ವಿಷಯಕ್ಕೆ ಹೋಗು

ಪೆಟ್ರೊನಾಸ್ ಗೋಪುರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆಟ್ರೊನಾಸ್ ಗೋಪುರಗಳು

ಪೆಟ್ರೊನಾಸ್ ಅವಳಿ ಗೋಪುರಗಳು ಎಂದು ಕರೆಯಲ್ಪಡುವ ಈ ಗೋಪುರಗಳು ಮಲೇಶಿಯ ದೇಶದ ರಾಜಧಾನಿ ಕೌಲಾಲಂಪುರದಲ್ಲಿರುವ ಗಗನಚುಂಬಿ ಕಟ್ಟಡಗಳಾಗಿವೆ. ೧೯೯೮ ರಿಂದ ೨೦೦೪ ರವರೆಗೂ ಇವು ಜಗತ್ತಿನ ಅತಿ ಎತ್ತರದ ಕಟ್ಟಡಗಳಾಗಿದ್ದವು. ಈ ಗೋಫುರಗಳು ಕೌಲಾಲಂಪುರದ ಒಂದು ಪ್ರಮುಖ ಸ್ಥಳವಾಗಿದ್ದು ಪ್ರವಾಸೀ ತಾಣವೂ ಆಗಿದೆ. ಇದು ೮೮ ಮಹಡಿಗಳನ್ನೊಳಗೊಂಡಿದ್ದು ತುದಿಯವರೆಗಿನ ಒಟ್ಟು ಎತ್ತರ ೪೫೧.೯ ಮೀಟರುಗಳು (೧೪೮೩ ಅಡಿ)[]. ಒಂದೇ ಎತ್ತರದ ಎರಡು ಗೋಪುರಗಳು ಅಕ್ಕಪಕ್ಕದಲ್ಲಿದ್ದು ಮೇಲ್ಭಾಗದಲ್ಲಿ ಕಿರುಸೇತುವೆಯು ಎರಡನ್ನೂ ಸಂಪರ್ಕಿಸುತ್ತದೆ. ೨೦೦೪ರಲ್ಲಿ ತೈಪೆ ೧೦೧ ಎಂಬ ಕಟ್ಟಡ ನಿರ್ಮಾಣದ ತನಕ ಪೆಟ್ರೊನಾಸ್ ಗೋಪುರಗಳು ಆರುವರ್ಷಗಳ ಕಾಲ ಜಗತ್ತಿನ ಅತಿ ಎತ್ತರದ ಗೋಪುರಗಳಾಗಿದ್ದವು. ಈಗಲೂ ಇವು ಜಗತ್ತಿನ ಅತಿ ಎತ್ತರದ 'ಅವಳಿ ಗೋಪುರಗಳು'.

ಇತಿಹಾಸ

[ಬದಲಾಯಿಸಿ]

ಈ ಗೋಪುರಗಳನ್ನು ಅರ್ಜೆಂಟೈನಾದ ವಾಸ್ತುಶಿಲ್ಪಿ ಸೀಸರ್ ಪೆಲ್ಲಿ(Cesar Pelli)ಯವರು ವಿನ್ಯಾಸಮಾಡಿದರು. ೧೯೯೨ರಲ್ಲಿ ಆರಂಭವಾದ ಈ ಯೋಜನೆಯು ಏಳುವರ್ಷಗಳ ನಂತರ ನಿರ್ಮಾಣ ಪೂರ್ಣಗೊಂಡಿತು. ಯೋಜನಾ ಹಂತದಲ್ಲಿ ಬಿರುಗಾಳಿ ಮತ್ತು ಭಾರಕ್ಕೆ ಸಂಬಂಧಿಸಿದಂತೆ ಸಿಮ್ಯುಲೇಶನ್ ಮೂಲಕ ಅನೇಕ ಕಠಿಣರೂಪದ ಪರೀಕ್ಷೆಗಳನ್ನು ಮಾಡಲಾಗಿತ್ತು. ೧೯೯೩ರಲ್ಲಿ ಅಡಿಪಾಯಕ್ಕಾಗಿ ಮಣ್ಣನ್ನು ಅಗೆಯಲು ಶುರುಮಾಡಲಾಗಿ ೩೦ ಮೀಟರ್ (೯೮ ಅಡಿಗಳು) ಆಳಕ್ಕೆ ಗುಂಡಿ ತೋಡಲಾಯಿತು.

ಈ ಗೋಪುರಗಳ ನಿರ್ಮಾಣ ಕಾರ್ಯ ೧ ಏಪ್ರಿಲ್ ೧೯೯೪ರಂದು ಆರಂಭವಾಯಿತು. ೧ ಜನವರಿ ೧೯೯೬ಕ್ಕೆ ಇದರ ಪೀಠೋಪಕರಣಗಳ ಸಮೇತ ಒಳಾಂಗಣ ನಿರ್ಮಾಣ ಮುಗಿಯಿತು. ಎರಡೂ ಗೋಪುರಗಳ ಚೂಪಾದ ತುದಿಗಳ ರಚನೆ ೧ ಮಾರ್ಚ್ ೧೯೯೬ಕ್ಕೆ ಮುಗಿಯಿತು. ಪೆಟ್ರೊನಾಸ್ ಸಿಬ್ಬಂದಿಗಳ ಮೊದಲ ತಂಡ ೧ ಜನವರಿ ೧೯೯೭ರಲ್ಲಿ ಈ ಕಟ್ಟಡದಲ್ಲಿ ಕೆಲಸ ಆರಂಭಿಸಿತು. ಈ ಕಟ್ಟಡ ಅಧಿಕೃತವಾಗಿ ೧ ಆಗಸ್ಟ್ ೧೯೯ರಲ್ಲಿ ಮಲೇಶಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್‍ರಿಂದ ಉದ್ಘಾಟನೆಗೊಂಡಿತು.[]

೮೮ ಮಹಡಿಗಳ ಈ ಕಟ್ಟಡಗಳು ಕಾಂಕ್ರೀಟಿನಿಂದ ನಿರ್ಮಿಸಲ್ಪಟ್ಟಿದ್ದು ಗಾಜಿನ ಹೊದಿಕೆ ಹೊಂದಿವೆ. ಮಲೇಶಿಯಾದ ಇಸ್ಲಾಂ ಧರ್ಮವನ್ನು ಪ್ರತಿಬಿಂಬಿಸುವ ಇಸ್ಲಾಮಿಕ್ ಕಲೆಯಲ್ಲಿ ಕಂಡುಬರುವ 'ಮೊಟಿಫ್' ವಿನ್ಯಾಸಗಳನ್ನು ಹೋಲುತ್ತವೆ.[]

ಕೆಲವು ಘಟನೆಗಳು

[ಬದಲಾಯಿಸಿ]
  • ೧೩ ಸೆಪ್ಟೆಂಬರ್ ೨೦೦೧ರಲ್ಲಿ ಬಾಂಬ್ ಬೆದರಿಕೆ ಕರೆಯ ಕಾರಣಕ್ಕಾಗಿ ಸಾವಿರಾರು ಜನರನ್ನ ಖಾಲಿಮಾಡಿಸಲಾಯಿತು. ಆದರೆ ಅದು ಹುಸಿಬಾಂಬ್ ಕರೆ ಎಂದು ಪರಿಶೀಲನೆಯ ನಂತರ ತಿಳಿಯಿತು. ಯಾವ ಜೀವಹಾನಿ/ಗಾಯ ಸಂಭವಿಸಲಿಲ್ಲ.
  • ೦೪ ನವೆಂಬರ್ ೨೦೦೫ರ ಸಂಜೆ ಪೆಟ್ರೊನಾಸ್ ಗೋಪುರಗಳ ಕೆಳಗಿರುವ ಸುರಿಯಾ KLCC ಎಂಬ ಮಾಲ್‍ನಲ್ಲಿ ಬೆಂಕಿ ಹತ್ತಿಕೊಂಡಿತ್ತು. ತಡರಾತ್ರಿಯಾದ್ದರಿಂದ ಹೆಚ್ಚು ಜನರಿರಲಿಲ್ಲ.
  • ೦೧ ಸೆಪ್ಟೆಂಬರ್ ೨೦೦೯ರಂದು ಫ್ರೆಂಚ್ ಆರೋಹಿ ಅಲೈನ್ ರಾಬರ್ಟ್ ಪೆಟ್ರೋನಾಸ್ ಅವಳಿ ಗೋಪುರಗಳ ಅತ್ಯುನ್ನತ ಮಹಡಿಯನ್ನು ಬರಿಗೈಯಲ್ಲಿ ಒಂದು ಗಂಟೆ 45 ನಿಮಿಷಗಳಲ್ಲಿ ಏರಿದ. ಪೋಲೀಸರು ಆತನನ್ನು ಬಂಧಿಸಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. skyscraper.org/TALLEST_TOWERS/t_petronas
  2. Sebestyén, Gyula (1998). Construction: Craft to Industry. London: Taylor & Francis. p. 205. ISBN 978-0-419-20920-1.
  3. Wee, C. J. Wan-Ling, April Stonghold, James Parpan Almeda (2002). Local cultures and the "new Asia": the state, culture, and capitalism in Southeast Asia. Institute of Southeast Asian Studies. p. 193.
  4. ಮಲೇಶಿಯ ಗೋಪುರ ಏರಿದ ಫ್ರೆಂಚ್ 'ಸ್ಪೈಡರ್‌ಮ್ಯಾನ್' , ವೆಬ್ ದುನಿಯಾ, ಮಂಗಳವಾರ, 1 ಸೆಪ್ಟಂಬರ್ 2009


ಹೊರಸಂಪರ್ಕಗಳು

[ಬದಲಾಯಿಸಿ]