ಪೆಟ್ಲುಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೆಟ್ಲುಪ್ಪು ನೈಸರ್ಗಿಕವಾಗಿ ದೊರೆಯುವ ಪೊಟ್ಯಾಸಿಯಮ್ ನೈಟ್ರೈಟ್. ನೈಟರ್ ಅಥವಾ ಸಾಲ್ಟ್‌ಪೀಟರ್ ಎಂದೂ ಹೆಸರುಂಟು. ಸಾರಜನಕ ಸಂಯುಕ್ತಗಳ ಆಕರವಿದು.  ಹದಿಮೂರನೆಯ ಶತಮಾನದಲ್ಲಿಯೇ ಇದನ್ನು ನೈಟ್ರಿಕ್ ಆಮ್ಲ, ಸಿಡಿಮದ್ದು, ಪಟಾಕಿ, ಬಾಣಬಿರುಸುಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು.  ಇದು ವಿಶೇಷವಾಗಿ ಉಷ್ಣದೇಶಗಳಲ್ಲಿ ಮುಖ್ಯವಾಗಿ ಮಿಸಿಸಿಪಿ ಕಣಿವೆ, ಸ್ಪೇನ್, ಇಟಲಿ, ಈಜಿಪ್ಟ್, ಇರಾನ್ ಮತ್ತು ಭಾರತ ದೇಶಗಳಲ್ಲಿ ದೊರೆಯುತ್ತದೆ. ಚಿಲಿಯಲ್ಲಿ ಇದು ಚಿಲಿ ಸಾಲ್ಟ್‍ಪೀಟರ್ (ಸೋಡಿಯಮ್ ನೈಟ್ರೈಟ್ ) ಜೊತೆ ಸಂಯುಕ್ತವಾಗಿ ಸಿಕ್ಕುತ್ತದೆ.  ಭೂಮಿಯ ಮೇಲ್ಮೈಯಲ್ಲಿ ಗೋಡೆಗಳ ಇಲ್ಲವೇ ಬಂಡೆಗಳ ಮೇಲೆ ಮತ್ತು ಗುಹೆಗಳ ಒಳಗೆ ಸ್ಫಟಿಕ ರೂಪದಲ್ಲಿ ಹೆಪ್ಪುಗಟ್ಟಿರುವುದು ವಾಡಿಕೆ.  ನೈಟ್ರೀಕರಿಸುವ ಸೂಕ್ಷ್ಮಾಣುಜೀವಿಗಳು ಇದರ ಉತ್ಪತ್ತಿಗೆ ಕಾರಣವೆಂದು ಈಗ ತಿಳಿದುಬಂದಿದೆ. ಪ್ರಾಣಿ ಮತ್ತು ಸಸ್ಯ ಮೂಲಗಳಿಂದ ದೊರೆಯುವ ಸಾರಜನಕಯುತ ನಿಷ್ಪ್ರಯೋಜಕ ವಸ್ತುಗಳನ್ನು ಈ ಜೀವಿಗಳು ಉತ್ಕರ್ಷಿಸಿದಾಗ ಪೊಟ್ಯಾಸಿಯಮ್ ನೈಟ್ರೈಟ್ ಉತ್ಪತ್ತಿಯಾಗುತ್ತದೆ. ಇದರ ಹರಳುಗಳು ಬಿಳಿ ಅಥವಾ ನಿರ್ವಣವಾಗಿದ್ದು ಗಾಜಿನಂತೆ ಹೊಳೆಯುತ್ತವೆ. ಹರಳು ನೀಳ. ಸಮಷಟ್ಫಲಕ ರೂಪದ ಘನ. ಪೆಟ್ಲುಪ್ಪಿನ ರುಚಿ ಪಚ್ಚಕರ್ಪೂರದಂತೆ ತಂಪು ಮತ್ತು ಅಡಿಗೆ ಉಪ್ಪಿನಂತೆ ಉಪ್ಪು. ತಣ್ಣನೆಯ ನೀರಿನಲ್ಲಿ ಮಿತವಾಗಿಯೂ ಬಿಸಿನೀರಿನಲ್ಲಿ ಅಧಿಕವಾಗಿಯೂ ವಿಲೀನಗೊಳ್ಳುತ್ತದೆ.  ಹರಳುಗಳನ್ನು ಹೆಚ್ಚಾಗಿ ಕಾಸಿದಾಗ ಆಕ್ಸಿಜನ್ ಹೊರಬಂದು ಪೊಟ್ಯಾಸಿಯಮ್ ನೈಟ್ರೈಟ್ ಶೇಷವಸ್ತುವಾಗಿ ದೊರೆಯುತ್ತದೆ.

ಉಪಯೋಗಗಳು[ಬದಲಾಯಿಸಿ]

ಪೊಟ್ಯಾಸಿಯಮ್ ನೈಟ್ರೇಟನ್ನು ಪ್ರಯೋಗಶಾಲೆಯಲ್ಲಿ ಅಲ್ಲದೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಯಿರುವ ವಸ್ತುಗಳ ತಯಾರಿಕೆಯಲ್ಲಿ ಕೂಡ ಉಪಯೋಗಿಸಲಾಗುತ್ತಿದೆ.  ಇದರಿಂದ ಸಿಡಿಮದ್ದು ಮತ್ತು ನೈಟ್ರಿಕ್ ಆಮ್ಲವನ್ನು ತಯಾರಿಸುತ್ತಾರೆ.  ಲೋಹ ಸಂಸ್ಕರಣೆ, ಬಣ್ಣಗಳ ತಯಾರಿಕೆ ಮತ್ತು ಬೆಂಕಿಕಡ್ಡಿ ತಯಾರಿಕೆಯಲ್ಲಿ ಇದರ ಬಳಕೆ ವಿಶೇಷವಾಗಿದೆ.  ಮೂತ್ರೋತ್ತೇಜನಕಾರಿ ಮತ್ತು ಸ್ವೇದಕಾರಿಯಾಗಿ ಉಪಯೋಗಿಸಲಾಗುವ ಔಷಧಿಗಳಲ್ಲಿ ಇದರ ಬಳಕೆ ಉಂಟು. ಮಾಂಸವನ್ನು ಕೆಡದಂತೆ ಇಡಲು ಇದನ್ನು ಉಪಯೋಗಿಸುತ್ತಾರೆ.  ಮಾಂಸದೊಡನೆ ಇದನ್ನು ಸಂಸ್ಕರಿಸದಾಗ ಮಾಂಸಕ್ಕೆ ಉಜ್ಜ್ವಲ ಕೆಂಪು ಬಣ್ಣದ ಮೆರುಗು ಬರುತ್ತದೆ.  ಇದರ ಉಪಯುಕ್ತತೆ ಹೆಚ್ಚಾದಂತೆಲ್ಲ ಬೇಡಿಕೆ ಹೆಚ್ಚಾಗಿ ಇದನ್ನು ಈಗ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತಿದೆ.  ಪೆಟ್ಲುಪ್ಪಿನ ತಯಾರಿಕೆಗೆ ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಹೇರಳವಾಗಿ ಮತ್ತು ಅಗ್ಗವಾಗಿ ದೊರೆಯುವ ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಸೋಡಿಯಮ್ ನೈಟ್ರೇಟುಗಳೇ ಕಚ್ಚಾ ವಸ್ತುಗಳು.  ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಸೋಡಿಯಮ್ ನೈಟ್ರೇಟುಗಳ ಬಿಸಿ ಪರ್ಯಾಪ್ತ ದ್ರಾವಣಗಳನ್ನು ಮಿಶ್ರ ಮಾಡಿದಾಗ ಈ ಮುಂದೆ ತೋರಿಸಿರುವ ಸಮೀಕರಣದ ರೀತಿಯಲ್ಲಿ ಪೊಟ್ಯಾಸಿಯಮ್ ನೈಟ್ರೈಟ್ ಉತ್ಪತ್ತಿಯಾಗುತ್ತದೆ.

ಬಿಸಿ ದ್ರಾವಣದಲ್ಲಿ ಮಿತವಾಗಿ ವಿಲೀನವಾಗುವ ಸೋಡಿಯಮ್ ಕ್ಲೋರೈಡ್ ಸ್ಪಟಿಕ ರೂಪದಲ್ಲಿ ಮೊದಲು ಪ್ರತ್ಯೇಕವಾಗುತ್ತದೆ.  ಇದನ್ನು ಶೋಧಿಸಿದಾಗ ಬರುವ ದ್ರಾವಣವನ್ನು 200 ಸೆ.ಗಿಂತ ಕೆಳಗೆ ಶೀತಲೀಕರಿಸಿದಾಗ ಪೊಟ್ಯಾಸಿಯಮ್ ನೈಟ್ರೈಟ್ ಸ್ಫಟಿಕ ರೂಪದಲ್ಲಿ ದೊರೆಯುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: