ವಿಷಯಕ್ಕೆ ಹೋಗು

ಬಾಲಕೃಷ್ಣ ಭಟ್ ಕುಂಟಿಕಾನಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
KANNADA WRITER

ಜನನ[ಬದಲಾಯಿಸಿ]

ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ಕುಂಟಿಕಾನಮಠವೆಂಬ ಪ್ರಾಚೀನ ದೇವಾಲವಿದೆ. ಈ ದೇವಾಲಯದ ಅನುವಂಶಿಕ ಆಡಳಿತದಾರರು ಹಾಗು ಆರಾಧಕರು ಕುಂಟಿಕಾನಮಠದ ಮನೆಯವರು. ಕುಂಟಿಕಾನ ಮಠದ ಮನೆಯಲ್ಲಿ ೨೭-೦೧-೧೯೪೦ ರಂದು ದಿವಂಗತ ಸುಬ್ರಾಯ ಭಟ್ಟ ಮತ್ತು ಲಕ್ಷ್ಮಿ ಅಮ್ಮನವರ ಮಗನಾಗಿ ಬಾಲಕೃಷ್ಣ ಭಟ್ ಜನಿಸಿದರು. ಪ್ರಾಕೃತಿಕವಾಗಿ ಸುಂದರವಾದ ಧಾರ್ಮಿಕ ವಾತಾವರಣವಿರುವ ಸ್ಥಳದಲ್ಲಿ ಬೆಳೆದರು.

ಬಾಲ್ಯ[ಬದಲಾಯಿಸಿ]

ಪೆರಡಾಲದ ನೀರ್ಚಾಲು ಎಂಬಲ್ಲಿರುವ ಮಹಾಜನ ಸಂಸ್ಕೃತ ಕಾಲೇಜು ಹೆಸರಾಂತ ವಿದ್ಯಾಸಂಸ್ಥೆ. ಸಾಹಿತ್ಯ ದಿಗ್ಗಜರೆಂದೆನಿಸಿದ ಮಹೋಪಾಧ್ಯಾಯರಿಂದ ತುಂಬಿ ತುಳುಕುತ್ತಿದ್ದ ಮಹಾನ್ ಸಂಸ್ಥೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಸೌಭಾಗ್ಯ ಬಾಲಕೃಷ್ಣ ಅವರಿಗೆ ಒದಗಿ ಬಂತು. ಪ್ರಾಥಮಿಕ,ಮಾಧ್ಯಮಿಕ,ಪ್ರೌಢ ವಿದ್ಯಾಭ್ಯಾಸ ಪಡೆದು ೧೯೬೨ ರಲ್ಲಿ ಕನ್ನಡ ವಿದ್ವಾನ್ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದರು. ಕನ್ನಡ, ಆಂಗ್ಲ, ಸಂಸ್ಕೃತ, ಹಿಂದಿ, ತುಳು, ಮಲೆಯಾಳಂ ಭಾಷೆಗಳ ಪರಿಚಯ ಪಡೆದ ಬಾಲಕೃಷ್ಣ ಭಟ್ ಆಗಲೇ ಬಹುಭಾಷಾ ಪಂಡಿತರಾದರು.

ವೃತ್ತಿಜೀವನ[ಬದಲಾಯಿಸಿ]

ಕನ್ನಡ ವಿದ್ವಾನ್ ಪದವಿ ಪಡೆದ ಬಳಿಕ ೩ ವರ್ಷಗಳ ಕಾಲ ಕಾಸರಗೋಡಿನಲ್ಲಿ, ಒಂದು ವರ್ಷ ಮುಂಬೈನಲ್ಲಿ ಆ ಬಳಿಕ ೩೨ ವರ್ಷ ಬೆಂಗಳೂರಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೯೮ರಲ್ಲಿ ನಿವೃತ್ತರಾದರು. ಉತ್ತಮ ಬೋಧಕರಾಗಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಅಧ್ಯಾಪಕರೆನಿಸಿದವರು. ಈಗ ನಿವೃತ್ತರಾಗಿ ಹುಟ್ಟೂರಿನಲ್ಲಿ ನೆಲೆಸಿದ್ದಾರೆ.

ಸಂಸಾರ[ಬದಲಾಯಿಸಿ]

ಪತ್ನಿ, ಎರಡು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಎರಡು ಗಂಡು ಮಕ್ಕಳು, ಸೊಸೆ ಇರುವ ತುಂಬು ಸಂಸಾರದ ಸುಖವನ್ನು ಅನುಭವಿಸುವ ಭಾಗ್ಯವಂತರಾಗಿ ಸಂತೃಪ್ತರಾಗಿದ್ದಾರೆ. ಸರಳ ಸ್ವಭಾವದ ಸ್ನೇಹಜೀವಿಯಾದ, ಉತ್ಸಾಹಿಯಾದ, ಸಹೃದಯ ವ್ಯಕ್ತಿಯಾದ, ಬಾಲಕೃಷ್ಣ ಅವರಿಗೆ ಅಪಾರವಾದ ಸ್ನೇಹಿತರ ವರ್ಗವಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಉತ್ಸಾಹಿಯಾಗಿ ನೆಮ್ಮದಿಯಿಂದ ಕರ್ತವ್ಯಶೀಲರಾಗಿದ್ದಾರೆ.

ಕನ್ನಡ ಕಲಾವಿದ[ಬದಲಾಯಿಸಿ]

ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯ ಕಲೆಗಳಲ್ಲಿ ವಿಶೇಷ ಆಸಕ್ತಿಯಿತ್ತು. ನುರಿತ ಅಧ್ಯಾಪಕರ ಮಾರ್ಗದರ್ಶನದಿಂದ ಭಾಷಣಕಾರರಾಗಿ ರೂಪುಗೊಂಡು ವಾಗ್ಮಿ ಎಂದೆನಿಸಿದರು. ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶಪಡೆದರು. ಕನ್ನಡ, ಸಂಸ್ಕೃತ, ತುಳು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ವಿದ್ವಾನ್ ಪದವಿ ಪಡೆಯುವ ಕಾಲಕ್ಕೆ ನಟರಾಗಿ ನಾಟಕಕಾರರಾಗಿ, ಕಥೆಗಾರರಾಗಿ, ಕವಿಯಾಗಿ, ಪ್ರವಚನಕಾರರಾಗಿ, ಯಕ್ಷಗಾನ ಅರ್ಥಧಾರಿಗಳಾಗಿ ರೂಪುಗೊಂಡರು. ಪಾತ್ರಗಳಿಗೆ ಜೀವ ತುಂಬುವಲ್ಲಿ ನಿಷ್ಣಾತರಾದರು. ಪುರಾಣವಾಚನ ವ್ಯಾಖ್ಯಾನಗಳಲ್ಲೂ ಪ್ರವೀಣರಾದರು. ಭಾವಪೂರ್ಣ ನಿರೂಪಣೆಯೂ ಇವರಿಗೆ ಕರಗತವಾಯಿತು.

ಸಾಮಾಜಿಕ, ಚಾರಿತ್ರಿಕ ಪೌರಾಣಿಕ ನಾಟಕಗಳಲ್ಲಿ ಉಂಡಾಡಿ ಗುಂಡ ನಾಟಕದ ಗುಂಡ, ಯಾರ ಹೆಂಡ್ತಿ ನಾಟಕದ ಮೂರ್ತಿ, ರಾಮ ಪಟ್ಟಾಭಿಷೇಕದ ಭರತ, ಸಂಸ್ಕೃತ ನಾಟಕ ಶಾಕುಂತಲದಲ್ಲಿ ಸರ್ವದಮನ, ವೇಣಿ ಸಂಹಾರದ ಭೀಮ, ಮಧ್ಯಮ ವ್ಯಾಯೋಗದ ಘಟೋತ್ಕಚನಾಗಿ ಇವರು ನಿರ್ವಹಿಸಿದ ಪಾತ್ರಗಳು ಅವಿಸ್ಮರಣೀಯ. ಹಾಗೆಯೇ ಯಕ್ಷಗಾನ ತಾಳಮದ್ದಳೆಗಳಲ್ಲಿ ಕೃಷ್ಣನಾಗಿ, ರಾಮನಾಗಿ, ಕೌರವೇಶ್ವರನಾಗಿ, ಸುಧನ್ವನಾಗಿ, ಕರ್ಣನಾಗಿ, ವಾಲಿಯಾಗಿ, ರಾವಣನಾಗಿ, ಭೀಷ್ಮನಾಗಿ, ಇಂದ್ರಜಿತುವಾಗಿ, ಅತಿಕಾಯನಾಗಿ, ಲಕ್ಷ್ಮಣನಾಗಿ, ಅಂಬೆಯಾಗಿ, ದಾಕ್ಷಾಯಿಣಿಯಾಗಿ, ದ್ರೌಪದಿಯಾಗಿ ಯಾವುದೇ ಕಥೆಗಳಲ್ಲಿ ಯಾವುದೇ ಪಾತ್ರಗಳನ್ನು ವಹಿಸಿ ವಿಜೃಂಭಿಸಬಲ್ಲವರು. ಸಾಹಿತ್ಯ ಕಲೆಗಳ ಆರಾಧಕರಾಗಿ ನಾಡು ನುಡಿಗಳ ಸೇವೆ ಮಾಡಿದವರು.

ದೇಶ ವಿದೇಶ ಸುತ್ತಿದರು-ಕೋಶ ಓದಿದರು[ಬದಲಾಯಿಸಿ]

ದೇಶ ಸುತ್ತು ಕೋಶ ಓದು ಎಂಬಂತೆ ಭಾರತದ ಹಲವು ಪ್ರದೇಶಗಳನ್ನು ಸಂದರ್ಶಿಸಿ ವಿಪುಲವಾದ ಜ್ನಾನವನ್ನು ಪಡೆದಿದ್ದಾರೆ.

೨೦೦೬ರಲ್ಲಿ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಹರೈನ್‌ಗೆ ನಾಲ್ಕು ದಿವಸಗಳ ಕಾಲ ಹೋಗಿ ಕನ್ನಡ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.

೨೦೦೮ರಲ್ಲಿ ಇಂಗ್ಲೆಂಡ್‌ಗೆ ಹೋಗಿ ಮಗ ಮತ್ತು ಸೊಸೆಯರ ಜೊತೆ ಇರುವ ಅವಕಾಶವಾಯಿತು. ಎರಡುವರೆ ತಿಂಗಳುಗಳ ಕಾಲ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನೇಕ ಅನಿವಾಸಿ ಭಾರತೀಯರನ್ನೂ, ಕನ್ನಡಿಗರನ್ನೂ ಭೇಟಿಯಾದರು. ಕನ್ನಡ ಸಂಘಗಳೊಂದಿಗೆ ಸಂಪರ್ಕ ಹೊಂದಿದರು. ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಪ್ರಕಟವಾದ ಕೃತಿಗಳು,ಕವನ ಸಂಕಲನಗಳು[ಬದಲಾಯಿಸಿ]

೧-ಸುಪ್ರಭಾತ ೨-ಅಮೃತಧಾರೆ ೩-ಸ್ಮರಣೆ

ಭಾಮಿನಿ ಷಟ್ಪದಿ ಕಾವ್ಯ[ಬದಲಾಯಿಸಿ]

೧-ಸುಮಾರು ಎಂಟುನೂರು ಭಾಮಿನಿ ಪದ್ಯಗಳಿರುವ "ಶಿವಲೀಲಾ ವಿನೋದಂ"

ನಾಟಕಗಳು[ಬದಲಾಯಿಸಿ]

೧-ಧನಪಿಶಾಚಿ ೨-ಭಲೇ ಹುಡುಗಾಟ ೩-ಸ್ವಪ್ನ ಸೌಭಾಗ್ಯ ೪-ಕಣ್ಣು ನಾಲಿಗೆ ಮನವು

ಗದ್ಯ ಕಾವ್ಯಗಳು[ಬದಲಾಯಿಸಿ]

೧-ಗಿರಿಜಾ ಕಲ್ಯಾಣ ೨-ಕುಮಾರ ವಿಜಯ ೩-ಶ್ರೀ ದೇವೀ ಮಹಾತ್ಮೆ ೪-ಶ್ರೀ ಕೃಷ್ಣ ಕಥಾಮಂಜರಿ (೫ ಸಂಪುಟ) ೫-ಶ್ರೀ ರಾಮ ಕಥಾಮಂಜರಿ (೨ ಸಂಪುಟ) ಇದಲ್ಲದೆ ಅನೇಕ ಕವನಗಳು, ಲೇಖನಗಳು, ಕಥೆಗಳು, ಕಾದಂಬರಿಗಳು ಪ್ರಕಟಣೆಗೆ ಸಿದ್ಧವಾಗಿವೆ.

ಕನ್ನಡಿಗರ ಅಭಿಮಾನದಿಂದ ಈಗಾಗಲೇ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಹಾಗು ಸನ್ಮಾನಗಳು ಭಟ್ಟರಿಗೆ ಲಭಿಸಿದೆ. ಬಹರೈನ್‌ನ ಕನ್ನಡ ಸಂಘ ಅಂತರಾಷ್ಟ್ರೀಯ "ವಿಶ್ವಮಾನ್ಯ" ಪ್ರಶಸ್ತಿಯನ್ನು ೨೦೦೬ರಲ್ಲಿ ನೀಡಿ ಗೌರವಿಸಿದೆ.