ಬತ್ತಳಿಕೆ
ಬತ್ತಳಿಕೆಯು ಬಾಣಗಳು, ಕ್ವಾರಲ್‍ಗಳು, ಅಥವಾ ಈಟಿಗಳನ್ನು ಇಡಲು ಒಂದು ಧಾರಕ. ಅದನ್ನು, ಬಿಲ್ಲುಗಾರಿಕೆಯ ಬಗೆ ಮತ್ತು ಬಿಲ್ಲುಗಾರನ ವೈಯಕ್ತಿಕ ಆದ್ಯತೆಯನ್ನು ಆಧರಿಸಿ, ಬಿಲ್ಲುಗಾರನ ಶರೀರ, ಬಿಲ್ಲು, ಅಥವಾ ನೆಲದ ಮೇಲೆ ಒಯ್ಯಬಹುದು. ಬತ್ತಳಿಕೆಗಳನ್ನು ಸಾಂಪ್ರದಾಯಿಕವಾಗಿ ಚಕ್ಕಳ, ಕಟ್ಟಿಗೆ, ತುಪ್ಪಳ, ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತಿತ್ತು, ಆದರೆ ಈಗ ಹಲವುವೇಳೆ ಲೋಹ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಡುತ್ತವೆ.
ನಡುಪಟ್ಟಿಗೆ ತೂಗುಹಾಕಿದ ಚಪ್ಪಟೆ ಅಥವಾ ಸುರುಳಿಯಾಕಾರದ ಧಾರಕ ಅತ್ಯಂತ ಸಾಮಾನ್ಯ ಶೈಲಿಯ ಬತ್ತಳಿಕೆ. ಇವು ಉತ್ತರ ಅಮೇರಿಕಾದಿಂದ ಚೀನಾದವರೆಗೆ ಅನೇಕ ಸಂಸ್ಕೃತಿಗಳಾದ್ಯಂತ ಕಂಡುಬರುತ್ತವೆ.
ಬೆನ್ನಿಗೆ ತೂಗುಹಾಕಿದ ಬತ್ತಳಿಕೆಗಳು ಬಿಲ್ಲುಗಾರನ ಬೆನ್ನಿಗೆ ಕಟ್ಟುಪಟ್ಟಿಗಳಿಂದ ಕಟ್ಟಲ್ಪಡುತ್ತವೆ, ಮತ್ತು ಕಚ್ಚು ತುದಿಗಳು ಪ್ರಬಲ ಕೈಯ ಹೆಗಲ ಮೇಲೆ ಚಾಚಿರುತ್ತವೆ. ಬಾಣಗಳನ್ನು ಕಚ್ಚುಗಳ ಮೂಲಕ ಕ್ಷಿಪ್ರವಾಗಿ ಹೆಗಲ ಮೇಲಿಂದ ಹೊರಸೆಳೆಯಬಹುದು.
ಭೂ ಬತ್ತಳಿಕೆಯನ್ನು ಬಿಲ್ಲುಗಾರನು ಸ್ಥಿರ ಸ್ಥಳದಿಂದ ಹೊಡೆಯುತ್ತಿರುವಾಗ ಗುರಿಯಿಡುವಿಕೆ ಅಥವಾ ಯುದ್ದ ಎರಡರಲ್ಲೂ ಬಳಸಲಾಗುತ್ತದೆ.