ಪೇಜಾವರ ಶ್ರೀ ವಿಶ್ವೇಶ ತೀರ್ಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೇಜಾವರ ಶ್ರೀ ವಿಶ್ವೇಶ ತೀರ್ಥರು
ಜನನ ವೆಂಕಟ್ರಾಮ
ಏಪ್ರಿಲ್ ೨೭, ೧೯೩೧
ಜಾಲತಾಣ
Official website


ಶ್ರೀ ಶ್ರೀ ವಿಶ್ವೇಶ ತೀರ್ಥರು (ಏಪ್ರಿಲ್ ೨೭, ೧೯೩೧) ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ಪ್ರಸಿದ್ಧರಾಗಿದ್ದಾರೆ.

ಪೂರ್ವಾಶ್ರಮದಲ್ಲಿ[ಮೂಲವನ್ನು ಸಂಪಾದಿಸು]

ಉಡುಪಿಯಿಂದ ೧೨೦ ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದೊಂದು ಕುಗ್ರಾಮ. ಇಂಥ ಹಳ್ಳಿಯಲ್ಲಿ ೧೯೩೧ ಎಪ್ರಿಲ್ ೨೭ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.

ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ.

ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.

ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?

ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’

ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ”

ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೆರಿಸಿದ, ಮೇಲೆ ನಿಂತ ದೇವತೆಗಳು ‘ತಥಾsಸ್ತು’ ಎಂದರು.

ಪರ್ಯಾಯದ ಅವಧಿ ಮುಗಿಯಿತು. ಆಗಣ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಪಯಣದ ಹಾದಿಯಲ್ಲಿ ಹಂಪೆಯನ್ನು ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪೆಯಲ್ಲಿ ಅವರ ನಿರ್ಧಾರ ಗಟ್ಟಿಗೊಂಡಿತು. ಅವರು ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣ ಹಿರಿಯರ ಜತೆ ಹಂಪೆಗೆ ತೆರಳಿದ.

ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ[ಮೂಲವನ್ನು ಸಂಪಾದಿಸು]

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (೩.೧೨.೧೯೩೮) ವೆಂಕಟರಮಣನಿಗೆ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.

ಈ ಸಂದರ್ಭದಲ್ಲಿಯೇ ಇನ್ನೊಂದು ದೈವೀ ಘಟನೆ ನೆಡೆಯಿತು.

ಒಮ್ಮೆ ಆಗಿನ ಭಂಡಾರಕೇರಿ ಮಠಾಧೀಶರಾದ (ಮುಂದೆ ಫಲಿಮಾರು ಮಠಾಧೀಶರೂ ಆದ) ಶ್ರೀ ವಿದ್ಯಾಮಾನ್ಯ ತೀರ್ಥರು ಉಡುಪಿಗೆ ಚಿತ್ತೈಸಿದರು. ಶ್ರೀಪಾದರು ಮಾಧ್ವ ಯತಿಗಳಲ್ಲೇ ಅಗ್ರಮಾನ್ಯ ಪಂಡಿತರೆಂದು ಖ್ಯಾತರಾದವರು. ಸ್ವತಃ ಹಿರಿಯ ಸಾಧಕರು. ಈ ಬಾಲ ಯತಿ ಅವರ ಕಣ್ಣಿಗೆ ಬಿದ್ದರು. ಈ ಪುಟ್ಟ ಯತಿಯ ಚುರುಕು ಬುದ್ಧಿಯ ಚಾಕಚಕ್ಯತೆ ಯತಿಗಳ ಮನ ಸೆಳೆಯಿತು.

೧೯೪೩ರ ಫೆಬ್ರವರಿ ತಿಂಗಳು. ಶ್ರೀವಿದ್ಯಾಮಾನ್ಯ ತೀರ್ಥರು ಭಂಡಾರಕೇರಿಯಲ್ಲಿ ಶ್ರೀ ಮಧ್ವರಾದ್ಧಾಂತ ಸಂವರ್ಧಿನೀ ಸಭೆಯನ್ನು ಸ್ಥಾಪಿಸಿದರು. ವಿದ್ವಾಂಸರ ಮೇಳವೇ ಭಂಡಾರಕೇರಿಗೆ ಧಾವಿಸಿತು. ಆ ಬಾರಿಯ ಮಧ್ವನವಮಿಯ ವಿದ್ವತ್ಸಭೆಯ ಅಧ್ಯಕ್ಷತೆಯನ್ನು ೧೨ರ ಬಾಲಯತಿ ಶ್ರೀ ವಿಶ್ವೇಶ ತೀರ್ಥರಿಗೆ ಒಪ್ಪಿಸಿದರು. ಈ ವಾಮನಮೂರ್ತಿಯ ವಿದ್ಯೆಯ ತ್ರಿವಿಕ್ರಮಾವತಾರವನ್ನು ಅವರು ಅಂದೇ ಗುರುತಿಸಿದ್ದರು.

ನಾಡಿನ ಉದ್ದಗಲದಿಂದ ಹಿರಿಯ ವಿದ್ವಾಂಸರೆಲ್ಲ ಬಂದು ನೆರೆದಿದ್ದ ಆ ವಿದ್ವತ್ ಸಭೆಯಲ್ಲಿ ಪುಟ್ಟ ಯತಿ ವಿಶ್ವೇಶ ತೀರ್ಥರು ನೀಡಿದ ಚುಟುಕು ಭಾಷಣ ಎಲ್ಲರಿಗೂ ಚುರುಕು ಮುಟ್ಟಿಸಿತು. ಇಡಿಯ ಸಭೆಗೆ ಸಭೆಯೇ ತಲೆದೂಗಿತು. ಜತೆಗೆ ಅವರು ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯವಂತೂ ಪಂಡಿತ ಮಂಡಳಿಯನ್ನು ಬೆರಗುಗೊಳಿಸಿತು.

ವ್ಯಾಸಂಗ[ಮೂಲವನ್ನು ಸಂಪಾದಿಸು]

ಹೀಗೆ ಬೆಸೆದ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡು ಇಬ್ಬರು ಮಹಾನ್ ಯತಿಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದು ಬೆಸೆಯಿತು. ಶ್ರೀ ವಿಶ್ವೇಶ ತೀರ್ಥರು ಶ್ರೀ ವಿದ್ಯಾಮಾನ್ಯ ತೀರ್ಥರಲ್ಲಿಯೇ ವ್ಯಾಸಂಗಕ್ಕೆ ನಿಂತರು. ಭಂಡಾರಕೇರಿಯ ಗುರುಕುಲ ವಾಸ ಅವರ ಏಕಾಂತ ಚಿಂತನೆಗೆ, ಬ್ರಹ್ಮಚರ್ಯದ ಪಾಲನೆಗೆ ಮತ್ತು ಆಳವಾದ ಅಧ್ಯಯನಕ್ಕೆ ಉತ್ತಮ ವಾತಾವರಣವನ್ನು ಒದಗಿಸಿತು.

ಮಾಧ್ವ ವಿದ್ವಾಂಸರಲ್ಲಿಯೇ ಅಗ್ರಮಾನ್ಯರಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಮಾರ್ಗದರ್ಶನದಲ್ಲಿ ಶ್ರೀವಿಶ್ವೇಶತೀರ್ಥರ ಅಧ್ಯಯನ ಅಖಂಡವಾಗಿ ಸಾಗಿತು.

ಎಂಟು ವರ್ಷಗಳ ಅವಿಚ್ಛಿನ್ನ ಅಧ್ಯಯನದಲ್ಲಿ ವಿದ್ಯಾಮಾನ್ಯ ತೀರ್ಥರು ತನ್ನೆಲ್ಲ ಅರಿವನ್ನು ಇವರಿಗೆ ಧಾರೆಯೆರೆದರು. ವಿಶ್ವೇಶ ತೀರ್ಥರು ವಿದ್ಯೆಯ ಪರ್ವತವೇ ಆದರು. ಬಹಳ ಜನಕ್ಕೆ ತಿಳಿದಿಲ್ಲ; ಇಂದು ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶ ತೀರ್ಥರ ಸಮಕ್ಕೆ ನಿಲ್ಲಬಲ್ಲ ಪೀಠಾಧಿಪತಿ ಇಡಿಯ ದೇಶದಲ್ಲಿ ಇನ್ನೊಬ್ಬನಿಲ್ಲ.

ವಿದ್ವತ್ ಪ್ರಕಾಶ[ಮೂಲವನ್ನು ಸಂಪಾದಿಸು]

ಆಗ ಪೇಜಾವರ ಶ್ರೀಪಾದರಿಗೆ, ವಿಶ್ವೇಶ ತೀರ್ಥರಿಗೆ ೨೦ರ ಹಸಿಹಸೀ ಹರೆಯ. ೧೯೫೧ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ನಡೆಯಿತು. ಎಲ್ಲ ಪಂಡಿತರ ಒಮ್ಮತದಿಂದ ಆ ಸಮ್ಮೇಳನದ ಅಧ್ಯಕ್ಷತೆಯ ಹೊಣೆಯನ್ನು ಹೊಸ ಹರೆಯದ ವಿಶ್ವೇಶ ತೀರ್ಥರಿಗೆ ಒಪ್ಪಿಸಲಾಯಿತು.

ಆ ಸಭೆಯಲ್ಲಿ ಆಗಣ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಉಪಸ್ಥಿತರಿದ್ದರು. ತರುಣ ಯತಿಯ ತೇಜಸ್ವಿತೆಗೆ, ಪಾಂಡಿತ್ಯಕ್ಕೆ ಮೆಚ್ಚಿದ ಒಡೆಯರು ಶ್ರೀಪಾದರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದರು.

೧೯೫೨ ಜನವರಿ ೧೮ರಂದು, ೨೧ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ, ಅನ್ನದಾನ – ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯ. ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ,

೧೯೫೬ ಜುಲೈ ೨೮, ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ. 12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರ. ಈ ೫೬ ವರ್ಷಗಳ ಹರವಿನಲ್ಲಿ ಈ ಸಂಸ್ಥೆಯಲ್ಲಿ ಕಲಿತು ಹೊರಬಂದ ಖ್ಯಾತ ವಿದ್ವಾಂಸರು ನೂರಾರು ಮಂದಿ.

ಇವೆಲ್ಲಾ ತರುಣ ಶ್ರೀಪಾದರ ಉತ್ತುಂಗ ಸಾಧನೆಯ ಕಿರೀಟಕ್ಕೊಂದು ಗರಿ. ಚಿನ್ನದಲ್ಲಿ ಕಂಪು ಸೇರಿದಂತೆ. ‘ಹೆಮ್ನಃ ಪರಮಾಮೋದಃ.’

೧೯೬೧, ಶ್ರೀಪಾದರಿಗೆ ೩೦ ನಡೆಯುತ್ತಿದೆ. ದಿಲ್ಲಿಯಲ್ಲಿ ವಿಶ್ವ ಕಲ್ಯಾಣ ಯಾಗದ ಸಂಭ್ರಮ. ಗುರು ವಿದ್ಯಾಮಾನ್ಯ ತೀರ್ಥರು ಏರ್ಪಡಿಸಿದ ಈ ಯಾಗದಲ್ಲಿ ಸಹಜವಾಗಿಯೇ ಶಿಷ್ಯ ವಿಶ್ವೇಶ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.

ಯಾಗದಲ್ಲೊಂದು ವಿದ್ವತ್ ಸಭೆ. ಕಾಶಿಯ ಪ್ರಖಾಂಡ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಆ ಸಭೆಯ ಮುಂದೆ ಒಂದು ಸಮಸ್ಯೆಯನ್ನಿಟ್ಟರು. ತರ್ಕಶಾಸ್ತ್ರದ ಅತ್ಯಂತ ಜಟಿಲವಾದ ಪ್ರಶ್ನೆ. ಪಂಡಿತರೆಲ್ಲ ಉತ್ತರ ಕಾಣದೆ ತತ್ತರಿಸಿದರು. ಉತ್ತರ ಸಿಗದೆ ಆ ದಿನ ಸಂದಿತು. ರಾಮಚಂದ್ರ ಶಾಸ್ತ್ರಿಗಳು ತನಗೆ ಸಾಟಿಯಿಲ್ಲ ಎಂದು ಬೀಗಿದರು. ಆ ಹಮ್ಮಿನಿಂದಲೇ ಶಾಸ್ತ್ರಿಗಳು ಮಾರನೆಯ ದಿನ ಸಭೆಗೆ ಆಗಮಿಸಿದರು. ಪೇಜಾವರ ಶ್ರೀಪಾದರು ಮುಂಜಾನೆಯ ಸಭೆಯಲ್ಲಿ ಆ ಸಮಸ್ಯೆಗೆ ಸೂಕ್ತ ಉತ್ತರ ನೀಡಿದರು. ಷಡಂಗರಿಗೆ ಅಚ್ಚರಿ ಅವರು ತೆಪ್ಪಗೆ ಶ್ರೀಪಾದರ ಕಾಲಿಗೆರಗಿದರು.

೧೯೬೫ರಲ್ಲಿ ಕೊಚ್ಚಿಯ ಮಹಾರಾಜರ ಭೇಟಿ. ಮಹಾರಾಜರು ದೊಡ್ಡ ಸಂಸ್ಕೃತ ವಿದ್ವಾಂಸರು. ನ್ಯಾಯ ಶಾಸ್ತ್ರದಲ್ಲಿ ವಿಶೇಷ ಪರಿಣತರು. ಅವರು ಪೇಜಾವರ ಶ್ರೀಪಾದರನ್ನು ವಾಕ್ಯಾರ್ಥಕ್ಕೆ ಆಹ್ವಾನಿಸಿದರು. ಮೊದಲು ನ್ಯಾಯ ಶಾಸ್ತ್ರದಲ್ಲಿ ಚರ್ಚೆ. ಅನಂತರ ದ್ವೈತಾದ್ವೈತ ವಿಮರ್ಶೆ. ಶ್ರೀಪಾದರ ಸಮರ್ಥನೆಗೆ ಮಹಾರಾಜರು ಮನಸೋತರು. ಅರಮನೆಯಲ್ಲಿ ಶೀಪಾದರನ್ನು ವೈಭವದಿಂದ ಸನ್ಮಾನಿಸಿ ಕಳಿಸಿಕೊಟ್ಟರು.

೧೯೬೬ರಲ್ಲಿ ಕಾಶಿಯಲ್ಲೊಂದು ವಿದ್ವತ್ ಸಭೆ. ಕಾಶಿ ತರ್ಕಪಂಡಿತರ ತವರೂರು. ಇಡಿಯ ದೇಶದಲ್ಲಿ ಖ್ಯಾತರಾದ ಮಹಾನ್ ಅದ್ವೈತ ವಿದ್ವಾಂಸ ಅನಂತಕೃಷ್ಣ ಶಾಸ್ತ್ರಿಗಳು, ಅಖಿಲ ಭಾರತ ಖ್ಯಾತಿಯ ಮಹಾ ತರ್ಕ ಪಂಡಿತ ರಾಜರಾಜೇಶ್ವರ ಶಾಸ್ತ್ರಿ ದ್ರಾವಿಡ ಮುಂತಾದ ದಿಗ್ಗಜರೊಡನೆ ಶಾಸ್ತ್ರಾರ್ಥ ಚರ್ಚೆ. ಸೋಲರಿಯದ ಪಂಡಿತರು, ವಯಸ್ಸಿನಲ್ಲಿ ಹಿರಿಯರು. ಅವರ ಮುಂದೆ ಉಡುಪಿಯಿಂದ ಬಂದ ೩೫ರ ತರುಣ ಯತಿ.

ಲೆಕ್ಕಾಚಾರ ತಲೆ ಕೆಳಗಾಯಿತು. ತಮ್ಮ ಭದ್ರಕೋಟೆಯಲ್ಲಿದ್ದ ದಿಗ್ಗಜಗಳೆಲ್ಲ ಈ ತರುಣ ಯತಿ ಸಿಂಹದ ಮುಂದೆ ಮಾತು ಮೂಕವಾಗಿ ತಲೆ ಬಾಗಿಸಿದರು. ಇದು ಒಂದೆರಡು ಉದಾಹರಣೆಯಷ್ಟೇ. ಇತರ ಮತದ ವಿದ್ವಾಂಸರು, ಯತಿಗಳು ಕೂಡಾ ಪೇಜಾವರ ಶ್ರೀಪಾದರ ಪಾಂಡಿತ್ಯಕ್ಕೆ ಮೆಚ್ಚಿ ಅವರ ಕೊರಳಿಗೆ ವಿಜಯಮಾಲೆ ತೊಡಿಸಿ ಸತ್ಕರಿಸಿದರು. ಪುಣೆ – ಪ್ರಯಾಗ ಮುಂತಾದ ಎಲ್ಲ ಕಡೆಯೂ, ಎಲ್ಲಾ ವಿದ್ವತ್ ಸಭೆಗಳಲ್ಲೂ ಶ್ರೀಪಾದರಿಗೇ ಜಯಭೇರಿ.

೧೯೬೮ ಜನವರಿ ೧೮ರಿಂದ, ೧೯೭೦ ಜನವರಿ ೧೭ರ ವರೆಗೆ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯ ಐತಿಹಾಸಿಕ ಪರ್ಯಾಯ. ಮೊದಲ ಪರ್ಯಾಯವನ್ನೂ ಮೀರಿ ನಿಂತ ಅದ್ದೂರಿಯ ಎರಡನೆಯ ಪರ್ಯಾಯ. ಕಲಾವಿದರ, ವಿದ್ವಾಂಸರ ಮನಸೂರೆಗೊಂಡ ಪರ್ಯಾಯ.

ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಮೂಡಿ ಬಂತು: ‘ಗೀತಾ ಸಾರೋದ್ಧಾರ.’

ಈ ಪರ್ಯಾಯದ ಅವಧಿಯಲ್ಲೇ ೧೯೬೮ ಆಗಸ್ಟ್ ೧೮ರಂದು ಉಡುಪಿಯಲ್ಲಿ, ಕೃಷ್ಣನ ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆ. ಬಡ ರೋಗಿಗಳಿಗೊಂದು ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. ‘ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು’ ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.

ದೀನದಲಿತರಿಗಾಗಿ ಮರುಗಿದ ಮನ[ಮೂಲವನ್ನು ಸಂಪಾದಿಸು]

ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.

ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು.

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾನೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.

ಜಾತಿಯ ಬಗ್ಗೆ ಆಚಾರ್ಯ ಮಧ್ವರ ಹೇಳಿಕೆ ಅವರಲ್ಲಿ ಕ್ರಾಂತಿಯ ಕಿಡಿಯನ್ನು ಮೂಡಿಸಿತು. ೧೩ನೆಯ ಶತಮಾನದಷ್ಟು ಹಿಂದೆಯೇ ಅಚಾರ್ಯ ಮಧ್ವರು ಸಾರಿದ್ದರು

‘ಯೋನಿಭೇದಕೃತೋ ಭೇದೋ ಜ್ಞೇಯ ಔಷಾಧಿಕಸ್ತ್ವಯಮ್!’

ತಂದೆ-ತಾಯಿಯ ಜಾತಿಯಿಂದ ಮಗನ ಜಾತಿಯನ್ನು ನಿರ್ಧರಿಸುವುದು ಕೇವಲ ಸಾಮಾಜಿಕ ಪದ್ಧತಿ ಮಾತ್ರ. ಅಧ್ಯಾತ್ಮದಲ್ಲಿ ಅದಕ್ಕೆ ಸ್ಥಾನವಿಲ್ಲ. ಅಧ್ಯಾತ್ಮದ ಸಾಧನೆಯಲ್ಲಿ ಮುಖ್ಯವಾಗುವುದು ವ್ಯಕ್ತಿಯ ಸ್ವಭಾವಗುಣ ಮಾತ್ರ. ಜಾತಿಯಲ್ಲಿ ಶೂದ್ರನ ಮಗ ಸ್ವಭಾವದಲ್ಲಿ ಬ್ರಾಹ್ಮಣನಿರಬಹುದು, ಜಾತಿಯಲ್ಲಿ ಬ್ರಾಹ್ಮಣನ ಮಗ ಸ್ವಭಾವದಲ್ಲಿ ಶೂದ್ರನಿರಬಹುದು.

ಅಚಾರ್ಯ ಮಧ್ವರ ಈ ಕ್ರಾಂತಿಕಾರಿ ಹೇಳಿಕೆ ಶ್ರೀಪಾದರ ಮನದಲ್ಲಿ ಗಾಢವಾಗಿ ಬೇರೂರಿತು. ಏಳು ಶತಮಾನಗಳ ಹಿಂದೆ ಸಾರಿದ ಈ ಸಂದೇಶ ಇವತ್ತಿಗೂ ಬರಿಯ ಪುಸ್ತಕದ ಮಾತಾಗಿ ಉಳಿದಿದೆ.

ಮನಸ್ಸು ಬಂಡಾಯವೇಳುತ್ತದೆ, ಆದರೆ ಸಂಪ್ರದಾಯದ ಚೌಕಟ್ಟಿನ ದಿಗ್ಬಂಧನದಲ್ಲಿ ಬಡಭಡಿಕೆಯ ಹಿಂದೆ ಮಡುಗಟ್ಟಿರುವುದು ಈ ಭಯವೇ!

೪೦ ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಕಾರ್ಯ ಹಾಗೆಯೇ ಮುಂದುವರೆದಿದ್ದರೆ ಏನೆಲ್ಲಾ ಅದ್ಭುತವನ್ನು ಸಾಧಿಸಬಹುದಿತ್ತು. ಈ ಸನಾತನಿಗಳು ಮತ್ತು ವಿಚಾರವಾದಿಗಳು ಸೇರಿ ಒಂದು ಅಧ್ಬುತ ಕ್ರಾಂತಿಯ ಸಾಧ್ಯತೆಯನ್ನೇ ಹೊಲೆಗೆಡಿಸಿಬಿಟ್ಟರು.

೪೦ ವರ್ಷಗಳ ಹಿಂದೆ ಶ್ರೀಪಾದರು ಮೊದಲು ಹರಿಜನ ಕೇರಿಗೆ ಹೋದಾಗ ಬಂದ ಟೀಕೆಗಳಿಗೆ ನೊಂದ ಶ್ರೀಪಾದರು ಅಂದು ನನ್ನ ಬಳಿ ಹೇಳಿಕೊಂಡದ್ದು ಈಗಲೂ ನನ್ನ ಕಿವಿಯಲ್ಲಿ ರಣರಣಿಸುತ್ತಿದೆ ಎನ್ನುತ್ತಾರೆ ಆಚಾರ್ಯ ಬನ್ನಂಜೆ ಗೋವಿಂದಾಚಾರ್ಯರು –

“ತಪ್ಪು ಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ. ಇದು ಹೀಗೆಯೇ ಮುಂದುವರಿದರ ನಾನು ಪೀಠ ತ್ಯಾಗ ಮಾಡಿ, ಬಿಡಿ ಸನ್ಯಾಸಿಯಾಗಿ ಬದುಕುತ್ತೇನೆ. ಹರಿದ್ವಾರದಲ್ಲೋ ಹೃಷಿಕೇಶದಲ್ಲೋ ಒಂದು ಪುಟ್ಟ ಗುಡಿಸಲು ಕಟ್ಟಿಕೊಂಡು ಇದ್ದು ಬಿಡುತ್ತೇನೆ.”

ಹಾಗೆ ನಡೆಯಲಿಲ್ಲ. ಶೀಪಾದರ ಪ್ರೀತಿಯ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರೆ ಅವರನ್ನು ಕರೆಸಿಕೊಂಡರು. ‘ನೀವು ಮಾಡಿದ ಕೆಲಸ ಶಾಸ್ತ್ರೀಯವಾಗಿದೆ. ದಲಿತರಿಗೂ ಹರಿಭಕ್ತಿಯ ಸಂದೇಶ ನೀಡಿದಿರಿ. ಇದು ಪುಣ್ಯದ ಕೆಲಸ’ ಎಂದು ಪ್ರೀತಿಯಿಂದ ಹರಸಿ ಸಂತೈಸಿದರು.

ಧಾರ್ಮಿಕ ಕ್ರಿಯೆ[ಮೂಲವನ್ನು ಸಂಪಾದಿಸು]

ಶ್ರೀಪಾದರು ಹೀಗೆ ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಟ್ಟವರಲ್ಲ. ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಪ್ರಣವ ಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ – ಇವು ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ನಿರಂತರ ನಡೆಯುತ್ತಿವೆ.

ಪೂರ್ಣಪ್ರಜ್ಞ ವಿದ್ಯಾಪೀಠ[ಮೂಲವನ್ನು ಸಂಪಾದಿಸು]

ಅವರ ನಿರಂತರ ಓಡಾಟದ ನಡುವೆ 1978ರಲ್ಲಿ ಪೂರ್ಣಪ್ರಜ್ಞಾ ವಿದ್ಯಾ ಪೀಠದ ರಜತೋತ್ಸವವನ್ನು ತಾನೇ ನಿಂತು ವೈಭದಿಂದ ನೆರವೇರಿಸಿದರು.

ಸಂತ್ರಸ್ತರಿಗೆ ಪರಿಹಾರ[ಮೂಲವನ್ನು ಸಂಪಾದಿಸು]

ಇದೇ ಸಮಯದಲ್ಲಿ ಆಂಧ್ರದ ಚಂಡಮಾರುತಕ್ಕೆ ಬಲಿಯಾಗಿ ಹಂಸಲದೀವಿಯ ಜನ ಮನೆ – ಮಾರು ಕಳೆದುಕೊಂಡು ಬೀದಿಪಾಲಾದರು. ಶ್ರೀಪಾದರ ಹೃದಯ ಕರಗಿತು. ಅವರು ಹಂಸಲದೀವಿಯಲ್ಲಿ ತನ್ನ ಮಠದ ಕಡೆಯಿಂದ 150 ಮನೆಗಳನ್ನು ಕಟ್ಟಿಸಿದರು. ಮನೆ ಕಳೆದುಕೊಂಡವರಿಗೆ ಆಸರೆಯಾಗಿ ನಿಂತರು. ೨೬-೭-೧೯೭೮ರಂದು ಅವುಗಳ ಉದ್ಘಾಟನೆಯಾಗಿ ಮನೆಯಿಲ್ಲದವರು ‘ಮನೆವಂತ’ರಾದರು.

ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತರು. ಆಗಲೂ ಪೇಜಾವರ ಶ್ರೀಪಾದರು ಪ್ರಕೃತಿಯ ಕೋಪಕ್ಕೆ ಬಲಿಯಾದವರ ನೆರವಿಗೆ ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾಗಿ ನಿಂತರು. ‘ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಃಖಿತಃ’ ಎಂದು ರಾಮಾಯಣದ ವಚನಕ್ಕೆ ತಾನೇ ನಿದರ್ಶನವಾಗಿ ನಿಂತರು. ಕೃಶವಾದ ಶರೀರದಲ್ಲೊಂದು ಕರಗುವ ಹೃದಯ; ಜತೆಗೆ ಎಂದೂ ಕರಗದ ಕಠಿಣವಾದ ನಿರ್ಧಾರ.

‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಲೋಕೋತ್ತರಾಣಾ0 ಚೇತಾಂಸಿ’.

ಸರ್ವಧರ್ಮ ಸಮಭಾವ[ಮೂಲವನ್ನು ಸಂಪಾದಿಸು]

ತನ್ನ ಮೂರನೆಯ ಪರ್ಯಾಯದ ಅವಧಿಯಲ್ಲಿ ರಂಜಾನ್ ಆಚರಣೆಯನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿ, ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಪೇಜಾವರ ಶ್ರೀಪಾದರು.

ಮಾಹಿತಿ ಆಧಾರ[ಮೂಲವನ್ನು ಸಂಪಾದಿಸು]

  1. 'ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ, ಡಿಸೆಂಬರ್ ೧೬, ೨೦೧೦ರ ತರಂಗದಲ್ಲಿ ಮೂಡಿಬಂದ ಲೇಖನ', ‘ವಾಮನ ಮೂರ್ತಿ ತ್ರಿವಿಕ್ರಮಶಕ್ತಿ’
  2. 'ಯತಿ ಪಯಣ',ಶ್ರೀ.ವಿಶ್ವೇಶ ತೀರ್ಥರ ಬಗ್ಗೆ ವಿಶೇಷ ಸಂಚಿಕೆ, ತುಷಾರ ಮಾಸ ಪತ್ರಿಕೆ, ಜನವರಿ, 2016,
  3. 'ಪೇಜಾವರ ಶ್ರೀ ವಿಶ್ವೇಶ ತೀರ್ಥರು;ಐತಿಹಾಸಿಕ ದಾಖಲೆಯ ಪಂಚಮ ಪರ್ಯಾಯ', ತರಂಗ ವಿಶೇಷ ಸಂದರ್ಶನ,ತರಂಗ ಸಾಪ್ತಾಹಿಕಪತ್ರಿಕೆ, ಜನವರಿ, ೨೧,೨೦೧೬, ಯತಿ ಚಕ್ರವರ್ತಿ; ವಾಮನ ಶರೀರದಲ್ಲಿ ತ್ರಿವಿಕ್ರಮ ಶಕ್ತಿಯ ವಿಶ್ವಪ್ರಿಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು. ಪೇಜಾವರ ಪರ್ಯಾಯ ಸಂಚಿಕೆ, ೨೦೧೬, ಜನವರಿ,೨೦೧೬