ಬಸದಿಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Basadibetta.jpg
ಬಸದಿಬೆಟ್ಟ

ತುಮಕೂರು ಬಳಿಯ ಕ್ಯಾತ್ಸಂದ್ರದಿಂದ ಕೇವಲ ೩ ಕಿಲೋ ಮೀಟರ್ ದೂರದಲ್ಲಿರುವ ಬೃಹತ್ ಏಕಶಿಲಾಬೆಟ್ಟವೇ ಬಸದಿ ಬೆಟ್ಟ. ಮಂದರಗಿರಿ ಎಂದು ಕರೆಸಿಕೊಂಡಿದ್ದ ಈ ಬೆಟ್ಟಕ್ಕೆ ಬಸದಿ ಬೆಟ್ಟ ಎಂಬ ಹೆಸರು ಬರಲು ಕಾರಣ ಇದರ ಮೇಲಿರುವ ಜೈನ ಬಸದಿಗಳು.

ಭಾರತದ ಬೃಹತ್ ಏಕಶಿಲಾ ಬೆಟ್ಟಗಳಲ್ಲಿ ಒಂದೆಂದು ಖ್ಯಾತವಾಗಿರುವ ಈ ಬೆಟ್ಟದ ತುದಿಗೆ ಹೋಗಲು ಬೆಟ್ಟವನ್ನೇ ಕಡಿದು ಮೆಟ್ಟಿಲುಗಳನ್ನು ಮಾಡಲಾಗಿದೆ. ಮೆಟ್ಟಿಲೇರಿ ಮೇಲೆ ಹೋಗುವುದು ತುಸು ಕಷ್ಟದ ಕೆಲಸವೇ ಸರಿ, ಹೀಗಾಗಿ ಪೂರ್ವಸಿದ್ಧತೆ ಅತ್ಯಗತ್ಯ. ಕುಡಿಯುವ ನೀರು ಕೊಂಡೊಯ್ಯದಿದ್ದರೆ ಹುಸ್ಸಪ್ಪ ಎಂದು ಮಧ್ಯದಲ್ಲೇ ದಣಿವಾರಿಸಿಕೊಳ್ಳಲು ಕೂರುವುದು ಅನಿವಾರ್ಯವಾಗುತ್ತದೆ.

ಬೆಟ್ಟ ಏರಿ ಮೇಲೆ ಹೋದರೆ, ಮಧ್ಯದಲ್ಲಿ ಬ್ರಹ್ಮದೇವರ ಗುಡಿ ಇದೆ. ಈ ಕುದುರೆಯ ಮೇಲೆ ಕುಳಿತ ಬ್ರಹ್ಮದೇವರ ಕೆತ್ತನೆ ಇಲ್ಲಿನ ಬಂಡೆಯ ಮೇಲಿದೆ.

ಬಸದಿ ಬೆಟ್ಟದಲ್ಲಿ ಮಟ್ಟಸವಾದ ವಿಶಾಲ ಪ್ರದೇಶದಲ್ಲಿ ನಾಲ್ಕು ಜೈನ ಬಸದಿಗಳಿವೆ. ಒಂದು ಬಸದಿಯಲ್ಲಿ ಜೈನತೀರ್ಥಂಕರರಾದ ಚಂದ್ರನಾಥರ ಅಮೃತಶಿಲೆಯ ಸುಂದರ ವಿಗ್ರಹವಿದೆ. ಅನತಿ ದೂರದಲ್ಲಿ ಕೃಪಾಶ್ವನಾಥರ ಪುರಾತನ ಬಸದಿ ಇದೆ. ಪಕ್ಕದದಲ್ಲಿ ಪಾಶ್ವನಾಥರ ಬಸದಿ ಇದೆ.

ಈ ಬಸದಿಯ ಬಾಗಿಲ ಎಡ ಭಾಗದಲ್ಲಿ ಒಂದೇ ಒಂದು ಆನೆಯ ಶಿಲ್ಪವಿದೆ. ಗರ್ಭಗೃಹದಲ್ಲಿ ಏಳು ಹೆಡೆ ಸರ್ಪವನ್ನು ತಲೆಯ ಮೇಲೆ ಹೊಂದಿರುವ ಮಂದಸ್ಮಿತ ಪಾರ್ಶ್ವನಾಥರ ಅಮೃತಶಿಲೆಯ ಸುಂದರ ಪ್ರತಿಮೆ ಇದೆ. ಅದರ ಪಕ್ಕದಲ್ಲಿ ಚಂದ್ರನಾಥರ ಬಸದಿ ಇದೆ. ಇಲ್ಲಿ ನಿಂತಿರುವ ಚಂದ್ರನಾಥರ ಕೃಷ್ಣಶಿಲೆಯ ಪ್ರತಿಮೆ ಇದೆ. ಈ ವಿಗ್ರಹಕ್ಕೆ ಸುಂದರ ಕಲಾತ್ಮಕ ಕೆತ್ತನೆಗಳಿಂದ ಕೂಡಿದ ಪ್ರಭಾವಳಿಯೂ ಇದೆ. ಒಂದೂವರೆ ಅಡಿ ಎತ್ತರದ ಪೀಠದ ಮೇಲೆ ಇರುವ ವಿಗ್ರಹ ಮನೋಹರವಾಗಿದೆ.

ಇಲ್ಲಿನ ಕಲ್ಲಿನ ಹಾಸಿನ ಮೇಲೆ ಬೃಹದಾಕಾರದ ಪಾದದ ಕೆತ್ತನೆ ಇದೆ. ಇದನ್ನು ಭೀಮಪಾದ ಎಂದು ಕರೆಯಲಾಗುತ್ತದೆ. ಈ ನಾಲ್ಕೂ ಜಿನ ಮಂದಿರಗಳಲ್ಲಿ ಒಂದು ವೈಶಿಷ್ಟ್ಯವಿದೆ ಈ ಯಾವ ಬಸದಿಗೂ ಬಾಗಿಲುಗಳೇ ಇಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾದ ಬಾಹುಬಲಿಯ ಅನುಯಾಯಿಗಳಾದ ತೀರ್ಥಂಕರರ ಗುಡಿಯಲ್ಲಿ ಕದ್ದು ಒಯ್ಯುವಂಥದ್ದೇನೂ ಇಲ್ಲ. ಎಲ್ಲ ತೊರೆದವರಿಗೆ ಬಾಗಿಲುಗಳ ಬಂಧವೇಕೆ ಎಂಬುದನ್ನು ಇದು ಸಾರುವಂತಿದೆ. ಬೆಟ್ಟದ ಮೇಲೆ ಶಿಲಾ ಶಾಸನಗಳೂ ಇವೆ.

ಬೆಟ್ಟದ ಮೇಲೆ ಈಗ ನಾಲ್ಕಾಲು ಎತ್ತರದ ಬಾಹುಬಲಿಯ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಬೆಟ್ಟದ ಮೇಲಿನಿಂದ ನೋಡಿದರೆ ಸುಂದರವಾದ ಮೈದಳದ ಕೆರೆ ಗೋಚರಿಸುತ್ತದೆ.