ಪದ್ಮಾವತಿ ಮತ್ತು ಚತುರ್ವಿಂಶತಿ ತೀರ್ಥಂಕರರ ಜಿನಾಲಯ, ಹಾಡುವಳ್ಳಿ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಪದ್ಮಾವತಿ ಮತ್ತು ಚತುರ್ವಿಂಶತಿ ತೀರ್ಥಂಕರರ ಜಿನಾಲಯವು ಕರ್ನಾಟಕದ ಪ್ರಾಚೀನ ಜಿನಾಲಯಗಳಲ್ಲಿ ಒಂದು.

ಸ್ಥಳ[ಬದಲಾಯಿಸಿ]

ಪ್ರಸಿದ್ಧ ಶ್ರೀ ಪದ್ಮಾವತಿ ದೇವಿ ಮತ್ತು ಚತುರ್ವಿಂಶತಿ ತೀರ್ಥಂಕರರ ಬಸದಿಯು ಹಾಡುವಳ್ಳಿಯ ಶ್ರೀ ಚಂದ್ರನಾಥ ಬಸದಿ ಬಲಪಾರ್ಶ್ವದಲ್ಲಿ ಉತ್ತರಾಭಿಮುಖವಾಗಿದೆ.

ಇತಿಹಾಸ[ಬದಲಾಯಿಸಿ]

ಇದು ಕ್ರಿಸ್ತಶಕ ೧೩ನೇ ಶತಮಾನದಲ್ಲಿ ಸಾಳ್ವ ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಈಗ ಇದು ಅತ್ಯಾಧುನಿಕವಾಗಿ ಕಂಡುಬಂದರೂ ಹಲವಾರು ಬಾರಿ ಜೀರ್ಣೋದ್ಧಾರಗೊಂಡಿರುವುದಂತೂ ನಿಜ. ಹಿಂದಿನ ಕಾಲದಲ್ಲಿ ಇಲ್ಲಿ ಸುಮಾರು ಮೂರು ಮಂಟಪಗಳು ಒಂದು ಬಸದಿ ಇದ್ದಂತೆ ಅವಶೇಷಗಳು ಕಂಡು ಬರುತ್ತವೆ. ಹಿಂದೆ ಇಲ್ಲಿ ಶ್ರೀ ಪದ್ಮಾವತಿ ದೇವಿಯ ಬೇರೆ ಇನ್ನೊಂದು ಬಸದಿ ಇತ್ತು ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಇದರ ಎದುರುಗಡೆಯಲ್ಲಿ ಶಿಲಾಶಾಸನವಿರುವ ಒಂದು ಶಿಲಾಸ್ತಂಭವಿದೆ. [೧]

ಆವರಣ[ಬದಲಾಯಿಸಿ]

ಇದರ ಎಡ ಪಾರ್ಶ್ವದಲ್ಲಿ ಹೊರಗಡೆ ೨ ಶಿಲಾಶಾಸನಗಳಿವೆ. ಬಸದಿಯ ಸೋಪಾನಗಳನ್ನು ಏರಿ ಮೇಲೆ ಹೋದಾಗ ಕಾಷ್ಟದ ದ್ವಾರ ಬಂದದಲ್ಲಿ ಚಿತ್ರಿತರಾದ ಚಾಮರ ಹಿಡಿದಿರುವ ದ್ವಾರಪಾಲಕರು ನಮ್ಮನ್ನು ಸ್ವಾಗತಿಸುತ್ತಾರೆ. ಅಲ್ಲಿಂದ ನಾವು ನೇರವಾಗಿ ಗರ್ಭಗೃಹದ ಒಳಗೆ ಹೋಗಬಹುದು. ಇದು ಸೋಂದೆ ಮಠದ ಧಾರ್ಮಿಕ ಪ್ರಭಾವಲಯಕ್ಕೆ ಸೇರಿದೆ. ಗರ್ಭಗೃಹದಲ್ಲಿ ಎದುರಿಗೆ ಶ್ರೀ ಪದ್ಮಾವತಿ ದೇವಿಯ ಚಿಕ್ಕದಾದ ಶಿಲಾಮೂರ್ತಿ ಇದೆ. ಎಡಬದಿಯಲ್ಲಿ ಪೂರ್ವಾಭಿಮುಖವಾಗಿ ಮತ್ತೊಂದು ಬೃಹತ್ ಗಾತ್ರದ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬಲಭಾಗದಲ್ಲಿ ಶಾರದ ದೇವಿಯ ಶಿಲಾಮೂರ್ತಿ ಇದೆ. ಬಳಿಯಲ್ಲಿ ಬ್ರಹ್ಮದೇವರು ಸಾನಿಧ್ಯವನ್ನು ಕೊಟ್ಟಿರುತ್ತಾರೆ. ಪದ್ಮಾವತಿ ಮತ್ತು ಶಾರದೆಯ ಬಿಂಬಗಳ ಸ್ವಲ್ಪ ಹಿಂದುಗಡೆಯಲ್ಲಿ ಶೀಲಾ ಹರಿಪೀಠದ ಮೇಲೆ ವರ್ತಮಾನಕಾಲದ ೨೪ ತೀರ್ಥಂಕರರ ಖಡ್ಗಾಸನದ ಭಂಗಿಯ ಮೂರ್ತಿಗಳಿವೆ. ಸುಪಾರ್ಶ್ವನಾಥ ಮತ್ತು ಪಾರ್ಶ್ವನಾಥರ ಸಹಾಯದಿಂದ ಎಲ್ಲಾ ಜಿನ ಬಿಂಬಗಳನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು. ಹಸನ್ಮುಖರಾಗಿ ಇರುವ ಎಲ್ಲಾ ತೀರ್ಥಂಕರರ ಎಡಬಲಗಳಲ್ಲಿ ಅವರವರ ಯಕ್ಷ ಯಕ್ಷಿಯರ ಚಿಕ್ಕ ಬಿಂಬಗಳಿವೆ, ಲಾಂಛನಗಳಿವೆ. ಆದರೆ ಅಷ್ಟೊಂದು ಸ್ಪಷ್ಟವಾಗಿ ಕಂಡು ಬರುವುದಿಲ್ಲ.[೨]

ಕಲಾಕೃತಿ[ಬದಲಾಯಿಸಿ]

ಈ ಜಿನೇಶ್ವರ ಪ್ರಭಾವಲಯದಲ್ಲಿ ಕೆಳಗೆ ಸ್ತಂಭದ ರಚನೆಗಳು ಮೇಲ್ಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿರುವ ಮಕರ ತೋರಣವು ಅಲಂಕಾರವಾಗಿ ಕಂಡುಬರುತ್ತದೆ. ಮಧ್ಯದಲ್ಲಿ ಮೇಲ್ಗಡೆ ಮುಕ್ಕೊಡೆಯೂ ಕೀರ್ತಿ ಮುಖವು ಇದ್ದು ಈ ಜಿನ ಬಿಂಬಗಳು ಬಹುಸುಂದರವಾಗಿ ಕಾಣುವಂತಾಗಿದೆ. ಅವುಗಳ ಎತ್ತರ ಸುಮಾರು ೨.೫ ಅಡಿ.

ಧಾರ್ಮಿಕ ಕಾರ್ಯಗಳು[ಬದಲಾಯಿಸಿ]

ಇಲ್ಲಿನ ದೇವರುಗಳಿಗೆ ನಿತ್ಯ ಕ್ಷೀರಾಭಿಷೇಕ ಜಲಾಭಿಷೇಕಗಳು ನಡೆಯುತ್ತದೆ. ವಿಶೇಷ ದಿನಗಳಂದು ಹಾಗೂ ಪ್ರತಿ ಹುಣ್ಣಿಮೆಯಂದು ಗಂಧಾಭಿಷೇಕ ಮತ್ತು ಎಳನೀರಿನ ಅಭಿಷೇಕ ನಡೆಯುತ್ತದೆ. ಇಲ್ಲಿ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಆರಾಧನೆ ನಡೆಯುವುದರಿಂದ ಜನರು ಹರಕೆಗಳನ್ನು ಕೇಳಿ ತಮ್ಮ ಮನೋಭಿಷ್ಟಗಳನ್ನು ಈಡೇರಿಸಿಕೊಳ್ಳುತ್ತಾರೆ. ಇಲ್ಲಿಯ ಅಮ್ಮನೋರ ಶಿಲಾಮೂರ್ತಿಗೆ ಸೀರೆ ಉಡಿಸಿ ಬಳೆ ತೊಡಿಸಿ ಪವಿತ್ರ ಪೂಜಾ ದ್ರವ್ಯಗಳಿಂದ ಪೂಜೆಯನ್ನು ಮಾಡಲಾಗುತ್ತದೆ. ಎದುರಿನಲ್ಲಿರುವ ಪದ್ಮಾವತಿಯ ಚಿಕ್ಕ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ನವರಾತ್ರಿಯ ಸಮಯದಲ್ಲಿ ಮತ್ತು ವಿಶೇಷ ಹರಕೆ ದಿನಗಳಂದು ಇದಕ್ಕೆ ಬೆಳ್ಳಿ ಅಲಂಕಾರವನ್ನು ಮಾಡಿ ಪೂಜಿಸಿ ಆಗಮಿಸಿದವರಿಗೆ ಅನ್ನಸಂತರ್ಪಣೆಯನ್ನು ಕೈಗೊಳ್ಳಲಾಗುತ್ತದೆ. ಪೂಜಾ ಸಂದರ್ಭದಲ್ಲಿ ಪ್ರಸಾದ ನೋಡುವ ಕ್ರಮವೂ ಇದೆ. ಇಲ್ಲಿ ಶಾರದೆಯ ವಿಗ್ರವಿದ್ದು ವಿಶೇಷ ಪೂಜೆಗಳು ನಡೆಯುವುದರಿಂದ ಇಲ್ಲಿ ಮತ್ತು ಶ್ರುತಸ್ಕಂದದ ಎದುರಿನಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದನ್ನು ಮುಖ್ಯವಾಗಿ ನವರಾತ್ರಿಯ ಸಂದರ್ಭದಲ್ಲಿ ಬರುವ ಮೂಲಾ ನಕ್ಷತ್ರದ ದಿನದಂದು ನಡೆಸಲಾಗುತ್ತದೆ. ಈ ಬಸದಿಯಲ್ಲಿ ಪುರೋಹಿತರ ಮಾರ್ಗದರ್ಶನದಲ್ಲಿ ಹರಕೆ ಹೇಳಿಕೊಂಡು ಸಂತಾನ ಪ್ರಾಪ್ತಿಯಾದ ಹಲವಾರು ಉದಾಹರಣೆಗಳಿವೆ. ಇಲ್ಲಿ ಎಲ್ಲಾ ಧರ್ಮಿಯರೂ ಪೂಜೆ ಸಲ್ಲಿಸುತ್ತಾರೆ. ಹಾಗೂ ಸನ್ನಿಧಿಗಳಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.

ಸಧ್ಯದ ಸ್ಥಿತಿ[ಬದಲಾಯಿಸಿ]

ಬಸದಿಯ ಬಲಮಗ್ಗುಲಲ್ಲಿ ಪೂರ್ವದಿಕ್ಕಿಗೆ ಒಂದು ಸಭಾ ಮಂಟಪ ನಿರ್ಮಿಸುವ ಕಾರ್ಯಕ್ರಮ ಪ್ರಾರಂಭವಾಗಿದೆ. ಅದರಂತೆ ಇದಕ್ಕಿಂತ ಇನ್ನೂ ಪೂರ್ವಕ್ಕಿರುವ ಪಾಳುಬಿದ್ದ ಬಸದಿಯ ಸ್ಥಳದಲ್ಲಿ ಉತ್ಖನನ ಹಾಗೂ ಅಧ್ಯಯನ ನಡೆಸಿ ಅಲ್ಲಿಯೂ ಬಸದಿ ನಿರ್ಮಾಣ ಮಾಡುವ ಕೆಲಸ ಬಾಕಿ ಇದೆ. ಇಲ್ಲಿಯ ಶ್ರೀ ಪದ್ಮಾವತಿ ಅಮ್ಮ ಮತ್ತು ಚತುರ್ವಿಂಶತಿ ತೀರ್ಥಂಕರರ ಬಸದಿಯನ್ನು ಶ್ರೀ ಪದ್ಮಾವತಿ ಜ್ವಾಲಾಮಾಲಿನಿ ಮತ್ತು ಚಂದ್ರನಾಥ ಸ್ವಾಮಿ ಬಸದಿ ಟ್ರಸ್ಟ್ನವರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.
  2. https://puratattva.in/2014/08/03/hadavalli-capital-of-saluvas-3285