ಪುರುಷಸಂಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರುಷಸಂಯೋಗ ಎಂಬುದು ಯೇಸುಕ್ರಿಸ್ತನ ಮಾನವೀಯ ಹಾಗೂ ದೈವಿಕ ಸ್ವಭಾವಗಳು ಒಬ್ಬನೇ ಪುರುಷನಲ್ಲಿ ಸಂಯೋಗವಾಗುವುದನ್ನು ಸೂಚಿಸುವ ಪಾರಿಭಾಷಿಕ ಶಬ್ದವು. ಯೇಸುಕ್ರಿಸ್ತನ ಮಾನವತ್ವ ಹಾಗೂ ದೇವತ್ವ ಹೇಗೆ ಒಂದಾಗುತ್ತವೆಂದು ವರ್ಣಿಸುವ ಈ ಸಿದ್ಧಾಂತವನ್ನು ಕ್ರಿ.ಶ. ೪೩೧ರಲ್ಲಿ ಮಾನ್ಯಮಾಡಿ ಮದಲನೆಯ ಎಫೆಸೊಸ್ ಸಭೆಯು ಅದರ ಮುಖ್ಯತೆಯನ್ನು ಪ್ರತಿಪಾದಿಸಿತು.

ಪುರುಷಸಂಯೋಗ ಸಿದ್ಧಾಂತದ ಮಹ್ತತ್ವವು ಕ್ರಿಸ್ತನ ಮಾನವೀಕರಣದ ಸ್ವರೂಪವನ್ನು ವರ್ಣಿಸುವದರಲ್ಲಿ ವಹಿಸುವ ಪಾತ್ರದಿಂದ ಉದ್ಭವಿಸುತ್ತದೆ. ಯೇಸುಕ್ರಿಸ್ತನು ಸಮವರ್ತಿಯಾಗಿ ಸಂಪೂರ್ಣವಾಗಿ ಮಾನವೀಯನೂ ಮತ್ತು ಸಂಪೂರ್ಣವಾಗಿ ದೈವಿಕನೂ ಆಗಿರುವುದು ಹೇಗೆ ಸಂಭವವೆಂದು ವಿವರಿಸುವುದು ಸಾಂಪ್ರದಾಯಿಕ ಕ್ರೈಸ್ತ ದೇವತಾಶಾಸ್ತ್ರಿಯರಿಗೆ ಪ್ರಮುಖವಾಗಿತ್ತು. ಏಕೆಂದರೆ ಆತನ ಮಾನವತ್ವ ಆಂಶಿಕವಾಗಿಯೇ ಇರುತ್ತಿದ್ದರೆ, ಕ್ರಿಸ್ತನ ರಕ್ತಯಜ್ಞವು ಅಸಾಧ್ಯವಾಗಿಯೂ ನಿಷ್ಪ್ರಯೋಜಕವಾಗಿಯೂ ಇರುತ್ತಿತ್ತು. ಅದೇ ರೀತಿ, ಆತನ ದೇವತ್ವ ಆಂಶಿಕವಾಗಿಯೇ ಇರುತ್ತಿದ್ದರೆ, ಪಾಪವನ್ನೂ ರಕ್ಷಣೆಯನ್ನೂ ಕುರಿತ ಆತನ ಉಪದೇಶಗಳ ಅನ್ಯೂನತೆಯ ಬಗ್ಗೆ ಸಂದೇಹ ಹುಟ್ಟುತ್ತಿತ್ತು, ಮತ್ತು ದೇವರ ಪ್ರೀತಿಯ ಈ ಕಾರ್ಯದ ನಿಸ್ಸ್ವಾರ್ಥತೆಯೂ ಪರಿಶುದ್ಧತೆಯೂ ಕುಗ್ಗುತ್ತಿದ್ದವು.

ಕ್ರಿ.ಶ. ೪೫೧ರಲ್ಲಿ ಖಲ್ಕೇದೋನ್ ಸಭೆಯು ಪುರುಷಸಂಯೋಗ ಸಿದ್ಧಾಂತವನ್ನು ಹೀಗೆ ಸ್ಪಷ್ಟೀಕರಿಸಿತು:

ಪವಿತ್ರ ಪಿತೃಗಳನ್ನು ಅನುಸರಿಸಿ ನಾವೆಲ್ಲರು ಒಪ್ಪಿಕೊಳ್ಳಲು ಒಮತ್ತವಾಗಿ ಬೋಧಿಸುತ್ತೇವೆ, ದೇವರ ಪುತ್ರನು ಹಾಗೂ ನಮ್ಮ ಪ್ರಭುವಾದ ಯೇಸುಕ್ರಿಸ್ತನು ಒಬ್ಬನೇ; ಈತನೇ ದೇವತ್ವದಲ್ಲಿ ಪರಿಪೂರ್ಣನಾಗಿಯೂ ಮಾನತ್ವದಲ್ಲಿ ಪರಿಪೂರ್ಣನಾಗಿಯೂ ಇದ್ದಾನೆ; ನಿಜವಾದ ದೇವರೂ ಮೈ ಮತ್ತು ವಿವೇಕಯುಕ್ತ ಆತ್ಮವುಳ್ಳ ನಿಜವಾದ ಮಾನವನೂ ಆಗಿದ್ದಾನೆ; ದೇವತ್ವದ ಸಂಬಂಧವಾಗಿ ಪಿತೃವಿಗೆ ಏಕದ್ರವ್ಯಾತ್ಮಕನಾಗಿದ್ದಾನೆ ಮತ್ತು ಮಾನತ್ವದ ಸಂಬಂಧವಾಗಿ ನಮಗೆ ಏಕದ್ರವ್ಯಾತ್ಮಕನಾಗಿದ್ದಾನೆ; ಪಾಪವಿಲ್ಲದೆ ಎಲ್ಲವುಗಳಲ್ಲಿ ನಮಗೆ ಸಮಾನನಾಗಿದ್ದಾನೆ; ದೇವತ್ವದ ಸಂಬಂಧವಾಗಿ ಪಿತೃವಿನಿಂದ ಯುಗಗಳ ಮುಂಚೆ ಹುಟ್ಟಿಸಲ್ಪಟ್ಟನು, ಮತ್ತು ಮಾನವತ್ವದ ಸಂಬಂಧವಾಗಿ ಇತ್ತೀಚ್ಚಿನ ಈ ದಿನಗಳಲ್ಲಿ, ನಮಗೂ ನಮ್ಮ ರಕ್ಷಣೆಗೂ ದೇವರ ಮಾತೃವಾದ ಕನ್ಯಾಮರಿಯಳಿಂದ ಹುಟ್ಟಿಸಲ್ಪಟ್ಟನೆ; ಒಬ್ಬನೇ ಕ್ರಿಸ್ತನೂ ಪುತ್ರನೂ ಪ್ರಭುವೂ ಏಕಜಾತನಾದವನೂ ಆಗಿದ್ದಾನೆ; ಎರಡು ಸ್ವಭಾವಗಳಲ್ಲಿ ಅಭ್ರಾಂತವಾಗಿ, ಅವ್ಯಯವಾಗಿ, ಅವಿಭಾಜ್ಯವಾಗಿ, ಅವಿಚ್ಛೇದ್ಯವಾಗಿ, ಮಾನ್ಯಮಾಡಲ್ಪಡತಕ್ಕವನಾಗಿದ್ದು; ಸಂಯೋಗದ ಪ್ರಯುಕ್ತ ಸ್ವಭಾವಗಳ ವ್ಯತ್ಯಾಸವು ಯಾವುದೇ ರೀತಿಯಲ್ಲಿ ಅಳಿಸಲ್ಪಡದೆ ಒಂದೊಂದು ಸ್ವಭಾವದ ಲಕ್ಷಣಗಳು ಉಳಿದು ಒಂದೇ ವ್ಯಕ್ತಿಯಲ್ಲಿ ಮತ್ತು ಒಂದೇ ಪುರುಷನಲ್ಲಿ ಸಹಭಾವವಾಗುತ್ತ; ಎರಡು ಪುರುಷಗಳಲ್ಲಿ ಭಾಗಿಸಲ್ಪಡದೆ ಅಥವಾ ಬೇರ್ಪಡಿಕೆಯಾಗದೆ ಒಬ್ಬನೇ ಪುತ್ರನಾಗಿ, ಮತ್ತು ಏಕಜಾತನಾದವನಾಗಿ, ವಾಕ್ಯವಾದ ದೇವರಾಗಿ, ಪ್ರಭುವಾದ ಯೇಸುಕ್ರಿಸ್ತನಾಗಿ; ಆತನ ಬಗ್ಗೆ ಪ್ರವಾದಿಯರು ಮೊದಲಿನಿಂದ ಹೇಳಿದಂತೆ, ಮತ್ತು ಪ್ರಭುವಾದ ಯೇಸುಕ್ರಿಸ್ತನೇ ನಮಗೆ ಕಲಿಸಿ ಪಿತೃಗಳ ನಂಬುಹೇಳಿಕೆಯನ್ನು ನಮಗೆ ಒಪ್ಪಿಸಿದಂತೆ ಎಂದು.