ಪಾರ್ಶ್ವನಾಥ ಸ್ವಾಮಿ ಬಸದಿ, ಪೆರಾಡಿ
ಪೆರಾಡಿಯ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯು ಬೆಳ್ತಂಗಡಿ ತಾಲೂಕಿನ ಪೆರಾಡಿ ಎಂಬ ಸುಂದರ ಗ್ರಾಮದ ಮಧ್ಯದಲ್ಲಿ ಕಂಗೊಳಿಸುತ್ತಿದೆ.
ಸ್ಥಳ
[ಬದಲಾಯಿಸಿ]ಈ ಬಸದಿಯು ಬೆಳ್ತಂಗಡಿಯಿಂದ ಸುಮಾರು ೩೫ ಕಿಲೋಮೀಟರ್ ದೂರದಲ್ಲಿದೆ .ಇಲ್ಲಿಗೆ ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆ ಮಾರ್ಗವಾಗಿ ಸುಲ್ಕೇರಿಗೆ ಬಂದು ಅಲ್ಲಿಂದ ಕೊಕ್ರಾಡಿ ಗ್ರಾಮವಾಗಿ ಹೂವಿನಕಟ್ಟೆ ತಲುಪಿ ಅಲ್ಲಿಂದ ನಂತರ ಪೆರಡಿಗೆ ಬಂದರೆ ಊರ ಮಧ್ಯದಲ್ಲಿ ಸುಂದರವಾಗಿ ಕಂಗೊಳಿಸುತ್ತಿರುವ ಈ ಪಾರ್ಶ್ವನಾಥ ಸ್ವಾಮಿಯ ಬಸದಿ ಕಾಣುತ್ತದೆ. ಬಸದಿ ಇರುವ ಸ್ಥಳಕ್ಕೆ ಬರಲು ಸಾರ್ವಜನಿಕ ವಾಹನಗಳ ವ್ಯವಸ್ಥೆ ಇಲ್ಲ ,ಸ್ವಂತ ವಾಹನಗಳಿದ್ದರೆ ಬರಬಹುದು ಇಲ್ಲದಿದ್ದರೆ ಮುಖ್ಯ ಮಾರ್ಗದಿಂದ ಸ್ವಲ್ಪ ದೂರ ನಡೆದುಕೊಂಡು ಬರಬೇಕು. ಈ ಪಾರ್ಶ್ವನಾಥ ಬಸದಿಯನ್ನು ಸುಮಾರು ೫೦೦ ವರ್ಷಗಳ ಹಿಂದಿನ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಆವರಣ
[ಬದಲಾಯಿಸಿ]ಬಸದಿಯ ಗರ್ಭಗುಡಿಯಿಂದ ಹೊರಗಡೆ ಬರುತ್ತಿರುವಂತೆ ಸುಕನಾಸಿ, ಯೆಡನಾಳಿ, ಗಂಧಕುಟಿ, ತೀರ್ಥ ಮಂಟಪ, ಘಂಟಾ ಮಂಟಪ, ಪ್ರಾರ್ಥನಾ ಮಂಟಪ ಕಾಣಬಹುದು. ಘಂಟಾ ಮಂಟಪ ಅಥವಾ ಪ್ರಾರ್ಥನಾ ಮಂಟಪದ ಕಂಬಗಳ ಮೇಲೆ ಮರದಿಂದ ಮಾಡಿದ ಕಲಾಕೃತಿಗಳನ್ನು ಕಾಣಬಹುದು . ಗೋಡೆಯಮೇಲೆ ಜೈನ ತತ್ವಕ್ಕೆ ಸಂಬಂಧಿಸಿದ ಪದಗಳನ್ನು, ಚಿತ್ರಗಳನ್ನೂ ಕೂಡ ಕಾಣಬಹುದು. ಬಸದಿಯ ನೆಲಕ್ಕೆ ಕಾವಿ ಹಾಕಲಾಗಿದೆ. ಬಸದಿಯ ಎದುರುಗಡೆ ಜಗುಲಿ ಇದೆ. ಇಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಈ ಬಸದಿಯ ಎದುರು ಗೋಪುರ ಇದೆ. ಇಲ್ಲಿನ ಕಂಬಗಳು ಮರಗಳಿಂದ ಮಾಡಲ್ಪಟ್ಟಿವೆ. ಗೋಪುರದ ಗೋಡೆಯ ಮೇಲೆ ಯಾವುದೇ ರೀತಿಯ ಚಿತ್ರಗಳಿಲ್ಲ. ಬಸದಿಗೆ ಮೇಗಿನ ನೆಲೆ ಇದೆ. ಇದರಲ್ಲಿ ಮುಖ್ಯವಾಗಿ ಶ್ರೀ ಚಂದ್ರನಾಥ ಸ್ವಾಮಿಗೆ ಅಭಿಷೇಕ ಪೂಜೆ ನಡೆಯುತ್ತದೆ. ಗರ್ಭಗೃಹದ ಸುತ್ತಲೂ ಅಂಗಳವನ್ನು ಕಾಣಬಹುದು. ಶಿಲಾಶಾಸನ ಹಾಗೂ ಇತರ ದಾಖಲೆಗಳು ಮತ್ತು ಯಾವುದೇ ರೀತಿಯ ಬರವಣಿಗೆ ಕಂಡುಬರುವುದಿಲ್ಲ.
ಕಲಾಕೃತಿ
[ಬದಲಾಯಿಸಿ]ಈ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಭಗವಾನ್ ಪಾರ್ಶ್ವನಾಥ ಸ್ವಾಮಿ. ಈ ಸ್ವಾಮಿಯ ಮೂರ್ತಿಯು ಶಿಲೆಯಿಂದ ಮಾಡಿದ್ದಾಗಿದೆ ಹಾಗೆಯೇ ಸುತ್ತಲೂ ಪ್ರಭಾವಲಯ ಇದೆ. ಅದು ಪಂಚಲೋಹದ್ದಾಗಿದೆ ಇದಕ್ಕೆ ಮಕರ ತೋರಣದ ಅಲಂಕಾರ ಇದೆ. ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂರ್ತಿಯು ಖಡ್ಗಾಸನಾ ಭಂಗಿಯಲ್ಲಿದೆ. ಮೂರ್ತಿ ಇರುವ ಪದ್ಮಪೀಠವು ಚೌಕಾಕಾರವಾಗಿದ್ದು ಪಂಚಲೋಹದಿಂದ ಮಾಡಲಾಗಿದೆ ಎಂದು ಹೇಳುತ್ತಾರೆ. ಇಲ್ಲಿನ ಯಕ್ಷ ಧರಣೇಂದ್ರ, ಯಕ್ಷಿ ಪದ್ಮಾವತಿ ಅವರ ಕೈಯಲ್ಲಿ ಸಂಪ್ರದಾಯಯುಕ್ತ ಆಯುಧಗಳಿವೆ. ಈ ಮೂರ್ತಿಯ ಕೆಳಗಡೆ ಸರ್ಪದ ಲಾಂಛನವನ್ನು ಕಾಣಬಹುದು ತೀರ್ಥಂಕರರ ಮೂರ್ತಿಯು ನಗೆಸೂಸುವಂತಿದೆ. ಈ ಮೂರ್ತಿಯ ಪಕ್ಕದಲ್ಲಿ ಯಾವುದೇ ವಸ್ತುಗಳನ್ನು ಇಡಲಾಗಿಲ್ಲ.[೧]
ಧಾರ್ಮಿಕ ಕಾರ್ಯಗಳು
[ಬದಲಾಯಿಸಿ]ಇಲ್ಲಿನ ಪಾರ್ಶ್ವನಾಥ ಸ್ವಾಮಿಗೆ ಜಲ,ಕ್ಷೀರ, ಪಂಚಾಮೃತ, ಸಿಯಾಳ ಇತ್ಯಾದಿಗಳಿಂದ ಅಭಿಷೇಕ ಮಾಡುತ್ತಾರೆ. ಬಸದಿಯಲ್ಲಿ ದಿನಕ್ಕೆ ಎರಡು ಬಾರಿ ಅಭಿಷೇಕ ಪೂಜೆ ನಡೆಯುತ್ತದೆ. ಗಂಧಕುಟಿಯಲ್ಲಿ ಬೇರೆಬೇರೆ ಮೂರ್ತಿಗಳಿವೆ. ಆದರೆ ಅವುಗಳ ಮೇಲೆ ಯಾವುದೇ ರೀತಿಯಾದಂತಹ ಬರವಣಿಗೆಗಳು ಇಲ್ಲ . ಇವುಗಳ ಪೈಕಿ ನಾವು ಇಲ್ಲಿ ಪಾಶ್ವನಾಥ ಸ್ವಾಮಿಗೆ ಅಭಿಷೇಕ ನಡೆಯುವುದನ್ನು ಕಾಣಬಹುದು. ಅದರ ಜೊತೆಗೆ ನೋಂಪಿ ಉದ್ಯಾಪನೆ ಮಾಡಿದ,ಅನಂತನಾಥ ನೋಂಪಿಯ ಶ್ರೀ ಅನಂತನಾಥ ಸ್ವಾಮಿಯ ಮೂರ್ತಿ ಇದೆ. ಈ ಬಸದಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ೧ ಪಂಚಲೋಹದ ಮೂರ್ತಿ ಇದೆ. ಸುಂದರ ಮೂರ್ತಿಯು ನಿಂತುಕೊಂಡಿರುವ ಭಂಗಿಯಲ್ಲಿದ್ದು ನಾಡಿನಲ್ಲಿ ತೀರ ಅಪೂರ್ವವೆನಿಸಿದೆ. ಪದ್ಮಾವತಿ ದೇವಿಗೆ ಸೀರೆ, ಬಳೆ ಮುಂತಾದವುಗಳನ್ನು ತೊಡಿಸಲಾಗುತ್ತದೆ. ಇಲ್ಲಿ ಬ್ರಹ್ಮದೇವರು ಕುದುರೆಯ ಮೇಲೆ ಕುಳಿತುಕೊಂಡ ಬಂಗಿಯಲ್ಲಿ ಇದ್ದಾರೆ. ಈ ಬಸದಿಯಲ್ಲಿ ನಿತ್ಯ ಪೂಜೆಗಳು ಸಕಾಲಿಕವಾಗಿ ಸಾಂಗವಾಗಿ ನಡೆಯುತ್ತಾ ಬರುತ್ತಿದೆ. ವಿಶೇಷ ಪೂಜೆ ಎಂದರೆ ಅಮ್ಮನವರ ಪೂಜೆ. ಇದು ಕಾರ್ಕಳ ಮಠಕ್ಕೆ ಸೇರಿದ ಬಸದಿಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ.: ಮಂಜುಶ್ರೀ ಪ್ರಿಂಟರ್ಸ್.