ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ, ಹಾಡುವಳ್ಳಿ
ಹಾಡುವಳ್ಳಿಯ ಶ್ರೀ ಪಾರ್ಶ್ವನಾಥ ಸ್ವಾಮಿಯ ಜಿನ ಮಂದಿರವು ಕರಾವಳಿ ಭಾಗದ ಒಂದು ಜೈನ ಮಂದಿರವಾಗಿದೆ.
ಸ್ಥಳ
[ಬದಲಾಯಿಸಿ]ಹಾಡುವಳ್ಳಿಯ ಭಟ್ಕಳದಿಂದ ೨೧ ಕಿಲೋಮೀಟರ್ ದೂರದಲ್ಲಿ ಸಾಗರ ರಸ್ತೆಯ ಪಕ್ಕದಲ್ಲಿ ಈ ಬಸದಿ ಇದೆ.
ಇತಿಹಾಸ
[ಬದಲಾಯಿಸಿ]ಈ ಬಸದಿಯನ್ನು ಐತಿಹಾಸಿಕ ದಾಖಲೆಗಳಲ್ಲಿ ಸಂಗೀತಪುರವೆಂದು ಕರೆಯಲಾಗಿದೆ. ಈಗ ತೀರಾ ಗ್ರಾಮೀಣ ಪ್ರದೇಶವಾಗಿ ಕಂಡು ಬಂದರೂ, ಹಿಂದೊಮ್ಮೆ ಇದು ಸಾಳುವ ಅರಸರ ರಾಜಧಾನಿಯಾಗಿತ್ತು. ಇಲ್ಲಿ ಮಹತ್ವಪೂರ್ಣವಾದ ಹಲವು ಜಿನಮಂದಿರಗಳೂ, ಸ್ಮಾರಕಗಳೂ ಇವೆ. ವಾಸ್ತುಶೈಲಿಯ ದೃಷ್ಟಿಯಿಂದ ಪ್ರತಿಯೊಂದೂ ಅಧ್ಯಯನ ಯೋಗ್ಯವಾದವುಗಳು, ಧಾರ್ಮಿಕ ದೃಷ್ಠಿಯಿಂದ ಜೀರ್ಣೋದ್ಧಾರಗೊಳಿಸಿ ಉನ್ನತ ಸ್ಥಿತಿಗೆ ತರಬೇಕಾದವುಗಳು. ಹಾಡುವಳ್ಳಿ ಪ್ರದೇಶವನ್ನು ಪ್ರವೇಶಿಸುವಾಗ ಈ ಜಿನ ಮಂದಿರ ಸಿಗುತ್ತದೆ. ಪ್ರಸಿದ್ಧ ಜೈನ ಶ್ರಾವಕ ಶ್ರೀ ಶೈಲೇಂದ್ರಗೌಡ ಬಿನ್ ಪಾರ್ಶ್ವನಾಥ ಗೌಡರ ಮನೆಯ ಬಳಿಯಲ್ಲಿದೆ. ಭಟ್ಕಳ ತಾಲೂಕು ಕೇಂದ್ರದಿಂದ ಸಾಗರ ೧೬.೫ ಕಿಲೋಮೀಟರ್ ದೂರದಲ್ಲಿರುವ ಹಾಡುವಳ್ಳಿ ಬಸ್ ನಿಲ್ದಾಣದಿಂದ ೫೦೦ ಮೀಟರ್ ದೂರದಲ್ಲಿದೆ. ಇದು ಶ್ರೀ ಶೈಲೇಂದ್ರ ಗೌಡರ ಮನೆಯವರಿಗೆ ಸೇರಿದುದಾಗಿದೆ.ಈ ಬಸದಿಯು ಸೋಂದೆ ಮಠದ ಧಾರ್ಮಿಕ ವಲಯಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ. ಇದು ಹದಿನಾರನೇ ಶತಮಾನದ ರಾಣಿ ಚೆನ್ನಾಭೈರಾದೇವಿಯ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದೆ.[೧]==
ವಿಶೇಷತೆ
[ಬದಲಾಯಿಸಿ]ಬಸದಿಗೆ ಮೇಗಿನ ನೆಲೆ ಇಲ್ಲ. ಮೂಲನಾಯಕರ ಮತ್ತು ಬ್ರಹ್ಮದೇವರ ಮೂರ್ತಿಯನ್ನು ಹೊರತುಪಡಿಸಿ ಇಲ್ಲಿ ಇತರ ಯಾವುದೇ ಬಿಂಬಗಳಿಲ್ಲ. ಬಸದಿಯ ಎದುರುಗಡೆ ಮಾನಸ್ತಂಭವಿಲ್ಲ. ಆದರೆ ಅದರ ಸ್ಥಳದಲ್ಲಿ ಸುಮಾರು ೨ ಅಡಿ ಎತ್ತರದ ಬಲಿಪೀಠವಿದೆ. ಪರಿಸರದಲ್ಲಿ ಪಾರಿಜಾತ ಮತ್ತು ಮಂದಾರ ಪುಷ್ಟಗಳ ಗಿಡಗಳಿವೆ. ಬಸದಿಗೆ ಗರ್ಭಗೃಹ, ನವರಂಗ ಮತ್ತು ಪ್ರಾರ್ಥನಾ ಮಂಟಪವನ್ನು ಹೊರತುಪಡಿಸಿ ಬೇರೆ ಯಾವುದೇ ಮಂಟಪಗಳಿಲ್ಲ. ಚಂದ್ರಶಾಲೆ ಅಥವಾ ಗೋಪುರಗಳಿಲ್ಲ.ಪ್ರಾರ್ಥನಾ ಮಂಟಪದಲ್ಲಿ ಘಂಟೆ ಜಾಗಟೆಗಳನ್ನು ತೂಗಿ ಹಾಕಲಾಗಿದೆ. ನವರಂಗ ಮಂಟಪದಲ್ಲಿ ಮೇಲ್ಗಡೆ ಪ್ರಾಚೀನವಾದ ಅಧೋಮುಖ ಕಮಲವಿದೆ. ಉಳಿದ ನಾಲ್ಕೂ ಮೂಲೆಗಳಲ್ಲಿ ಅದೇ ರೀತಿಯ ಚಿಕ್ಕ ಗಾತ್ರದ ಕಮಲಗಳನ್ನು ಕಾಣಬಹುದು. ಇದರ ಮೂಲ ಬಸದಿಯ ಕಟ್ಟಡವು ಚಿಕ್ಕದಾಗಿದ್ದು, ಪುರಾತನ ಎಂದು ಹೇಳಲು ಇದರ ಶಿಲೆಯ ಕಂಬಗಳೇ ಸಾಕ್ಷಿ. ಇವುಗಳಿಗೆ ಮತ್ತು ಮೇಲ್ಛಾವಣೆಗೆ ಬಲಿಕೊಡಲು ಹೊಸ ಗೋಡೆಗಳನ್ನು ನಿರ್ಮಿಸಿ ಅವುಗಳನ್ನು ಬಿಳಿಯ ಆಧುನಿಕ ಟೈಲ್ಸ್ಗಳಿಂದ ಅಲಂಕಾರಗೊಳಿಸಲಾಗಿದೆ.ತೀರ್ಥದ್ಧಾರ ಸಹಿತವಾದ ಪಾಣಿಪೀಠದ ಮೇಲೆ ಸುಮಾರು ೩.೫ ಅಡಿ ಎತ್ತರದ ಶ್ರೀ ಪಾರ್ಶ್ವನಾಥ ಸ್ವಾಮಿಯ ಪರ್ಯಂಕಾಸನ ಭಂಗಿಯ ಕರಿಶಿಲೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.ಹಿಂಬದಿ ಕಂಡು ಬರುವ ಸರ್ಪವು ೯ ಬಾಯಿಗಳಿರುವ ಹೆಡೆಯನ್ನು ಹೊಂದಿದೆ.ಅದರ ಮೇಲ್ಗಡೆ ಅಲಂಕೃತವಾದ ಮುಕ್ಕೊಡೆ ಇದೆ.ಸ್ವಾಮಿಯ ಎಡಬಲಗಳ ಪ್ರಭಾವಳಿಯಲ್ಲಿ ಸ್ತಂಭದ ಆಕೃತಿಗಳಿದ್ದು ಮೇಲ್ಬಾಗದಲ್ಲಿ ಅರ್ಧವೃತ್ತಾಕಾರದ ಮಕರ ತೋರಣದ ಅಲಂಕಾರವಿದೆ. ಮೇಲ್ಗಡೆ ಮಧ್ಯದಲ್ಲಿ ಸಿಂಹ ಲಲಾಟವಿದೆ. ಪಾದ ಪ್ರದೇಶದ ಎಡಬಲಗಳಲ್ಲಿ ಧರಣೇಂದ್ರ ಪದ್ಮಾವತಿ ಯಕ್ಷ ಯಕ್ಷಿಯಾರಿದ್ದಾರೆ.
ಪೂಜಾ ವಿಧಾನ
[ಬದಲಾಯಿಸಿ]ಈ ಸಮಗ್ರ ಮೂರ್ತಿಯ ವಿಶೇಷವೆಂದರೆ ಇದನ್ನು ಒಂದೇ ಶಿಲೆಯಲ್ಲಿ ಪ್ರಮಾಣಬದ್ಧವಾಗಿ ಸುಂದರವಾದ ರೀತಿಯಲ್ಲಿ ತಯಾರಿಸಲಾಗಿರುವುದು. ವಜ್ರ ಲೇಪನವಾಗಿಲ್ಲ. ಪ್ರತಿದಿನವೂ ಜಲಾಭಿಷೇಕ ಮತ್ತು ಕ್ಷೀರಭಿಷೇಕ ಹಾಗೂ ವಿಶೇಷ ದಿನಗಳಲ್ಲಿ ಪಂಚಾಮೃತ ಅಭಿಷೇಕವನ್ನು ನಡೆಸಲಾಗುತ್ತದೆ. ಬಸಧಿಯಲ್ಲಿ ಮೂಲ ಶ್ರಾವಣ, ಯುಗಾದಿ, ನವರಾತ್ರಿ, ದೀಪಾವಳಿ, ಮಹಾವೀರ ಜಯಂತಿ ಮತ್ತು ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ ಇತ್ಯಾದಿಗಳನ್ನು ಆಚರಿಸಲಾಗುತ್ತಿದೆ. ನಿತ್ಯ ಪೂಜೆಯನ್ನು ಪೂರ್ವಾಹ್ನ ಒಂದು ಬಾರಿ ಮಾತ್ರ ಮಾಡಲಾಗುತ್ತದೆ. ಬಸಧಿಯ ಸುತ್ತಲೂ ಮೂರಕಲ್ಲಿಗೆ ಸಿಮೆಂಟ್, ಪ್ಲಾಸ್ಟರ್ ಮಾಡಿರುವ ಪ್ರಕಾರ ಗೋಡೆಯಿದೆ. ಈ ಬಸಧಿಗೆ ಒಂಭುಜದ ನಿಕಟಪೂರ್ವ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರು, ಮೂಡಬಿದ್ರಿ ಶ್ರೀಗಳು, ನಿಕಟಪೂರ್ವ ಮತ್ತು ಈಗಿನ ಸೋದೆ ಮಠದ ಭಟ್ಟಕರು ಆಗಮಿಸಿದ್ದಾರೆ. ಅದರಂತೆ, ಕಂಭದ ಹಳ್ಳಿಯ ಶ್ರೀಗಳು ಮತ್ತು ಕನಕಗಿರಿಯ ಭಟ್ಟಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ನಿರ್ಮಲ ಕುಮಾರ್ ಶೇಟಿಯವರು ಇಲ್ಲಿಗೆ ಆಗಮಿಸಿ ಇದರ ಜೀರ್ಣೋದ್ದಾರಕ್ಕೆ ದೇಣಿಗೆ ನೀಡಿದ್ದಾರೆ. ಬಸಧಿಯು ಕೇಂದ್ರವಾಗಿದ್ದುಕೊಂಡು, ಸಮಾಜದಲ್ಲಿ ಧರ್ವ, ಜಾಗೃತಿ ಬೆಳೆಯಬೇಕು ಎಂಬುದು ಇಲ್ಲಿಯವರ ಆಶಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೬೭-೩೬೮.