ಪುಣ್ಯಕ್ಷೇತ್ರ ಮುರ್ಡೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಮುರ್ಡೇಶ್ವರ ಕರಾವಳಿ ತಟದ ಪವಿತ್ರ ಶೈವಕ್ಷೇತ್ರ. ರಮಣೀಯವಾದ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರವಾಸಿ ತಾಣ.

ಅತ್ತ ಬೆಟ್ಟಗಳ ಸಾಲು ಇತ್ತ ಅರಬ್ಬೀ ಸಮುದ್ರದಿಂದ ಸುತ್ತುವರಿದಿರುವ ಈ ಕ್ಷೇತ್ರದ ಸೊಬಗು ವರ್ಣಿಸುವುದು ಕಷ್ಟಸಾಧ್ಯವೇ ಸರಿ. ವಿವಿಧ ಧರ್ಮಗಳ ಸಂಗಮಕ್ಷೇತ್ರವಾಗಿ ಭಾವೈಕ್ಯತೆಯ ತಾಣವಾಗಿರುವ ಮುರ್ಡೇಶ್ವರದಲ್ಲಿ ಬಸದಿಗಳೂ ಇವೆ.

ಸಮುದ್ರ ದಂಡೆಯ ಕುಂದುಗಿರಿ ಬೆಟ್ಟದ ಮೇಲೆ ಮುರ್ಡೇಶ್ವರನ ದೇವಾಲಯವಿದೆ. ಇಲ್ಲಿರುವ ಶಿವಲಿಂಗ ಶಿವನಾತ್ಮಲಿಂಗದ ಒಂದು ಭಾಗ ಎಂಬುದು ಜನರ ನಂಬಿಕೆ. ಪುರಾಣಗಳಲ್ಲಿ ಕೂಡ ಮುರ್ಡೇಶ್ವರದ ಪ್ರಸ್ತಾಪವಿದ್ದು, ಅನಾದಿಕಾಲದಿಂದಲೂ ಇದು ಪುಣ್ಯಕ್ಷೇತ್ರವಾಗಿದೆ. ಇಲ್ಲಿರುವ ದೇವಾಲಯವನ್ನು ಪಾಂಡವರು ಕಟ್ಟಿಸಿದರು ಎಂಬ ಕಥೆಯೂ ಇಲ್ಲಿ ಜನಜನಿತ. ಭಟ್ಕಳದ ದೊರೆ ಭಟ್ಟಪ್ಪನಾಯಕ 14ನೆಯ ಶತಮಾನದಲ್ಲಿ ಈ ಗುಡಿಯನ್ನು ಜೀರ್ಣೋದ್ಧಾರ ಮಾಡಿದನು ಎಂಬ ಬಗ್ಗೆ ದಾಖಲೆಗಳಿವೆ.

ರಾವಣೇಶ್ವರ ತನ್ನ ತಾಯಿಯ ಕೋರಿಕೆ ಈಡೇರಿಸಲು ತಪವನ್ನಾಚರಿಸಿ ಆತ್ಮಲಿಂಗವನ್ನು ವರವಾಗಿ ಪಡೆದು ಬರುವಾಗ, ವಟುರೂಪಿ ಗಣಪ, ಆತ್ಮಲಿಂಗವನ್ನು ಗೋಕರ್ಣದಲ್ಲಿ ಭೂಸ್ಪರ್ಶ ಮಾಡಿಸಿದಾಗ, ಲಿಂಗ ಭೂತಳಕ್ಕೆ ಜಾರುವುದನ್ನು ಕಂಡ ರಾಣೇಶ್ವರ ಪಾತಾಳಕ್ಕೆ ಇಳಿಯುತ್ತಿರುವ ಲಿಂಗವನ್ನು ಬಲವಾಗಿ ಹಿಡಿದಾಗ ಲಿಂಗದ ಒಂದು ಭಾಗ ಮುರುಟಿಕೊಂಡು ತುಂಡಾಯಿತು. ಕೋಪದಿಂದ ರಾವಣ ಅದನ್ನು ಎಸೆದಾಗ ಅದು ಇಲ್ಲಿ ಬಂದು ಬಿತ್ತೆಂದೂ, ಇದುವೇ ಮುರ್ಡೇಶ್ವರ ಎಂಬ ಹೆಸರಿನಿಂದ ಪಾಂಡವರಿಂದ ಪೂಜಿಸಲ್ಪಟ್ಟಿತೆಂಬ ಕಥೆ ಇದೆ.

ಸ್ಕಾಂದಪುರಾಣದಲ್ಲಿ ಸಹ ಮುರುಡೇಶ್ವರದ ಪ್ರಸ್ತಾಪವಿದೆ. ಗಣಪತಿ ಶಿವನ ಆತ್ಮಲಿಂಗವನ್ನು ಭೂಸ್ಮರ್ಶ ಮಾಡಿದಾಗ, ರಾವಣ ಅದನ್ನು ಕೀಳಲು ಯತ್ನಿಸಿ ಲಿಂಗಕ್ಕೆ ಕಟ್ಟಿದ ದೋರ ಅಂದರೆ ವಸ್ತ್ರ ಹಾಗೂ ಅಂಟಿಕೊಂಡ ಗುಣ ಕಿತ್ತುಬಂತು. ಕೋಪದಿಂದ ರಾವಣ ದೋರಕ ಗುಣವಸ್ತ್ರಗಳನ್ನು ದಕ್ಷಿಣಕ್ಕೊಂದು, ಉತ್ತರಕ್ಕೊಂದು ಎಸೆದ ದೋರಕ ನಾಗಶೃಂಗ ಪರ್ವತದ ಬಳಿ ಬಿದ್ದು ಧಾರೇಶ್ವರ ಎಂದು ಪ್ರಸಿದ್ಧವಾದರೆ, ಗುಣ ಬಿದ್ದ ಜಾಗ ಗುಣವಂತೆಯಾಯ್ತು. ವಸ್ತ್ರ ಬಿದ್ದ ಸ್ಥಳ ಮುರುಡೇಶ್ವರವಾದರೆ ಸಂಪುಟ ಬಿದ್ದ ಸ್ಥಳ ಸಜ್ಜೇಶ್ವರವಾಯಿತೆಂದು ಹೇಳಲಾಗುತ್ತದೆ.