ಪುಂಡಲೀಕ ಹಾಲಂಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪುಂಡಲೀಕ ಹಾಲಂಬಿ ಕನ್ನಡ ಸಾಹಿತ್ಯ ಪರಿಷತ್ತಿನ ೨೪ನೆ ಅಧ್ಯಕ್ಷರು.

ಶತಮಾನದ ಹೊಸ್ತಿಲಲ್ಲಿರುವ, ಕನ್ನಡಿಗರ ಬಹುದೊಡ್ದ ಸಂಸ್ಥೆಯಾದ ಕನ್ನಡ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಅವರು ಚುನಾಯಿತರಾಗಿದ್ದಾರೆ. ಇವರು ಪರಿಷತ್ತಿನ ೨೪ನೆಯ ಅಧ್ಯಕ್ಷರು.

ಉತ್ತಮ ವಾಗ್ಮಿಗಳು, ಪ್ರಬುದ್ಧ ಸಂಘಟಕರು, ಕ್ರಿಯಾಶೀಲರು, ಶುದ್ಧಹಸ್ತರು, ಸಕಲರನ್ನೂ ಸಮಾನ ಗೌರವದಿಂದ ಕಾಣುವ ವಿಶಾಲ ಹೃದಯಿಗಳು, ಜಾತ್ಯಾತೀತ ಮನೋಭಾವವನ್ನು ಮೈಗೂಡಿಸಿಕೊಂಡಿರು ವವರಾದ ಪುಂಡಲೀಕ ಹಾಲಂಬಿ ಅವರು ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಪ್ರೀತಿಯನ್ನು ಪಡೆದುಕೊಂಡ ಪರಿಣಾಮವಾಗಿ ಅಧ್ಯಕ್ಷಗಾದಿಯನ್ನು ಅಲಂಕರಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಹಾಲಾಡಿಯ ಚಂದ್ರಶೇಖರ ಹಾಲಂಬಿ ಮತ್ತು ವಾಸಂತಿ ದಂಪತಿಗಳ ಮಗನಾದ ಪುಂಡಲೀಕ ಹಾಲಂಬಿ ಅವರು ಜನಿಸಿದ್ದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅರಸೀಕೆರೆಯಲ್ಲಿ ಮುಗಿಸಿ ಬೆಂಗಳೂರಿನತ್ತ ಪಯಣ ಬೆಳೆಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದ ನತರ ಅದೇ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಂಯೋಜನಾಧಿಕಾರಿಯಾಗಿ ಸೇವೆಗೆ ಸೇರಿದವರು.

ಅಲ್ಲಿ ಮೂವತ್ತಾರು ವರ್ಷಗಳ ಸಾರ್ಥಕ ಸೇವೆಯ ನಂತರ ನಿವೃತ್ತರಾಗಿರುವ ಹಾಲಂಬಿ ಅವರು ಬೆಂಗಳೂರು ವಿಶ್ವವಿದ್ಯಾಲಯ ಬೋಧಕೇತರ ನೌಕರರ ಸಂಘದ ಅಧ್ಯಕ್ಷರಾಗಿ ಇಪ್ಪತ್ತು ವರ್ಷ ದುಡಿದಿದ್ದಾರೆ. ಅವರ ನೇತೃತ್ವದಲ್ಲಿ ನೌಕರರ ಹಲವಾರು ಬೇಡಿಕೆಗಳು ಈಡೇರಿವೆ. ಏಕಕಾಲಕ್ಕೆ ಹಲವಾರು ಸಂಸ್ಥೆಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ತಮ್ಮದಾಗಿಸಿಕೊಂಡಿರುವ ಇವರು ವಿಶ್ವವಿದ್ಯಾಲಯ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದಲ್ಲದೆ ಅದೇ ಸಂಸ್ಥೆಗೆ ಮೂರು ಬಾರಿ ನಿರ್ದೇಶಕರಾಗಿದ್ದರು.

ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ಮೊದಲಾದವುಗಳಿಗೆ ಧಕ್ಕೆಯಾದಾಗ, ಸಮಸ್ಯೆಗಳ ಪರಿಹಾರಕ್ಕೆ ಗಟ್ಟಿಯಾಗಿಯೇ ಮಾತನಾಡುವ ಸ್ವಭಾವ ಹಾಲಂಬಿಬಿಯವರದು. ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕು ಅಧ್ಯಕ್ಷರ ಅವಧಿಯಲ್ಲಿ ಪದಾಧಿಕಾರಿಯಾಗಿ ದುಡಿದಿರುವ ಇವರಿಗೆ ಪರಿಷತ್ತಿನ ಆರ್ಥಿಕ ಪರಿಸ್ಥಿತಿ, ಸಿಬ್ಬಂದಿಗಳ ಸಮಸ್ಯೆ, ಕಚೇರಿಯ ಕಾರ್ಯಗಳ ವ್ಯಾಪಕತೆ, ಮುದ್ರಣಾಲಯ, ಸಂಶೋಧನಾ ಕೇಂದ್ರ, ಗ್ರಂಥಾಲಯ, ಸಾಹಿತ್ಯ ಪರೀಕ್ಷೆಗಳು, ಸರ್ವ ಸದಸ್ಯರ ಸಭೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇವೆಲ್ಲವುಗಳ ನಿರ್ವಹಣೆಯಲ್ಲಿ ತಮ್ಮ ಅನುಭವದ ಸ್ಪರ್ಶವನ್ನು ನೀಡಲು ಹಾಲಂಬಿಯವರು ಸಮರ್ಥರಾಗಿದ್ದಾರೆಂದು ಹೇಳಬಹುದು.

ಸಹಕಾರ ಕ್ಷೇತ್ರಕ್ಕೆ ಹಾಲಂಬಿ ಅವರು ಸಲ್ಲಿಸುತ್ತಿರುವ ಸೇವೆಯೂ ಗಣನೀಯವಾದುದು. ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ನಿರ್ದೆಶಕರಾಗಿ, ಗೌರವ ಕಾರ್ಯದರ್ಶಿಯಾಗಿ, ಕಾರ್ಯ ನಿರ್ವಹಿಸಿದ ಅನುಭವದ ಮೇಲೆ ೧೯೯೭ ರಲ್ಲಿ ಆ ಬ್ಯಾಂಕಿನ ಅಧ್ಯಕ್ಷರಾದರು. ಇವರು ಬ್ಯಾಂಕಿನ ಅಧ್ಯಕ್ಷರಾದಾಗ ಮೂರು ಕೋಟಿ ರೂಪಾಯಿ ವಹಿವಾಟು ನದೆಯುತ್ತಿತ್ತು. ಈಗ ಅದರ ವಾರ್ಷಿಕ ವಹಿವಾಟು ಮೂರುನೂರು ಕೋಟಿ ರೂಪಾಯಿಗಳು. ಹಾಲಂಬಿ ಅವರು ಇದ್ದೆಡೆ ಆರ್ಥಿಕ ಶಿಸ್ತು ಇರುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ. ಹೋಟೆಲ್ ಬ್ಯಾಂಕಿನಲ್ಲಿ ಅವರು ಕನ್ನಡವನ್ನು ಜಾರಿಗೆ ತಂದಿದ್ದಾರೆ. ಬ್ಯಾಂಕಿನಲ್ಲೂ ನದೆಯುವ ವ್ಯವಹಾರ, ಅಧ್ಯಕ್ಶರ ಕೊಠಡಿ, ಸಭಾ ಕೊಠಡಿಗಳಲ್ಲಿ ಅದನ್ನು ಕಾಣಬಹುದು. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣವಾಗಿ ಕನ್ನಡೀಕರಣ ಮಾಡಿರುವುದಲ್ಲದೆ ಕನ್ನಡ ಸಾಹಿತಿಗಳ ಭಾವಚಿತ್ರಗಳನ್ನು ಬ್ಯಾಂಕಿನಲ್ಲಿ ತೂಗುಹಾಕಿರುವುದೆ ಮೆಚ್ಚಬೇಕಾದ ಅಂಶ.

ಕನ್ನಡಪರ ಚಳವಳಿಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿಧ್ಯಾರ್ಥಿಯಾಗಿದ್ದಾಗಿನಿಂದಲೂ ಕನ್ನಡಪರವಾಗಿ ದನಿ ಎತ್ತುತ್ತ ಬಂದಿರುವವರು. ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದ ಅಧ್ಯಕ್ಶರಗಿಯೂ ಅವರು ಸೇವೆಗೈದಿದ್ದಾರೆ. ಅಖಿಲ ಕರ್ನಾಟಕ ಕನ್ನಡ ಮಾಧ್ಯಮ ವಿಧ್ಯಾರ್ಥಿ ಸಮ್ಮೇಳನದ ಪ್ರಥಮ ಅಧ್ಯಕ್ಷರಗಿದ್ದುದು ಅವರ ಕ್ರಿಯಾಶೀಲತೆಗೆ ಸಂದ ಗೌರವವಾಗಿತ್ತು. ದೊಡ್ಡಬಳ್ಳಾಪುರದ ಕನ್ನಡ ಪರ ಹೆಸರಾಂತ ಸಂಸ್ಥೆಯಾದ ಕನ್ನಡ ಜಾಗೃತ ಪರಿಷತ್ತಿನ ಉಪಾಧ್ಯಕ್ಷರಾಗಿ ಹಾಲಂಬಿ ಅವರು ದುಡಿದಿದ್ದಾರೆ.

ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವ ಕನ್ನಡಪರ ಸಂಘಟನೆಯಾದ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆಯ ಅದ್ಯಕ್ಷರಾಗಿ ಹತ್ತು ವರ್ಷಗಳಿಂದ ಸೇವೆಗೈಯುತ್ತಿರುವ ಹಾಲಂಬಿಯವರು ಅನುಭವದ ಖನಿಯಾಗಿದ್ದರೆ. ತಮ್ಮ ಮಾತಿನ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆಯುವ ಅವರ ಗುಣ ಇತರರಿಗೆ ಮಾದರಿಯಾಗುತ್ತದೆ. ಹೀಗೆ ಬಹುಮುಖ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪುಂಡಲೀಕ ಹಾಲಂಬಿ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಉತ್ತಮವಾಗಿ ಮುನ್ನಡೆಸಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದಾರೆ.

ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಲು ಅವರು ಬಯಸಿದ್ದಾರೆ. ಪರಿಷತ್ತಿನ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ಮೂಲಕ ಪರಿಷತ್ತನ್ನು ಸ್ವಾವಲಂಬಿ ಸಂಸ್ಥೆಯನ್ನಗಿ ಮಾಡುವ ಧೃಢ ನಿರ್ಧಾರವನ್ನು ಮಾಡಿದ್ದಾರೆ. ಪರಿಷತ್ತಿನ ಶತಮಾನೋತ್ಸವವನ್ನು ನಾಡಿನುದ್ದಗಲಕ್ಕೂ ವಿಶಿಷ್ಠವಾಗಿ ಆಚರಿಸಬೇಕೆಂಬ ಬಯಕೆಯನ್ನು ತಮ್ಮಲ್ಲಿರಿಸಿಕೊಂಡಿರುವ ಹಾಲಂಬಿಯವರು ಕಿರಿಯ ಸಾಹಿತಿಗಳಿಗೆ ಉತ್ತೇಜನ ನೀಡುವ, ಸಂಶೋಧನೆಗೆ ಒತ್ತು ಕೊಡುವ ಪ್ರಕಟಣೆಗಳಿಗೆ ಮಹತ್ವ ಕೊಡುವ, ದತ್ತಿ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ನಡೆಸುವ ಪರಿಷತ್ತಿನ ಮೂಲ ಆಶಯವನ್ನು ಕಾರ್ಯರೂಪಕ್ಕೆ ತರುವ ದೃಢ ಸಂಕಲ್ಪವನ್ನು ಮಾಡಿದ್ದಾರೆ.

ಅಪ್ಪರ ಅನುಭವ, ಸದಸ್ಯರ ಬೆಂಬಲ, ಹಿರಿಯ ಸಾಹಿತಿಗಳ ಪ್ರೋತ್ಸಾಹ, ಹಿತೈಷಿಗಳ ಮಾರ್ಗದರ್ಶನ, ಗೆಳೆಯರ ಪ್ರೀತಿ ವಿಶ್ವಾಸಗಳು ಹಾಲಂಬಿ ಅವರ ಜೊತೆಗಿರುವುದರಿಂದ ಅವರ ಅವ್ಧಿಯಲ್ಲಿ ಪರಿಷತ್ತು ಶಕ್ತಿಯುತವಾಗಿ ಕ್ರಿಯಾಶೀಲವಾಗಿ ಕಾರ್ಯ ಮಾಡಬಲ್ಲದೆಂಬ ವಿಶ್ವಾಸವನ್ನು ನಾಡಿನುದ್ದಗಲಕ್ಕೂ ಹರಡಿರುವ ಪರಿಷತ್ತಿನ ಸದಸ್ಯರು ಇಟ್ಟುಕೊಂಡಿದ್ದಾರೆ. ಅದು ಸಫ಼ಲವಾಗುವ ನಿಟ್ಟಿನಲ್ಲಿ ಅವರು ಕಾರ್ಯ ಮಾಡಲಿ ಎಂಬುದು ಬಹಳ ಮಂದಿಯ ಹಾರೈಕೆಯಾಗಿದೆ.