ಪ್ರಮುಖ ಮಹಿಳಾ ವಿಷಯಗಳು

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಮಹಿಳಾ ಚಳುವಳಿಯ ಇತಿಹಾಸವನ್ನು ಗಮನಿಸುವುದಾದರೆ ಅತ್ಯಂತ ಸ್ಪಷ್ಟವಾಗಿ ಗೋಚರಿಸುವ ಅಂಶ ಅದು ಎಲ್ಲ ಕಾಲಘಟ್ಟದಲ್ಲೂ ಒಂದಲ್ಲ ಒಂದು ಮಹಿಳಾ ಸಮಸ್ಯೆಯನ್ನು ಗುರುತಿಸಿಕೊ೦ಡು ಅದರ ಸುಧಾರಣೆಗಾಗಿ ಇಲ್ಲವೆ ಪರಿಹಾರಕ್ಕಾಗಿ ಕ್ರಿಯಾಶೀಲವಾಗಿರುವುದು.ಚಳುವಳಿಯ ತಾತ್ವಿಕತೆಯನ್ನು ರೂಪಿಸುವ ಮೂಲಭೂತ ಅಂಶಗಳಾದ ಲಿಂಗತಾರತಮ್ಯ, ಪುರಷಪ್ರಧಾನತೆ,,ಸ್ಥ್ರಿಸ್ಥಾನಮಾನ, ಇತ್ಯಾದಿಗಳನ್ನು ವಿವರಿಸಿಕೊಳ್ಳುವಾಗಲು ಅದು ಸಮಸ್ಯೆಗಳನ್ನು ಆಧರಿಸಿಯೇ ಮುಂದುವರೆದಿದೆ.ಉದಾಹರೆಣೆಗೆ ಕೌತಟುಂಬಿಕ ನೆಲೆಯಲ್ಲಿ ಪುರಷಪ್ರಧಾನತೆಯನ್ನು ಗ್ರಹಿಸಬೇಕ್ರೆಂದರೆ,ಪ್ರಶ್ನಿಸಬೇಕಾದರೆ ಅದು ಕೌಟುಂಬಿಕ ಹಿಂಸೆಯ ಮೂಲಕವೇ ಪ್ರವೇಶಿಸುತದೆ. ಇತ್ಯಾದಿ ಸಮಸ್ಯೆಗಳನ್ನು ಹೊರತುಪಡಿಸಿಯೂ ಒಂದು ಕುಟುಂಬವು ಸ್ತ್ರೀ ಅಧೀನತೆಯನ್ನು ಸ್ಥಾಪಿಸಿರುತ್ತದೆ. ಕುಟುಂಬ ರಚನೆಯ ಬಗ್ಗೆ ಚಳುವಗಳಿಗೆ ಭಿನ್ನಾಭಿಪ್ರಾಯವಿಲ್ಲದೆ ಎಂಬುದು ಮಹತ್ವದ ಪ್ರಶ್ನೆ.ಹಾಗೆ ರಾಜಕೀಯ ಹಕ್ಕಿನ ಪ್ರಶ್ನೆ .ಚಳುವಳಿಯ ಅಧ್ಯಾಯನ ಪ್ರಮುಖ ಹಾಗು ಮೂಲಭೂತ ಅಂಶವಾಗಿ ಪರಿಗಣಿಸ ಬೇಕಾಗುತ್ತದೆ.ಅಂತಹ ಕೆಲವು ಪ್ರಮುಖ ವಿಷಯಗಳನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.

.ಸ್ತ್ರೀಶಿಕ್ಷಣ[ಬದಲಾಯಿಸಿ]

ವಸಾಹತುಶಾಹಿ ಭಾರತವು ಕೈಗೆತ್ತಿಕೊಂಡ ಮಹಿಳಾ ವಿಷಯಗಳಲ್ಲಿ ಸ್ತ್ತ್ರೀ ಶಿಕ್ಷಣವು ಅತ್ಯಂತ ಮುಖ್ಯವಾದುದಾಗಿದೆ.ಬ್ರಿಟೀಷ್ ಆಡಳಿತವು ತನ್ನ ಅನುಕೂಲಕ್ಕಾಗಿ ಆರಂಭಿಸಿದ ಇಂಗ್ಲೀಷ್ ವಿಧ್ಯಾಭ್ಯಾಸವು ಕೆಲವೇ ವರ್ಷಗಳ ಅಂತರದಲ್ಲಿ ಸ್ತ್ರೀವಿದ್ಯಾಭ್ಯಾಸದ ಪ್ರಶ್ನೆಯನ್ನು ಮುನ್ನಡೆಗೆ ತಂದಿತು.ಭಾರತದಲ್ಲಿ ಸಾರ್ವತ್ರಿಕವಾಗಿ ಸ್ತ್ರೀ ಶಿಕ್ಷಣವು ನಿಷೇಧಿತವಾಗಿದ್ದರು,ಅಪವಾದಗಳೆಂಬಂತೆ ಕೆಲವು ದಾಖಲೆಗಳು ದೊರೆಯತ್ತದೆ ೧೮೬೭ರ ಹೊತ್ತಿಗೆ ಮ್ಯೆಸೂರು ಸಂಸ್ತಾನದಲ್ಲಿ ಮೂರು ಸರ್ಕಾರಿ ಹೆಣ್ಣುಮಕ್ಕಳ ಶಾಲೆಗಳು,ಧಾರವಾಡ ವಿಜಾಪುರ ಜಿಲ್ಲೆಗಳಲ್ಲಿ ಐದು ಶಾಲೆಗಳು,ಉತ್ತರ ಕನ್ನಡದಲ್ಲಿ ಎರಡು ಶಾಲೆಗಳು ತೆರೆಯಲಾಗಿತ್ತು. ಬದ್ರುದೀನ್ ತಾಯಬ್ ಬಾಂಬೆಯಲ್ಲಿ ಶಿಕ್ಷಣ ಸಂಸ್ಠೆ ತೆರೆದು ಸ್ತ್ರೀ ಪುರುಷರಿಬ್ಬರಿಗು ಶಿಕ್ಷಣದ ವ್ಯವಸ್ಥೆ ಕಲ್ಪಿಸಿದರು.

ಹಲವಾರು ಪ್ರಯತ್ನಗಳ ಕಾರಣದಿಂದಾಗಿ ಸ್ತ್ರೀಗೆ ಶಿಕ್ಷಣದ ಅಗತ್ಯವಿಲ್ಲವೆಂಬ ಪೂರ್ವಗ್ರಹ ಕಡಿಮೆಗೊಳ್ಳುತ್ತ ಬಂದರು ಅದಕ್ಕೆ ಬದಲಾಗಿ ಸ್ತ್ರೀಯರ ವ್ಯಕ್ತ್ತಿತ್ವ,ಸಾಮಾಜಿಕ ಸಂದರ್ಭ ಹಾಗೂ ಶಿಕ್ಷಣಗಳ ನಡುವೆ ಬಿರುಕು ಉಂಟಾಗುತ್ತದೆಂಬ ಪೂರ್ವಗ್ರಹವೊಂದು ಚಾಲ್ತಿಗೆ ಬಂದಿತು.ಆಧುನಿಕ ಸಾರ್ವತ್ರಿಕ ಶಿಕ್ಷಣವು ಭಾರತೀಯ ಸ್ತ್ರೀ ಸ್ವಭಾವವನ್ನು ಹಾಗು ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಸ್ತ್ರೀಗೆ ನೀಡುವ ಸಾರ್ವತ್ರಿಕ ಶಿಕ್ಷಣವು ಉಪಯುಕ್ತವಾದುದಾಗದು ಎಂಬ ನಂಬಿಕೆ ಬಲವಾಯಿತು.ಅದರ ಪರಿಣಾಮವಾಗಿ ಸ್ತ್ರೀಯರಿಗೆ ಪ್ರತ್ಯೇಕವಾದ ಪಠ್ಯಕ್ರಮವೊಂದರ ಅಗತ್ಯವನ್ನು ಚರ್ಚೆಗೆ ತರಲಾಯಿತು.

ಹೀಗೆ ಸ್ತ್ರೀ ಶಿಕ್ಷಣವು ಅಂತರಂಗದಲ್ಲಿ ಹಲವಾರು ಸಮಸ್ಯಗಳನ್ನು ಇಟ್ಟುಕೊಂಡೇ ಕ್ರಾಂತಿಕಾರಿ ಮಾತುಗಳನ್ನು ಆಡುತ್ತಾ ಇದ್ಸ್ದ್ನ್ನುದುದನ್ನು ೧೯೬೦ರ ದಶಕದಲ್ಲಿ ಸ್ತ್ರೀವಾದಿಗಳು ಬಯಲಿಗೆಳೆದರು..ಸ್ತ್ರೀಯರ ವಿಷಯದಲ್ಲಿ ಶಿಕ್ಷಣವು ಸೀಮೋಲ್ಲಂಘನೆಯ ಸಾಧ್ಯತೆಗಿಂತ ಬಹಳ ಹೆಚ್ಚು ಅನುಸರಣೆಯ ಸಾಧನವಾದ್ದರಿಂದ ಅದು ಲಿಂಗ ಅಸಮಾನತೆಯ ಸ್ಥರವನ್ನು ಅಳಿಸಿ ಹಾಕಲಾರದಾಗಿದೆ.

ಆಸ್ತಿ ಹಕ್ಕು[ಬದಲಾಯಿಸಿ]

ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮೂಲತಃ ವಲಸಿಗಲಳಾಗಿ ಕಂಡುಬರುವ ಸ್ತ್ರೀಯು ವಿವಾಹ ಪೂರ್ವ ಬದುಕನ್ನು ಪಿತೃವಿನ ಗೃಹದಲ್ಲಿಯು,ವಿವಾಹನಂತರ ಜೀವನವನ್ನು ಪತಿಯ ಗೃಹದಲ್ಲಿಯು ಕಳೆಯುವದರಿಂದ ಸ್ತ್ರೀಯ ಆಸ್ತಿಯ ಹಕ್ಕಿನ ಪ್ರಸ್ತಾಪವು ಈ ಎರಡು ದಿಕ್ಕಿನಿಂದಲು ನಡೆಯಬೇಕಾದುದಾಗಿದೆ.ಭಾರತೀಯ ಸಮಾಜದಲ್ಲಿ ಸ್ತ್ರೀಯ ಆಸ್ತಿಯ ಹಕ್ಕು ಸರ್ವ ಮಾನ್ಯವಾದ ಸಂಗತಿಯಾಗದ್ದಿದ್ದರು ಬಂಗಾಳ,ಕೇರಳ,ತುಳುನಾಡು ಇತ್ಯಾದಿಗಳ ಕೆಲವು ಸಮುದಾಯಗಳಲ್ಲಿ 'ಸ್ತ್ರೀಧನ'ವೆಂಬ ಹೆಸರಿನಲ್ಲಿ ತೀರಾ ಸಾಂಕೇತಿಕ ಸ್ವರೂಪದಲ್ಲಿ ಚಲಾವಣೆಯಲ್ಲಿದ್ದು, ಇದು ವಾಸ್ತವ ಜಗತ್ತಿನ ಯಾವುದೇ ಅಗತ್ಯಗಳನ್ನು ಪೂರೈಸುವ ಸ್ಥಿತಿಯಲಿರಲಿಲ್ಲ. ಇಂದು ಸಾಂಪ್ರದಾಯಿಕವಾಗಿ ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ತವರು ಹಾಗು ಗಂಡಿನ ಮನೆಯವರು ನೀಡುವ ವಡವೆಗಳು,ವರದಕ್ಷಿಣೆ ಪೂರ್ವದಲ್ಲಿ ರೂಢಿಯಲ್ಲಿದ್ದ ಕನ್ಯಾಶುಲ್ಕದ ಮೊತ್ತ ಇತ್ಯಾದಿಗಲು ಸ್ತ್ರೀಗೆ ನೀಡಲಾಗಿದ್ದ ಆರ್ಥಿಕ ಭದ್ರತೆಯ ಅಂಶಗಳೆಂದು ಹೇಳಲಾದರು ನಿಜವಾದ ಅರ್ಥದಲ್ಲಿ ಆಕೆಗೆ ಅವರ ಮೇಲೆ ಯಾವ ಹಕ್ಕು ಇರುತ್ತಿರಲಿಲ್ಲ.ತನ್ನ ಅಗತ್ಯಕ್ಕನು ಗುಣವಾಗಿ ಅದನ್ನು ಕಾಪಾಡಿಕೊಳ್ಳುವ ಅಥವಾ ಬಳಸಿಕೊಳ್ಳುವ ನಿರ್ಧಾರವು ಕುಟುಂಬದ ಯಜಮಾನನ ಅಂಕೆಯಲ್ಲಿರುತ್ತಿತ್ತು.

ಎಲ್ಲಕಿಂತ ಹೆಚ್ಚಾಗಿ ಆಸ್ತಿಯ ಬಗ್ಗೆ ಆಲೋಚಿಸುವುದು, ಬೇಡಿಕೆಯನ್ನಿಡುವುದು ತನಗೂ ಅಂತಹ ಹಕ್ಕಿನ ಅಗತ್ಯ ಇರುತ್ತದೆ ಎಂಬುದನ್ನು ಹೆಣ್ಣುಮಕ್ಕಳು ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲದಂತಹ ರೀತಿಯಲ್ಲಿ ಮೌಲ್ಯ ವ್ಯವಸ್ಥೆಯನ್ನು, ವ್ಯಾವಹಾರಿಕ ಜಗತ್ತನ್ನು ರಚಿಸಲಾಗಿತ್ತು. ಈ ಕಾರಣದಿಂದಾಗಿಯೇ ಈ ಹೊತ್ತಾದರೂ ಎ‍ಷ್ತೋ ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಭಾಗ ಕೇಳುವುದನ್ನು ನೈತಿಕ ಅಧಃಪತನವೆಂದು, ಗಂಡನೊಡನೆ ತನ್ನ ಆಸ್ತಿಯ ಹಕ್ಕನ್ನು ಪ್ರಾಸ್ತಾಪಿಸುವುದು ದ್ರೋಹವೆಂದು ಭಾವಿಸುತ್ತಾರೆ. ಅಪವಾದವೆಂಬಂತೆ ಕೆಲವು ಸಂಧರ್ಭದಲ್ಲಿ ಆಸ್ತಿಯ ಹಕ್ಕು ದೊರೆತರೂ (ಗಂಡು ಮಕ್ಕಳಿಲ್ಲದಾಗ, ಅವಿವಾಹಿತರಾಗಿ ಉಳಿದಾಗ) ಅದ ಕಾಪಡಿಕೊಳ್ಳುವ, ತನ್ನ ಅಗತ್ಯಕ್ಕೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಬೇಕಾದ ಮಾನಸಿಕ ಸಿದ್ಧತೆ, ವ್ಯವಹಾರಿಕತೆ ಇಲ್ಲದೆ ತಮಗೆ ನಂಬಲಾರ್ಹವಾದ ಪುರುಷರನ್ನೆ ಅವಲಂಬಿಸಿದಂತಾಗಿದೆ. ಒಟ್ಟಾರೆ ಹೇಳುವುದಾದರೆ ಆಸ್ತಿಯ ಹಕ್ಕಿನಿಂದ ಸ್ತ್ರೀಯನ್ನು ಹೊರಗಿಡುವ ಎಲ್ಲ ಮಾರ್ಗೊಪಾಯಗಳನ್ನು ಸಮಾಜವು ಹುಡುಕಿಕೊಂಡಿದೆ. ಉದಾಹರಣೆಗೆ 'ಅರ್ಥಶಾಸ್ತ್ರ'ದಂತಹ ಗ್ರಂಥಗಳು ಅಲ್ಪ ಹಕ್ಕನ್ನು ನಿರೂಪಿಸಿದಾಗಲು, ಆ ಗ್ರಂಥಗಳು ಮಹಿಳೆಯರನ್ನು ತಲುಪಬೇಕಾದ ಶಿಕ್ಷಣ ಮಾರ್ಗಗಳನ್ನೆ ಇಲ್ಲವಾಗಿಸಲಾಗಿದೆ. ಏನೆಲ್ಲ ಅಗತ್ಯಬಿದ್ದಾಗಲು ಆಸ್ತಿಯ ಹಕ್ಕನ್ನು ಕೇಳುವುದು ಅಪರಾಧವೆಂಬ ಪಾಪಪ್ರಜ್ಞೆಗೆ ಒಳಗಾಗುತ್ತಾರೆ. ಆಸ್ತಿ ದೊರೆತಾಗಲೂ ಅದನ್ನು ಕಾಪಾಡಿಕೊಳ್ಳುವ, ಬಳಸಿಕೊಳ್ಳುವ ಸಾಮರ್ಥ್ಯ ಇಲ್ಲದ ಅಥವಾ ಹಾಗೆ ಸ್ವಯಂ ನಿರ್ಧಾರಕ್ಕೆ ಬರಲಾರದಂತಹ ಸಾಮಾಜಿಕ ಸಂರಚನೆಯನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಆಧಾರಗಳ ಮೇಲೆ ಕೃತಿಗಳು ಮಹಿಳೆಯರಿಗೆ ಆಸ್ತಿಯ ಹಕ್ಕಿಲ್ಲವೆಂಬ ತೀರ್ಮಾನವನ್ನು ಶಾಸನವಾಗಿ ಪ್ರತಿಪಾದಿಸಿದೆ.

೧೯೩೨ರ ಸುಮಾರಿಗೆ ವಿಧವೆಯರಿಗೆ ಆಸ್ತಿ ಹಕ್ಕನ್ನು ಕಾನೂನು ಬಧವಾಗಿ ನೀಡುವ ಪ್ರಸ್ಥಾಪ ಮೊದಲುಗೊಂಡಿತಾದರೂ ಸಂಪ್ರದಾಯವಾದಿಗಳ ವಿರೋಧದಿಂದಾಗಿ ವಿಫಲವಾಯಿತು. ಆದರೆ ಸುಧಾರಣಾವಾದಿಗಳ ಎಡಬಿಡದ ಪ್ರಯತ್ನದಿಂದಾಗಿ ೧೯೩ರ ಹೊತ್ತಿಗೆ ಹಿಂದೂ ಸ್ತ್ರೀಯರ ಆಸ್ತಿ ಹಕ್ಕಿನ ಆಧಿನಿಯಮ (Hindu Womens Rights to Property Act) ರೂಪಗೊಂಡಿತು.

೧೯೫೬ರ ಹಿಂದೂಕೋಡ್ ಬಿಲ್ ನ ಭಾಗವಾಗಿ ಹಿಂದೂ ಉತ್ತಾರಾಧಿಕಾರ ಆಧಿನಿಯಮ (Hindu Succession Act) ಜಾರಿಗೆ ಬಂದು ಅಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆ ಸ್ತ್ರೀ ಸಂಬಂಧಿತ ಅಂದರೆ ತಾಯಿ, ಮಗಳು, ಮೊಮ್ಮಗಳು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಮರಣಾನಂತರ ಸಮಪಾಲು ದೊರೆಯುವಂತಾಯಿತು. ಜನಸಂಖ್ಯಾ ನಿಯಂತ್ರಣ ಕುರಿತ ಭಿನ್ನ ಕಾರ್ಯಕ್ರಮಗಳ ಕುರಿತ ವಿಫಲ ಅಧ್ಯಯನ ಸಾಮಗ್ರಿ ಲಭ್ಯವಿದ್ದರೂ ಸರ್ಕಾರ ತನ್ನ ತಪ್ಪು ಕಲ್ಪನೆಯಿಂದ ಆಚೆಗೆ ಬಂದಿಲ್ಲ. ಕುಟುಂಬಯೋಜನೆಯಲ್ಲಿ ಪುರುಷನ ಪಾತ್ರವು ಕ್ರಿಯಾಶೀಲವಾಗಬೇಕಿದೆ. ಎಂಬ ಅಂಶ ಪಿತೃ ಪ್ರಧಾನ ಸಮಾಜಕ್ಕೆ ತಟ್ಟುತ್ತಿಲ್ಲ . ಇದೆಲ್ಲದರ ಫಲವಾಗಿ ಮಹಿಳೆಯ ಆರೋಗ್ಯವೊಂದು ಸಮಸ್ಯೆಯಾಗಿ ಚಳುವಳಿಯ ಕೇಂದ್ರ ವಿಷಯಗಳಲ್ಲಿ ಒಂದಾಗಿ ಉಳಿದಿದೆ...

ಬಾಲ್ಯ ವಿವಾಹ[ಬದಲಾಯಿಸಿ]

ಬಹುತೇಕ ಎಲ್ಲಾ ಸಮಾಜಗಳಲ್ಲೂ ಕಂಡುಬರುವ ವಿವಾಹ ಸಂಸ್ಥೆಯು ಸಮುದಾಯದಿಂದ ಸಮುದಾಯಕ್ಕೆ ಕೆಲವು ಭಿನ್ನಲಕ್ಷಣಗಳನ್ನು ಹೊಂದಿದ್ದರೂ,ಹೆಚ್ಚಿನ ಪ್ರಮಾಣದ ಸ್ವಾಮ್ಯವನ್ನೇ ಹೊಂದಿದೆ.ಅದರಂತೆ ಭಾರತದಲ್ಲಿರುವ ಬುಡಕಟ್ಟು ಸಮುದಾಯದಿದಂದ ಹಿಡಿದ ಇಸ್ಲಾಂ,ಹಿಂದೂ,ಜೈನ,ಪಾರ್ಸಿ,ಕ್ರಿಶ್ಚಿಯನ್ ಇತ್ಯಾದಿ ಎಲ್ಲಾ ಸಂದರ್ಭಗಳಲ್ಲಿ ಅದು ಕೆಲವು ವ್ಯತ್ಯಾಸವನ್ನು ಹೊಂದಿದ್ದರೂ.ಅದನ್ನೆಲ್ಲ ಮೀರಿದ ಪಿತೃಪ್ರಧಾನತೆಯ ತುಡಿತವನ್ನು ಹೊಂದಿದೆ.ನಾಗರಿಕತೆಯ ಯಾವ ಘಟ್ಟದಲ್ಲಿ ವಿವಾಹ ಸಂಸ್ಥೆಯಲ್ಲಿನ ಸ್ತ್ರೀಪುರುಶ ಪಾತ್ರಗಳು ಲಿಂಗ ತಾರತಮ್ಯಕ್ಕೆ ಅನುಗುಣವಾಗಿ ರೂಪಗೊಂಡುವೋ ಅಂದಿನಿಂದ ವಿವಾಹವು ಸ್ತ್ರೀಯ ಪಾಲಿಗೆ ನಿರ್ಬಂಧಗಳನ್ನು ವಿಧಿಸುವ ಸಂಸ್ಥೆಯಾಗಿದೆ.

ಸಾಮಾನ್ಯರ್ಥದಲ್ಲಿ ವಿವಾಹವು ಸ್ತ್ರೀಪುರುಷರಿಬ್ಬರಿಗೂ ಅನಿವಾರ್ಯವೆನ್ನಲಾದರೂ, ಈಅನಿವಾರ್ಯತೆಯು ಸ್ತ್ರೀಗೆ ಅಧೀನತೆಯನ್ನು ಪುರುಷನಿಗೆ ಅಧಿಕಾರವನ್ನು ದೊರಕಿಸಿ ಕೊಡುವುದಾಗಿದೆ. ಭಾರತೀಯ ಸಮಾಜದಲ್ಲಿ ಪುರುಷನಿಗೆ ವಿವಾಹ ಆಯ್ಕೆಯ ವಿಚಾರಚವಾಗಿದೆ ಆದರೆ ಸ್ತ್ರೀಗೆ ಮಾತ್ರ ಆಅಯ್ಕೆಯ ಮಾದರಿಗಳೇ ಇಲ್ಲ. ಪುರುಷ ಒಮ್ಮೆ ವಿವಾಹ ಸಂಸ್ಥೆ ಪ್ರವೇಶಿಸಿದರೂ ಆತನ ಸಂಪೂರ್ಣ ನಿಷ್ಟೆ ಅದಕ್ಕೆ ಇರಬೇಕೆಂದಿಲ್ಲ. ಆತ ವಿವಾಹ ಸಂಸ್ಥೆ ಯಲ್ಲಿದ್ದುಕೊಂಡೇ ಉಳಿದ ಎಲ್ಲಾ ಸಂಸ್ಥೆಗಳಲ್ಲಿ ಕೂಡ ತನ್ನನ್ನು ತೊಡಗಿಸಿಕೊಳಾಬಹುದು. ಸ್ತ್ರೀಗೆ ಮಾತ್ರ ಈ ಯಾವ ಬಗೆಯ ಸಮಾನಾಂತರ ಆಸಕ್ತಿಗಳು ಆಯ್ಕೆಗಳು ಸಮಾಜದಲ್ಲಿಲ್ಲ. ವಿವಾಹವು ಆಕೆಗೆ ಕಡ್ಡಾಯವಾದ ಹಾಗು ಲೌಕಿಕ -ಪಾರಮಾರ್ಥಿಕ ಸಾರ್ಥಕಗಳೆರಡನ್ನೂ ತಂದುಕೊಡುವ ಸಂಸ್ಥೆಯಾಗಿದೆ.ಮೇಲುನೋಟಕ್ಕೆ ಭಾರತೀಯ ಸ್ತ್ರೀಯರಿಗೆ ಅಪಾರ ಭದ್ರತೆಯನ್ನು ,ಸಾಮಾಜಿಕ ಸ್ಥಾನಮಾನವನ್ನು ಒದಗಿಸಿ ಕೊಡುವಂತೆ ಕಾಣುವ ಈ ಸಂಸ್ಥೆ ತನ್ನಲ್ಲಿ ಅಳವಡಿಸಿಕೊಂಡಿರುವ ಲಿಂಗತಾರತಮ್ಯವು ಸ್ತ್ರೀ ಪುರುಷ ಪಾತ್ರ ವಿಭಜನೆಯಿಂದಾಗಿ ಸ್ತ್ರೀಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ.

ಸಮಾಜ ಸುಧಾರಕರು ಮಹಿಳಾ ಸುಧಾರಣೆಯ ಬಗ್ಗೆ ಗಮನಹರಿಸಿದಾಗ ಮೊಟ್ಟಮೊದಲು ಅವರ ಗಮನ ಸೆಳೆದಿದ್ದು ವಿವಾಹ ಕೇಂದ್ರಿತವಾದ ಸಮಸ್ಯೆಗಳೇ ಅದರಲ್ಲಿ ಮುಖ್ಯವಾದುದು ಸತೀ,ವೈಧವ್ಯ , ಹಾಗೂ ಬಾಲ್ಯ ವಿವಾಹಗಳು. ವಿವಾಹವೇ ಸ್ತ್ರೀಯ ಅಂತಿಮ ಗುರಿ ಎನ್ನುವ ಭಾವನೆ ರೂಪಗೊಂಡಿದ್ದರಿಂದ ವಿವಾಹೇತರವಾದ ಆಕೆಯ ಯಾವ ಚಟುವಟಿಕೆಗಳು ಸಮಾಜಕ್ಕೆ ಮುಖ್ಯವಾದುದೆನಿಸಲಿಲ್ಲ. ಇದರ ಪರಿಣಾಮವಾಗಿ ಸ್ತ್ರೀ ಶಿಕ್ಷಣ ,ಆರ್ಥಿಕ ಸ್ವಾತಂತ್ರವೆಂಬುದು ಅನಗತ್ಯವೆನ್ನುವಂತಾಯಿತು.ಆಧುನಿಕ ಸಂದರ್ಭದಲ್ಲಿ ಸ್ತ್ರೀ ಶಿಕ್ಷಣದ ಪ್ರಸ್ತಾಪ ಬಂದಾಗಲೂ ಅದು ವಿವಾಹ ಹಾಗು ಕುಟುಂಬ ಕೇಂದ್ರಿತವಾದ ಅಂಶವಾಗಿಯೇ ಪರಿಗಣಿತವಾಯಿತು.ವಿವಾಹವೇ ಸ್ತ್ರೀಗೆ ಭದ್ರತೆಯನ್ನು ಒದಗಿಸುವ,ಪಾವಿತ್ರ್ಯವನ್ನು ರಕ್ಷಿಸುವ ಏಕೈಕ ಸಂಸ್ಥೆ ಎಂಬ ನಿಲುವು ಬಲಗೊಳ್ಳುತ್ತಾ ಹೋಗಿ ಅಂತಿಮವಾಗಿ ಅದು ಬಾಲ್ಯ ವಿವಾಹ,ತೊಟ್ಟಿಲು ವಿವಾಹಗಳ ಹಂತವನ್ನು ತಲುಪಿತು.ಹೆಣ್ಣಿಗೆ ವಿವಾಹವೇ ಅಂತಿಮ ಎನ್ನುವುದಾದರೆ ಅದನ್ನು ಆದಷ್ಟು ಬೇಗನೆ ಜರುಗಿಸುವುದು,ಹೆಣ್ಣು ಕುಟುಂಬಕ್ಕೆ ಹೊರೆ ಎನ್ನುವುದಾದರೆ ಅದನ್ನು ವಿವಾಹದ ಮೂಲಕ ಆದಷ್ಟು ಬೇಗನೆ ಇಳಿಸಿಕೊಳ್ಳುವುದು ಸಮಯೋಚಿತ ಎಂಬಂತಹ ವಿಚಾರಗಳಿಂದ ಸ್ತ್ರೀ ವ್ಯಕ್ತಿತ್ವ ಕುರಿತಾದ ಉಳಿದೆಲ್ಲಾ ವಿಚಾರಗಲು ನಗಣ್ಯವಾಯಿತು.ಬಾಲ್ಯವಿವಾಹ ಹಾಗು ಅಸಮ ವಿವಾಹಗಳಿಂದಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಿರಿಯ ವಯಸ್ಸಿಗೆ ವಿಧವೆಯಾಗುತ್ತಿದ್ದ ಮಹಿಳೆಯರು ಅತ್ಯಂತ ದುರ್ಬರವಾದ ಜೀವನವನ್ನು ನದೆಸಬೇಕಾಗುತ್ತಿತ್ತು.ವ್ಯಕ್ತಿಗತವಾದ ಒಂಟಿತನವಿರಲಿ,ಸಾಮಾಜಿಕ ಸ್ಥಾನಮಾನದ ಕೊರತೆಯಿರಲಿ,ಆರ್ಥಿಕ ಅಭದ್ರತೆಯಾಗಲಿ ಎಂದೂ ಪರಿಹಾರ ಕಾಣಲಾಗದ ದುಸ್ಥಿತಿಗಳಾಗಿ ಆಕೆ ಸತಿಯಂತಹ ಆಚರಣೆಯನ್ನು ಸ್ವೀಕರಿಸುವ ಮಟ್ಟಕ್ಕೆ ಬೆಳೆಯುತ್ತಿತ್ತು.

ಸತೀ ಪದ್ಧತಿಯ ನಿಷೇಧಕ್ಕಾಗಿ ಒತ್ತಾಯಿಸತೊಡಗಿದ ಸುಧಾರಣಾವಾದಿಗಳು ಅದರ ಬೆನ್ನಿಗೇ ವಿಧವಾವಿವಾಹದ ಮನ್ನಣೆಯೊಂದಿಗೆ,ಬಾಲ್ಯ ವಿವಾಹದ ನಿಷೇಧ ಒತ್ತಾಯ ತಂದರು.ಈಷ್ವರಚಂದ್ರ ವಿದ್ಯಾಸಾಗರರಂತೂ ವಿಧವಾವಿವಾಹಕ್ಕೆ ಹಠಹಿಡಿದಂತೆಯೇ ಇದರ ಬಗೆಗೂ ಕಾನೂನುಗೊಳಿಸಲು ತೀವ್ರ ಒತ್ತಡ ತಂದರು.ಪರಿಣಾಮವಾಗಿ ೧೮೬೦ರಲ್ಲಿ ಇಂಡಿಯನ್ ಫೀನೆಲ್ ಕೋಡ್ ೧೦ ವರ್ಷ ವಯಸ್ಸಿನ ಕೆಳಗಿರುವ ಹೆಂಡತಿಯ ಮೇಲಿನ ಶಾರೀರಿಕ ಸಂಬಂಧವನ್ನು ನಿಷೇಧಿಸಲಾಯಿತು.೧೮೭೨ರಲ್ಲಿ ದಿ ನೇಟೀವ್ ಮ್ಯಾರೇಜ್ ಆಕ್ಟ್ 111 ಜಾರಿಗೊಂಡಿತು.ಇಷ್ಟಾದರೂ ಬಾಲ್ಯ ವಿವಾಹವನ್ನು ತಡೆಗಟ್ಟುವ ಯಾವ ಪರಿಣಾಮಕಾರಿ ಪ್ರಯತ್ನವು ಆಚರಣೆಗೆ ಬರಲಿಲ್ಲ.೧೯೨೯ರಲ್ಲಿ ಜಾರಿಗೊಳಿಸಲಾದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬರುವವರೆಗೂ ಬಾಲ್ಯ ವಿವಾಗಹ ಅವ್ಯಾಹಿತವಾಗಿ ನಡೆದು ಬಂದಿತು.೧೮೯೧ರಲ್ಲಿ ಏಜ್ ಆಫ್ ಕನ್ಸೆಂಟ್ ಆಕ್ಟ್(age of consent act)ತಿದ್ದುಪಡಿ ಕಾಯ್ದೆವೊಂದನ್ನು ಜಾರಿಗೆ ತರಲಾಯಿತು.ಅದರ ಪ್ರಕಾರ ವಿವಾಹಿತ ಹೆಂಗಸಿನೊಂದಿಗಿನ ಶಾರೀರಿಕ ಸಂಬಂಧದ ವಯಸ್ಸು ೧೦ರಿಂದ ೧೨ಕ್ಕೇರಿತು.೧೯೨೫ರಲ್ಲಿ ಈ ಬಗ್ಗೆ ಮತ್ತೊಮ್ಮೆ ಚಿಂತನೆ ಆರಂಭವಾಯಿತು,ಜೋಷಿ ಕಮಿಟಿಯು ಶಿಫಾರಸ್ಸು ಮಾಡಿದಂತೆ ೧೯೨೯ರಲ್ಲಿ ಸರ್ದಕಾಯ್ದೆ(Child marriage restraint act) ಜಾರಿಗೊಳಿಸಿ ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು ೧೪ ವರ್ಷಕ್ಕೆ ನಿಗದಿಗೊಳಿಸಲಾಯಿತು.

ಭಾರತದ ಮಹಿಳಾ ಚಳುವಳಿಯ ಪ್ರಧಾನ ಒಲವು ವಿವಾಹ ಸಂಸ್ಥೆಯನ್ನು ಪುನರ್ನಿರ್ವಚಿಸುವ ದಿಕ್ಕಿನಲ್ಲಿಯೇ ಹೆಚ್ಚು ಆಸಕ್ತವಾಗಿದ್ದು ಅದರ ಅಂಗವಾಗಿ ಕಾನೂನು ರಚನೆಗೆ ಒತ್ತಾಯಿಸುತ್ತದೆ.ಸರ್ಕಾರವು ಜನಸಂಖ್ಯಾ ನಿಯಂತ್ರಣದ ಪ್ರಧಾನ ಅಂಶವಾಗಿ ಹೆಣ್ಣುಮಕ್ಕಳ ವಿವಾಹ ವಯಸ್ಸಿನ ಏರಿಕೆಯನ್ನು ಗುರುತಿಸಿ ಅದರ ಪ್ರಚಾರದಲ್ಲಿ ಭಾಗಿಯಾಗಿದೆ.ಹೀಗೆ ಮಹಿಳಾ ಚಳುವಳಿಗಳ ಹಿಂದಿರುವ ಆಶಯ ಹಾಗೂ ಸರ್ಕಾರಗಳಿಗಿರುವ ಆಶಯಗಳ ನಡುವೆ ಅಪಾರ ವ್ಯತ್ಯಾಸವಿದೆ.

ಹೆಣ್ಣು ಶಿಶುಹತ್ಯೆ ಮತ್ತು ಭ್ರೂಣಹತ್ಯೆ[ಬದಲಾಯಿಸಿ]

ಹುಟ್ಟಿದ ಮಗುವನ್ನು ಕುಟುಂಬವೇ ಹತ್ಯೆಗೈಯುವ ಬರ್ಬರತೆ ಹಾಗೂ ಹುಟ್ಟುವ ಮೊದಲೇ ಲಿಂಗ ಪರೀಕ್ಷೆಗೆ ಒಳಪಡಿಸಿ ನಾಶಗೊಳಿಸುವ ಅಮಾನವೀಯ ಕೃತ್ಯವೇ ಶಿಶುಹತ್ಯೆ. ಆಧುನಿಕ ಭಾರತದ ಕಾನೂನುಗಳ ಚರಿತ್ರೆಯನ್ನು ನೋಡುವುದಾದರೆ ಮಹಿಳೆಯರ ಕುರಿತಾಗಿ ಜಾರಿಗೊಂಡ ಕಾನೂನುಗಳಲ್ಲಿ ಮುಖ್ಯವಾದುದು ೧೮೭೦ರ ಫೀಮೇಲ್ ಇನ್ ಫ್ಯಾಂಟಿಸೈಡ್ ಆಕ್ಟ್. ಆದರೆ ಆ ಕಾನೂನು ರಚನೆಯು ಹೆಣ್ಣುಶಿಶುಹತ್ಯೆಯ ಪ್ರಾಚೀನತೆಯನ್ನಾಗಲಿ ಅದರ ಬಗೆಗಿನ ಆಡಳಿತಾತ್ಮಕ ದಾಖಲೆಯ ಪ್ರಾಚೀನತೆಯನ್ನಾಗಲಿ ಸೂಚಿಸುವುದಿಲ್ಲ.ಹೆಣ್ಣುಶಿಶುಹತ್ಯೆಯ ಬಹುಪಾಲು ಕುಟುಂಬದೊಳಗೆ ಕತ್ತಲಕೋಣೆಯಲ್ಲಿ ಘಟಿಸುತ್ತಿದ್ದ ಅಂಶವಾಗಿದ್ದು ಅದನ್ನು ಸಹಜ ಶಿಶುಮರಣದಿಂದ ಹೊರತುಪಡಿಸಿ ಗ್ರಹಿಸುವ ಕ್ರಮವು ಕಷ್ಟಸಾಧ್ಯವಾಗಿರುವುದರಿಂದ ಈ ಪದ್ಧತಿ ಯಾವ ಪ್ರಮಾಣದಲ್ಲಿ ಎಂದಿನಿಂದ ನಡೆದುಕೊಂಡು ಬರುತ್ತಿದೆ ಎಂಬುದನ್ನು ವಿವರಿಸುವುದೇ ಅಸಾಧ್ಯವಾಗಿದೆ.

ಭಾರತೀಯ ಸಮಾಜದಲ್ಲಿ ಒಟ್ಟಾರೆಯಾಗಿ ಹೆಣ್ಣುಮಕ್ಕಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದಂತಹ ಹಲವಾರು ಕಾರಣಗಳು ಸಹಜ ಮರಣದ ಒಳಗೂ ಗೋಚರಿಸುವ ಹತ್ಯೆಗಳನ್ನು ಮರೆಮಾಡಿಬಿಡುತ್ತದೆ.ಆಗ ತಾನೆ ಜನಿಸಿದ ಶಿಶುವಿಗೆ ಸರಿಯಾದ ಆರೈಕೆ,ಹಾಲು ಇತ್ಯಾದಿಗಳನ್ನು ನೀಡದಿರುವ ಮೂಲಕವೇ ಕುಟುಂಬವು ಸಹಜ ಮರಣವನ್ನು ಒದಗಿಸಿಬಿಡಬಹುದಾಗಿದೆ.ಆದ್ದರಿಂದಲೇ ಹೆಣ್ಣುಶಿಶುಹತ್ಯೆಗಳ ಬಗ್ಗೆ ಕಾನೂನು ಕ್ರಮವೆನ್ನುವುದು ಕಷ್ಟಸಾಧ್ಯವಾಗುತ್ತದೆ.ಸಮಾಜ ಒಂದರಲ್ಲಿ ಘಟಿಸುತ್ತಿರುವ ಹೆಣ್ಣುಶಿಶುಹತ್ಯೆಯ ಪ್ರಸಂಗವನ್ನು ಬಹುಮುಖ್ಯವಾಗಿ ಗಂಡು ಹೆಣ್ಣುಶಿಶುಗಳ ಅನುಪಾತದ ವ್ಯತ್ಯಾಸದ ಮೂಲಕ ಮಾತ್ರ ಖಚಿತಪಡಿಸಿಕೊಳ್ಳಬೇಕಾಗುತ್ತದೆ.ಭಾರತವನ್ನೊಂದು ಪಿತೃಪ್ರಧಾನ ಸಮಾಜವೆಂದು ನೋಡುವಾಗಲೂ ಹೆಣ್ಣುಶಿಶುಹತ್ಯೆಯ ಸಂದರ್ಭದಲ್ಲಿ ನಮಗೆ ವಿಶೇಷವಾಗಿ ಕಾಣುವುದು ಕೆಲವು ನಿರ್ದಿಷ್ಟ ಸಮುದಾಯಗಳು.ಕೆಲವು ಹಳ್ಳಿಗಳಲ್ಲಂತೂ ನಿರ್ದಿಷ್ಟ ಸಮುದಾಯದಲ್ಲಿ ಹೆಣ್ಣುಮಕ್ಕಳೇ ಇಲ್ಲದಿರುವುದಕೂ ದಾಖಲೆಗಳಿವೆ.

೧೯೮೦ರ ಹೊತ್ತಿಗೆ ಹೆಣ್ಣುಭ್ರೂಣಹತ್ಯ್ಯೆಯು ನಗರಗಳಲ್ಲಿ ದಂಧೆಯ ರೀತಿಯಲ್ಲಿ ಬಳಕೆಗೆ ಬಂದು ಹಲವಾರು ಸಮುದಾಯಗಳಲ್ಲಿ ಹೆಣ್ಣು ಹಾಗು ಗಂಡುಶಿಶುಗಳ ಅನುಪಾತದಲ್ಲಿ ಹೆಚ್ಚಿನ ವ್ಯತಿರೇಕ ಕಾಣಲಾರಂಭಿಸಿತು.ಇದರಿಂದ ಎಚ್ಚೆತ್ತ ಮಹಿಳಾ ಸಂಘಟನೆಗಳು ತಮ್ಮ ಗಮನವನ್ನು ಇತ್ತ ಹರಿಸಿ ಹೋರಾತಕ್ಕೆ ಇಳಿದವು.ತಾಯಿ ಹಾಗೂ ಮಗುವಿನ ಆರೊಗ್ಯ ದೃಷ್ಟಿಯಿಂದ ಕಂಡುಹಿಡಿಯಲಾದ ಅಮ್ನಿಯೋಸಿಂಥಿಸಿಸ್ ಪರೀಕ್ಷೆಯು (ಭ್ರೂಣ ಲಿಂಗ ಪರೀಕ್ಷೆ) ಈ ಸಮಾಜದ ಲಿಂಗ ತಾರತಮ್ಯ ಗುಣಕ್ಕೆ ಪೂರಕವಾಗಿ ಬಳಕೆಗೊಳ್ಳುತ್ತಿರವುದರ ಬಗ್ಗೆ ಅರಿವು ಮೋಡಿದ ಕೂಡಲೆ ಕತ್ತಲು ಕೋಣೆಯಲ್ಲಿ ಗೋಪ್ಯವಾಗಿ ನಡೆದು ಹೋಗುವ ಹೆಣ್ಣುಶಿಶುಹತ್ಯೆಗಿಂತ ಹೆಚ್ಚು ಬಹಿರಂಗವಾಗಿ ಇನ್ನೊಬ್ಬರ ನೆರವಿನಿಂದ ಇದು ನಡೆಯುವುದಾಗಿದ್ದು ಇದಕ್ಕೆ ಪ್ರಜ಼್ನಾವಂತರೆನಿಸಿಕೊಂಡ ವೈದ್ಯರ ಹಸ್ತಕ್ಷೇಪ ಮುಖ್ಯವಾಗಿರುವುದರಿಂದ ಇದನ್ನು ತಡೆಗಟ್ಟುವ ವಿಚಾರದಲ್ಲಿ ಸರ್ಕಾರ ಹೆಚ್ಚು ಕ್ರಿಯಾತ್ಮಕವಾಗಬೇಕೆಂದು ಇವು ವಾದಿಸಿದವು.ಮುಖ್ಯವಾಗಿ ಇದನ್ನು ನಡೆಸುವ ವೈದ್ಯಕೀಯ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಹೇರಬೇಕೆಂದು ಪಟ್ಟು ಹಿಡಿದವು. ಈ ಎಲ್ಲಾ ಒತ್ತಾಯದ ಫಲವಾಗಿ ೧೯೯೪ರಲ್ಲಿ ಜನನಪೂರ್ವ ಪರೀಕ್ಷೆ (ನಿಯಂತ್ರಣ ಮತ್ತು ಅಪಬಳಕೆಯ ತಡೆ) ಕಾಯಿದೆ ಕುರಿತು ವಿದ್ಯುಕ್ತ ಚರ್ಚೆ ಆರಂಭಗೊಂಡು ೧೯೯೬ರಲ್ಲಿ ಅದು ಜಾರಿಗೊಂಡಿತು.

ಆಕರ:ಡಾ.ಎಂ.ಉಷಾ ಬರೆದಿರುವ ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು