ಪದೋನ್ನತಿ
ಆಡಳಿತ ಸಿಬ್ಬಂದಿ ಸಂಘಟನೆಯಲ್ಲಿ ನೌಕರರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಲು ಅವರಿಗೆ ಪ್ರೋತ್ಸಾಹ ಅವಶ್ಯಕ. ಪದೋನ್ನತಿಯು ಅಂಥ ಪ್ರೋತ್ಸಾಹದ ವಿಧಾನಗಳಲ್ಲೊಂದು. ಒಬ್ಬ ಅಧಿಕಾರಿಯನ್ನು ಕೆಳಗಿನ ಹುದ್ದೆಯಿಂದ ಮೇಲಿನ ಹುದ್ದೆಗೆ ಏರಿಸುವುದು, ಅವನ ಅಂಕಿತವನ್ನು ಬದಲಾಯಿಸುವುವು, ಅವನ ಕರ್ತವ್ಯಗಳನ್ನು ಬದಲು ಮಾಡುವುದು ಇವು ಪದೋನ್ನತಿಯ ಕೆಲವು ಬಗೆಗಳು.[೧]
ಒಳ್ಳೆಯ ಪದೋನ್ನತಿಯ ವ್ಯವಸ್ಥೆ ಒಳ್ಳೆಯ ಆಡಳಿತ ಪದ್ದತಿಯ ಅಡಿಗಲ್ಲು. ಇದರಿಂದ ಅಧಿಕಾರಿ ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಮೇಧಾವಿಗಳನ್ನು ಆಕರ್ಷಿಸಲು ಇದರಿಂದ ಸಹಾಯವಾಗುತ್ತದೆ. ಅಧಿಕಾರಿಗಳಿಗೆ ಬೇರೆ ಬೇರೆ ಹುದ್ದೆಗಳಲ್ಲಿ ತರಬೇತು ಕೊಡಲು ಮತ್ತು ಅಧಿಕಾರಿಗಳ ನೈತಿಕಮಟ್ಟವನ್ನು ಕಾಪಾಡಲು ಹಾಗೂ ಬೆಳೆಸಲು ಇದು ಸಹಾಯಕ. ಯಾವ ನೌಕರನೇ ಆದರೂ ಕಾರ್ಯತತ್ಪರೆಯಿಂದ ಮೇಲಿನ ಹುದ್ದಗೆ ಹೋಗಲು ಅವಕಾಶವುಂಟು ಎಂಬ ತತ್ತ್ವ ಯಾವಾಗಲೂ ಅವನ ಹಾಗೂ ಸಂಸ್ಥೆಯ ಏಳಿಗೆಗೆ ನೆರವಾಗುವುದಲ್ಲದೆ ನೌಕರರಲ್ಲಿ ಸಂತೃಪ್ತಿ ಹಾಗೂ ಕಾರ್ಯನಿಷ್ಠೆಯನ್ನು ಬೆಳಸುತ್ತದೆ.
ಪದೋನ್ನತಿಯ ವ್ಯವಸ್ಥೆಯಲ್ಲಿ ಅನುಸರಿಸಬಹುದಾದ ಹಲವು ಸೂತ್ರಗಳಿವೆ. ಉದ್ಯೋಗದಲ್ಲಿ ಜ್ಯೇಷ್ಠತೆ ಅಥವಾ ಹಿರಿಯತನಕ್ಕೆ ಪ್ರಾಶಸ್ತ್ಯ ನೀಡಬೇಕೆಂಬುದು ಒಂದು ಸೂತ್ರ. ಉದ್ಯೋಗದಲ್ಲಿ ಯಾವುದೇ ಒಂದು ಇಲಾಖೆಯಲ್ಲಿ ಅಥವಾ ಸೇವೆಯಲ್ಲಿ ಯಾವ ನೌಕರ ಅತ್ಯಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುತ್ತಾನೊ ಆತನಿಗೆ ಪದೋನ್ನತಿಯ ವಿಚಾರದಲ್ಲಿ ಆದ್ಯತೆ ನೀಡಬೇಕು. ಇದರಿಂದ ನೌಕರನ ಹಿಂದಿನ ಅನುಭವಕ್ಕೆ ಮಾನ್ಯತೆ ಕೊಟ್ಟಂತಾಗುತ್ತದೆ. ಇದು ಒಂದು ವಿಧವಾದ ಸರದಿ ಪದ್ಧತಿ (ಕ್ಯೂಸಿಸ್ಟಂ). ಏಕೆಂದರೆ ಯಾರು ಮೊದಲು ಕೆಲಸಕ್ಕೆ ಸೇರಿಕೊಂಡಿರುತ್ತಾರೋ ಅವರಿಗೆ ಮೊದಲು ಪದೋನ್ನತಿಯ ಅವಕಾಶ ಸಿಗುತ್ತದೆ. ಆದರೆ ಇದರಲ್ಲಿ ಒಂದು ದೋಷವುಂಟು. ಅಸಮರ್ಥ ಅಥವಾ ಅದಕ್ಷನಾದವನು ದಕ್ಷನಿಗಿಂತ ಮೊದಲು ಸೇವೆಗೆ ಸೇರಿದ್ದರೆ ಅವನಿಗೆ ಪದೋನ್ನತಿ ದೊರೆಯುವ ಸಾಧ್ಯತೆ ಇರುತ್ತದೆ. ಪದೋನ್ನತಿಗೆ ಅರ್ಹತೆ, ಯೋಗ್ಯತೆ ಅಥವಾ ದಕ್ಷತೆ ಮುಖ್ಯ ಆಧಾರವಾಗಬಹುದು. ಯಾರಿಗೆ ಹೆಚ್ಚು ಯೋಗ್ಯತೆ, ದಕ್ಷತೆ ಸಾಮಥ್ರ್ಯ ಇರುತ್ತವೋ ಅವನಿಗೆ ಪದೋನ್ನತಿ ನೀಡಬೇಕು. ಇದರಲ್ಲಿ ಜ್ಯೇಷ್ಠತೆಗೆ ಅವಕಾಶವಿಲ್ಲ. ಅತ್ಯಂತ ಕನೀಯನಾದವನೂ ಯೋಗ್ಯತೆಯ, ದಕ್ಷತೆಯ, ಸಾಮಥ್ರ್ಯದ ಬಲದಿಂದ ಮೇಲೆ ಬರಬಹುದು. ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರನಿಗೆ ಪದೋನ್ನತಿ ದೊರಕದೆ ಹೋಗಬಹುದು. ಕೆಲವು ಸಂದರ್ಭಗಳಲ್ಲಿ ಯೋಗ್ಯತೆಯನ್ನು ಕಂಡು ಹಿಡಿಯುವುದೇ ಒಂದು ಸಮಸ್ಯೆಯಾಗುತ್ತದೆ. ಕಾರ್ಯಸಾಮಥ್ರ್ಯವನ್ನು ಪರಿಗಣಿಸಿ, ಅದರ ಪ್ರಕಾರ ಒಬ್ಬ ಅಧಿಕಾರಿಗೆ ಪದೋನ್ನತಿ ನೀಡಬಹುದು. ಅದಕ್ಕಾಗಿ ಆತನ ಸೇವಾ ದಾಖಲೆ ಪುಸ್ತಕವನ್ನು ನಡೆಸಿಕೊಂಡು ಬರಬೇಕು. ಆದರೆ ಅಂಥ ದಾಖಲೆಯಿಂದಲೂ ಕೆಲವು ಸಾರಿ ನೌಕರನ ನಿಜವಾದ ಸಾಮಥ್ರ್ಯವನ್ನು ಅಥವಾ ಯೋಗ್ಯತೆ ದಕ್ಷತೆಗಳನ್ನು ತಿಳಿದುಕೊಳ್ಳಲು ಸಹಾಯವಾಗದೆ ಹೋಗಬಹದು. ಪದೋನ್ನತಿಯನ್ನು ಆಯಾ ಇಲಾಖೆಗಳ ಮುಖ್ಯರ ಅಭಿಪ್ರಾಯದ ಮೇಲೆ ನೀಡಬಹುದು. ಇದು ಬಹು ಸುಲಭ ಮಾರ್ಗ. ಆದರೆ ಇಲಾಖಾ ಮುಖ್ಯ ಪೂರ್ವಾಗ್ರಹದಿಂದ ಕೂಡಿದ್ದರೆ ಅರ್ಹರಾದ ನೌಕರಿಗೆ ಪದೋನ್ನತಿ ಸಿಗದೆ ಹೋಗಬಹುದು. ಸ್ಪರ್ಧಾಪರೀಕ್ಷೆಯನ್ನು ನಡೆಸಿ ಪದೋನ್ನತಿಯನ್ನು ನೀಡಬಹುದು.
ಮೇಲೆ ಹೇಳಿದ ಸೂತ್ರಗಳಲ್ಲಿ ಯಾವುದೇ ಒಂದನ್ನು ಮಾತ್ರವೇ ಅನುಸರಿಸುವುದರಿಂದ ನೌಕರರಿಗೆ ನ್ಯಾಯ ದೊರಕದೆ ಹೋಗಬಹುದು. ಆದ್ದರಿಂದ ಸರಿಯಾದ ಪದೋನ್ನತಿಯ ನೀತಿ ಮೇಲೆ ಹೇಳಿದ ಎಲ್ಲ ಸೂತ್ರಗಳನ್ನೂ ಗಮನಿಸಬೇಕು. ಸಮರ್ಪಕವಾದ ಪದೋನ್ನತಿಯ ವ್ಯವಸ್ಥೆ ಯಾವಾಗಲೂ ಸರಿಯಾಗಿ ಕೇಂದ್ರೀಯ ನಿಯಂತ್ರಣಕ್ಕೆ ಒಳಪಡಬೇಕು. ಇಲ್ಲವಾದರೆ ಪದೋನ್ನತಿಯಲ್ಲಿ ನಾನಾ ಬಗೆಯ ಪ್ರಭಾವಗಳಿಗೂ ಸ್ವಜನ ಪಕ್ಷಪಾತಕ್ಕೂ ಲಂಚಗುಳಿತನಕ್ಕೂ ಅವಕಾಶವಿರುತ್ತದೆ. ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಅಂಥ ಅಪಾಯಗಳು ಹೆಚ್ಚು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-05-17. Retrieved 2019-05-17.