ವಿಷಯಕ್ಕೆ ಹೋಗು

ಪೌಲ್ ಗೆರ್ಹಾರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೌಲ್ ಗೆರ್ಹಾರ್ಟ್
Born12 ಮಾರ್ಚ್ 1607
Died27 May 1676(1676-05-27) (aged 69)
Nationalityಜರ್ಮನ್

ಪೌಲ್ ಗೆರ್ಹಾರ್ಟ್ (12 ಮಾರ್ಚ್ 1607 – 27 ಮೇ 1676)ಸ್ತೋತ್ರಗೀತೆಗಳ (ಹಿಮ್ಸ್‌) ರಚನೆಯಲ್ಲಿ ಹೆಸರಾದ ಜರ್ಮನ್ ಕವಿಗಳಲ್ಲಿ ಒಬ್ಬ ಪ್ರಮುಖ.

ಗ್ರಾಫೆನ್ಹೈನಿಚೆನ್ ಎಂಬಲ್ಲಿ ಹುಟ್ಟಿ ವಿಟ್ಟೆನ್ಬರ್ಗ್‍ನಲ್ಲಿ ವಿದ್ಯಾಭ್ಯಾಸ ಮಾಡಿದ ಈತ ಸ್ವಲ್ಪಕಾಲ ಬರ್ಲಿನ್‍ನಲ್ಲಿ ಮೊದಲಿಗೆ ಶಿಕ್ಷಕನಾಗಿದ್ದು ಅನಂತರ ಚರ್ಚಿನ ಅಧಿಕಾರಿಯಾದ. ಅದು ಮಹಾ ಧರ್ಮಾಧಿಕಾರಿಯ (ಪೋಪ್) ನಿರಂಕುಶಾಧಿಕಾರದ ವಿರುದ್ಧ ಪ್ರತಿಭಟನೆ ತೀವ್ರವಾಗಿದ್ದ ಕಾಲ. ಮಾರ್ಟಿನ್ ಲೂಥರ್‍ನಿಂದ ಆ ಕ್ರಾಂತಿ ಅತ್ಯಂತ ಪ್ರಖರವಾಗಿ ಎಲ್ಲೆಡೆಯೂ ಹಬ್ಬುತ್ತಿತ್ತು. ಗೆರ್ಹಾರ್ಟ್ ಕಟ್ಟಾ ಲೂಥರ್ ಅನುಯಾಯಿ. ಅದರಿಂದಾಗಿ ಈತನ ಅಧಿಕಾರಕ್ಕೆ ಸ್ವಲ್ಪ ಕಾಲ ಚ್ಯುತಿ ಬಂತು. ಆದರೆ ಕೆಲಕಾಲದ ಮೇಲೆ ಮತ್ತೆ ಈತ ಆರ್ಚ್ಡೀಕನ್ ಆದ.

ಈತನ ಗೀತೆಗಳು ಮೊದಲು ಅಖಂಡವಾಗಿ ಪ್ರಕಾಶಿತವಾದದ್ದು ಬರ್ಲಿನ್‍ನಲ್ಲಿ ಸಂಗೀತ ನಿರ್ದೇಶಕನಾಗಿದ್ದ ಇಬೆಲಿಂಗ್ ಎಂಬುವನಿಂದ. ಗೆರ್ಹಾರ್ಟ್ನ ಆಧ್ಯಾತ್ಮಿಕ ಹಾಡುಗಳು ಎಂಬ ಹೆಸರಿನಲ್ಲಿ ಕೆಲ್ಲಿ ಎಂಬಾತ 1867ರಲ್ಲಿ ಇಂಗ್ಲಿಷಿಗೆ ಇವನ್ನು ಅನುವಾದಿಸಿ ಪ್ರಕಟಿಸಿದ್ದಾನೆ. ಈತನ ಸಮಕಾಲೀನರಾಗಿದ್ದ ಜೊಹಾನ್ ಫ್ರ್ಯಾಂಕ್, ಜೊಹಾನ್ ಶೆಫ್ಲರ್ ಮುಂತಾದವರೆಲ್ಲರಿಗಿಂತ ಈತನಿಗೆ ಹೆಚ್ಚಿನ ಗೌರವ ಕೊಟ್ಟು ಲೂಥರನ್ ಕವಿಗಳಲ್ಲಿ ಚಕ್ರವರ್ತಿ- ಎಂದು ವಿಮರ್ಶಕರು ಈತನನ್ನು ಹೊಗಳಿದ್ದಾರೆ. ‘ಹೋಗು ನನ್ನ ಹೃದಯವೇ, ಹರ್ಷವನ್ನರಸು’, ‘ನೀನು ನನ್ನವನು, ಹೌದು, ಮತ್ತೂ ನನ್ನವನೇ’, ‘ವನಗಳೆಲ್ಲ ಈಗ ನಿದ್ರಾವೃತ’ -ಮುಂತಾದ ಕೆಲವು ಗೀತೆಗಳು ನಿಸರ್ಗಪ್ರೇಮ, ಮೃದು ಮಧುರ ಹೃದಯಸ್ಪರ್ಶಿ ಭಾವನೆ, ಭಾಷೆಯ ಇನಿದನಿಗಳಿಗೆ ಪ್ರಸಿದ್ಧವಾಗಿವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: