ವಿಷಯಕ್ಕೆ ಹೋಗು

ಫೆಲಿಕ್ಸ್ ಡಾಹ್ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಜೂಲಿಯಸ್ ಸೋಫಸ್) ಫೆಲಿಕ್ಸ್ ಡಾಹ್ನ್ - 1834-1912. ಪ್ರಸಿದ್ಧ ಜರ್ಮನ್ ವಿದ್ವಾಂಸ; ಕಾದಂಬರಿಕಾರ.

ಬದುಕು, ಬರಹ[ಬದಲಾಯಿಸಿ]

ತಂದೆ ಫ್ರೆಡರಿಕ್ ಡಾಹ್ನ್. ತಾಯಿ ಕಾನ್‍ಸ್ಟಾನ್ಜೆ ಇಬ್ಬರೂ ನಟವರ್ಗದವರು; ಅವರ ಮನೆತನಕ್ಕೆ ಹಲವು ತಲೆಮಾರುಗಳಿಂದ ನಾಟಕರಂಗವೇ ಉದ್ಯೋಗ ಕ್ಷೇತ್ರವಾಗಿತ್ತು. ಫೆಲಿಕ್ಸ್ ಹಾಂಬುರ್ಗ್ ಪಟ್ಟಣದಲ್ಲಿ ಜನಿಸಿದ. ಅಲ್ಲಿಯೇ ವಿದ್ಯಾಭ್ಯಾಸ ಪಡೆದು ಉನ್ನತ ವ್ಯಾಸಂಗಕ್ಕೆ ಬರ್ಲಿನ್ ನಗರಕ್ಕೆ ಹೋದ. ಈ ಮಧ್ಯೆ 1850ರಂದು ಫ್ರೆಡರಿಕ್ ಮತ್ತು ಕಾನ್‍ಸ್ಟಾನ್ಜೆ ವಿಚ್ಛೇದನ ಮಾಡಿಕೊಂಡು ಬೇರೆಯಾದರು. ಆ ಕೃತ್ಯ ಬಾಲಕ ಫೆಲಿಕ್ಸನ ಮೇಲೆ ಬಲವಾದ ಪರಿಣಾಮ ಬೀರಿತು. ಏಕಾಕಿತನವನ್ನೂ ಒಂದು ಬಗೆಯ ತಪಶ್ಚರ್ಯವನ್ನೂ ಅಭ್ಯಾಸ ಮಾಡತೊಡಗಿದ. ಸಂವತ್ಸರಗಳ ತರುವಾಯ ಆರು ಸಂಪುಟಗಳಲ್ಲಿ ಬರೆದ ಎರಿನ್ನೆರುಂಗೆನ್ (1890-95) ಎಂಬ ಆತ್ಮಕಥೆಯಲ್ಲಿ ರೋಮನ್ ಕ್ಯಾತೊಲಿಕ್ ಮತದವರ ಪ್ರಭಾವವೇ ಅತ್ಯಧಿಕವಾಗಿದ್ದ ನೆರೆಹೊರೆಯಲ್ಲಿ ಬಾಳಬೇಕಾಗಿ ಬಂದ ಒಂದು ಪ್ರಾಟೆಸ್ಟೆಂಟ್ ಪಂಥದ ಕುಟುಂಬ ಅನುಭವಿಸಿದ ಕಷ್ಟನಿಷ್ಟೂರವನ್ನು ಕಣ್ಣಿಗೆ ಕಟ್ಟುವಂತೆ ಆತ ವರ್ಣಿಸಿದ್ದಾನೆ. ಹಾಗೂ ಉದಾರಾಭಿಪ್ರಾಯ ಮತ್ತು ಏಕತತ್ತ್ವವಾದಗಳ ಬೆಳೆವಣಿಗೆಯನ್ನು ಚೆನ್ನಾಗಿ ವಿವರಿಸಿದ್ದಾನೆ.

ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಫೆಲಿಕ್ಸ್‍ಗೆ ಒಂದು ಹುದ್ದೆ ದೊರಕಿತು (1857). ನ್ಯಾಯಶಾಸ್ತ್ರವನ್ನು ಕುರಿತು ಕೆಲವು ಪ್ರಬಂಧಗಳನ್ನು ಬರೆದಿರುವನಾದರೂ ಆತನ ಒಲವೆಲ್ಲ ಸಾಹಿತ್ಯದ ಕಡೆಗೇ ಇತ್ತು. ಹೀಗಾಗಿ ಆತ ಚಾರಿತ್ರಿಕ ವಿಷಯಗಳನ್ನು ಅವಲಂಬಿಸಿ ದೊಡ್ಡ ಕಥನಕಾವ್ಯಗಳನ್ನು ರಚಿಸಿದ: ಹೆರಲ್ಡ್ ಮತ್ತು ತಿಯಾನೊ (1854-55), ಡೀ ಅಮಾಲುಂಗನ್ (1857-58). 1833ರಂದು ವುಟ್ರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ, 1872ರಂದು ಕ್ಯೋನಿಗ್ಸ್‍ಬರ್ಗ್ ವಿಶ್ವವಿದ್ಯಾಲಯಕ್ಕೆ ತೆರಳಿ ಅನೇಕ ವರ್ಷ ಪ್ರಾಧ್ಯಾಪಕನಾಗಿದ್ದು 1895ರಲ್ಲಿ ಅಲ್ಲಿನ ಕುಲಪತಿಯಾದ. 1888ರಿಂದ ಬ್ರೆಸ್‍ಲೌ ಅವನ ನೆಲೆಮನೆಯಾಯಿತು. ಉಪಾಧ್ಯಾಯ ವಾಗ್ಮಿ ಕವಿ ಹೀಗೆ ಅವನ ಕೀರ್ತಿ ವೆಗ್ಗಳಿಸಿತು. ಸ್ವದೇಶಾಭಿಮಾನ ಜರ್ಮನಿಯ ಹಿರಿಮೆ-ಎರಡೂ ಅವನ ಜೀವದುಸಿರು. ಹತ್ತೆಂಟು ಉದ್ಗ್ರಂಥ ಗ್ರಹಿಕೆಯನ್ನೂ ಲೋಕಕ್ಕೆ ತೋರಿಸಿದ. ಹಲವು ಚಾರಿತ್ರಿಕ ಕಾದಂಬರಿಗಳನ್ನೂ ಬರೆದ. ಅವು ಆಗ ಪ್ರಚುರವಾಗಿದ್ದುವೇ ಹೊರತು ಈಗ ಕಣ್ಮರೆಯಾಗಿವೆ. ಅವುಗಳಲ್ಲಿ ಒಂದೇ ಒಂದು ಗಾತ್ ಜನಾಂಗದ ಪ್ರತಿಷ್ಠೆ ಇಟಲಿಯಲ್ಲಿ ಕುಗ್ಗಿದ ಚರಿತೆಯನ್ನು ಕುರಿತದ್ದು-ಸ್ವಲ್ಪಮಟ್ಟಿಗೆ ಅವನ ಹೆಸರನ್ನು ಉಳಿಸಿದೆ. ರಾಗಾವೇಶದಿಂದ ಘಟನೆಗಳನ್ನು ನೋಡುವುದೂ ಅವುಗಳ ಪಾಠ ಸಮಕಾಲೀನರಿಗೆ ಅಗತ್ಯವೆಂದು ಒತ್ತಿ ಹೇಳುವುದೂ ಅವನ ಕಾವ್ಯ ಧ್ಯೇಯ. ಸುದೀರ್ಘವಾಗಿ ಬರೆಯುವುದು ಅವನ ಪದ್ಧತಿಯಾದ್ದರಿಂದ ಕೊಂಚ ಬೇಸರಕ್ಕೆ ಅವಕಾಶವಿದೆ. ಐನ್ ಕ್ಯಾಂಪ್ಫ್ ಉಮ್ ರೋಮ್ ಎಂಬ ಒಂದು ಕೃತಿ 4 ಸಂಪುಟಗಳಷ್ಟು ಉದ್ದವಾಗಿದೆ. 1857ರಿಂದ ಕೊನೆಯ ವರೆಗೂ ಅವನು ಲಾವಣಿಗಳನ್ನು ಕಟ್ಟುವ ಗುಂಗಿನಲ್ಲಿದ್ದ. ಫೆಲಿಕ್ಸ್ ಎರಡು ಸಾರಿ ವಿವಾಹವಾದ. ಎರಡನೆಯ ಹೆಂಡತಿ ಕೆಲವು ಕಾದಂಬರಿ ಬರೆಯುವುದರಲ್ಲಿ ಅವನಿಗೆ ನೆರವಾಗಿದ್ದಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: