ಪಾರ್ಶ್ವನಾಥ ಸ್ವಾಮಿಯ ಗುಮ್ಮತಿಕಾರಿ ಬಸದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ಕಾರ್ಕಳದ ಹಿರಿಯಂಗಡಿ ಗ್ರಾಮದಲ್ಲಿ ಈ ಬಸದಿಯು ಕಂಡುಬರುತ್ತದೆ.

ದೈವ[ಬದಲಾಯಿಸಿ]

ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ.

ಆವರಣ[ಬದಲಾಯಿಸಿ]

ಈ ಬಸದಿಯಿಂದ ಇನ್ನೂರು ಮೀಟರ್ ದೂರದಲ್ಲಿ ಅಬ್ಬಗ ದೇವಿ ಬಸದಿಯು ಕಾಣಸಿಗುತ್ತದೆ. ಬಸದಿಯ ಮುಂಭಾಗದಲ್ಲಿ ಈಗ ಪಾರಿಜಾತ ಹೂವಿನ ಗಿಡವಿಲ್ಲ. ಆದರೆ ಅಂಗಳದಲ್ಲಿ ಇತರ ಹೂವಿನ ಗಿಡಗಳು ಕಾಣಸಿಗುತ್ತವೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನೆ ಸನ್ನಿಧಿ ಇದೆ. ಇಲ್ಲಿ ತ್ರಿಶೂಲ, ನಾಗರಕಲ್ಲು ಮತ್ತು ಕೇತ್ರಪಾಲನ ಒಂದೇ ಒಂದು ಕಲ್ಲು ಮಾತ್ರ ಇದೆ. ಇದನ್ನು ಒಂದು ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ. ಈ ಬಸದಿಯ ಆವರಣವನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ. ಬಸದಿಗೆ ಯಾವುದೇ ಕಛೇರಿ, ಕಲಾಭವನ, ಸಭಾಭವನ ಇತ್ಯಾದಿ ಇಲ್ಲ.

ವಿನ್ಯಾಸ[ಬದಲಾಯಿಸಿ]

ಉತ್ತರಾಭಿಮುಕವಾಗಿರುವ ಈ ಜಿನಮಂದಿರವು ಆಯತಾಕಾರದ ಅಧಿಷ್ಟಾನದ ಮೇಲೆ ನಾಗರಶೈಲಿಯಲ್ಲಿದೆ. ಸುತ್ತಲೂ ಎರಡು ಪ್ರದಕ್ಷಿಣಾ ಪಥಗಳಿವೆ. ಒಳಗಿನ ಪ್ರದಕ್ಷಿಣಾ ಪಥವು ನಮಸ್ಕಾರ ಮಂಟಪದಿಂದ ಹೊರಟು ಗರ್ಭಗೃಹವನ್ನು ಸುತ್ತುವರಿದರೆ, ಹೊರ ಪ್ರದಕ್ಷಿಣಾ ಪಥವು ಗರ್ಭಗೃಹ ಮತ್ತು ನಮಸ್ಕಾರ ಮಂಟಪವನ್ನು ಸುತ್ತವರಿದು ಆನೆಕಲ್ಲನ್ನು ತಲುಪುತ್ತದೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಬಸದಿಯ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ. ಆದರೆ ಬೇರೆ ರೀತಿಯಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಈ ಬಸದಿಯಲ್ಲಿ ಪ್ರಾರ್ಥನಾ ಮಂಟಪದಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ನಮಸ್ಕಾರ ಮಂಟಪವೆಂದು ಕರೆಯುತ್ತಾರೆ. ಈ ತೀರ್ಥಂಕರ ಮಂಟಪದಲ್ಲಿ ಗಂಧಕುಟಿಯು ಇದೆ. ಇದರ ಬಳಿಯಲ್ಲಿ ಗಣಧರಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳಿಲ್ಲ. ಆದರೆ ಮಾತೆ ಪದ್ಮಾವತಿ ದೇವಿಯ ಮೂರ್ತಿಗಳಿವೆ. ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ ಹೂವಿನಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಈ ಮೂರ್ತಿಯು ಉತ್ತರಕ್ಕೆ ಮುಖಮಾಡಿಕೊಂಡಿದೆ. ಆದರೆ ಅಮ್ಮನವರ ಕಾಲಿನ ಬಳಿ ಕುಕ್ಕಟ ಸರ್ಪ ಇಲ್ಲ. ಇಲ್ಲಿರುವ ಜನಬಿಂಬಗಳ ಮೇಲೆ ಲಾಂಛನಗಳು ಅಥವಾ ಹಳೆಯ ಬರಹಗಳು ಕಾಣಸಿಗುವುದಿಲ್ಲ. ಈ ಬಸದಿಯಲ್ಲಿರುವ ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂರ್ತಿಯು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಮೂರು ಅಡಿ ಎತ್ತರವಿದೆ.[೧]

ಇತಿಹಾಸ[ಬದಲಾಯಿಸಿ]

ಈ ಗುಮ್ಮ ಅತಿಕಾರಿ ಎಂಬವರು ಈ ಬಸದಿಯನ್ನು ಕಟ್ಟಿಸಿದ್ದರೆಂದು ಹೇಳಲಾಗುತ್ತದೆ. ಇದು ಹತ್ತು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ.

ವಿಧಿವಿಧಾನ[ಬದಲಾಯಿಸಿ]

ದಿನವೂ ಮೂಲ ಸ್ವಾಮಿಗೆ ಜಲಾಭಿಷೇಕ ಮತ್ತು ನಿತ್ಯ ಪೂಜೆಯನ್ನು ಬೆಳಗ್ಗಿನ ಹೊತ್ತಲ್ಲಿ ಮಾತ್ರ ಮಾಡಲಾಗುತ್ತದೆ.

ಆಚರಣೆ[ಬದಲಾಯಿಸಿ]

ಈ ಬಸದಿಗೆ ಸಂಬಂಧಪಟ್ಟಂತೆ ಯಾವುದೇ ವಾರ್ಷಿಕೋತ್ಸವ ನಡೆಯುವುದಿಲ್ಲ. ಆದರೆ ರಥೋತ್ಸವ ನಡೆಯುತ್ತದೆ. ಜೀವದಯಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೬.