲ್ಲಿ ತಿದ್ದುವವರು6, ಮುದ್ರಿಸುವವರು 30, ಮೊಳೆ ಜೋಡಿಸುವವರು 42, ಮರದ ಕೆಲಸ 6, ಎರಕ ಹೊಯ್ಯವವರು 5, ಇಂಜಿನ್ ವಿಭಾಗ 2, ಕೂಲಿ 14, ಪ್ಯಾಕ್ ಮಾಡುವವರು 2, ಉಗ್ರಾಣ 2, ಗುಡಿಸುವವರು 2, ಪಹರೆ 3- ಹೀಗೆ 150ಕ್ಕೂ ಮಿಕ್ಕಿ ಕೆಲಸಗಾರರಿದ್ದರು ಎನ್ನುವುದು ಈಗ ಚರಿತ್ರೆಗೆ ಸೇರಿದ ವಿಚಾರವಾಗಿದೆ.

1862ರಲ್ಲಿ ಪ್ರಕಟವಾದ ಹಿಂದೂಸ್ಥಾನದ ಮೂಲಿಕೆ ವಿವರ್ತನೆಗಳು ಎಂಬ ಪುಸ್ತಕದ ಬಗ್ಗೆ ಡಾ. ಶ್ರೀನಿವಾಸ ಹಾವನೂರರವರು ಸುದರ್ಶನ, ಡಾ. ಟಿ.ಎಮ್.ಎ. ಪೈ ಅಭಿನಂದನ ಗ್ರಂಥದಲ್ಲಿ ಬರೆದ ‘ಮಂಗಳೂರು ಬೋಟನ್ ಅಟೋಗ್ರಫಿ-ಪ್ರಕೃತಿಯ ಸ್ವಮುದ್ರಣ’ ಎಂಬ ಲೇಖನದಲ್ಲಿ ಹೀಗೆ ದಾಖಲಿಸಿದ್ದಾರೆ. ‘ವಾಸ್ತವ ಸಸ್ಯಗಳನ್ನು ಹಾಗೂ ಎಲೆಗಳನ್ನು ಅವುಗಳ ಸಹಜ ವರ್ಣದಲ್ಲಿ ಮುದ್ರಿಸಿ ಪ್ರತಿ ತೆಗೆದು ಪುಸ್ತಕ ರೂಪದಲ್ಲಿ ಹೊರತರುವ ತಂತ್ರದಿಂದ ಪುಸ್ತಕವೊಂದನ್ನು ಪ್ರಕಟಿಸಿದುದು ಜೆ. ಹುಂಜಿಕರ್ ಎಂಬ ಮಿಶನರಿ. ಈ ಅಪೂರ್ವ ಮುದ್ರಣವನ್ನು ಮೆಚ್ಚಬೇಕಾದರೆ 19ನೇ ಶತಮಾನದ ಮಧ್ಯಕಾಲದಲ್ಲಿ ಮುದ್ರಣ ಕಲೆಯ ಪರಿಸ್ಥಿತಿಯ ಅರಿವು ಇರಬೇಕು. ಅನೇಕ ಭಾರತೀಯ ಮತ್ತು ಯುರೋಪಿಯನ್ ಭಾಷೆಗಳಲ್ಲಿ ಬಾಸೆಲ್ ಮಿಶನ್‍ನವರು ಪುಸ್ತಕಗಳನ್ನು ಹೊರತಂದರು. ಹಾಗೂ ಅವರ ಮುದ್ರಣಾಲಯವು ದಕ್ಷಿಣ ಭಾರತದಲ್ಲಿ ಅತಿ ದೊಡ್ಡದೆಂದು ಪರಿಗಣಿಸಲ್ಪಟ್ಟಿತ್ತು. ಬಾಸೆಲ್ ಮಿಶನ್ ಪ್ರೆಸ್‍ನಲ್ಲಿನ ಮುದ್ರಣವು ಅಂದಕ್ಕೆ ಭಾರತದ ಇನ್ನಾವುದೇ ಪ್ರೆಸ್ಸಿಗೆ ಹೋಲಿಸಿದರೆ ಅಸಮಾನವಾದುದು ಎಂದು ಅಂದಿನ ಮದ್ರಾಸ್ ಸರಕಾರವು ತನ್ನ 1875ರ ಆಡಳಿತ ಕೈಪಿಡಿಯಲ್ಲಿ (ಒಚಿಟಿuಚಿಟ oಜಿ ಂಜmiಟಿisಣಡಿಚಿಣioಟಿ 1875) ದಾಖಲು ಮಾಡಿದೆ. ಜಿಲ್ಲೆಯಲ್ಲಿ 1870ರ ಸುಮಾರಿಗಿದ್ದ ಮಂಗಳೂರಿನ ಹಿಂದೂ ಪವರ್ ಪ್ರೆಸ್ ಕಲ್ಲಚ್ಚು ಮುದ್ರಣ ಮಾಡುತ್ತಿದ್ದ ದಾಖಲೆಯಿದ್ದು ಇದೊಂದು ಬಿಟ್ಟರೆ ಈ ವರೆಗೆ ಬಾಸೆಲ್ ಮಿಶನ್ ಪ್ರೆಸ್ ಏಕೈಕ ಮುದ್ರಣಾಲಯವಾಗಿತ್ತು. ಜಿಲ್ಲೆಯಲ್ಲಿ ನಂತರ ಸ್ಥಾಪನೆಯಾದ ಮುದ್ರಣಾಲಯಗಳು ಇಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದವರ ನೆರವನ್ನೇ ಹೆಚ್ಚಾಗಿ ಪಡೆದವುಗಳಾಗಿವೆ. ಬಾಸೆಲ್ ಮಿಶನ್ ಪ್ರೆಸ್ ಬಗ್ಗೆ 1927ರಲ್ಲಿ ಮಂಗಳೂರಿನಲ್ಲಿ ನಡೆದ 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಲೇಖನವೊಂದರಲ್ಲಿ ಹೀಗೆ ಬರೆಯಲಾಗಿದೆ. “ಕಲ್ಲು ಛಾಪಾಯಂತ್ರದೊಡನೆ ಬಲು ಅಲ್ಪ ತರಗತಿಯಲ್ಲಿ ತೊಡಗಿದ ಈ ಛಾಪಖಾನೆಯು ಈಗ ನೂರಾರು ಜನರು ಉದ್ಯೋಗ ನಡೆಸುತ್ತಲಿದ್ದು ಬಲಿಷ್ಠರಾಗಿ, ಕನ್ನಡ ಜಿಲ್ಲೆಯಲ್ಲಿ ಪ್ರಕೃತ ಶೋಭಿಸುತ್ತಿರುವ ಎಲ್ಲಾ ಛಾಪಖಾನೆಗಳಿಗೆ ಸಾದೃಶವಾಗಿ ಮಾತೃಮಂದಿರದಂತೆ ಶೋಭಾಯಮಾನವಾಗಿರುವುದು. ಈ ಛಾಪಖಾನೆಯ ಮೂಲಕ ನಮ್ಮ ಜಿಲ್ಲೆಯ ಅನೇಕರು ಅಚ್ಚುಹಾಕುವ ಪರಿಪರಿಯ ಕೆಲಸಗಳಲ್ಲಿ ತರಬೇತನ್ನು ಪಡೆದುದಲ್ಲದೆ ಧನಾನುಕೂಲವುಳ್ಳವರು ಸ್ವತಂತ್ರವಾಗಿ ಛಾಪಖಾನೆಗಳ್ನು ಸ್ಥಾಪಿಸಿಕೊಳ್ಳುವಂತೆ ಇಂಬು ದೊರೆಯಿತು. ಅನೇಕ ಕೆಲಸಗಾರರಿಗೂ ಉಪಜೀವನವನ್ನು ಕಲ್ಪಿಸಿಕೊಡುವಂತಾಯಿತು.”

1870ರಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ ಚಿಹ್ನೆಯಲ್ಲಿ ತೆಂಗಿನ ಮರದ ಚಿತ್ರವಿದ್ದು ನಾಲ್ಕು ಸುತ್ತಲೂ ಕನ್ನಡ ತುಳು ಮಲಯಾಲಂ, ಇಂಗ್ಲಿಷ್ ಎಂದು ನಾಲ್ಕು ಭಾಷೆಗಳನ್ನು ನಮೂದಿಸಲಾತ್ತಿತ್ತು.  

ಬಾಸೆಲ್ ಮಿಶನ್‍ನವರು ಮಂಗಳೂರಿಗೆ 1834ರಲ್ಲಿ ಆಗಮಿಸಿದಾಗ ಮೊದಲು ವಾಸ್ತವ್ಯವಿದ್ದ ನೀರೇಶ್ವಾಲ್ಯದಲ್ಲಿ ನಡೆಯುತ್ತಿದ್ದ ಕ್ರೈಸ್ತರ ಆರಾಧನೆ, ಪ್ರಾಥಮಿಕ ಶಾಲೆ ಮುಂತಾದುವುಗಳು ನಡೆಯುತ್ತಿದ್ದ ಪರಿಸರದಲ್ಲಿಯೇ 1841ರಲ್ಲಿ ಕಲ್ಲಚ್ಚು ಮುದ್ರಣ ಸ್ಥಾಪನೆಗೊಂಡು ನಂತರ ಪಳ್ನೀರ್ ರಸ್ತೆಯಲ್ಲಿಯಲ್ಲಿರುವ ವೈ.ಯಂ.ಸಿ.ಎ. ಕಟ್ಟಡವಿರುವ ಸ್ಥಳಕ್ಕೆ 1842ಕ್ಕೆ ಸ್ಥಳಾಂತರಗೊಂಡಿತ್ತು. ಈ ಪರಿಸರದಲ್ಲಿಯೇ 1847ರಲ್ಲಿ ಬಾಸೆಲ್ ಇವ್ಯಾಂಜಲಿಕಲ್ ತಿಯೊಲಾಜಿಕಲ್ ಸೆಮಿನೆರಿ ಸ್ಥಾಪನೆಗೊಂಡು 1863ಕ್ಕೆ ಪ್ರಸ್ತುತವಿರುವ ಸ್ಥಳಕ್ಕೆ ಸ್ಥಳಾಂತರಗೊಂಡು ಕರ್ನಾಟಕ ತಿಯೊಲಾಜಿಕಲ್ ಕಾಲೇಜ್ ಎಂಬ ಹೆಸರಿನಿಂದ ಕಾರ್ಯವೆಸಗುತ್ತಿದೆ. 1913ತನಕ ಇದೇ ಸ್ಥಳದಲ್ಲಿ ಪ್ರೆಸ್ ಕಾರ್ಯಾಚರಿಸುತ್ತಿದ್ದು 1913 ರಲ್ಲಿ ಪ್ರಸ್ತುತ ಶಾಂತಿ ದೇವಾಲಯವಿರುವ ಎದುರಿನ ಸ್ಥಳಕ್ಕೆ ನೂತನ ವಿಶಾಲ ಕಟ್ಟಡವನ್ನು ಹೊಂದಿ ಸ್ಥಳಾಂತರಗೊಂಡಿತು ಪ್ರೆಸ್ ಸ್ಥಳಾಂತರವಾದಾಗ ಆ ಸ್ಥಳದಲ್ಲಿ ಬಲ್ಮಠದಲ್ಲಿ 1908ರಲ್ಲಿ ಸ್ಥಾಪನೆಯಾದ ವೈ.ಎಂ.ಸಿ.ಎ.ಕಾರ್ಯವೆಸಗುತ್ತಿದೆ. 1914 ನಡೆದ ಮಹಾಯುದ್ದದ ಪರಿಣಾಮದಿಂದಾಗಿ ಪ್ರೆಸ್‍ನ್ನು ದೇಶಿಯ ಸಂಸ್ಥೆ ನಡೆಸುತ್ತಿದ್ದು 1927ರ ತನಕ ಅದಕ್ಕೆ ಕೇನರೀಸ್ ಇವೆಂಜಿಲಿಕ್ ಮಿಶನ್ ಪ್ರೆಸ್ ಎಂಬ ಹೆಸರಿತ್ತು. 1928 ಸುಮಾರಿಗೆ ಪ್ರೆಸ್‍ನ ಕಟ್ಟಡದ ಎದುರಿನ ಭಾಗದಲ್ಲಿ ಸ್ಪಲ್ಪ ಬದಲಾವಣೆ ಮಾಡಿ ಕಛೇರಿಯಿದ್ದ ಕೊಠಡಿ ಮೇಲೆ ಮಾಳಿಗೆ ನಿರ್ಮಿಸಿ ಒಂದು ಕೊಠಡಿಯನ್ನು ನಿರ್ಮಿಸಲಾಗಿತ್ತು. ಈ ಕೊಠಡಿಯು ಬೀಸುವ ತಂಪಾದ ಗಾಳಿಯನ್ನು ಸವಿಯಲೋ ಎಂಬತ್ತಿದ್ದು ಈ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಿಶನರಿಗಳು ಕೆಲಸ ನಡೆಯುತ್ತಿದ್ದ ವೇಳೆ ಪ್ರೆಸ್‍ನೊಳಗೆ ಬರಲು ಕಬ್ಬಿಣದ ಏಣಿಯ ವ್ಯವಸ್ಥೆಯಿದ್ದು ನೌಕರರ ಚಲನವಲನಗಳನ್ನು ವೀಕ್ಸಿಸಲು ಕೊಠಡಿಯೊಳಗೆ ಕಿಟಕಿಯೊಂದಿತ್ತು. ಈ ಸಂಧರ್ಬದಲ್ಲಿ ಮೊದಲಿದ್ದ ಕೆಳಗಿನ ಬೋರ್ಡ್ ಬದಲಾಯಿಸಿ ಮಾಡಿನ ಮೇಲೆ ಕಬ್ಬಿಣದಿಂದ ತಯಾರಿಸಿದ ಬೋರ್ಡ್ ಹಾಕಲಾಗಿತ್ತು. ಪ್ರಸ್ತುತ ಈ ಕಟ್ಟಡದಲ್ಲಿ ಬಾಸೆಲ್ ಮಿಶನರಿಗಳೇ ಸ್ಥಾಪಿಸಿದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯಿದೆ.

1960 ನಂತರ ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಇತರ ಮುದ್ರಣ ಸಂಸ್ಥೆಗಳು, ಹೊಸ ಹೊಸ ನಮೂನೆಯ ಮುದ್ರಣ ವ್ಯವಸ್ಥೆ ಮುಂತಾದ ಹಲವಾರು ಕಾರಣಗಳಿಂದ  ಬಾಸೆಲ್ ಮಿಶನ್ ಪ್ರೆಸ್‍ನ ಬೆಳವಣಿಗೆ ಕುಂಟಿತವಾಗತೊಡಗಿತು. ಪ್ರೆಸ್‍ನ ದಾಖಲೆ ಪುಸ್ತಕದಲ್ಲಿ 1939ರಲ್ಲಿ 114, 1942ರಲ್ಲಿ 87 1967ರಲ್ಲಿ 16 ನೌಕರರು ಇದ್ದರು ಎಂದು ನಮೂದಿಸಿರುವುದು ಪ್ರೆಸ್ ವರ್ಷ ಕಳೆದಂತೆ ಕುಂಟುತ್ತಾ ಬಂದಿರುವುದು ಬಾಸವಾಗುತ್ತದೆ. ಬಾಸೆಲ್ ಮಿಶನ್ ಸಂಸ್ಥೆಯು 1964 ರಲ್ಲಿ ಪ್ರೆಸ್‍ನ ಕಟ್ಟಡದಲ್ಲಿಯೇ ಹೆಬಿಕ್ ತಾಂತ್ರಿಕ ತರಬೇತಿ ಶಾಲೆಯನ್ನು ತೆರೆದು ಜಿಲ್ಲೆಯಲ್ಲಿ ತಾಂತ್ರಿಕ ತರಬೇತಿ ಶಾಲೆಯನ್ನು ಪ್ರಾರಂಭಿಸಿತು. 1965ರಲ್ಲಿ ಹಂಪನಕಟ್ಟೆಯಲ್ಲಿರುವ ಬುಕ್ ಶಾಪ್ ಮುಚ್ಚಲಾಯಿತು. ತದನಂತರವೂ ಕುಂಟಿತಗೊಂಡು ನಡೆಯುತ್ತಿದ್ದ ಮುದ್ರಣಾಲಯವನ್ನು 1970ರಲ್ಲಿ ಮುಚ್ಚಬೇಕಾಯಿತು. ಹಲವಾರು ಯಂತ್ರಗಳನ್ನು, ಅಚ್ಚುಮೊಳೆಗಳನ್ನು, ಹಲವು ಕಾರ್ಮಿಕರನ್ನು ಹೊಂದಿದ್ದ ಮುದ್ರಣಾಲಯ ಮುಚ್ಚಿದ್ದರಿಂದ ಜಿಲ್ಲೆಗೆ ಆದ ನಷ್ಟ ಅಷ್ಟಿಷ್ಟಲ್ಲ. 1847ರಲ್ಲಿ ಬಲ್ಮಠದಲ್ಲಿ ಸ್ಥಾಪನೆಗೊಂಡ ವೇದಮಠದ ಆಡಳಿತವು 1969ರಲ್ಲಿ ಕೆ.ಟಿ.ಸಿ.ಯನ್ನು ಕೇಂದ್ರವಾಗಿರಿಸಿಕೊಂಡು ಡಾ.ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಇತರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ಕ್ರೈಸ್ತ ವಿದ್ಯಾ ಸಂಸ್ಥೆ (ಕರ್ನಾಟಕ ಕ್ರಿಶ್ಚ್ಯನ್ ಎಜುಕೇಶನಲ್ ಸೊಸೈಟಿ)ಯು ಸ್ವಾಯತ್ತೆ ಪಡೆದ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂತು. 1970ರಲ್ಲಿ ಕಾಮನ್‍ವೆಲ್ತ್ ಸಂಸ್ಥೆ ನಡೆಸುತ್ತಿದ್ದು ಮುಚ್ಚಲ್ಪಟ್ಟಿದ್ದ ನೇಯಿಗೆ ಕಾರ್ಖಾನೆ ಸಹಿತ 3.50 ಎಕ್ರೆ ಸ್ಥಳವನ್ನು ಕಾಸೆಸ್ ಪಡೆದು ಕೊಂಡಿತು. ಈ ಸ್ಥಳದಲ್ಲಿ 1907ರಂದು ನಿರ್ಮಿಸಲ್ಪಟ್ಟ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಯ ಕಟ್ಟಡವಿತ್ತು 1914ರಲ್ಲಿ ನಡೆದ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆ ಮತ್ತು ನೇಯಿಗೆ ಕಾರ್ಖಾನೆಯು ಕಾಮನ್‍ವೆಲ್ತ್ ಆಡಳಿತದಲ್ಲಿತ್ತು. ಕಾಮನ್‍ವೆಲ್ತ್ ಸಂಸ್ಥೆಯು ಈ ಕಟ್ಟಡದಲ್ಲಿ ನೇಯಿಗೆ ಕಾರ್ಖಾನೆಯನ್ನು ಮುಂದುವರಿಸಲು ಈ ಕಟ್ಟಡವನ್ನು ವಿಸ್ತರಿಸಿಯೂ ಕಟ್ಟಿದ್ದರು. ಮುಚ್ಚಿದ್ದ ಬಾಸೆಲ್ ಮಿಶನ್ ಪ್ರೆಸ್ ಮತ್ತು ಅದರ ಕೊಡುಗೆ ಪರಂಪರೆಯನ್ನು ಉಳಿಸಿಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಾಸೆಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ರೆವೆ. ಡಾ. ಸಿ.ಡಿ. ಜತ್ತನ್ನರವರ ಮುಂದಾಳತ್ವದಲ್ಲಿ ಈ ಕಟ್ಟಡದ ಒಂದು ಭಾಗದಲ್ಲಿ ನೇಯಿಗೆ ಕಾರ್ಖಾನೆ (ಃಚಿಟmಚಿಣಣಚಿ ಊosಚಿiಡಿಥಿ Iಟಿಜusಣಡಿಥಿ)ಯನ್ನು ಪ್ರಾರಂಭಿಸಲಾಯಿತು. 1982 ತನಕ ಮಗ್ಗ ಮತ್ತು ಹೊಸ ಅವಿಷ್ಕಾರದ ನೆಯಿಗೆ ಕೆಲಸಗಳು ಇಲ್ಲಿ ನಡೆಸಲಾಗುತ್ತಿದ್ದು ಇದರ ಮಾರಾಟಕ್ಕಾಗಿ ಬಲ್ಮಠ ಗಾರ್‍ಮೆಂಟ್ ಶಾಪ್ (ಃಚಿಟmಚಿಣಣಚಿ ಉಚಿಡಿmeಟಿಣ Shoಠಿ) ವ್ಯವಸ್ಥೆಯೂ ಇತ್ತು. ಎರಡನೆಯದಾಗಿ ಇವರು ಕೈಗೊಂಡ ಕಾರ್ಯ ಬಾಸೆಲ್ ಮಿಶನ್ ಪ್ರೆಸ್‍ನ್ನು ಬಲ್ಮಠ ಮಾಸ್ಟರ್ ಪ್ರೆಸ್(ಃಚಿಟmಚಿಣಣಚಿ ಒಚಿsಣeಡಿ Pಡಿess)ಆಗಿ ಮರು ಸ್ಥಾಪನೆ ಮಾಡಿದ್ದು.  ಬಾಸೆಲ್ ಮಿಶನ್‍ನಿಂದ ಪ್ರೆಸ್‍ನಲ್ಲಿದ್ದ ಎಲ್ಲಾ ಯಂತ್ರಗಳನ್ನು ಪಡೆದುಕೊಂಡು, ಸುಸ್ಥಿತಿಯಲ್ಲಿರುವ ಎಲ್ಲಾ ಯಂತ್ರಗಳನ್ನು ಉಪಯೋಗಿಸಿ  ಅದೇ ಮಟ್ಟದಲ್ಲಿ ಪ್ರೆಸ್ ಮುಂದುವರಿಯಬೇಕೆಂಬ ದೃಷ್ಟಿಯಿಂದ ಮೈಸೂರಿನಲ್ಲಿದ್ದ ವೆಸ್ಲಿಯನ್ ಮಿಶನ್ ಪ್ರೆಸ್‍ನಲ್ಲಿ ಮ್ಯಾನೆಜರ್ ಆಗಿ ಸೇವೆ ಸಲ್ಲಿಸಿದ್ದ ಶ್ರೀ ಕೆ. ಎ. ಕುರುವಿಲ್ಲರವರನ್ನು ಕರೆತಂದು ಹಿಂದಿನ ಪ್ರೆಸ್‍ನಲ್ಲಿದ್ದ ಹಲವು ನೌಕರರ ಸಹಕಾರದೊಂದಿಗೆ 1972ರಲ್ಲಿ ‘ಬಲ್ಮಠಮಾಸ್ಟರ್‍ಪ್ರೆಸ್’ ಎಂಬಹೆಸರಿನೊಂದಿಗೆ ಆರಂಭವಾಯಿತು. 1976ರಿಂದ 1980 ತನಕ ಮುದ್ರಣ ಕ್ಷೇತ್ರದಲ್ಲಿ ಅನುಭವಿ ಶ್ರೀ ಮಾಮನ್ ಪಿಲಿಪ್ಪ್ ಎಂಬವರು ಮ್ಯಾನೆಜರ್ ಆಗಿ ಸೇವೆ ಸಲ್ಲಿಸಿದ್ದಾರೆ. 1980 ತನಕ ಮರುಸ್ಥಾಪನೆಗೊಂಡ ಪ್ರೆಸ್ ಉನ್ನತ ಮಟ್ಟದಲ್ಲಿ ಬೆಳೆಯಲು ಈ ಇಬ್ಬರೂ ಮ್ಯಾನೆಜರ್ ಕಾರಣರಾಗಿದ್ದಾರೆ. ಇವರ ಅವದಿಯಲ್ಲಿ ಮನೋಟೈಪ್ ಮುಂತಾದ ಹಲವು ಯಂತ್ರಗಳನ್ನು ತರಿಸಿದ್ದು, ಬಾಸೆಲ್ ಮಿಶನ್ ಪ್ರೆಸೀ ಹಿಂದೆ ನಡೆಸಿಕೊಂಡು ಬುರುತ್ತಿದ್ದ ತರಬೇತಿಯನ್ನು ಅನುಷ್ಠಾನಕ್ಕೆ ತರಲು ಬೈಂಡಿಂಗ್ ಮತ್ತು ಪ್ರಿಂಟಿಂಗ್ ತರಬೇತಿಯನ್ನು ನೀಡಲು ಪ್ರೆಸ್‍ನ ಹೆಸರನ್ನು ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬುದಾಗಿ ಬದಲಾಯಿಸಲಾಗಿತ್ತು. ಇದರಿಂದ ಉತ್ತಮ ಗುಣಮಟ್ಟದ ಮುದ್ರಣ ವ್ಯವಸ್ಥೆ ಪ್ರಾರಂಭವಾಗಿ ಬಾಸೆಲ್ ಮಿಶನ್ ಪ್ರೆಸ್‍ನ ಮುಂದುವರಿದ ಭಾಗಕ್ಕೆ ಹೆಜ್ಜೆಯಿಡುವಂತಾಯಿತು. ಪ್ರಸ್ತುತ ಇರುವ ಕಟ್ಟಡವನ್ನು 1907ರಲ್ಲಿ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಗಾಗಿ ನಿರ್ಮಿಸಿದ್ದು. ಇದಕ್ಕೆ ಹೊಂದಿಕೊಂಡೇ 1914ನಂತರ ಕಾಮನ್‍ವೆಲ್ತ್‍ನವರು ನಡೆಸುತ್ತಿದ್ದ ನೇಯಿಗೆ ಕಾರ್ಖಾನೆ ಉದ್ದೇಶಕ್ಕಾಗಿ ವಿಸ್ತರಿಸಿದ್ದ ಕಟ್ಟಡ ಅನಂತರ 1970 ನಂತರ ಕಾಸೆಸ್ ಸಂಸ್ಥೆಯು ಅದೇ ಕಟ್ಟಡದಲ್ಲಿ ನೇಯಿಗೆ ವಿಭಾಗವನ್ನು ಮುಂದುವರಿಸುತ್ತಿತ್ತು. ಪ್ರಸ್ತುತ  ಕಟ್ಟಡದಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ ಹಳೆ ಮುದ್ರಣ ಯಂತ್ರಗಳು, ಅಚ್ಚುಮೊಳೆಗಳ ಸಂಗ್ರಹಗಳನ್ನು ಕಾಪಿಡಲಾಗಿದ್ದು ಮ್ಯೂಸಿಯಂ ಮಾಡುವ ಉದ್ದೇಶವನ್ನು ಹೊಂದಿದೆ. 

ಅಲ್ಲದೆ ನೀರೇಶ್ವಾಲ್ಯ ಮತ್ತು 1965 ಸುಮಾರಿಗೆ ಪ್ರಸ್ತುತ ಹಂಪನಕಟ್ಟೆಯಲ್ಲಿರುವ ವಿಜಯಾ ಪೆನ್ ಮಾರ್ಟ್ ಇರುವ ಕಟ್ಟಡದಲ್ಲಿ ಇದ್ದ ಬಾಸೆಲ್ ಮಿಶನ್ ಬುಕ್ ಶಾಪ್ ಮುಚ್ಚಿ ಚಂದ್ರನಾ ಬ್ರದರ್ಸ್‍ನವರಿಗೆ ಮಾರಿದ್ದು, ಮುದ್ರಣಕ್ಕೆಂದು ಬರುವ ಪ್ರಕಾಶಕರು ಇಲ್ಲಿಯೇ ಉಳುಕೊಳ್ಳುತ್ತಿದ್ದುದು, 150ಕ್ಕೂ ಮಿಕ್ಕಿ ಕೆಲಸಗಾರರಿದ್ದುದು, ಜಿಲ್ಲೆಯಾದ್ಯಂತ ಇರುವ ಪ್ರೆಸ್‍ಗಳವರು ಈ ಪ್ರೆಸ್‍ನ ಉಪಯೋಗ ಪಡೆದುಕೊಳ್ಳುತ್ತಿದ್ದುದು, ಇಲ್ಲಿ ಕೆಲಸ ಹಾಗೂ ಕಲಿತವರು ಸ್ವಂತ ಪ್ರೆಸ್ ಸ್ಥಾಪಿಸಿದ್ದು, ಕೆಲಸಗಾರರಿಗೆ ಚಿಕಿತ್ಸಾ ಭತ್ತೆ, ಬೋನಸ್, ವರ್ಷಕ್ಕೊಮ್ಮೆ ಉಳ್ಳಾಲಕ್ಕೆ ದೋಣಿಯಲ್ಲಿ ಪ್ರವಾಸ, ಕ್ಯಾಂಟಿನ್ ವ್ಯವಸ್ಥೆ, ಮುಂತಾದ ವ್ಯವಸ್ಥೆಗಳಿದ್ದವು ಎಂದು ಹಿಂದಿನ ಬಾಸೆಲ್ ಮಿಶನ್ ಪ್ರೆಸ್‍ನಲ್ಲಿ ಸೇವೆಯಲ್ಲಿದ್ದ ಶ್ರೀ ವಿನ್ಸೆಂಟ್ ಪ್ರಮೋದನ್(75) ಶ್ರೀ ಜಾರ್ಜ್ ಬಂಗೇರ(82) ಶ್ರೀ ಭವಾನಿ ಶಂಕರ್(84) ಮುಂತಾದವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಬಾಸೆಲ್ ಮಿಶನರಿಗಳ ಮುದ್ರಣ ಸೇವೆಯ ಮುಖಾಂತರ ಕನ್ನಡ ಮತ್ತು ತುಳು ಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಸೇವೆಗೆ. ಸಂದೇಶ ವಿಶೇಷ ಪ್ರಶಸ್ತಿ 2003, ಕಿಟೆಲ್, ಮ್ಯೋಗ್ಲಿಂಗ್ ಅವರ ಕನ್ನಡ ಸೇವೆ ಹಾಗೂ ಕನ್ನಡ ಅಭಿವೃದ್ದಿಯಲ್ಲಿ ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಕೆ.ಟಿ.ಸಿ. ಮಂಗಳೂರು ಇವರಿಗೆ ಆಳ್ವಾಸ್ ನುಡಿಸಿರಿ ವಿರಾಸತ್ 2013ರಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ , ವಾದಿರಾಜ ಕನಕದಾಸ, ಪುರಂದರದಾಸ ಸಾಹಿತ್ಯ ಸಂಗೀತೋತ್ಸವ 2008-2009 ಮಹಾತ್ಮಗಾಂಧಿ ಮೆಮೊರಿಯಲ್ ಕಾಲೇಜು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸರ ಪದ 1850 ಕೃತಿಯನ್ನು ಪ್ರಕಟಿಸುವ ಮೂಲಕ ಮನ್ನಣೆ ತಂದುಕೊಟ್ಟ ಬಾಸೆಲ್ ಮಿಶನ್ ತಿಯೊಲಾಜಿಕಲ್ ಸೆಮಿನೆರಿಯ ಮೊದಲ ಪ್ರಾಂಶುಪಾಲರಾದ ರೆವೆ. ಹೆರ್ಮನ್ ಮ್ಯೋಗ್ಲಿಂಗ್‍ರವರ ಪರವಾಗಿ ಕೆ.ಟಿ.ಸಿಗೆ ಗೌರವ ಪತ್ರ, ಕರಾವಳಿ ಪ್ರಿಂಟರ್ಸ್ ಎಸೋಸಿಯೇಷನ್(ರಿ)ರವರು ಎಪ್ರಿಲ್ 2000ರಂದು ಏರ್ಪಡಿಸಿದ ಮುದ್ರಕರ ಪ್ರಥಮ ಮಹಾಸಮ್ಮೇಳನದಲ್ಲಿ ಕರಾವಳಿ ಜಿಲ್ಲೆಗಳ ಮುದ್ರಣ ಉದ್ಯಮದ ಗೌರವಾನ್ವಿತ ಹಿರಿಯ ಸಂಸ್ಥೆಗಳಲ್ಲೊಂದಾದ ಬಾಸೆಲ್ ಮಿಶನ್ ಪ್ರೆಸ್‍ಗೆ ಅಭಿನಂದನ ಪತ್ರ ನೀಡಿ ಗೌರವಿಸುವ ಮೂಲಕ ಮಿಶನರಿಗಳ ಕಾರ್ಯವನ್ನು ಗುರುತಿಸಿ ಗೌರವಿಸಿದೆ.

ಇಲ್ಲಿ ಮುದ್ರಣಗೊಂಡ ಹೆಚ್ಚಿನ ಕೃತಿಗಳು ಹಾಗೂ ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರದಲ್ಲಿದ್ದು ಇದರಲ್ಲಿ ಹಲವು ಕನ್ನಡ, ತುಳು, ಮಲಯಾಲಂ ಕೃತಿಗಳ ಮೈಕ್ರೊಫಿಲ್ಮ್‍ಗಳ ರೂಪದಲ್ಲಿ ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೆಜ್ ಪತ್ರಾಗಾರದಲ್ಲಿದೆ. ಸಂಶೋಧಕರು ಈಗಲೂ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಲಭ್ಯವಿರದ ಕೃತಿಗಳನ್ನು ಶೋಧಿಸಿ ದಾಖಲೀಕರಿಸಿ ಜೋಪಾನ ಮಾಡುವ ಕಾರ್ಯವನ್ನೂ ಪತ್ರಾಗಾರ ಕೈಗೊಂಡಿದೆ. ಇಲ್ಲಿ ಮುದ್ರಣವಾದ ನಿಘಂಟುಗಳು, ವ್ಯಾಕರಣಗಳು, ಭೂತಾರಾಧನೆ, ಸಂಗೀತ ಪುಸ್ತಕ ಮುಂತಾದವುಗಳು ಬೇರೆ ಬೇರೆ ಸಂಸ್ಥೆಗಳಿಂದ ಮರುಮದ್ರಣಗೊಳ್ಳುತ್ತಿದೆ. ಕೈಸ್ತ ಸಭೆಗೆ ಬೇಕಾದ ಪುಸ್ತಕಗಳಾದ, ಕನ್ನಡ ತುಳು ಸಂಗೀತ ಪುಸ್ತಕ, ಶ್ರಮಾವಾರದ ನಲ್ವತ್ತು ದಿನದ ದ್ಯಾನಗಳು, ಪ್ರಾರ್ಥನೆ ಪುಸ್ತಕ, ಕನ್ನಡ ತುಳು ಗೀತಗಳಿಗೆ ತಕ್ಕ ರಾಗಗಳು, ಎಲೀಮ್ ಖೋರಸ್ ಮುಂತಾದವುಗಳನ್ನು ಈಗಲೂ ಮರುಮುದ್ರಣವನ್ನು ಪ್ರೆಸ್ ಕೈಗೊಳ್ಳುತ್ತಿದೆ. ಮರುಮುದ್ರಣ, ಸಂಶೋಧನೆ ಮುಂತಾದ ಎಲ್ಲಾ ಹಕ್ಕನ್ನು (@) ಮಿಶನ್21 (ಒissioಟಿ 21) ಪರವಾಗಿ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್, ಮಂಗಳೂರು ಹೊಂದಿದೆ.

ಕಳೆದ 43 ವರ್ಷಗಳಿಂದ ಕಾಸೆಸ್ ಸಂಸ್ಥೆಯ ಆಡಳಿತದಲ್ಲಿ ಮುಂದುವರಿಯುತ್ತಿರುವ ಮುದ್ರಣಾಲಯವು ಹಲವಾರು ಅಬಿವೃದ್ದಿಯನ್ನು ಕಂಡಿದೆ .ಜರ್ಮನಿಯ ಹೈಡಲ್‍ಬರ್ಗ್‍ನ ಅಟೋಮ್ಯಾಟಿಕ್ ಸಿಲಿಂಡರ್, ಟ್ರೆಡಲ್ ಹ್ಯಾಂಡ್ ಫೀಡಿಂಗ್, ಮನೋಟೈಪ್ ಅಲ್ಲದೆ ಕಂಪ್ಯೂಟರ್‍ಗಳನ್ನು ತರಿಸಲಾಗಿದೆ. ಬಾಸೆಲ್ ಮಿಶನ್ ಪ್ರೆಸ್‍ನಲ್ಲಿದ್ದ ದೊಡ್ಡ ಸಿಲಿಂಡರ್ ಪ್ರಿಂಟಿಂಗ್, ಅಟೋಮ್ಯಾಟಿಕ್ ಪ್ರಿಂಟಿಂಗ್, ವಿಕ್ಟೋರಿಯಾ ಪ್ರಿಂಟಿಂಗ್ ಹ್ಯಾಂಡ್ ಫೀಡಿಂಗ್, ಅಲ್ಲದೆ 2 ಸಣ್ಣ ಪ್ರಿಂಟಿಂಗ್ ಯಂತ್ರಗಳು ಈಗಲೂ ಸುಸ್ಥಿತಿಯಲ್ಲಿದ್ದು ಅದರಲ್ಲಿಯೇ ಮುದ್ರಣ ಕಾರ್ಯಗಳು ನಡೆಯುತ್ತಿದೆ. ಬೈಂಡಿಂಗ್‍ಗಾಗಿ ಫೋಲ್ಡಿಂಗ್, ಬುಕ್ ರೌಂಡಿಂಗ್, ಬುಕ್ ಕಾರ್ನರ್, 2 ಕಟ್ಟಿಂಗ್ ಯಂತ್ರಗಳಿದ್ದು ಅವುಗಳೂ ಹಿಂದಿನವೇ. ಸ್ಕ್ರೀನ್ ಪ್ರಿಂಟಿಂಗ್, ಉತ್ತಮ ಬೈಂಡಿಂಗ್ ವ್ಯವಸ್ತೆಯೂ ಇಲ್ಲಿದೆ. ಇಲ್ಲಿಯ ಅಚ್ಚು ಮೊಳೆಗಳ ಮುದ್ರಣ ಮತ್ತು ಉನ್ನತ ಮಟ್ಟದ ಬೈಂಡಿಂಗ್ ಈಗಲೂ ಹೆಸರುವಾಸಿಯಾಗಿದೆ. ಇಲ್ಲಿ ಹಿಂದೆ ಬೈಂಡಿಂಗ್ ಮತ್ತು ಮುದ್ರಣದ ತರಬೇತಿಯನ್ನು ಕೊಡಲಾಗುತ್ತಿದ್ದು ಈಗ ಈ ಪ್ರೆಸ್ ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಹಾಗೂ ಬೈಂಡಿಂಗ್ ವಿಭಾಗವು ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಬುಕ್‍ಕ್ರಾಫ್ಟ್ ಎಂಬ ಹೆಸರಿನಿಂದ 16 ನೌಕರರನ್ನೊಳಗೊಂಡು ಕಾರ್ಯವೆಸಗುತ್ತಿದೆ. ಮುದ್ರಣ ಕ್ಷೇತ್ರದಲ್ಲಿ ಮುಂದುವರಿದ ಈ ಜಗತ್ತಿನಲ್ಲಿ ಹೊಸ ಹೊಸ ನಮೂನೆಗಳು ಬಂದಿದೆ. ಅವಕ್ಕಾಗಿ ಈ ಮುದ್ರಣಾಲಯವನ್ನು ಉನ್ನತ ಮಟ್ಟಕ್ಕೇರಿಸುವ ಕಾರ್ಯವನ್ನೂ ಆಡಳಿತ ವರ್ಗ ಕೈಗೆತ್ತಿಕೊಂಡು ಮುದ್ರಣ ಮತ್ತು ಬೈಂಡಿಗ್ ಕ್ಷೇತ್ರದಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಬಾಸೆಲ್ ಮಿಶನ್ ಪ್ರೆಸ್ ಪರಂಪರೆಯನ್ನು ಹೊತ್ತು 175ನೇ ವರ್ಷಕ್ಕೆ ಕಾಲಿರಿಸುತ್ತಿದೆ.

ಆಧಾರ[ಬದಲಾಯಿಸಿ]

ಕ್ರೈಸ್ತ ಹಿತವಾದಿ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1926, 1928 ಕಲ್ಲಚ್ಚಿನ ಕನ್ನಡ ಹೊತ್ತಗೆಗಳ ವಿವರಣ ಸೂಚಿ, ಉಮಾಪತಿ ಶಾಸ್ತ್ರಿ (ಸಂ.) , ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ. 2004 ತೆಂಕನಾಡು,31ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕಾಸರಗೋಡು ಸ್ಮರಣ ಸಂಚಿಕೆ 1947, ಕಾಸೆಸ್ ಹಾಸ್ಟೆಲ್‍ಸಂಕ್ಷಿಪ್ತ ಚರಿತ್ರೆ, ಬೆನೆಟ್ ಜಿ. ಅಮ್ಮನ್ನ, ಕಾಸೆಸ್ ಹಾಸ್ಟೆಲ್ 40ನೇ ವರ್ಷದ ಸ್ಮರಣ ಸಂಚಿಕೆ 2012 ಶಾಂತಿ ದೇವಾಲಯ, ಮಂಗಳೂರು. ಶತಮಾನೋತ್ಸವ ಸ್ಮರಣ ಸಂಚಿಕೆ, 1962. ಮಂಗಳೂರು ಬೋಟನ್ ಆಟೋಗ್ರಫಿ ಲೇಖನ, ಶ್ರೀನಿವಾಸ ಹಾವನೂರು, ಸುದರ್ಶನ, ಟಿ.ಎಮ್.ಎ. ಪೈ ಅಭಿನಂದನ ಗ್ರಂಥ, ವಿಜಯಾಕಾಲೇಜ್ ಟ್ರಸ್ಟ್, ಮುಲ್ಕಿ, 1977 ಪಂಚಗಜ್ಜಾಯ, 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನ, ಮಂಗಳೂರು 1927 ಅಕ್ಚರಶಿಲ್ಪಿ ಅತ್ತಾವರ ಅನಂತಾಚಾರ್ಯ, ಪಾಲ್ತಾಡಿ ರಾಮಕೃಷ್ಣ ಆಚಾರ್, ಸುಪ್ರೀಯ ಪ್ರಕಾಶನ, ಪುತ್ತೂರು, 2003 ವಜ್ರಕುಸುಮ, ಚ.ರಾ. ಅಭಿನಂದನ ಗ್ರಂಥ, ಅಮೃತ ಸೋಮೇಶ್ವರ(ಸಂ.) ಅಭಿನಂದನ ಸಮಿತಿ, ಉಚ್ಚಿಲ, 2005 ಹೊಸಗನ್ನಡದ ಅರುಣೋದಯ, ಶ್ರೀನಿವಾಸ ಹಾವನೂರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು,2000 ಡಾ. ಶ್ರೀನಿವಾಸ ಹಾವರನೂರರ ಟಿಪ್ಪಣಿಗಳು. ಕರ್ನಾಟಕ ತಿಯೊಲಾಜಿಕಲ್ ಪತ್ರಾಗಾರ – ಕಡತಗಳು ರೈಟ್ ರೆವೆ. ಡಾ. ಸಿ.ಎಲ್. ಫುರ್ಟಾಡೋ, ವಿಶ್ರಾಂತ ಧರ್ಮಾದ್ಯಕ್ಷರು ಹಾಗೂ ಕಾಸೆಸ್‍ನ ಹಿಂದಿನ ಕಾರ್ಯದರ್ಶಿ ಶ್ರೀ ಸ್ಟೀವನ್ ಮಾಬೆನ್, ಮ್ಯಾನೆಜರ್, ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಾಜಿ, ಮಂಗಳೂರು.