ವಿಷಯಕ್ಕೆ ಹೋಗು

ಬಾಂಬೆ ಡಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಂಬೆ ಡಕ್ ಹಾರ್ಪಡಾನ್ ನೆಹೇರಿಯಸ್ ಎಂಬ ಶಾಸ್ತ್ರೀಯ ಹೆಸರುಳ್ಳ ಸಮುದ್ರವಾಸಿ ಮೀನಿನ ರೂಢಿಯ ಇಂಗ್ಲಿಷ್ ಹೆಸರು. ಇದು ಆಫ್ರಿಕದ ಪೂರ್ವ ಕರಾವಳಿ, ಭಾರತ, ಮಲೇಶಿಯ, ಇಂಡೊನೇಶಿಯ ಮತ್ತು ಚೀನದ ಕರಾವಳಿಗಳಲ್ಲಿ ಕಾಣಬರುತ್ತದೆ. ಭಾರತದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರಗಳ ಕರಾವಳಿ ಪ್ರದೇಶಗಳು ಇದರ ಮೀನುಗಾರಿಕೆಗೆ ಪ್ರಸಿದ್ಧವಾಗಿವೆ. ಈ ಪ್ರದೇಶಗಳಲ್ಲಿ ಇದನ್ನು ಬೊಂಬಿಲ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಆಂಧ್ರ ಪ್ರದೇಶ ಮತ್ತು ಒರಿಸ್ಸಗಳ ಸಮುದ್ರದಲ್ಲಿಯೂ ಗಣನೀಯವಾದ ಮೊತ್ತದಲ್ಲಿ ಬಾಂಬೆ ಡಕ್ಕನ್ನು ಹಿಡಿಯಲಾಗುತ್ತದೆ.[] ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಬಳಕೆಗೆ ಬರುತ್ತಿರುವ ಯಂತ್ರಕೌಶಲದಿಂದಾಗಿ ಬಾಂಬೆ ಡಕ್ಕಿನ ಮೀನುಗಾರಿಕೆಗೆ ಹೆಚ್ಚು ಪ್ರಾಶಸ್ತ್ರ ದೊರಕುತ್ತಿದೆ.

೧೯೫೬-೬೫ರ ದಶಕದಲ್ಲಿ ಬಾಂಬೆ ಡಕ್ಕಿನ ಹಿಡಿವಳಿ ಸುಮಾರು ೭೩೯೦೦ ಟನ್‍ಗಳಷ್ಟಿದ್ದು ಸಮುದ್ರದ ಮೀನುಗಳ ಹಿಡಿವಡೆಯಲ್ಲಿ ಸರಾಸರಿ ೧೨.೧೯% ರಷ್ಟಿತ್ತು. ೨೦೦೩ ರಲ್ಲಿ ಇದರ ಹಿಡುವಳಿ ಸುಮಾರು ೧,೩೯,೯೬೧ ಟನ್‍ಗಳಷ್ಟಾಗಿದೆ. ಇದರ ೯೦% ಭಾಗ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಿಂದ ಹಿಡಿವಳಿಯಾಗುತ್ತದೆ. ಈ ಎರಡು ರಾಜ್ಯಗಳಲ್ಲಿ ಬಾಂಬೆ ಡಕ್ಕಿನ ಪ್ರಾಮುಖ್ಯ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬಂಗಡೆ ಮತ್ತು ಬೈಗೆಯ ಪ್ರಾಮುಖ್ಯದಷ್ಟೇ ಆಗಿದೆ ಎಂದು ಹೇಳಬಹುದು.

ಬಾಂಬೆ ಡಕ್ ಮೀನು ನೀಳದೇಹಿ. ಸುಮಾರು ೪೦ ಸೆಂ.ಮೀ. ಬೆಳೆಯುತ್ತದೆ.[] ಬೆನ್ನಿನ ಮೇಲೆ ಎರಡು ರೆಕ್ಕೆಗಳಿವೆ. ಬಾಲದ ರೆಕ್ಕೆಯಲ್ಲಿ ಮೂರು ಹಾಲೆಗಳಿವೆ.

ಬೇಟೆಗೆ ಹೆಚ್ಚಾಗಿ ಸಿಗುವ ಮೀನುಗಳು ೬ ರಿಂದ ೨೭ ಸೆಂ.ಮೀ. ಗಳಷ್ಟು ಉದ್ದವಾಗಿರುವುವು, ಇಷ್ಟು ಉದ್ದ ಬೆಳೆಯಲು ಸುಮಾರು ೨ ವರ್ಷ ಹಿಡಿಯುತ್ತದೆ. ಮೀನು ಪ್ರಾಯಕ್ಕೆ ಬರುವುದೂ ೨ ವರ್ಷಗಳಾದ ಮೇಲೆಯೇ. ಮೊಟ್ಟ ಇಡಲು ನಿರ್ದಿಷ್ಟ ಶ್ರಾಯವಿಲ್ಲ. ಪ್ರೌಢ ಹೆಣ್ಣೊಂದು ೨೦,೦೦೦-೧,೦೦,೦೦೦ ಮೊಟ್ಟೆ ಇಡುತ್ತದೆ.

ಬಾಂಬೆ ಡಕ್ ಹೊಟ್ಟೆಬಾಕ ಮೀನು, ಮಾಂಸಾಹಾರಿ, ಸ್ವಜಾತಿಯ ಮೀನನ್ನು ಕೂಡ ತಿಂದುಬಿಡುವುದು. ಅನೇಕ ಜಾತಿಯ ಮೀನುಗಳೂ ಸೀಗಡಿಯೂ ಇದರ ಆಹಾರ. ಬಾಂಬೆ ಡಕ್ ಮೀನನ್ನು ಸಮುದ್ರದಲ್ಲಿ ನೆಡುವ ಸಂಚಿ ಬಲೆಗಳ (ದೋಲ್) ಸಹಾಯದಿಂದ ಹಿಡಿಯುವರು.

ಉಲ್ಲೇಖಗಳು

[ಬದಲಾಯಿಸಿ]
  1. "Harpadon nehereus". Integrated Taxonomic Information System. Retrieved 18 April 2006.
  2. FishBase - Harpadon nehereus


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: