ವಿಷಯಕ್ಕೆ ಹೋಗು

ಪೆಡಿಕ್ಯೂಲಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೆಡಿಕ್ಯೂಲಿಡೀ ಸಂಧಿಪದಿ ವಂಶದ ಕೀಟವರ್ಗಕ್ಕೆ ಸೇರಿದ ಕುಟುಂಬ. ಇದಕ್ಕೆ ಸೇರಿದ ಕೀಟಗಳಿಗೆ ಹೇನುಗಳೆಂದು ಹೆಸರು. ಇವು ಸ್ತನಿಗಳ ಶರೀರದ ಮೇಲೆ ಬಾಹ್ಯ ಪರೋಪಜೀವಿಗಳಾಗಿದ್ದುಕೊಂಡು ಆತಿಥೇಯಗಳ ದೇಹದಿಂದ ರಕ್ತ ಹೀರಿ, ತಮ್ಮ ಬದುಕು ಸಾಗಿಸುತ್ತವೆ.

ಹೇನಿನ ದೇಹ ಕಿರಿದು. ಇದರಲ್ಲಿ ತಲೆ, ಮುಂಡ ಹಾಗೂ ಉದರವೆಂಬ ಮೂರು ಭಾಗಗಳುಂಟು. ತಲೆ ಚಿಕ್ಕದು. ಕಣ್ಣುಗಳು ಅತಿ ಸೂಕ್ಷ್ಮ ಗಾತ್ರದವು. ಬಾಯಿಯ ಉಪಾಂಗಗಳಾದ ಕೆಳತುಟಿ, ದವಡೆ ಹಾಗೂ ಮ್ಯಾಕ್ಸಿಲಗಳು ಪೋಷಕ ಜೀವಿಯ ದೇಹವನ್ನು ಚುಚ್ಚಿ, ರಕ್ತ ಹೀರಿಕೊಳ್ಳಲು ತಕ್ಕಂತೆ ಮಾರ್ಪಾಟಾಗಿವೆ. ಉಪಯೋಗವಿಲ್ಲದಿದ್ದಾಗ ಉಪಾಂಗ ಗಂಟಲೊಳಗಿನ ಚೀಲದಲ್ಲಿ ಹುದುಗಿರುವುದು. ಮುಂಡದಲ್ಲಿ ಆರು ಕಾಲುಗಳಿವೆ. ಪ್ರತಿಯೊಂದು ಕಾಲಿನಲ್ಲೂ ಸಂಧಿಗಳಿದ್ದು, ಕೊನೆಯ ಏಕಸಂಧಿಯಾದ ಟಾರ್ಸಸಿನಲ್ಲಿ ಚೂಪಾದ ಒಂದೇ ಒಂದು ಕೊಕ್ಕೆ ಇದೆ. ಕೊಕ್ಕೆ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆ ತೆರನಾಗಿದ್ದು ಆಯಾ ಪೋಷಕ ಜೀವಿಗಳ ಕೂದಲುಗಳ ಸುತ್ತಳತೆಗೆ ಸರಿಹೊಂದುವಂತೆ ರೂಪುಗೊಂಡಿರುವುದರಿಂದ ಹೇನು ಭದ್ರವಾಗಿ ರೋಮಗಳಿಗೆ ಅಂಟಿಕೊಳ್ಳಲು ಅನುಕೂಲವಾಗಿದೆ. ಹೇನಿಗೆ ರೆಕ್ಕೆಗಳಿಲ್ಲ. ಉದರ ಭಾಗ ಸ್ವಲ್ಪ ನೀಳ, ಹತ್ತು ಖಂಡಗಳನ್ನು ಒಳಗೊಂಡಿದೆ.

ಹೇನು ಏಕಲಿಂಗ ಪ್ರಾಣಿ. ಸಂಭೋಗಾನಂತರ ಹೆಣ್ಣು ಹೇನು ಪೋಷಕ ಜೀವಿಯ ಕೂದಲಿಗೆ ಅಂಟಿಕೊಂಡಿರುವಂತೆಯೇ ದಿನ ಒಂದಕ್ಕೆ 8-12 ರ ದರದಲ್ಲಿ ಸುಮಾರು 300 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಬೆಳೆದು ಮರಿ ಹೇನುಗಳು ಹೊರಬರುತ್ತವೆ. ಮರಿಗಳಿಗೆ ನಿಂಫ್ ಎಂದು ಹೆಸರು. ಇವು ಬೆಳೆಯುತ್ತ ಹೋದಂತೆ ಮೂರು ಸಾರಿ ಪೊರೆ ಬಿಟ್ಟು ಪ್ರೌಢ ಹೇನುಗಳಾಗಿ ರೂಪುಗೊಳ್ಳುವುವು. ತರುವಾಯ 1-3 ದಿವಸಗಳ ಸಂತಾನ ಕ್ರಿಯೆಯಲ್ಲಿ ತೊಡಗುವುವು.

ಹೇನುಗಳಲ್ಲಿ 6 ಜಾತಿಗಳೂ ಸುಮಾರು 45 ಪ್ರಭೇದಗಳೂ ಇವೆ. ಮಾನವ ಶರೀರದಲ್ಲಿ ವಾಸಿಸುವ ಹೇನುಗಳು ಎರಡು ಜಾತಿಯವು: ಪೆಡಿಕ್ಯೂಲಸ್ ಮತ್ತು ತೀರಸ್. ಪೆಡಿಕ್ಯೂಲಸ್ ಜಾತಿಯಲ್ಲಿ ಪೆಡಿಕ್ಯೂಲಸ್ ಕೆಪಿಟಸ್, ಪೆಡಿಕ್ಯೂಲಸ್ ಕಾರ್‍ಫೊರಸ್ ಅಥವಾ ಪೆಡಿಕ್ಯೂಲಸ್ ವೆಸ್ಟಿಮೆನ್‍ಟಿ ಎಂಬ ಪ್ರಭೇದಗಳಿವೆ. ಪೆ. ಕೆಪಿಟಸ್ ಮಾನವನ ತಲೆಗೂದಲಿನಲ್ಲಿ ವಾಸಿಸುವ ಹೇನು, ಪೆ. ಕಾರ್‍ಫೋರಸ್ ಮಾನವನ ಶರೀರದ ಮೇಲೆ ವಾಸಿಸುವ ಹೇನು. ತೀರಸ್ ಪ್ಯುಬಿಸ್ ಮಾನವನ ಹೊಟ್ಟೆಯ ಕೆಳಭಾಗದ ಪ್ಯುಬಿಕ್ ಪ್ರದೇಶದಲ್ಲಿರುವ ರೋಮಗಳಲ್ಲಿ ವಾಸಿಸುವ ಹೇನು. ಇದು ನೋಡಲು ಏಡಿಯಂತಿರುವುದರಿಂದ ಇದಕ್ಕೆ ಏಡಿ ಹೇನು ಎಂಬ ಹೆಸರೂ ಉಂಟು.

ಹೇನುಗಳು ಮಾನವನಲ್ಲಿ ಟೈಫಸ್ ಜ್ವರ ಮತ್ತು ಮರುಕಳಿಸುವ ಜ್ವರಗಳನ್ನು ಉಂಟುಮಾಡುವ ಕ್ರಿಮಿಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಲ್ಲಿ ಸಹಾಯಕವಾಗಿವೆ.

ಕೋತಿಗಳಲ್ಲಿ ಪೆಡಿಸಿನಸ್ ಜಾತಿಗೆ ಸೇರಿದ ಹೇನುಗಳಿವೆ. ಸೀಲ್ ಪ್ರಾಣಿಗಳನ್ನು ಎಕೈನ್ರೆತೀರಿಯಸ್ ಜಾತಿಯ ಹೇನುಗಳು ಪೀಡಿಸುತ್ತವೆ. ಆನೆಗಳನ್ನು ಹಿಮಟೋಮೈಜಸ್ ಎಲೆಫೆಂಟಸ್ ಹೇನುಗಳು ಅಂಟಿಕೊಳ್ಳುತ್ತವೆ. ಹಸು ಮತ್ತು ಕುದುರೆಗಳ ಹೊರಕಿವಿಗಳಲ್ಲಿ ಹಿಮಟೋವೈನಸ್ ಟ್ಯುಬರ್‍ಕ್ಯುಲೀಟಸ್ ಹೇನುಗಳಿವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: