ಪಾರ್ಶ್ವನಾಥ ಸ್ವಾಮಿ ಬಸದಿ, ಹಿರಿಯಂಗಡಿ
ಸ್ಥಳ
[ಬದಲಾಯಿಸಿ]ಅಡ್ಡಗೇರಿಯ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ಕರ್ನಾಟಕದ ಬಸದಿಗಳಲ್ಲಿ ಒಂದು. ಅಡ್ಡಗೇರಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಕಾರ್ಕಳದ ಹಿರಿಯಂಗಡಿ ಗ್ರಾಮದಲ್ಲಿ ನೆಲೆಯಾಗಿದೆ. ಇದು ತಾಲೂಕು ಕೇಂದ್ರದಿಂದ ೨ ಕಿ.ಮೀ ದೂರದಲ್ಲಿದೆ.
ದೈವ
[ಬದಲಾಯಿಸಿ]ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯು ಈ ಬಸದಿಯ ದೈವ.
ಇತಿಹಾಸ
[ಬದಲಾಯಿಸಿ]ಹಿಂದಿನಿಂದಲೂ ಈ ಬಸದಿಯನ್ನು ಬಾರಾಡಿ ಬೀಡಿನ ಕುಟುಂಬವು ನಡೆಸುತ್ತಾ ಬಂದಿದೆ. ಇದು ಸ್ಥಳೀಯ ಮಠಾಧೀಶ ಸ್ವಸ್ತಿ ಶ್ರೀ ಲಲಿತಕೀರ್ತಿ ಸ್ವಾಮಿಯವರ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ.
ವಿಶೇಷತೆ
[ಬದಲಾಯಿಸಿ]ಈ ಬಸದಿಯ ವಿಶೇಷವೆಂದರೆ ನಾಗ ಹತ್ಯಾದೋಷವಿದ್ದರೆ ಇಲ್ಲಿ ಪರಿಹರಿಸಲಾಗುತ್ತದೆ. ಮತ್ತು ಮದುವೆಯ ಭಾಗ್ಯ ಕೂಡಿ ಬರದಿದ್ದವರು ಇಲ್ಲಿಗೆ ಬಂದು ಬ್ರಹ್ಮದೇವ ಮತ್ತು ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಹರಕೆಯನ್ನು ಹೇಳಿದರೆ ಅದು ನೆರವೇರುತ್ತದೆ ಎಂದು ಹೇಳುತ್ತಾರೆ. ಈ ಬಸದಿಯಲ್ಲಿ ಹಬ್ಬ, ವಾರ್ಷಿಕೋತ್ಸವ, ರಥೋತ್ಸವ, ದಶಲಕ್ಷ ಪರ್ವ, ಜೀವದಯಾಷ್ಟಮಿ ಇತ್ಯಾದಿಗಳು ನಡೆಯುವುದಿಲ್ಲ.
ವಿನ್ಯಾಸ
[ಬದಲಾಯಿಸಿ]ಈ ಬಸದಿಯ ಮೇಲಿನ ನೆಲೆಯಲ್ಲಿ ಶ್ರೀ ಅನಂತನಾಥ ಸ್ವಾಮಿಯ ಮೂರ್ತಿ ಇದೆ. ಇದಕ್ಕಿಂತ ಮೇಲಿನ ನೆಲೆಯಲ್ಲಿ ಶ್ರೀ ಶಾಂತಿನಾಥ ಸ್ವಾಮಿ ವಿರಾಜಮಾನರಾಗಿದ್ದಾರೆ. ಇಲ್ಲಿನ ಒಳಗಿನ ಮಂಟಪದಲ್ಲಿ ೪ ಕಲ್ಲಿನ ಕಂಬಗಳಿವೆ. ಆದರೆ ಕಂಬದಲ್ಲಿ ಯಾವುದೇ ರೀತಿಯ ಶಿಲ್ಪಕಲಾಕೃತಿಗಳಿಲ್ಲ. ಇಲ್ಲಿ ಮುನಿವಾಸ ಅಥವಾ ಮುನ್ಯಾಸೊ ಎಂಬ ಯಾವುದೆ ಪ್ರತ್ಯೇಕ ಕೋಣೆಯಿಲ್ಲ.ಇಲ್ಲಿ ಪ್ರಾರ್ಥನಾ ಮಂಟಪದಲ್ಲಿ, ಜಯಘಂಟೆ, ಜಾಗಂಟೆಯನ್ನು ತೂಗು ಹಾಕಲಾಗಿದೆ. ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿದೆ. ಮೇಲ್ಗಡೆ ಆರೂಢದಲ್ಲಿ ಅದೋ ಮುಖ ಕಮಲವನ್ನು ಹೊಂದಿದೆ. ಇಲ್ಲಿ ಬ್ರಹ್ಮದೇವರು, ಪದ್ಮಾವತಿ ಅಮ್ಮನವರು ಮತ್ತು ಯಕ್ಷಿಯ ಮೂರ್ತಿಗಳಿವೆ. ಇಲ್ಲಿಯ ಮೂಲ ಸ್ವಾಮಿಯ ಮೂರ್ತಿಯು ಕಲ್ಲಿನದ್ದಾಗಿದೆ. ೩ ಅಡಿ ಎತ್ತರವಿದ್ದು ಖಡ್ಗಾಸನ ಭಂಗಿಯಲ್ಲಿದೆ. ಮೂರ್ತಿಯ ಸುತ್ತಲೂ ಸರಳ ಮಕರತೋರಣದ ಪ್ರಭಾವಳಿ ಇದೆ. ಮೂರ್ತಿಗೆ ವಜ್ರಲೇಖನ ಮಾಡಿಲ್ಲ. ಇದರ ಪ್ರವೇಶ ದ್ವಾರವು ಕಲ್ಲಿನದ್ದಾಗಿದೆ. ಆದರೆ ಅದರಲ್ಲಿ ಯಾವುದೇ ಶಿಲ್ಪಕಲೆ ಇಲ್ಲ.[೧]
ವಿಧಿ ವಿಧಾನ
[ಬದಲಾಯಿಸಿ]ನಿತ್ಯವೂ ಇಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಬ್ರಹ್ಮದೇವರು, ಪದ್ಮಾವತಿ ಅಮ್ಮನವರು ಮತ್ತು ಯಕ್ಷಿಯ ಮೂರ್ತಿಗಳಿವೆ. ಪದ್ಮಾವತಿ ಅಮ್ಮನವರ ಮೂರ್ತಿಗೆ ನಿತ್ಯವೂ ಪೂಜೆಯನ್ನು ನಡೆಸುತ್ತಾರೆ. ದೇವಿಗೆ ಸೀರೆ ಉಡಿಸಿ, ಬಳೆತೊಡಿಸಿ, ಹೂವಿನಿಂದ ಅಲಂಕಾರ ಮಾಡುತ್ತಾರೆ. ಸ್ವಾಮಿಗೆ ದಿನಕ್ಕೆ ಒಂದು ಸಲ ಕ್ಷೀರಾಭಿಷೇಕದೊಂದಿಗೆ ಪೂಜೆಯನ್ನು ಮಾಡಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೫.