ಬಸವರಾಜ ಮಲಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಜನಪದ ಸಾಹಿತ್ಯದ ತೌರುಮನೆ ಎನಿಸಿರುವ ಬೆಳಗಾವಿ ಜಿಲ್ಲೆಯು ಹಲವಾರು ಜಾನಪದ ವಿದ್ವಾಂಸರಿಗೆ ಜನ್ಮ ನೀಡಿದ ಸ್ಥಳ. ಬೆಟಗೇರಿ ಕೃಷ್ಣ ಶರ್ಮ, ಚಂದ್ರಶೇಖರ ಕಂಬಾರ, ಎಂ.ಎಸ್. ಲಠ್ಠೆ, ನಿಂಗಣ್ಣ ಸಣ್ಣಕ್ಕಿ, ಜ್ಯೋತಿ ಹೊಸೂರ ಇವರ ಸಾಲಿಗೆ ಸೇರಿದ ಮತ್ತೊಬ್ಬ ಜಾನಪದ ವಿದ್ವಾಂಸರೆಂದರೆ ಬಸವರಾಜ ಮಲಶೆಟ್ಟಿಯವರು.

ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರಿನ ಸಮೀಪದ ತಿಗಡೊಳ್ಳಿ ಎಂಬ ಹಳ್ಳಿಯಲ್ಲಿ ಕಲಾವಿದರ, ಕುಸ್ತಿ ಪಟುಗಳ ಕುಟುಂದಲ್ಲಿ. ತಂದೆ ಮರಿಕಲ್ಲಪ್ಪ ಮಲಶೆಟ್ಟಿಯವರು, ಕುಸ್ತಿ ಪಟುಗಳು. ಅಜ್ಜ ರುದ್ರಪ್ಪ ಕೂಡಾ ಕುಸ್ತಿಯಲ್ಲಿ ಪ್ರಖ್ಯಾತರು. ತಾಯಿ ಸೋಬಾನೆ ಹಾಡುಗಾರ್ತಿ ನಾಗೇಂದ್ರವ್ವ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

 • ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಡೆದ ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ೧೯೭೯ರಲ್ಲಿ ‘ಉತ್ತರ ಕರ್ನಾಟಕದ ಬಯಲಾಟಗಳು’ ಮಹಾಪ್ರಬಂಧ ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ.
 • ೧೯೭೩ರಲ್ಲಿಯೇ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದರು. ತಮ್ಮ ಜಾನಪದ ಅಧ್ಯಯನ, ಅಧ್ಯಾಪನದ ಆಸಕ್ತಿಯನ್ನು ಉತ್ತರ ಕರ್ನಾಟಕದ ಜಾನಪದ ವಿದ್ವಾಂಸರಲ್ಲಿಯೇ ವಿಶಿಷ್ಟರೆನಿಸಿದ್ದಾರೆ.
 • ಜಾನಪದದ ಬಗ್ಗೆ ಇವರಿಗಿದ್ದ ಆಸ್ಥೆಯು ವಂಶಪಾರಂಪರ್ಯವಾಗಿ ಬೆಳೆದು ಹಳ್ಳಿಯಲ್ಲಿ ನಡೆಯುತ್ತಿದ್ದ ದೊಡ್ಡಾಟ, ಪಾರಿಜಾತ, ಸಣ್ಣಾಟ, ಕುಣಿತಗಳು, ಪಗರಣ ಮಾದರಿಯ ಸೋಗುಗಳು, ಲಾವಣಿಯ ಗೋಷ್ಠಿಗಳು, ಭಜನಾ ಕಾರ್ಯಕ್ರಮಗಳು ಎಳೆಯ ವಯಸ್ಸಿನ ಮೇಲೆ ಗಾಢವಾಗಿ ಪ್ರಭಾವ ಬೀರಿದವು. ಹತ್ತು ವರ್ಷ ಹುಡುಗನಾಗಿದ್ದಾಗಿನಿಂದಲೂ ತಂದೆಯವರ ಜೊತೆ ಬಯಲಾಟಗಳಲ್ಲಿ ಪಾತ್ರಗಳನ್ನು ನಿರ್ವಹಿಸತೊಡಗಿದರು.
 • ಜಾನಪದದ ಜೊತೆಗೆ ಕಲೆ ಸಂಗೀತ, ವಾದ್ಯ ವಿಶೇಷಗಳೂ ಬಾಲ್ಯದಿಂದಲೂ ಆಕರ್ಷಿಸಿದ ಪ್ರಕಾರಗಳು. ಜಾನಪದ ಹಾಡುಗಾರರಷ್ಟೇ ಅಲ್ಲದೆ ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ಪಡೆದ ಕಲಾವಿದರು. ಜನಪದ ವಾದ್ಯಗಳನ್ನು ನುಡಿಸುವ ಕಲೆಯೂ ಕರಗತವಾಗಿದ್ದುದರಿಂದ ತಮ್ಮ ಹಾಡಿನ ಜೊತೆಗೆ ತಾವೇ ಹಿಂಬದಿಯ ಸಂಗೀತವನ್ನೂ ನುಡಿಸಬಲ್ಲವರು. ದೊಡ್ಡಾಟದ ಕಲಾವಿದರಾಗಿ, ನಾಟಕ ರಚನಕಾರರಾಗಿ, ನಿರ್ದೇಶಕರಾಗಿ, ಸೂತ್ರಧಾರರಾಗಿಯೂ ನಿರ್ವಹಿಸಬಲ್ಲ ದಕ್ಷ ಕಲಾವಿದರು. ಗಿರಿಜಾ ಕಲ್ಯಾಣ ದೊಡ್ಡಾಟವನ್ನು ಮೂರು ಗಂಟೆಗಳ ಕಾಲಮಿತಿಗೆ ಅಳವಡಿಸಿ, ಆಕರ್ಷಕ ಪ್ರದರ್ಶನವಾಗುವಂತೆ ಮಾಡಿ ಪ್ರೇಕ್ಷಕರನ್ನು ನಾಟಕದತ್ತ ಸೆಳೆಯುವಲ್ಲಿ ಸಮರ್ಥರೆನೆಸಿದ್ದಾರೆ.
 • ತಮ್ಮ ಅಧ್ಯಯನ-ಅಧ್ಯಾಪನದ ಜೊತೆಯಲ್ಲಿಯೇ ಜನಪದ ಸಂಗೀತ, ಆಟ-ಬಯಲಾಟಗಳಲ್ಲಿ ತೊಡಗಿಸಿಕೊಂಡಿರುವ ಮಲಶೆಟ್ಟಿಯವರು ಜಾನಪದ ಪುನರುಜ್ಜೀವನ, ಪ್ರಚಾರ-ಪ್ರಸಾರಕ್ಕಾಗಿ ಅಹರ್ನಿಶಿ ದುಡಿಯುತ್ತ ಬಂದಿರುವುದರ ಜೊತೆಗೆ ವಿಶ್ವವಿದ್ಯಾಲಯಗಳು, ಅಕಾಡಮಿಗಳು, ಸಂಘ-ಸಂಸ್ಥೆಗಳು, ಪರಿಷತ್ತುಗಳು ಆಯೋಜಿಸುವ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ, ಸಮಾವೇಶಗಳಲ್ಲಿ, ಸಮ್ಮೇಳನಗಳಲ್ಲಿ ಭಾಗವಹಿಸಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಬಗ್ಗೆ ನೂರಾರು ವಿದ್ವತ್ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜೊತೆಗೆ ಜಾನಪದ ಜಗತ್ತು, ಕರ್ನಾಟಕ ಭಾರತಿ, ಕನ್ನಡ ಜಾನಪದ ಅಧ್ಯಯನ, ಜಾನಪದ ಕರ್ನಾಟಕ ಮುಂತಾದ ಪತ್ರಿಕೆಗಳಿಗೂ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ.
 • ನಾಡಿನ ಜಾನಪದ ವಿದ್ವಾಂಸರೆಂದು ಖ್ಯಾತಿಪಡೆದಿದ್ದರೂ ಎಂದೂ ಮುಂಚೂಣಿಯ ಸ್ಥಾನಕ್ಕೆ ಆಶಿಸದೆ, ಯಾರೇ ಜಾನಪದದ ಬಗ್ಗೆ ತಪ್ಪು ಗ್ರಹಿಕೆ, ಸುಳ್ಳು ಹೇಳಿಕೆ, ಅಪ್ರಬುದ್ಧ ವಿಚಾರ ಮಂಡನೆಯಲ್ಲಿ ತೊಡಗಿದರೆ ಅದರ ಬಗ್ಗೆ ಕೂದಲೇ ಪ್ರತಿಕ್ರಿಯಿಸಿ ತಾರ್ಕಿಕ ನೆಲೆಯಿಂದ, ನಿಜದ ನೆಲೆಯನ್ನು ಸಹೃದಯರ ಮುಂದಿಟ್ಟಿದ್ದಾರೆ.
 • ಗುಲಬರ್ಗಾ ವಿಶ್ವವಿದ್ಯಾಲಯದ ಮೂವರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಜಾನಪದ ವಿಷಯ ಸಂಶೋಧನಾ ಮಾರ್ಗದರ್ಶಕರಾಗಿದ್ದಲ್ಲದೆ ಕರ್ನಾಟಕದ ಇತರ ವಿಶ್ವವಿದ್ಯಾಲಯಗಳ ೧೨ ಪಿಎಚ್.ಡಿ. ಮತ್ತು ೩ ಡೀಲೆಟ್ ಪ್ರಬಂಧಗಳ ಮೌಲ್ಯ ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
 • ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಜಾನಪದ ಪರಿಷತ್ತು, ನಾಗಪುರದ ದಕ್ಷಿಣ ಮಧ್ಯ ಕೇಂದ್ರ, ಉಡುಪಿಯ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಕರ್ನಾಟಕ ಸರಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ಜಾನದಶ್ರೀ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳ ಸದಸ್ಯರಾಗಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡ ದೊಡ್ಡಾಟ ಕುಣಿತ ಕಮ್ಮಟ, ಹಡಗಲಿಯಲ್ಲಿ ನಡೆದ ಅಕಾಡಮಿಯ ಜಾನಪದ ನಾಟಕೋತ್ಸವ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ರಾಜ್ಯಮಟ್ಟದ ದೊಡ್ಡಾಟ ಕಮ್ಮಟ ಇವುಗಳ ಸಂಘಟನಾ ಕಾರ್ಯದರ್ಶಿಯಾಗಿಯೂ ದುಡಿದಿದ್ದಾರೆ.[೧]

ಕೃತಿಗಳು[ಬದಲಾಯಿಸಿ]

ಇವರು ಸಂಪಾದಿಸಿರುವ ಜಾನಪದ ಕೃತಿಗಳೆಂದರೆ ಬಳ್ಳಾರಿ ಜಿಲ್ಲೆಯ ಜಾನಪದ ಕಥೆಗಳು (೧೯೭೯), ಕೋಲಾಟದ ಪದಗಳು (೧೯೮೦), ಇಜಿಯಣ್ಣನ ಹಾಡು (೧೯೮೨), ಸೊಂಡೂರು ಕುಮಾರಸ್ವಾಮಿಯ ಹಾಡುಗಳು (೧೯೮೮), ಶ್ರೀ ಕೃಷ್ಣ ಪಾರಿಜಾತ (೧೯೯೯), ಮರಿಕಲ್ಲ ಕವಿಯ ಗೀಗೀ ಪದಗಳು (೨೦೦೧) ಇವೇ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಲ್ಲದೆ ಅಭ್ಯಾಸಪೂರ್ಣ ದೀರ್ಘ ಪ್ರಸ್ತಾವನೆಯನ್ನೂ ಬರೆದಿದ್ದಾರೆ.

ಜೀವನ ಚರಿತ್ರೆ[ಬದಲಾಯಿಸಿ]

 • ಇವಲ್ಲದೆ ಜಾನಪದ ಕಾವ್ಯಗಳಲ್ಲಿ ಭಕ್ತಿಯ ನಿರೂಪಣೆ (೧೯೮೨),
 • ಉತ್ತರ ಕರ್ನಾಟಕದ ಬಯಲಾಟಗಳು (೧೯೮೩),
 • ಉತ್ತರ ಕರ್ನಾಟಕದ ಜನಪದ ವಾದ್ಯಗಳು (೧೯೮೭),
 • ಸ್ವಾತಂತ್ರ‍್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ (೧೯೮೮),
 • ಉತ್ತರ ಕರ್ನಾಟಕದ ರಂಗ ಗೀತೆಗಳು

ಪ್ರಾಚೀನ ಕರ್ನಾಟಕದಲ್ಲಿ ನಾಟಕ ಪರಂಪರೆ, ಹಂಪಿ-ಒಂದು ಪರಿಚಯ, ಹಂಪೆಯ ಹರಿಹರ, ಹರಿಹರನ ಕೃತಿಗಳ ಪದಕೋಶ ಮುಂತಾದ ವಿದ್ವತ್ ಕೃತಿಗಳ ಜೊತೆಗೆ ಹಲವಾರು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳು, ವಾಚಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ಮಲಶೆಟ್ಟಿಯವರಿಗೆ ಕರ್ನಾಟಕ ರಾಜ್ಯ ಜೆ.ಸಿ. ಯುವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ವಿಶೇಷ ಪುರಸ್ಕಾರ, ಮಹಾಕವಿ ಹರಿಹರನ ಕೃತಿಗಳ ಪದಕೋಶಕ್ಕೆ ಶಿವರಾತ್ರೀಶ್ವರ ದತ್ತಿನಿಧಿ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯ ಪ್ರಶಸ್ತಿ, ಶಿಗ್ಗಾವಿಯಲ್ಲಿ ನಡೆದ ೩೩ನೆಯ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ತತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]