ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಭಾರತ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ[೧]. ಈ ಯೋಜನೆಗಾಗಿ ೨೦೧೫ - ೧೬ ರ ಸಾಲಿನ ಬಜೆಟ್ ನಲ್ಲಿ ೫೩೩ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಬಜೆಟ್ ನಲ್ಲಿ ಈ ಮೊತ್ತದ ಹಣ ಮೀಸಲಿಡುವ ಬಗ್ಗೆ ನಿರ್ಧಾರವಾಗಿದ್ದು ೨೦೧೫ ರ ಜುಲೈ ೧ ರಂದು ನಡೆದ ಸಂಪುಟ ಸಮಿತಿಯ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ, ಆ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ವಹಿಸಿದ್ದರು[೨].

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಪ್ರಧಾನಮಂತ್ರಿಗಳು.

ಈ ಯೋಜನೆಗೆ ಐದು ವರ್ಷಗಳ (೨೦೧೫-೧೬ ರಿಂದ ೨೦೧೯-೨೦) ಅವಧಿಗೆ ಸುಮಾರು ೫೦೦೦೦ ಕೋಟಿ ರೂಪಾಯಿ ವೆಚ್ಚ ಮಾಡಲು ಅನುಮೋದನೆ ದೊರೆಯಿತು. ಈ ಯೋಜನೆಯ ಮುಖ್ಯ ಅಂಶಗಳು,

 • ಕೃಷಿ ಭೂಮಿಯ ಮಟ್ಟದಲ್ಲಿ ನೀರಾವರಿಗಾಗಿ ತಗಲುವ ವೆಚ್ಚವನ್ನು ಸರಳೀಕರಿಸುವುದು/ಕನಿಷ್ಠಗೊಳಿಸುವುದು.
 • ಹೆಚ್ಚಿನ ಕೃಷಿ ಭೂಮಿಯನ್ನು ನೀರಾವರಿ ವಿಧಾನಗಳಿಗೆ ಒಳಪಡುವಂತೆ ಮಾಡುವುದು
 • ನೀರಾವರಿ ಜಮೀನಿನಲ್ಲಿ ಬಳಸುವ ನೀರು ಸಮರ್ಥವಾಗಿ ಜಮೀನಿಗೆ ಮಾತ್ರ ಬಳೆಕೆಯಾಗುವಂತೆ ನೀರಾವರಿ ಮಾದರಿಯಲ್ಲಿ ದಕ್ಷತೆಯ ಬಗ್ಗೆ ಕಾಳಜಿ ವಹಿಸುವುದು
 • ಹನಿ ನೀರಾವರಿ ಪದ್ಧತಿಯಂತಹ ವೈಜ್ಞಾನಿಕ ನೀರಾವರಿ ವಿಧಾನಗಳನ್ನು ಹಾಗು ನೀರಿನ ನಿಯಮಿತ ಉಪಯೋಗದ ಇನ್ನಿತರ ನೀರಾವರಿ ಮಾದರಿಗಳನ್ನು ಉತ್ತೇಜಿಸುವುದು
 • ಕೃಷಿ ಭೂಮಿಗೆ ಸಮೀಪವಿರುವ ಅಥವಾ ಕೃಷಿ ಭೂಮಿಯಲ್ಲಿಯೇ ಇರುವ ಜಲಮೂಲಗಳನ್ನು ಅಥವಾ ಅಂತರ್ಜಲ ಮೂಲಗಳನ್ನು ಮರುಪೂರಣಗೊಳಿಸುವ ಪದ್ಧತಿಗಳಿಗೆ ಜೀವ ತುಂಬುವುದು ಹಾಗು ನೀರು ಇಂಗಿಸುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡುವುದು.

ಉದ್ದೇಶ[ಬದಲಾಯಿಸಿ]

 • ಕೃಷಿ ಭೂಮಿವಾರು ನೀರಾವರಿ ಬಂಡವಾಳವನ್ನು ಆಕರ್ಷಿಸುವುದು.
 • ದೇಶದ ನೀರಾವರಿ ವಿಚಾರದಲ್ಲಿ ಕೃಷಿ ಭೂಮಿಗಳನ್ನು ವಿಸ್ತರಿಸುವುದು ಹಾಗು ಈಗಿರುವ ಕೃಷಿ ಭೂಮಿಗಳನ್ನು ಅಭಿವೃದ್ಧಿಗೊಳಿಸುವುದು.
 • ಮಳೆ ಕೊಯ್ಲು ಪದ್ಧತಿಯಿಂದ ಉಳಿಸಿದ ನೀರನ್ನು ಕೃಷಿಗೆ ಬಳಸುವ ವಿಧಾನವನ್ನು ಉತ್ತೇಜಿಸುವ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟುವುದು.

ಇದಿಷ್ಟೇ ಅಲ್ಲದೆ ಈ ಯೋಜನೆಯು ಆಡಳಿತ ವ್ಯವಸ್ಥೆಯಲ್ಲಿನ ಮಂತ್ರಿಗಳನ್ನು, ಸರ್ಕಾರಿ ಸಚಿವಾಲಯಗಳನ್ನು, ಸಂಘ ಸಂಸ್ಥೆಗಳನ್ನು, ಸಂಶೋಧನೆ ಹಾಗು ಹಣಕಾಸು ಸಂಸ್ಥೆಗಳನ್ನು ಒಡಗೂಡಿಸಿಕೊಂಡು ಕೃಷಿ ನೀರಾವರಿಗೆ ಸಂಬಂಧ ಪಟ್ಟಂತೆ ವಿಶೇಷ ವಿಧಾನಗಳನ್ನು ಹಾಗು ಮಾದರಿಗಳನ್ನು ವಿನ್ಯಾಸ ಪಡಿಸಿ ಅವುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಪೋಲು ತಡೆಯುವುದು ಹಾಗು ಮಳೆ ನೀರಿನ ಬಳಕೆ ಮಾಡಿಕೊಳ್ಳುವಂತೆ ಉತ್ತೇಜಿಸುವುದು ಕೃಷಿ ಸಿಂಚಾಯಿ ಯೋಜನೆಯ ಬಹು ಮುಖ್ಯ ಜವಾಬ್ದಾರಿಯು ಹಾಗು ಗುರಿಯೂ ಆಗಿದೆ. ಎಲ್ಲ ರಂಗಗಳಲ್ಲೂ ನೀರಿನ ನಿಯಮಿತ ಬಳಕೆಯಾಗಿ ನೀರಿಗೆ ತಗಲುವ ವೆಚ್ಚ ಕಡಿತಗೊಳಿಸುವ ಮೂಲಕ ಆದಾಯ ವೃದ್ಧಿಗೆ ಮುಂದಾಗುವುದೇ ಈ ಯೋಜನೆಯ ಆಕಾಂಕ್ಷೆಯಾಗಿದೆ.

ಮೋರ್ ಕ್ರಾಪ್ ಪರ್ ಡ್ರಾಪ್ ' ಪ್ರತೀ ಹನಿಗೆ ಹೆಚ್ಚು ಬೆಳೆ' ಎನ್ನುವ ಸಂದೇಶವನ್ನು ಇಟ್ಟುಕೊಂಡು ಯೋಜನೆಯನ್ನು ಜಾರಿ ಮಾಡಲಾಗಿದೆ[೩].

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ವಿ.ಕೆ ಪುರಿ ಮತ್ತು ಎಸ್.ಕೆ ಮಿಶ್ರ ಹಿಮಾಲಯ ಪಬ್ಲಿಶಿಂಗ್ ಹೌಸ್ ಭಾರತದ ಅರ್ಥವ್ಯವಸ್ಥೆ ೩೪ನೇ ಸಂಪುಟ ೨೦೧೬
 2. "ಭಾರತದ ಕೃಷಿಯನ್ನು ಉತ್ತೇಜಿಸಲು ಐವತ್ತು ಸಾವಿರ ಕೋಟಿ ರೂಪಾಯಿಗಳನ್ನ ಸರ್ಕಾರ ಬಿಡುಗಡೆ ಮಾಡಿದ ಲೈವ್ ಮಿಂಟ್ ಜಾಲತಾಣದ ಆಂಗ್ಲ ವರದಿ".
 3. "ಕೃಷಿ ಸಿಂಚಾಯಿ ಯೋಜನೆಗಾಗಿ ಕೇಂದ್ರ ಸರ್ಕಾರ ೫೦೦೦೦ ಕೋಟಿ ಬಿಡುಗಡೆ ಮಾಡಿದ ವರದಿ, ಡಿ.ಎನ್.ಎ ಪತ್ರಿಕೆ".