ಫರ್ಡಿನಾಂಡ್ ಟನೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫರ್ಡಿನಾಂಡ್ ಟನೀಸ್ (1855-1936). ಖ್ಯಾತ ಸಮಾಜಶಾಸ್ತ್ರಜ್ಞ.

ಬದುಕು ಮತ್ತು ಸಾಧನೆ[ಬದಲಾಯಿಸಿ]

ಹುಟ್ಟಿದ್ದು ಜರ್ಮನಿಯ ಪ್ಲೆಸ್‍ವಿಗ್ ಎಂಬಲ್ಲಿ. 1872ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ. ಅನಂತರ ಸಾಮಾಜಿಕ ತತ್ವಶಾಸ್ತ್ರ ಹಾಗೂ ಸಮಾಜವಿಜ್ಞಾನಗಳ ಅಧ್ಯಯನದಲ್ಲಿ ಒಲವನ್ನು ಬೆಳೆಸಿಕೊಂಡ. ವಿವರಣಾತ್ಮಕ ಸಮಾಜಶಾಸ್ತ್ರವನ್ನು ವಿವರಿಸಲು ಸೋಷಿಯೋಗ್ರಫಿ ಎಂಬ ಪದವನ್ನು ಮೊದಲ ಬಾರಿಗೆ ಬಳಕೆಗೆ ತಂದವ ಈತನೇ. ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ಪರಿಣತಿಯನ್ನು ಪಡೆದಿದ್ದ ಈತ ಆ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿದ್ದಾನೆ. ಈತನಿಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಗೆಮೈನ್‍ಷಾಫ್ಟ್ ಉಂಟ್ ಗೆಸೆಲ್‍ಷಾಫ್ಟ್ - (1887) ಕೃತಿ ಅದೇ ಕ್ಷೇತ್ರಕ್ಕೆ ಸೇರಿದ್ದು. ಈ ಪುಸ್ತಕ ಮತ್ತು ಇದರ ವಿಸ್ತøತ ಭಾಗವಾದ ಹಾಂಡ್ ವೊಟರ್ಬೂಕ್ ಡೆರ್ ಸೋಟ್ಸಿಯೋಲೋಗಿ (1936) ಎಂಬ ಕೃತಿಗಳಲ್ಲಿ ಸಾಮಾಜಿಕ ಸಂಬಂಧಗಳ ಬಗೆಗೆ ವ್ಯಾಪಕವಾದ ಅಧ್ಯಯನ ನಡೆಸಿದ್ದಾನೆ. ಇಲ್ಲಿ ಸಾಮಾಜಿಕ ಸಂಬಂಧವನ್ನು ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಿ ವಿಶ್ಲೇಷಿಸಿದ್ದಾನೆ. ಇವೆಂದರೆ, ಗೆಮೈನ್‍ಷಾಫ್ಟ್, ಗೆಸೆಲ್‍ಷಾಫ್ಟ್, ರಕ್ತಸಂಬಂಧವುಳ್ಳ ಒಂದು ಗುಂಪಿನ ಜನ ಸ್ವಾಭಾವಿಕವಾದ ಅನ್ಯೋನ್ಯ ಇಚ್ಛೆಯ ಬಲದಿಂದ ರೂಪಿಸಿಕೊಂಡ ವ್ಯಕ್ತಿಗಳ ಸಂಘವನ್ನು ಗೆಮೈನ್‍ಷಾಫ್ಟ್, ಎಂದು ಈತ ಕರೆದಿದ್ದಾನೆ. ಈ ಸಂಘ ಸ್ವಾಭಾವಿಕವಾಗಿ ಆಗಿರುತ್ತದೆ. ಇಲ್ಲಿ ಸದಸ್ಯರ ವೈಯಕ್ತಿಕ ಅಭಿಪ್ರಾಯಕ್ಕೆ ಮಾನ್ಯತೆ ಇರುವುದಿಲ್ಲ. ಬದಲಾಗಿ ಇಲ್ಲಿ ವ್ಯಕ್ತಿಗಳ ಏಕತೆ ಮತ್ತು ಅನ್ಯೋನ್ಯ ಇಚ್ಛೆಯ ಐಕ್ಯಮತ ಪ್ರಧಾನವಾಗಿರುತ್ತದೆ. ಇಲ್ಲಿ ವೃಷ್ಟಿ ಇಚ್ಛೆ, ಸಮಷ್ಟಿ ಇಚ್ಛೆಗೆ ಅಧೀನವಾಗಿರುತ್ತದೆ. ಉದಾ: ಕುಟುಂಬ, ವಿವಾಹ ಇತ್ಯಾದಿ, ಗೆಸೆಲ್‍ಷಾಫ್ಟ್ ಎಂಬುದು ಜನ ತಮ್ಮ ಸ್ವಇಚ್ಛೆಗೆ ಅನುಗುಣವಾಗಿ ಮಾಡಿಕೊಂಡಿರುವ ಸಂಘ, ಇದರ ಮುಖ್ಯೋದ್ಧೇಶ ಸದಸ್ಯರುಗಳ ವೈಯಕ್ತಿಕ ಇಚ್ಛೆಗಳನ್ನು ಈಡೇರಿಸಿಕೊಳ್ಳುವುದೇ ಆಗಿರುತ್ತದೆ. ಇದು ಸ್ವಾಭಾವಿಕ ವ್ಯವಸ್ಥೆಯಾಗಿರದೆ ಕೃತಕವಾದದ್ದಾಗಿರುತ್ತದೆ. ಉದಾ: ಸಹಕಾರ ಸಂಸ್ಥೆ, ಲೋಕರೂಢಿಗಳು ಇತ್ಯಾದಿ.

ಟನೀಸನ ಸಮಾಜಶಾಸ್ತ್ರವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಸೈದ್ಧಾಂತಿಕ ಅಥವಾ ಶುದ್ಧ, ಅನ್ವಯಿಕ ಮತ್ತು ಅನುಭವಿಕ. ಈತನ ಶುದ್ಧ ಸಮಾಜಶಾಸ್ತ್ರ ಇಂದಿನ ಸಾಮಾನ್ಯ ಸಮಾಜಶಾಸ್ತ್ರವನ್ನು ಹೋಲುತ್ತದೆ. ಅನುಭವಿಕ ಸಾಮಾಜಿಕ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಮೇಲಿನ ಮೂರು ಕ್ರಮ ಅವಶ್ಯಕವೆಂಬುದು ಟನೀಸನ ಅಭಿಪ್ರಾಯವಾಗಿತ್ತು. ಶುದ್ಧ ಮತ್ತು ಅನ್ವಯಿಕ ಸಮಾಜಶಾಸ್ತ್ರಗಳಲ್ಲಿನ ವ್ಯತ್ಯಾಸ ಸ್ಥಾಯಿ ಮತ್ತು ಕ್ರಿಯಾತ್ಮಕ ಸಿದ್ಧಾಂತವಲ್ಲದೆ ರಚನಾತ್ಮಕ ಮತ್ತು ನಿಗಮನ ವಿಧಾನಗಳ ವ್ಯತ್ಯಾಸವೂ ಆಗಿರುತ್ತದೆ. ಪ್ರಸ್ತುತ ಸಾಮಾಜಿಕ ಸ್ಥಿತಿಗಳ ಮತ್ತು ಸಾಮಾಜಿಕ ಕಾರ್ಯಗತಿಗಳ ಸಮಾಜವಿನ್ಯಾಸ ಅಧ್ಯಯನವನ್ನು ಅನುಭವಿಕ ಅನುಗಮನ ವಿಧಾನಗಳ ಮೂಲಕ ಮಾಡಬಹುದು. ಅನುಭವಿಕ ಅಧ್ಯಯನಗಳಲ್ಲಿ ಶುದ್ಧ ಸಮಾಜಶಾಸ್ತ್ರದ ಭಾವರೂಪಗಳನ್ನು, ಸಾಮಾಜಿಕ ಅಂಶಗಳನ್ನು ಆರಿಸಿ ಸಂಘಟಿಸಲು ಉಪಯೋಗಿಸಲಾಗುತ್ತದೆ. ಟನೀಸನ ಸಮಾಜಶಾಸ್ತ್ರದ ಬಗೆಗಿನ ಮೂರು ವಿಂಗಡನ ಕ್ರಮ ವಿವಿಧ ಸಾಮಾಜಿಕ ಪಂಥಗಳು ಹುಟ್ಟಿಕೊಳ್ಳಲು ಎಡೆಮಾಡಿಕೊಟ್ಟಿತೆಂದು ಹೇಳಬಹುದು. ಟನೀಸನ ಗೆಮೈನ್‍ಷಾಫ್ಟ್ ಉಂಟ್ ಗೆಸೆಲ್‍ಷಾಫ್ಟ್ ಎನ್ನುವ ಕೃತಿ ಸತತವಾಗಿ ಆರು ಆವೃತ್ತಿಗಳನ್ನು ಕಂಡದ್ದು ಒಂದು ವಿಶೇಷವೆಂದೇ ಹೇಳಬಹುದು. ಈ ಕೃತಿಯ ಆಂಗ್ಲಾನುವಾದ ಘಂಡಮೆಂಟಲ್ ಕಾನ್ಸೆಫ್ಟ್ ಆಫ್ ಸೋಷಿಯಾಲಜಿ ಎಂಬ ಶಿರೋನಾಮೆಯಲ್ಲಿ 1940ರಲ್ಲಿ ಪ್ರಕಟವಾಯಿತು. ಟನೀಸ್ ಡರ್ಕ್‍ಹೀಮ್, ಸಿಮೆಲ ಮತ್ತು ಟಾರ್‍ಡೇಯವರ ಸಮಕಾಲಿನವಾಗಿದ್ದ. ಅಂದಿಗೆ ಪ್ರಖ್ಯಾತರಾಗಿದ್ದ ತತ್ವಶಾಸ್ತ್ರಜ್ಞ ಫ್ರೆಡ್ರಿಕ್ ಪಾಲಿಸನ್, ಅರ್ಥಶಾಸ್ತ್ರಜ್ಞ ಅಂಡಾಲ್ಫ್ ವೇನರ್, ಮನಶ್ಯಾಸ್ತ್ರಜ್ಞ ವಿಲ್‍ಹೇಮ್ ವೂಂಟ್ ಮತ್ತು ತಾಮಸ್ ಹಾಬ್ಸ್‍ರ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದ. ಸಮಾಜಶಾಸ್ತ್ರಕ್ಕೆ ಸಂಬಂಧಪಟ್ಟಂತೆಯೇ ಅಲ್ಲದೇ ಅರ್ಥಶಾಸ್ತ್ರ, ತತ್ವಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಿಗೂ ಸಂಬಂಧಿಸಿದಂತೆ ಕೃತಿಗಳನ್ನು ಟನೀಸ್ ರಚಿಸಿದ್ದಾನೆ. ಆದರೆ ಈತನಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಕೃತಿ ಸಮಾಜಶಾಸ್ತ್ರದ ಗೆಮೈನ್‍ಷಾಫ್ಟ್ ಮತ್ತು ಗೆಸೆಲ್‍ಷಾಫ್ಟ್. ಟನೀಸ್ ಜರ್ಮನಿಯ ಸಮಾಜಶಾಸ್ತ್ರಜ್ಞರ ಕೂಟದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದನಲ್ಲದೆ ಹಲವಾರು ವರ್ಷ ಆ ಕೂಟದ ಅಧ್ಯಕ್ಷನೂ ಆಗಿದ್ದ. ಜೊತೆಗೆ ಈತ ಅಮೆರಿಕ ಸಮಾಜಶಾಸ್ತ್ರಜ್ಞರ ಕೂಟದ ಗೌರವ ಸದಸ್ಯತ್ವವನ್ನೂ ಪಡೆದುಕೊಂಡಿದ್ದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: